Tuesday, January 5, 2021

ದಿಟ್ಟೆ


 







ಪುಟ್ಟ ಬಾಲೆಯಾದರೇನು ಈಕೆ, 

ಇವಳ ಆತ್ಮಸ್ಥೈರ್ಯ ಪುಟ್ಟದೇ?


ನಡಿಗೆ ನೋಡಿ, ಗಡಿಗೆ ನೋಡಿ,

ದಿಟ್ಟ ನಡಿಗೆ, ದಿಟ್ಟಿ ನೋಡಿ. 

ಗಡಿಗೆಯಲ್ಲಿ ನೀರಿನಂತೆ, 

ನಡಿಗೆಯಲ್ಲಿ ಸ್ವಾಭಿಮಾನ ತುಂಬಿದೆ! 


ಅಮ್ಮನಿಗೆ ಹೆಗಲು ಕೊಟ್ಟು, 

ಮನೆಗೆಲಸದ ಹೊರೆಯ ಹೊತ್ತು, 

ಗೆಳಯರೊಡನೆ ಆಡೋ ಹೊತ್ತು, 

ಭಲೇ! ನೀರ ಹೊತ್ತ ಬಾಲೆ!


ಸೀರೆ ಉಡದಿದ್ದರೇನು ಈಕೆ, 

ನೀರೆಗೇನು ಕಡಿಮೆಯೇ?

ಓದು ಬರೆಹ ಇಲ್ಲದಿರೆ ಮಾತ್ರ, 

ಹಣೆಯಬರಹ ದುಡಿಮೆಯೇ! 

Saturday, January 2, 2021

ಸಂ ಕ್ರಾಂತಿ

 ಸಂಕ್ರಾಂತಿ ಬರಲಿ, 

ಸಂ ಕ್ರಾಂತಿ ತರಲಿ. 


ನಮ್ಮತನ ಉಳಿಸೋ ಕ್ರಾಂತಿ, 

ಒಮ್ಮತವ ಬೆಳೆಸೋ ಕ್ರಾಂತಿ,

ಹಸಿರ ಕೊಯ್ಲಿನ ಕ್ರಾಂತಿ,

ಹಸಿವ ನೀಗುವ ಕ್ರಾಂತಿ.


ಶುದ್ಧ ಗಾಳಿಯ ಕ್ರಾಂತಿ,

ಶುದ್ಧ ನೀರಿನ ಕ್ರಾಂತಿ,

ಸ್ವಚ್ಛ ಪರಿಸರದ ಕ್ರಾಂತಿ,

ಶುಭ್ರ ಮನಸಿನ ಕ್ರಾಂತಿ.


ಎಳ್ಳು ಬೆಲ್ಲದ ರೀತಿ,

ಸವಿಯ ಸ್ನೇಹದ ಕ್ರಾಂತಿ.

ಕಬ್ಬು ಹಾಲಿನ ರೀತಿ,

ಪ್ರೀತಿ ಹಂಚುವ ಕ್ರಾಂತಿ.



ಕಸವೇ ಇಲ್ಲದ ರೀತಿ,

ಸ್ವಚ್ಛ ಜಗಲಿಯ ಕ್ರಾಂತಿ.

ಕಳಚುವ ಕಹಿಯ ಭ್ರಾಂತಿ,

ಎಲ್ಲರಿಗೂ ಸ್ನೇಹ ಸಂಕ್ರಾಂತಿ!

Saturday, December 26, 2020

ಪಕ್ಷಗಳು

 ಪೂರ್ವಜರು ನಿಪುಣರು ರಾಜಕೀಯದಲಿ,

ಕಟ್ಟಿದರು ಪಕ್ಷಗಳ ದೇವರ ಹೆಸರಿನಲಿ!

ಮೂಕ ದೇವರುಗಳು ಆದರು ಮುಖಂಡರು,

ಸೂತ್ರದ ಬೊಂಬೆಗಳ ಆಡಿಸಿದರು ಪ್ರಚಂಡರು!


ಪಕ್ಷದ ಚಿನ್ಹೆಗಳು ಹಣೆಹಣೆಗಳ ಮೇಲೆ,

ಆಚಾರ, ಸಂಪ್ರದಾಯಗಳು ಎಲ್ಲಕ್ಕಿಂತ ಮೇಲೆ!

ಉಡುಗೆತೊಡುಗೆಗಳಲ್ಲೂ ಪಕ್ಷದ್ದೇ ಪ್ರಭಾವ

ಚಿಂತನೆಯ ಮಂಥನಕ್ಕಷ್ಟೇ ಅಭಾವ!


