Showing posts with label ತಪ್ಪು. Show all posts
Showing posts with label ತಪ್ಪು. Show all posts

Saturday, December 17, 2022

ಮುಕ್ತಕಗಳು - ೭೯

ಒಮ್ಮೆ ಮಾಡಿದ ತಪ್ಪ ಮತ್ತೊಮ್ಮೆ ಮಾಡದಿರು

ಸುಮ್ಮನೆಯೆ ಶ್ರಮ ಹಾಳು ಎಲ್ಲವೂ ಹಾಳು |

ಕಮ್ಮು ಹಿಡಿದರೆ ಒಮ್ಮೆ ಬಿಡದಲ್ಲ ಶ್ವಾನವದು

ಹಮ್ಮು ಬಿಡು ಅರಿತು ನಡೆ ~ ಪರಮಾತ್ಮನೆ ||೩೯೧||

ಕಮ್ಮು = ವಾಸನೆ, ಹಮ್ಮು = ಗರ್ವ


ಬಸಿರ ಆಸರೆ ಕೊಟ್ಟು ಬುವಿಗಿಳಿಸಿದಳು ಜನನಿ

ಉಸಿರ ಸಾಲವ ಕೊಟ್ಟು ಬದುಕಿತ್ತಳವನಿ |

ಬಸಿರ ಆಸರೆ ಉಸಿರ ಸಾಲಕ್ಕೆ ಪ್ರತಿಯಾಗಿ

ಮಸಿಯ ಬಳಿಯಲು ಬೇಡ ~ ಪರಮಾತ್ಮನೆ ||೩೯೨||


ಸಹಿಸೆ ಉಳಿಪೆಟ್ಟುಗಳ ಶಿಲೆ ಮೂರ್ತಿಯಾಗುವುದು

ಸಹಿಸದಿರೆ ಕಾಲಡಿಯ ದಾರಿಗಲ್ಲಾಯ್ತು |

ಸಹಿಸಿಕೋ ಕಷ್ಟಗಳ ದೃಢಮನದ ಅಂಕೆಯಲಿ

ಕಹಿ ಕಳೆದು ಸಿಹಿ ಬಹುದು ~ ಪರಮಾತ್ಮನೆ ||೩೯೩||


ಉಸಿರು ನಿಂತರೆ ಏನು ಹೆಸರು ನಿಂತರೆ ಸಾಕು

ಹಸಿರಾಗಿ ಉಳಿಯುವುದು ನೆನಪು ಮಾಸದೊಲು |

ಕಸಿವ ರೋಧನ ಕನಕಗಳನೆಲ್ಲ ಉಳಿದಿರುವ

ಹೆಸರೊಂದೆ ಶಾಶ್ವತವು ~ ಪರಮಾತ್ಮನೆ ||೩೯೪||


ಹುಟ್ಟುತಲೆ ಅತ್ತಾಗ ನಕ್ಕವರು ಬಂಧುಗಳು

ಕೆಟ್ಟು ಅತ್ತಾಗ ನಕ್ಕವರು ಬಂಧುಗಳೆ? |

ಮೆಟ್ಟಿ ಭೇದಗಳ ಕೈಜೋಡಿಸಿರೆ ಬಂಧುಗಳು

ಚಟ್ಟಕ್ಕೆ ಹೆಗಲೀಯೆ ~ ಪರಮಾತ್ಮನೆ ||೩೯೫||

Thursday, August 18, 2022

ಮುಕ್ತಕಗಳು - ೫೧

ಕತ್ತಲೆಯ ಕೂಪದಲಿ ಬೆಳಕು ಕಂಡರೆ ಹಬ್ಬ

ಎತ್ತಲಿಂದಲೆ ಬರಲಿ ಸುಜ್ಞಾನ ತಾನು |

ಸುತ್ತಲಿನ ದೀಪಗಳ ಭಕ್ತಿಯಲಿ ವಂದಿಸುವೆ

