Friday, June 19, 2020

ಹೀಗೇಕೆ? ನಾವು ಹೀಗೇಕೆ?

ಭರ್ಜರಿ ಸೋಫಾ ಸೆಟ್ಟು,
ಕಾಸ್ಟ್ಲಿ ಮೇಜು ಕಪಾಟು,
ಮನೆ ಪೂರ್ತಿ ನೀಟ್ನೀಟು,
ಕಸವನು ಬೀದೀಲಿ ಹಾಕ್ಬಿಟ್ಟು!
ಹೀಗೇಕೆ? ನಾವು ಹೀಗೇಕೆ?

ವಾಟ್ಸ್ಯಾಪ್ ವೀರ ಎನ್ನುವ ಶೋಕಿ,
ಬೀದಿಯ ಕಸವ ಜಗಲಿಗೆ ಹಾಕಿ,
ಗೆಳೆಯರ ಕೋರಿಕೆ ಪಕ್ಕಕ್ಕೆ ನೂಕಿ,
ಹಾಕಿದ್ದೆ ಹಾಕಿ, ಹಾಕಿದ್ದೆ ಹಾಕಿ,
ಹೀಗೇಕೆ? ನಾವು ಹೀಗೇಕೆ?

ಟಿವಿಯ ಪರದೆಯ ನಿತ್ಯವೂ ನೋಡಿ,
ಆಗಿದೆ ನಮಗೆ ಮಾಸದ ಮೋಡಿ,
ಮನೆಯವರೆಲ್ಲ ಜೊತೆಯಲಿ ಕೂಡಿ,
ಬೆರೆಯಲು ಈಗ ಆಗದು ನೋಡಿ.
ಹೀಗೇಕೆ? ನಾವು ಹೀಗೇಕೆ?

ಎಲ್ಲರ ಕೈಲೂ ಮಾಯಾ ಗೊಂಬೆ,
ಅದರ ಪ್ರಭಾವ ಹೇಗಿದೆ ಅಂಬೆ?
ಕೊಟ್ಟರೂ ಬೇಡ ಇಂದ್ರನ ರಂಭೆ,
ಗೊಂಬೆಯ ಮುಂದದು ಗೋಸುಂಬೆ!
ಹೀಗೇಕೆ? ನಾವು ಹೀಗೇಕೆ?

ಏನಾಯಿತೆಲ್ಲರ ಸಂಬಂಧ,
ಹೃದಯದ, ಮನಸಿನ ಅನುಬಂಧ,
ಮಾಯಾಲೋಕದ ಪದಬಂಧ,
ಬಿಡಿಸಲು ಆಗದ ಘಟಬಂಧ,
ಹೀಗೇಕೆ? ನಾವು ಹೀಗೇಕೆ?

ಹೀಗೇಕೆ? ನಾವು ಹೀಗೇಕೆ?

Saturday, June 13, 2020

ಸಗ್ಗಸೀಮೆ

ಇಳೆಯ ತಳದ ದೇಶದಲ್ಲಿ,
ಭೂಮಿತಾಯಿ ನಲಿದಳು.
ಜೋಡಿದ್ವೀಪದ ನಾಡಿನಲ್ಲಿ
ದೇವಸನ್ನಿಧಿ ತಂದಳು!

ಸಗ್ಗಸೀಮೆಯ ನಾಡಿನಲ್ಲಿ,
ಭಾವ ಬುಗ್ಗೆಯು ಚಿಮ್ಮಿದೆ. 
ಕಣ್ಣ ಮುಂದಿನ ಅಂದ ಕಂಡು,
ಹೃದಯ ತುಂಬಿ ಬಂದಿದೆ. 
 
ನೀಲಿ ನಭದ ಬೆಳಕಿನಲ್ಲಿ,
ಎದೆಯ ಕಲ್ಮಶ ಕರಗಿದೆ. 
ಅರಳೆ ಮೋಡದ ಸುರುಳಿಯಿಂದ,
ಮನಸು ಹಗುರ ಎನಿಸಿದೆ. 

ಎಲ್ಲಿ ನೋಡಿದರಲ್ಲಿ ಕಾಣಿರಿ,
ಹಸಿರ ಬುಗ್ಗೆಯು ಚಿಮ್ಮಿದೆ. 
ಬುವಿಯ ಒಡಲಿನ ಪ್ರೀತಿಯಿಲ್ಲಿ,
ಬಣ್ಣದಲಿ ಹೊರ ಹೊಮ್ಮಿದೆ. 