ಪಕ್ಷ ಪಕ್ಷಗಳ ನಡುವೆ ದೊಡ್ಡ ಗೋಡೆಗಳು,

ಪಕ್ಷಾಂತರಿಸಲು ಬಿಡದ ಭದ್ರ ಕೋಟೆಗಳು!

ಹಣೆಯ ಮೇಲಿನ ಚಿನ್ಹೆ ಬದಲಿಸುವುದು ಕಷ್ಟ,

ದೇವರು ಮುನಿದರೆ ಆಗುವುದು ನಷ್ಟ!


ಕಾಲಕ್ರಮೇಣ ಚಿನ್ಹೆಗಳು ಇಳಿದರೂ ಹಣೆಯಿಂದ

ಮನೆಯ ಮಾಡಿವೆ ಮನಸಿನಲಿ ಸ್ವಚ್ಛಂದ!

ಅಂದಿನ ಪಕ್ಷಗಳೇ ಇಂದಿನ ಜಾತಿಧರ್ಮಗಳು,

ಅವುಗಳ ನೆರಳಲೇ ರಾಜಕೀಯ ಪಕ್ಷಗಳು!

ಗುರುದರ್ಶನ

ನಿನಗಾಗಿ ಕಾಯುತಿಹೆ ಗುರುವೆ,
ದರುಶನವ ನನಗೆಂದು ಕೊಡುವೆ?
ನಂಬಿಹೆ ಬರುವೆಯೆಂದು, ಬಂದು
ನೀ ದಾರಿ ತೋರುವೆ ಎಂದು!


ಕಗ್ಗಂಟ ಬದುಕಿದು, ಕಾಡಂಥ ಜಗವಿದು,
ಕಣ್ಣಿಗೆ ಬಟ್ಟೆ ಕಟ್ಟಿದ ಪಾಡು ನನ್ನದು!
ದಾರಿ ಕಾಣದು, ಸಮಯ ನಿಲ್ಲದು,
ಕೈ ಹಿಡಿದು ನಡೆಸುವ ಭಾರ ನಿನ್ನದು!


ಬಂದೆನೇಕೋ ನಾ ಈ ಬುವಿಗೆ,
ತಿಳಿಯಪಡಿಸು ನೀ ಇಂದೆನಗೆ.
ಅಂಧಕಾರದಿ ಕಳೆಯುತಿಹೆ ವರುಷಗಳ,
ಬೀರು ಚಿತ್ತದಲಿ ಬೆಳಕಿನ ಕಿರಣಗಳ!
 
ಕಣ್ಣು ತೆರೆವೆನು ಆಗ ಅರಿವಿನ ಬೆಳಕಿಗೆ,
ತಲೆ ಬಾಗುವೇ ನಾ ನಿನ್ನಯ ಕೊಡುಗೆಗೆ.
ಅರ್ಥವಾಗಲಿ ಪಡೆದ ಜನ್ಮದ ಮರ್ಮ,
ನಿರಂತರವಾಗಲಿ ಅರ್ಥಪೂರ್ಣ ಕರ್ಮ!


ತೊಲಗಾಚೆ ದೂರ 2020!

 ತುಂಬಿದ ಕಂಗಳ ವಿದಾಯ ನಿನಗೆ, 

ಮತ್ತೆ ಕಾಣದಿರು, ಕಾಡದಿರು ಓ 2020!


ದುಡಿವ ಕೈಗಳ ಕನಸಿನ ಕೆಲಸ ಕಸಿದೆ,

ದಿನದುಡಿಮೆಯವರ ಹೊಟ್ಟೆಗೆ ಹೊಡೆದೆ,

ಬದುಕನು ಭರಿಸಲಾಗದ ಬವಣೆಯಾಗಿಸಿದೆ,

ಮಿನಗುವ ಕಂಗಳಲಿ ಕಂಬನಿಯ ತುಂಬಿದೆ,

ತೊಲಗಾಚೆ ಪಾಪಿ ಓ 2020!


ಹಿರಿಯ ಜೀವಗಳು ಬೆಂದು ಬವಳಿ,

ನೋಡು ನೋಡುತಲೇ ಅಂತರ್ಧಾನರಾದರು,

ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,

ತುಡಿವ ಎದೆಯಲಿ ನೋವು ತುಂಬಿತು,

ತೊಲಗಾಚೆ ಪಾಪಿ ಓ 2020!


