Thursday, March 26, 2020

ಏನು ಮಾಡ್ಲಿ ದೇವ್ರೇ

ಕರೋನಾ ಕರೋನಾ ಕರೋನಾ,
ಹೇಗೆ ಕಳೆಯಲಿ ನಾ ಸಮಯಾನಾ!

ಹೊರಗೆ ಹೋದರೆ ಪೋಲೀಸ್‌ ಕಾಟ,
ಮನೇಲೇ ಕುಳಿತರೆ ಹೆಂಡತಿ ಪಾಠ.
ವಾಟ್ಸಾಪ್‌ ನೋಡಿದ್ರೆ ಜ್ವರ ಬರುತ್ತೆ,
ಟಿವಿ ನೋಡಿದ್ರೆ ಹೆದ್ರಿಕೆ ಆಗುತ್ತೆ!

ಕೆಮ್ಮು ಬಂದರೆ ಭಯ ಆಗುತ್ತೆ,
ಸೀನು ಬಂದರೆ ಪ್ರಾಣ ಹೋಗುತ್ತೆ.
ಗುಡಿಯಲಿ ಕೂತು ಬೇಡೋಣಾಂದ್ರೆ,
ಅದಕ್ಕೂ ಇದೆಯಲ್ಲ ತೊಂದ್ರೆ!

ಗೆಳೆಯರು ಮಕ್ಕಳು ಮೊಮ್ಮಕ್ಳೆಲ್ಲ,
ವಿಡಿಯೋದಲ್ಲೇ ಹಾಯ್‌ ಬಾಯೆಲ್ಲ .
ಮುಂಜಾನೆ ಪಾರ್ಕಲಿ ಸುತ್ತಾಟವಿಲ್ಲ,
ಹಾಟ್‌ ಕಾಫಿಯಲಿ ಮೀಟಿಂಗಿಲ್ಲ.

ಪುಸ್ತಕ ಹಿಡಿದರೂ ಓದೋಕಾಗಲ್ಲ,
ಏನೋ ಯೋಚನೆ ಬರುತ್ತಲ್ಲ.
ಮನಸ್ಸಿಗಂತೂ ನೆಮ್ಮದಿಯಿಲ್ಲ,
ಸುಮ್ನೆ ಕೂರೋಕೆ ಆಗ್ತಾ ಇಲ್ಲ.

ಹಾಲು ಪ್ಯಾಕೆಟ್‌ ಮೇಲೇನಿರುತ್ತೋ,
ನ್ಯೂಸ್‌ ಪೇಪರಿಗೆ ಸೋಂಕಾಗಿರುತ್ತೋ,
ತರಕಾರಿ ತರೋದೆ ಬೇಡ ಅನ್ಸುತ್ತೆ,
ತಿಂಗಳ ದಿನಸಿ ಸಾಕಾಗುತ್ತೆ.

ಚೀನಾಲಿ ಯಾರೋ ಏನೋ ತಿಂದ್ರೆ,
ಪ್ರಪಂಚಕೆಲ್ಲ ದೊಡ್ಡ ತೊಂದ್ರೆ!
ಕೈ ತೊಳೆದೂ ತೊಳೆದೂ ಸುಸ್ತಾಯ್ತು,
ಟ್ಯಾಂಕಿನ ನೀರೆಲ್ಲ ಖರ್ಚಾಯ್ತು!

ಮನೇಲೆ ಸ್ವಲ್ಪ ವಾಕಿಂಗ್‌ ಮಾಡ್ದೆ.
ಅಲ್ಲೇ ಸ್ವಲ್ಪ ಜಾಗಿಂಗ್‌ ಮಾಡ್ದೆ.
ಏನು ಮಾಡ್ಲಿ ದೇವ್ರೆ, ಅಯ್ಯೋ!
ಇನ್ನೇನು ಮಾಡ್ಲಿ ದೇವ್ರೆ!

Tuesday, March 24, 2020

ಕೊರೋನಾ ಪುರಾಣ

ಕಣ್ಣಿಗೆ ಕಾಣದ ಕೊರೋನಾ,
ಜಗವನು ಕಾಡಿದ ಪುರಾಣ.

ಹುಟ್ಟಿತು, ಎದ್ದಿತು, ವುಹಾನಿನಲ್ಲಿ,
ಬೆಳೆಸಿತು ಪಯಣ ವಿಮಾನದಲ್ಲಿ.
ಕೆಲವೇ ದಿನಗಳ ವಾಸದಲಿ,
ಹಾಹಾಕಾರವು ಜಗದಲ್ಲಿ.