ಬೆತ್ತಲೆಯ ಮನದಿಂದ ಪರಮಾತ್ಮನೆ ||೨೫೧||


ಉರುಳುತಿದೆ ಕಾಲವದು ಹಿಂದಿರುಗಿ ನೋಡದೆಯೆ

ತಿರುಗುತಿದೆ ಮನಸು ನೆನಪುಗಳ ಸುಳಿಯಲ್ಲೆ |

ಬರುವ ನಾಳೆಗಳ ಭಯ-ಆಸೆಗಳ ಬಲೆಯಲ್ಲೆ 

ಕರಗುತಿದೆ ದಿನವೊಂದು ಪರಮಾತ್ಮನೆ ||೨೫೨||


ಪರಕೀಯ ದಾಸ್ಯದಲಿ ಬಳಲಿದ್ದ ಭಾರತಿಯೆ

ಅರಳಿರುವ ಸ್ವಾತಂತ್ರ್ಯ ಅಮೃತದಾ ಸ್ವಾದ |

ಕುರುಡಾಸೆ ಮಕ್ಕಳದು ಪಾತಕಿಗೆ ಮಣೆಹಾಕಿ

ತರದಿರಲಿ ಸಂಕೋಲೆ ಪರಮಾತ್ಮನೆ ||೨೫೩||


ಸಸಿಯು ಟಿಸಿಲೊಡೆಯುವುದು ಎಲ್ಲಿ ಬೆಳೆಯುತಲಿರಲು

ಹೊಸ ಮೋಡ ಮೂಡುವುದು ಎಲ್ಲಿ ಆಗಸದಿ

ಬಸಿರ ಸೇರುವುದೆಲ್ಲಿ ಮರುಜನ್ಮದಲಿ, ಅರಿತ

ಜಸವಂತರಾರಿಹರು ಪರಮಾತ್ಮನೆ ||೨೫೪||


ಭತ್ತದಲಿ ದೊರೆಯುವುದೆ ಬೇಳೆಯಾ ಕಾಳುಗಳು

ಹುತ್ತದಲಿ ಹಾವಿರದೆ ಹುಲಿಯಿರುವುದೇನು |

ಸುತ್ತಲಿನ ಜನ ತಪ್ಪು ಮಾಡುವುದು ಸಹಜ ಗುಣ

ಕತ್ತಿಯೆತ್ತದೆ ತಿದ್ದು ಪರಮಾತ್ಮನೆ ||೨೫೫||


Monday, July 11, 2022

ಮುಕ್ತಕಗಳು - ೨೪

ಚಿಂತೆಯೊಂದಿರೆ ಮನದಿ ನಿಶ್ಚಿಂತ ಮಾನವನು

ಚಿಂತೆಯಿಲ್ಲದಿರವನು ಜಲತೊರೆದ ಮೀನು |

ಸಂತೆಯಾಗುವುದು ಮನ ಚಿಂತೆಯಿಲ್ಲದರಂತು

ಚಿಂತೆ ಚಿಂತನೆ ತರಲಿ ಪರಮಾತ್ಮನೆ ||೧೧೬||


ಅಮ್ಮನೆನ್ನುವ ನುಡಿಯ ಒಮ್ಮೆ ನುಡಿದರೆಸಾಕು

ಒಮ್ಮೆಲೇ ಮೈಯೆಲ್ಲ ಪುಳಕಿತದ ಭಾವ

ಕಮ್ಮಿಯಾಗದು ಹೆತ್ತೊಡಲ ಮಮತೆ ಮುದ್ದಿಸುವ

ಅಮ್ಮ ನಿನಗಿರುವಳೇ ಪರಮಾತ್ಮನೆ ||೧೧೭||


ನಾವು ಸೂತ್ರದ ಗೊಂಬೆಗಳು ಸಂಶಯವೆ ಇಲ್ಲ

ಜೀವವಿಲ್ಲದ ತೊಗಲು ಗೊಂಬೆಗಳು ಅಲ್ಲ |

ದೇವನರುಹಿಹ ವಿಧಿಯ ಸೂತ್ರ ಹರಿಯುವ ವಿದ್ಯೆ