ನೆನ್ನೆ ಮೊನ್ನೆ ಕಂಡ ಗೆಳೆಯರು, 

ಮನಬಿಚ್ಚಿ ಬೆರೆತು ನಕ್ಕವರು,

ತಿರುಗಿ ನೋಡುವಷ್ಟರಲಿ ಮರೆಯಾದರು,

ನಿನ್ನ ಕ್ರೂರನೋಟಕೆ ಬಲಿಯಾದರು,

ತೊಲಗಾಚೆ ಪಾಪಿ ಓ 2020!


ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,

ಹೊರಗೆ ಕಾಲಿಡುವ ಧೈರ್ಯ ಕಸಿದೆ,

ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,

ಮೃದುಮನಗಳ ಮೇಲೆ ಮಾಯದ ಬರೆಯೆಳೆದೆ, 

ತೊಲಗಾಚೆ ಪಾಪಿ ಓ 2020!


ವ್ಯಾಪಾರಗಳ ದೀವಾಳಿ ತೆಗೆದೆ,

ವ್ಯಾಪಾರಿಗಳ ಬೆನ್ನಿಗೆ ಚೂರಿ ಇಟ್ಟೆ,

ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,

ಉಳಿದದ್ದು ಕೇವಲ ತಣ್ಣೀರ ಬಟ್ಟೆ,

ತೊಲಗಾಚೆ ಪಾಪಿ ಓ 2020!


ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 

ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,

ನೋವು, ನಿರಾಸೆಗಳ ಅಡಗಿಸಿಕೊಂಡೆವು,

ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,

ತೊಲಗಾಚೆ ಪಾಪಿ ಓ 2020!


ಈಗ ಹೇಳುತಿರುವೆವು ನಿನಗೆ ವಿದಾಯ,

ನೀ ಮರೆಯಾಗುತಿರುವುದು ಅಭಯಪ್ರದಾಯ,

ಶೋಕದ ಕಣ್ಣಿರು ಆವಿಯಾಗುತಿದೆ,

ಆನಂದಭಾಷ್ಪ ಮೂಡುತಿದೆ ನಿನ್ನ ಬೆನ್ನ ಕಂಡು,

ತೊಲಗು, ಇನ್ನು ನೀ ಬರಬೇಡ 2020!

Tuesday, December 1, 2020

ಲೇಖನಿ (ಹಾಯ್ಕು)

ಇತಿಹಾಸದ
ಆಗುಹೋಗುಗಳಿಗೆ
ಸಾಕ್ಷಿಪ್ರಜ್ಞೆ ನೀ

ನಿನ್ನ ಒಡಲ
ವರ್ಣಜಲವು ಎಲ್ಲ
ದಾಖಲಿಸಿದೆ!

ಆ ಖಡ್ಗಕಿಂತ
ಬಹಳ ಹರಿತ ಈ
ನಿನ್ನ ನಾಲಿಗೆ

ನನಸಾದ ಕನಸು

ಭೂಮಿಯಿಂದ ಚಿಮ್ಮಿ ಹಾರುವ,
ಚಂದ್ರ, ತಾರಾಲೋಕ ಸೇರುವ!

ನಮ್ಮ ಪ್ರೀತಿ ಗೆಲುವು ಕಂಡಿದೆ,
ಸ್ವರ್ಗಕಿನ್ನು ಮೂರೇ ಗೇಣಿದೆ!
ಕನಸುಗಳಿಗೆ ರೆಕ್ಕೆ ಮೂಡಿದೆ,
ಮನದ ಹಕ್ಕಿ ಗರಿ ಗೆದರಿದೆ!

ಕಣ್ಣಿನಲ್ಲಿ ಕಣ್ಣನಿಟ್ಟು,
ಎದೆಯ ಭಾಷೆ ನೀಡುವೆ,
ಕಣ್ಣ ಬಿಂದು ಜಾರದಂತೆ,
ರೆಪ್ಪೆಯಾಗಿ ಕಾಯುವೆ!

ತಡವು ಏಕೆ ಇನ್ನು ಗೆಳತಿ,
ಬಂದಿಹಿದು ನಮ್ಮ ಸರತಿ,
ಪ್ರೇಮಲೋಕ ಸೃಷ್ಟಿಸಲು,
ಹೊಸ ಸ್ವರ್ಗ ನಿರ್ಮಿಸಲು!

ಬಾನನೆಲ್ಲ ತೋಟ ಮಾಡುವ,
ಪ್ರೀತಿಯೆಲ್ಲ ಧಾರೆ ಎರೆಯವ,
ಬಿರಿದ ಕೆಂಪು ಗುಲಾಬಿಗಳ,
ಪ್ರೇಮಿಗಳಿಗೆ ಹಂಚಿ ಬಿಡುವ!