ಧವಳ ಗಿರಿಗಳ ಶಿಖರಗಳು,
ತಲೆಯೆತ್ತಿ ಆಗಸ ಮುಟ್ಟಿವೆ.
ನೀಲಿ ನೀರಿನ ಕೊಳಗಳಿಲ್ಲಿ,
ಗಿರಿಯ ಪಾದವ ತೊಳೆದಿವೆ!

ಹಸಿರು ರೇಷಿಮೆ ಹಾಸಮೇಲೆ,
ಮೇಯೋ ಕುರಿಯ ಮರಿಗಳು,
ಹೆಣ್ಣುಮಕ್ಕಳು ಇಟ್ಟಿರುವಂತೆ,
ಬಿಳಿಯ ರಂಗೋಲಿ ಚುಕ್ಕೆಗಳು!

ಗಾಳಿಯಾಡುವ ಮಾತಿನಲ್ಲಿ,
ಮಧುರ ರಾಗವು ಮೂಡಿದೆ. 
ಎದೆಯ ನವಿರು ಭಾವಗಳಿಗೆ,
ಭಾಷೆಯೊಂದು ದೊರಕಿದೆ!

Thursday, June 11, 2020

ನೆನಪಿನ ಅಲೆಗಳು

ಸಾಗರ ತಟದೊಲು ಎನ್ನಯ ಮನವು,
ಸವೆದಿದೆ ಅಲೆಗಳ ಹೊಡೆತಕೆ ದಿನವೂ.

ಮರೆಯಬೇಕಿದೆ ದುಃಖದ ದಿನಗಳ,
ನೋವನು ಕೊಡುವ ನೆನಪಿನ ಅಲೆಗಳ!
ಪುಡಿಯಾಗುತಿದೆ ಅಲೆಗಳ ಹೊಡೆತಕೆ,
ಎದೆಯಾಗುತಿದೆ ಮರಳಿನ ಮಡಕೆ!

ನೆನಪಿಸಿಕೊಂಡು ನೋವಿನ ಕಥೆಯ,
ಸುರಿಸಿದೆ ಎದೆಯು ಕಣ್ಣೀರಿನ ವ್ಯಥೆಯ!
ಕಾಣುವುದಿಲ್ಲ ಕಣ್ಣೀರಿನ ಬಿಂದು,
ಕರಿಗಿಹೋಗಿದೆ ಜಲದಲಿ ಮಿಂದು!

ಕಣ್ಣೀರ ಕೋಡಿ ಹರಿದಿದೆ ಇಲ್ಲಿ,
ಮರಳಿನ ಕಣಗಳ ಸಾಕ್ಷಿಯಲ್ಲಿ!
ಹೆಪ್ಪುಗಟ್ಟಿದ ಹೃದಯವು ಕರಗಿದೆ,
ಸಾಗರ ಜಲವನು ಉಪ್ಪಾಗಿಸಿದೆ!

ನೆನಪಿನ ಅಲೆಗಳ ನೆರಳಿನ ಜೊತೆ,
ಮರೆಯಲು ಆಗದು ನೋವಿನ ಕಥೆ!
ಅಲೆಗಳು ನಿಂತರೆ ಪುನರ್ಜನ್ಮ,
ಗಾಳಿಯ ನಿಲ್ಲಿಸೋ ಪರಮಾತ್ಮ!

Sunday, June 7, 2020

ನಮ್ಮ ಲೋಕ

ನಮ್ಮಯ ಲೋಕ, ಹೆಮ್ಮಯ ಲೋಕ,
ಎಲ್ಲವ ಮೀರಿದ ಮಾಯಾಲೋಕ!

ಕೋಟಿ ಗ್ರಹಗಳಿಗೆ ಮುಕುಟಪ್ರಾಯ,
ನಿತ್ಯನೂತನ ಹರಯದ ಪ್ರಾಯ!
ಜೀವವ ಧರಿಸಿ, ಪ್ರೀತಿಯ ಉಣಿಸುವ,
ಬಣ್ಣದುಡುಗೆಯ ಚೆಲುವರಸಿ!

ವಿಶಾಲ ನಭದಲಿ ಹರಡಿದೆ ಹತ್ತಿ,
ಬಿಸಿಲನು ತಡೆದು ತಣಿಸುವ ಭಿತ್ತಿ.
ದಣಿದ ಬುವಿಗೆ ಕರುಣೆಯ ತೋರಿ,
ದಾಹವ ನೀಗುವ ಅಂಬರ ಪೋರಿ!