ಜೀವನಕೆ ಸೂತ್ರವಿದು ಪರಮಾತ್ಮನೆ ||೧೧೮||


ನಮ್ಮ ತಪ್ಪೆಲ್ಲವಕೆ ಬೆನ್ನೊಡ್ಡಿ ಕುಳಿತಾಗ

ಸುಮ್ಮನವು ಜಗದಿಂದ ಮರೆಯಾಗುವವೇ |

ನಮ್ಮ ಜಗ ಕುರುಡಲ್ಲ ಎಣಿಸುವುದು ತಪ್ಪುಗಳ

ಸುಮ್ಮನೇಕೀ ನಟನೆ ಪರಮಾತ್ಮನೆ ||೧೧೯||


ಇರುಳು ಕಳೆದಾ ಮೇಲೆ ಹಗಲು ಬರಲೇಬೇಕು

ಸುರಿಯುತಿಹ ಮಳೆಯೊಮ್ಮೆ ನಿಲ್ಲಲೇ ಬೇಕು |

ಧರಣಿಯೊಳು ಇದು ಸತ್ಯ ಕಾಲಮಹಿಮೆಯ ಸೂತ್ರ

ಕೊರಗದೆಲೆ ಕಾಯುವೆನು ಪರಮಾತ್ಮನೆ ||೧೨೦||


ಮುಕ್ತಕಗಳು - ೨೧

ಮಾರಾಟವಾಗುತಿವೆ ಶಾಲುಪೇಟಗಳಿಂದು

ಕೋರಿದವರಿಗೆ ಮಕುಟವಾಗುತಿದೆ ಪೇಟ

ಮಾರಾಟವಾಗುತಿವೆ ವೇದಿಕೆಯ ಮಧ್ಯದಲಿ

ಜೋರಿನಾ ವ್ಯಾಪಾರ ಪರಮಾತ್ಮನೆ ||೧೦೧||


ನಗುನಗುತಲಿರಬೇಕು ನವಸುಮವು ಅರಳುವೊಲು 

ಮಗುವಿನಾ ನಗುವಂತೆ ಪರಿಶುದ್ಧವಾಗಿ |

ಬಿಗಿದ ಮೊಗಗಳ ಸಡಿಲಗೊಳಿಸಿ ನೋವ ಮರೆಸಲು

ನಗುವೆ ನೋವಿಗೆ ಮದ್ದು ಪರಮಾತ್ಮನೆ ||೧೦೨||


ತಪ್ಪು ಮಾಡದವರಾರುಂಟು ಜಗದಲಿ ತಮ್ಮ

ತಪ್ಪನೊಪ್ಪಿಕೊಳುವವರತಿವಿರಳವಿಹರು |

ತಪ್ಪನಿತರರ ಮುಡಿಗೆ ಮುಡಿಸುವರು ಬಲುಬೇಗ

ತಪ್ಪ ನುಡಿದಿರೆ ತಾಳು ಪರಮಾತ್ಮನೆ ||೧೦೩||

ತಾಳು = ಸಹಿಸಿಕೋ


ರೋಗಿಗಳ ನೋವಿನಲಿ ನೋಟು ಕಂಡರು ಕಂತೆ

ಯೋಗವೋ ಅತಿಧನದ ಮೋಹವೋ ಕಾಣೆ |

ಜೋಗುಳವ ಹಾಡುವರೆ ಚಾಟಿ ಹಿಡಿದಂತಾಯ್ತು

ಹೋಗುತಿವೆ ಜೀವಗಳು ಪರಮಾತ್ಮನೆ ||೧೦೪||


ಹಿಂದಿನದ ನೆನೆಯುತಿರೆ ನೋವು ಮರುಕಳಿಸುವುದು

ಮುಂದಿನದ ಯೋಚಿಸಲು ಮೂಡುವುದು ಭಯವು |

ಇಂದು ನಮ್ಮೊಂದಿಗಿರೆ ತಪ್ಪು ಮಾಡದಿರೋಣ

ಎಂದಿಗೂ ಸರಿದಾರಿ ಪರಮಾತ್ಮನೆ ||೧೦೫||