ಬೆನ್ನನ್ನು ಹತ್ತಿತು ಬೇತಾಳ,
ತಪ್ಪಿತು ಎಲ್ಲರ ಬದುಕಿನ ತಾಳ.
ಹೆದರಿದೆ, ಬೆದರಿದೆ, ಜಗವೆಲ್ಲ,
ಬೇತಾಳನ ಇಳಿಸಲು ತಿಳಿವಿಲ್ಲ.

ಕೈಗಳ ಕುಲುಕಿಗೆ, ಮೈಗಳ ಸನಿಹಕೆ,
ಎಂದೂ ಇಲ್ಲದ ಬಿಗುಮಾನ.
ಕೈಗಳ ಜೋಡಿಸಿ, ನಸುನಗೆ ಸೂಸಿ,
ನಮಿಸಿದರಾಯಿತು ಸಮ್ಮಾನ.

ಶಿಸ್ತು ಮೀರಿದರೆ ಶಿಕ್ಷೆ ತಪ್ಪದು,
ಅತ್ತುಕರೆದರೆ ಏನೂ ಆಗದು!
ಕರುಣೆಯೇ ಇಲ್ಲದ ಕೊರೋನಾ,
ಹೀರಿದೆ ಎಲ್ಲ ಹಿರಿಯರ ಪ್ರಾಣ.

ಹೆಣಗಳು ಉರುಳಿವೆ ಸಾವಿರಗಳಲಿ,
ಮಣ್ಣು ಮಾಡಲು ಎಡೆಯೆಲ್ಲಿ?
ಇಲ್ಲವೇ ಇಲ್ಲ ಕಣ್ಣೀರಿಗೆ ಅಂಕೆ,
ಒರೆಸುವ ಬೆರಳಿಗೂ ಸೋಂಕಿನ ಶಂಕೆ!

ಜಗದ ಪುಪ್ಪಸ ಪುಸ್ಸಾಗಿಸಿತು,
ವೈದ್ಯಕುಲಕೇ ಸವಾಲು ಒಡ್ಡಿತು,
ಆರ್ಥಿಕತೆಯ ಸೊಂಟವ ಮುರಿಯಿತು,
ಬಡಬಗ್ಗರ ಹೊಟ್ಟೆಗೆ ಹೊಡೆಯಿತು!

ಬೀದಿಗೆ ಇಳಿಯಲು ಹೆದರಿದರೆಲ್ಲ,
ಹೆದರಿ ಮನೆಯಲಿ ಅಡಗಿದರಲ್ಲ,
ಯುಗಾದಿಗಿಲ್ಲ ಬೇವು, ಬೆಲ್ಲ!
ಕರೋನಾ ಇದುರು ಯಾರೂ ಇಲ್ಲ!

ರಕ್ತಬೀಜಾಸುರನ ಸಂತತಿಯಂತೆ,
ಹರಡಿದೆ ಜಗದಲಿ ಇದರಾ ಸಂತೆ.
ಕಾದಿಹೆ ಕಾಳಿ ಬರುವಳು ಎಂದೇ,
ಕೊರೋನಾ ಛಿದ್ರವಾಗಲಿ ಇಂದೇ!

Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!


Friday, March 6, 2020

ದೇವರ ಕಣ್ಣು

ಭರ್ಜರಿ ರಸ್ತೆಯಲಿ ಭಾರೀ ಮಳಿಗೆ,
ಭರಪೂರ ಜೇಬಿನ ಮಂದಿ ಒಳಗೆ.
ಕಣ್ಣು ಕೋರೈಸುವ ದೀಪಗಳ ಬೆಳಕು,
ಪತಂಗಗಳ ಸೆಳೆಯಲು ಇನ್ನೇನು ಬೇಕು?

ಕೈಗೆಟಕುತಿವೆ ಬೆಲೆಯ ಒಡವೆ ವಸ್ತ್ರಗಳು,
ಮುಟ್ಟಿದರೆ ಸಾಕು ಅರಳುತಿವೆ ಮನಗಳು,
ಎಲ್ಲ ಬೇಕೆನ್ನುವ  ಮನದ ಕಾಮನೆಗಳು,
ಸಾಕಾಗದಾಗಿದೆ ಕಿಸೆಯ ಕಾಂಚಾಣಗಳು.