ನೀಲಿಯ ಬಾನು, ಹಸುರಿನ ಕಾನು,
ಕಾಡಿನ ಮರದಲಿ ತುಂಬಿದೆ ಜೇನು!
ಕಿವಿಯಲಿ ಗುನುಗಿದೆ ಹಕ್ಕಿಯ ಹಾಡು,
ಹೂಗಳ ಪರಿಮಳ ಸೆಳೆದಿದೆ ನೋಡು!

ಬೆಳಗಿಗೆ ಒಂದು, ರಾತ್ರಿಗೆ ಒಂದು,
ಬಾನನು ಬೆಳಗಿದೆ ಜೋಡಿದೀಪ.
ಏಳು ಬಣ್ಣಗಳ ಬೆಡಗಿನ ರೂಪ,
ರಂಗೋಲಿ‌ ಇಲ್ಲಿ ಇಂದ್ರಛಾಪ!

ಏಳುವ ದಿನಕರ ನಸುಕಿನಲಿ,
ಕುಂಚವು ಸಾವಿರ  ಕರಗಳಲಿ,
ಕೋಟಿ ಚಿತ್ರಗಳ ಬಿಡಿಸುತಲಿ,
ನಿದ್ದೆಗೆ ಜಾರುವ ಸಂಜೆಯಲಿ!

ಬಂದ, ಬಂದ, ರಾತ್ರಿಯ ರಾಜ,
ಬುವಿಗೆ ತಂದ ಹೊಸ ತೇಜ!
ಹಾಲನು ಹೊಯ್ದು, ಎದೆಯನು ತೊಯ್ದು,
ಮರೆಯಾದನು ಮನವನು ಕದ್ದೊಯ್ದು!

ಬಳಕುವ ನದಿಗಳ ಮೈಮಾಟ,
ಸಾಗರದಲೆಗಳ ಜಿದ್ದಿನ ಓಟ!
ಗಿರಿ, ಮೋಡಗಳ ಪ್ರೇಮ ಸಂಘರ್ಷ,
ತಂದಿದೆ ಕೊನೆಗೆ ಹರ್ಷದ ವರ್ಷ!

ಎಲ್ಲಿದೆ ಇಂತಹ ಮಾಯಾಲೋಕ?
ಕಾಣದ ಸ್ವರ್ಗವು ಬೇಕೇಕ?
ಇದ್ದರೂ ಗ್ರಹಗಳು  ಕೋಟಿ, ಕೋಟಿ,
ಸುಂದರ ಬುವಿಗೆ ಯಾರು ಸಾಟಿ?!


Saturday, June 6, 2020

ನಿಸರ್ಗ ಮಾತೆಯ ವ್ಯಥೆ

ನಿಸರ್ಗ ಮಾತೆಯ ಕಥೆಯ ಏನು ಹೇಳಲಿ?
ಕಣ್ಣೀರಿನ ವ್ಯಥೆಯೇ ಪ್ರತಿನಿತ್ಯ ಬಾಳಲಿ.
ಪರಿಸರಕೆ ಸಾಕೇ ಒಂದು ದಿನದ ಉತ್ಸವವು?
ಪ್ರಾಣವಾಯುವಿಲ್ಲದೆ ಹೇಗೆ ತಾನೆ ಬದುಕುವೆವು?

ನಿತ್ಯಪೂಜೆಗಿಲ್ಲಿ ಕೊಳಕುಗಳು, ಕಸಗಳು,
ಬುದ್ಧಿಮಾಂದ್ಯರಮ್ಮನಿಗೆ ಇನ್ನೆಂಥ ಬಾಳು!
ವಿಷದ ಧೂಪ ಹಾಕಿದರು ಧೂರ್ತರು, ಪಾಪಿಗಳು,
ಪ್ಲಾಸ್ಟಿಕ್ಕಿಂದ ಮುಚ್ಚಿವೆ ಶ್ವಾಸದ ನಳಿಕೆಗಳು!

ಕೊಡಲಿಯೇಟು ನಿತ್ಯವೂ ದೇಹದ ಮೇಲೆ,
ಇವರಿಗೆ ಕಲಿಸಲು ಎಲ್ಲೂ ಇಲ್ಲ ಶಾಲೆ!
ಔಷಧಿ ಆಗಿದೆ ಬಹುದೂರದ ನಂಟು,
ಗಾಯಕ್ಕೆ ಬಿದ್ದಿದೆ ಬರೆಯಂತೆ ಕಾಂಕ್ರೀಟು!