ಇರುವರೆಲ್ಲರೂ ಅವರವರ ಲೋಕದಲಿ,
ಯಜಮಾನ, ಸಿಬ್ಬಂದಿ ಅವರವರ ಕೆಲಸದಲಿ.
ಮನವ ಕಾಡುತಿವೆ ನೂರು ಬಯಕೆಗಳು,
ಕಣ್ತಪ್ಪಿಸಿ ಕದಿಯಲು ಸುಲಭ ಸಂದರ್ಭಗಳು.

ಯಜಮಾನನಿಗೆ ಇಲ್ಲ ಚಿಂತೆಗಿಂತೆಗಳು,
ಇಲ್ಲವೇ ಕಾವಲಿಗೆ  ನೂರೆಂಟು ನಯನಗಳು?
ಕಾಯುತಿವೆ ಎಲ್ಲೆಡೆ ಕ್ಯಾಮೆರಾ ಕಣ್ಣುಗಳು,
ಗಮನದಲ್ಲಿದೆ ಎಲ್ಲರ ಚಲನ ವಲನಗಳು!

ಭಗವಂತ ಬುದ್ಧಿವಂತ ಈ ಯಜಮಾನನಂತೆ,
ನಿಯುತ ಕಣ್ಣುಗಳ ಜಗದಿ ಅಳವಡಿಸಿಹನಂತೆ,
ತಪ್ಪು ಒಪ್ಪುಗಳ ನಡೆಯುತ್ತಿದೆ ಚಿತ್ರಣ,
ಸಂದೇಶ ಹೋಗುತಿದೆ ಅನುದಿನ ಅನುಕ್ಷಣ!

ನಮ್ಮ ಕಂಗಳೇ ಅವನ ಕ್ಯಾಮೆರಾಗಳು!
ನಮ್ಮ ತಪ್ಪನ್ನು ಚಿತ್ರಿಸಿವೆ ನಮ್ಮವೇ ಕಂಗಳು!
ಕಥೆಯ ಹೇಳುತಿವೆ ನಮ್ಮವೇ ಮನಗಳು!
ಚಿತ್ರಗುಪ್ತನ ತಾಣವೇ ನಮ್ಮ ಜೀವಕಣಗಳು!

ಸಕಲ ಜೀವರಾಶಿಯೇ ಅವನ ಸಂಪರ್ಕ ಜಾಲ!
ನಮಗೆ ನಮ್ಮನೇ ಕಾವಲಿಟ್ಟು ನಗುತಿಹನು ಕಳ್ಳ!

370 ಎಂಬ ವಿಷ

ನಾ ತಾಯಿ ಭಾರತಾಂಬೆ,
ಆದೆ ಕೆಲ ಮಕ್ಕಳ ಕೈಗೊಂಬೆ.
ಸ್ವಾರ್ಥದಾಟದಲಿ ಅವರು,
370 ಎಂಬ ವಿಷವನುಣಿಸಿದರು!

ವಿಷ ಬೆರೆತು, ಕಹಿ ಸುರಿದು,
ಅರ್ಬುದವಾಗಿ ಬೆಳೆದು,
ರಕ್ತ ಹರಿಯಿತು ಕೋಡಿ,
ಇದಾವ ಪುರುಷಾರ್ಥ ನೋಡಿ.

ಮಕ್ಕಳು ಮಕ್ಕಳ ನಡುವೆ,
ಬಡಿದಾಟದಲಿ ಆದೆ ಬಡವೆ.
ಯಾರಿಗೆ ಹೇಳಲಿ ನನ್ನ ಕಥೆಯ,
ಮನದಾಳದ ಮಾಸದ ವ್ಯಥೆಯ?

ಏಳು ದಶಕಗಳ ನೋವು,
ಸಹಿಸಲಾಗದ ಕಹಿ ಬೇವು.
ಆಗ ಹುಟ್ಟಿದ  ಹಸಿ ಹುಣ್ಣು,
ಕೆಲವರಿಗೆ ಮಾತ್ರ ಸಿಹಿ ಗಿಣ್ಣು.

ಎದ್ದು ನಿಂತನೊಬ್ಬ ಹೆಮ್ಮೆಯ ಪುತ್ರ,
ಛಾತಿ ಛಪ್ಪನ್ನಿಂಚಿನ ಗಾತ್ರ!
ಅರ್ಬುದವ ಛೇದಿಸಿ, ಮುಲಾಮು ಹಚ್ಚಿ,
ತಪ್ಪಿಸಿದ ನಾ ಆಗುವುದ ಹುಚ್ಚಿ!

ಇಂದು ಸುರಿದ ಆನಂದ ಭಾಷ್ಪದೆ,
ಆರ್ದ್ರವಾಯಿತು ಒಣಗಿದೆದೆ.
ಚಿರಕಾಲ ಸುಖವಾಗಿ ಬಾಳಿ,
ಹೊಂಗಿರಣದ ಬೆಳಗಾಗಲಿದೆ ತಾಳಿ.



ಹೊಸ ವರ್ಷ

ಬಂತಿದೋ ಮತ್ತೊಂದು ಬುತ್ತಿ,
ಹೊಚ್ಚ ಹೊಸದೆಂದು ಸುದ್ದಿ.

ಬುತ್ತಿಯಲಿ ಹೊಸರುಚಿಯ ನಿರೀಕ್ಷೆ,
ಉಂಟೇನೋ ಬಿಸಿಬಿಸಿಯ ದೋಸೆ.
ಕಹಿಯ ಮರೆಯುವ ಆಕಾಂಕ್ಷೆ,
ಸಿಹಿಯ ಮೂಟೆಯ ಆಸೆ.

ಜಿಹ್ವೆಯಲ್ಲಿ ಜಿನುಗಿದೆ ತೇವ,
ಕಾತುರದೆ ಸಂಭ್ರಮಿಸಿದೆ ಜೀವ.
ಪ್ರತಿ ಸಾರಿಯೂ ಹೀಗೇ,
ಅಮೃತವೇ ಸಿಕ್ಕ ಹಾಗೆ.

ಆಶಿಸುವುದು ಸಹಜ ಗುಣ,
ಮನುಜನ ಮನದ ತಾನ.
ಕನಸಿನ ಲೋಕದ ಸೀಮೆ,
ಆಗದಿರಲಿ ಬರಿಯ ಭ್ರಮೆ.

ಅಡುಗೆ ಆಕೆಯದೇ ಉಂಟು,
ಸರಕಿಗೆ ನನ್ನದೇ ಗಂಟು,
ನನ್ನ ಸಂಪಾದನೆಗೆ ತಕ್ಕದ್ದು,
ನನ್ನ ಪರಿಶ್ರಮಕ್ಕೆ ದಕ್ಕಿದ್ದು.

ಆದರೂ ಇದೆಯಿಲ್ಲಿ ನಿರೀಕ್ಷೆ,
ಹೊಸದನ್ನು ಪಡೆಯುವ ಕಾಂಕ್ಷೆ.
ಆಗದಿರಲಿ ಯಾರಿಗೂ ನಿರಾಶೆ,
ಎಲ್ಲರಿಗೂ ಪ್ರೀತಿಯ ಶುಭಾಕಾಂಕ್ಷೆ!

ಮಧುರ ಮಧುರವೀ ಮಂಜುಳ ಗಾನ

ಕವಿಯ ಭಾವಗಳು,
ಸುಂದರ ಸ್ವಪ್ನಗಳು.
ಪದಗಳು ಹುಟ್ಟುತಿವೆ,
ಹಂದರವ ಕಟ್ಟುತಿವೆ,
ಹಾಡಿಗೆ ಅಸ್ತಿಪಂಜರವ ಕಟ್ಟುತಿವೆ!

ಬಂದನಿಗೋ ಮಾಯಗಾರ,
ಸರಿಗಮದ  ಜಾದೂಗಾರ.
ದಂಡವನ್ನು ಆಡಿಸಿದ,
ರಕ್ತಮಾಂಸ ಕೂಡಿಸಿದ,
ಹಾಡಿಗೆ ಸುಸ್ವರೂಪವ ನೀಡಿದ!

ಸುಸ್ವರದ ಮಾಂತ್ರಿಕ,
ಕಂಠೀರವ ಗಾಯಕ.
ಗುಂಡಿಗೆಯ ತೆರೆದ,
ಉಸಿರನ್ನು ಹೊಸೆದ,
ಹಾಡಿಗೆ ಪ್ರಾಣವನು ತುಂಬಿದ!

ಕೇಳುತಿವೆ ಕಿವಿಗಳು,
ಮಧುರತಮ ಸ್ವರಗಳು.
ಮಕರಂದದ ಝರಿಗಳು,
ಗಂಧರ್ವರ ವರಗಳು,
ಮಧುರ ಮಂಜುಳ ಗಾನಗಳು!