ಕಣ್ಣುತೆರೆಯಬೇಕಿದೆ ಎಲ್ಲ ಧೃತರಾಷ್ಟ್ರರು,
ಕಾಪಾಡಲು ಬರಲಿ ಪಾಂಡುವಿನ ಪುತ್ರರು!
ನಿಸರ್ಗ ಮಾತೆಗೆ ನಿತ್ಯವೂ ವೇದನೆ,
ನಿತ್ಯೋತ್ಸವವಾಗಬೇಕು ಪರಿಸರ ರಕ್ಷಣೆ!

ಬನ್ನಿ, ಎಲ್ಲ ಬನ್ನಿ, ಸೇರಿ ಮಾಡೋಣ ಶಪಥ,
ಭೂತಾಯ ರಕ್ಷಣೆಗೆ ಹುಡುಕೋಣ ಶತ ಪಥ!
ಆಗೋಣ ಬನ್ನಿ ಸ್ವಚ್ಛ ನಾಗರಿಕರು,
ನಿಸರ್ಗ ಮಾತೆಯ ಹೆಮ್ಮೆಯ ಪುತ್ರರು!

Tuesday, June 2, 2020

ತಾಯಿ-ತವರು

ತವರು ತಂಪು, ತಣ್ಗಂಪು, ತಣ್ಬನಿ,
ತಾಯಿ ತಂಬುಳಿ, ತಂಗಾಳಿ, ತಣ್ಗೊಳ.

ತಳಿರ ತಲ್ಪವು ತಾಯ ತೊಡೆಯು,
ತರುಣಾತಪವು ತಾಯ ತೆಕ್ಕೆಯು.
ತಾಯಿಲ್ಲದರೆಲ್ಲಿ ತವರು?
ತೋಂಟಿಗನಿಲ್ಲದೆಲ್ಲಿ ತೋಟವು?

ತಂತಿ ತಂಬೂರಿ, ತೊಗಲು ತಮಟೆ,
ತಳಿರು ತೋರಣ, ತುಹಿನ ತಂಪು,
ತಾವರೆ ತಟಾಕ, ತುಡುಪು ತೆಪ್ಪ,
ತಾಯಿ ತವರು, ತಾಯಿ ತವರು.

ತಂಗಳಿರಲಿ, ತುಪ್ಪವಿರಲಿ,
ತಿಮಿರವಿರಲಿ, ತಿಂಗಳಿರಲಿ,
ತಾಪವಿರಲಿ, ತಲ್ಪವಿರಲಿ,
ತುಡಿವ ತವರಿನ ತಂಪಿರಲಿ ತರಳೆಗೆ!

Monday, June 1, 2020

ಜೋಗ

ಜನಪ, ಜೋರುರವ, ಜವನ, ಜವ್ವನೆ,
ಜೊತೆಜೊತೆಯಲಿ ಜಿದ್ದಿನ ಜಲಕೇಳಿ!

ಜ್ಯೋತಿರ್ಲತೆಗಳ ಜಳಕವೋ,
ಜಾಜಿಮಲ್ಲೆಗಳ ಜಲಪಾತವೋ?
ಜುಮ್ಮೆನಿಸಿದೆ ಜೋಗದ ಜಂಪೆ,
ಜಂಬೂದ್ವೀಪದ ಜಲಜಿಂಕೆ!

ಜಟಾಜೂಟದಿಂ ಜಾರಿದ ಜಾಹ್ನವಿ,
ಜಿಗಿದಳು, ಜಿಗಿದಳು ಜುಮ್ಮನೆ.
ಜನಿಸಿದ ಜ್ಯೋತಿಯ ಜಗಮಗದಲಿ,
ಜಗದಲಿ ಜೀವನ ಜೋರಿನ ಜಲಸಾ!

ಜೀಮೂತಗಳು ಜಿನುಗಲಿ ಜಿನುಗಲಿ,
ಜಲವೃಷ್ಟಿಯು ಜೀಕಲಿ ಜೀಕಲಿ.
ಜನಿಸಲಿ ಜೀವಂತ ಜನಕರಾಗ,
ಜನುಮಕ್ಕಿರಲೊಮ್ಮೆ ಜೋಗದ ಜೋಗ!