Thursday, April 20, 2023

ತತ್ವಜ್ಞಾನಿ ತಾತಯ್ಯ

ನಾರೇಯಣ ಗುರು, ನಾರೇಯಣ ಗುರು,

ಬಂದೆವು ನಿನ್ನಯ ಪಾದಕೆ ಶರಣು!


ಪಾವನ ಪುಣ್ಯದ ಜನ್ಮವ ಪಡೆದೆ,

ಆತ್ಮವು ತೋರಿದ ದಾರಿಯ ಹಿಡಿದೆ.

ಅಮರ ನಾರಾಯಣ ಪ್ರಸಾದನೇ,

ಕೈವರ ಪುರದ ಮಹಾತ್ಮನೇ!


ಎಂಜಲ ಕೂಳಿಗೆ ಪರಾಕು ಏಕೆ,

ಸಂಸಾರಿಗಳಿಗೇಕೆ  ವಾರಾಂಗನೆಯು?

ಮರಗಳ ಕಡಿದು ಹಾಳಾಗದಿರಿ,

ಹೇಳಿದೆ ಜೀವನ ತತ್ವಗಳ!


ಅರ್ಥವಿಲ್ಲದ ಓದದು ಏಕೆಂದೆ,

ಮತಕುಲಗಳಿಗೆ ಅರ್ಥವು ಇಲ್ಲೆಂದೆ.

ಸಾಮಾನ್ಯ ಜನರ ಸದ್ಗುರು ನೀನು,

ಬದುಕಿನ ಪಾಡನೇ ಹಾಡಾಗಿಸಿದೆ!


ತುದಿಮೊದಲರಿಯದ ಪಾಮರರಿಗೆ,

ಒಳಗಿನ ಆತ್ಮದ ಬೆಳಕನು ನೀಡಿದೆ.

ಬಳೆಗಾರ ನೀನು ಬಾಳನು ಬೆಳಗಿದೆ,

ನಾರೇಯಣ ಗುರು ತಾತಯ್ಯನಾದೆ.


ಕಲ್ಲನು ಬಾಯಲೇ ಸಕ್ಕರೆ ಮಾಡಿದೆ,

ನಮ್ಮಯ ಬದುಕಿಗೆ ಸಿಹಿಯನು ನೀಡು.

ಮಣ್ಣಿನ ಹಕ್ಕಿಗೆ ಜೀವವ ತುಂಬಿದೆ,

ಭಕ್ತಿಯ ದೀಪಕೆ ಪ್ರಾಣವ ನೀಡು!


ಹಾವಿನ ಬಾಯಲೇ ನೀರನು ತರಿಸಿದೆ,

ಬತ್ತಿದ ಬದುಕಿಗೆ ಜಲವನು ನೀಡು.

ಒಕ್ಕಣ್ಣನಿಗೆ ನೀ ನೀಡಿದೆ ಕಣ್ಣನು,

ನೀಡು ನಮಗೆ ಜ್ಞಾನದ ನೇತ್ರವ!


ಅಂತಃಚಕ್ಷುವು ತೆರಯಿತು ನಿನಗೆ,

ಕಾಲದ ಜ್ಙಾನವ ನೀಡಿದೆ ನಮಗೆ.

ನಾರೇಯಣನ ಆತ್ಮದ ಬಂಧುವೆ,

ಅಮರನಾದೆ ಸಜೀವ ಸಮಾಧಿಯಲಿ!


*ಕೈವಾರ ತಾತಯ್ಯ ರಾಷ್ಟ್ರಮಟ್ಟದ ಕವನ ಸ್ಪರ್ಧೆ* ಯಲ್ಲಿ

ದ್ವಿತೀಯ ಬಹುಮಾನ ಪಡೆದ ಕವನ



ಅಕ್ಕ-ತಂಗಿ

ಅಕ್ಕತಂಗಿಯರ ಬಂಧ,

ಒಂದು ಭದ್ರಕೋಟೆ.

ಬಾಳ ಮುದವಾಗಿಸುವ, 

ಸಿಹಿಯ ಮೂಟೆ.


ಜೊತೆಗಾತಿ, ಪ್ರಾಣಸಖಿ,

ತಾಯಿಮಕ್ಕಳ ರೀತಿ,

ಹಲವು ಮುಖಗಳ,

ಸಂಬಂಧ ಇವರ ಪ್ರೀತಿ.


ಒಂದು ಕ್ಷಣ ಪೈಪೋಟಿ,

ಮರುಕ್ಷಣ ಸಂಪ್ರೀತಿ.

ಆದರ್ಶ ಮೇಲ್ಪಂಕ್ತಿಯ,

ಸುವರ್ಣ ಸ್ನೇಹಸೇತು.


ಚಿಕ್ಕಂದಿನ ಜಗಳಗಳು,

ಪುಟ್ಟ ಕದನಗಳು,

ಬಂಧವ ಬೆಸೆಯುವ,

ಗಟ್ಟಿ ಹಗ್ಗಗಳು!


ಈ ಪಯಣ ಸಾಗುವುದು,

ಕವಲು ದಾರಿಯವರೆಗೆ,

ಬದುಕಿನ ದಾರಿಗಳು,

ಬೇರೆಯಾಗುವವರೆಗೆ.


ನೆನಪುಗಳು ಸುಳಿಯುವವು,

ಬಾಳ ಕೊನೆಯವರೆಗೆ,

ಸುಡುವ ಬಿರು ಬಿಸಿಲಲಿ,

ಹಾಯಿ ತಂಬೆಲರ ಹಾಗೆ!


ಹಳೆಯ ನೆನಪುಗಳು,

ಸುಳಿದಾಡುವ ಸಮಯ,

ಹಂಬಲವು  ಎದೆಗಪ್ಪಲು,

ತನ್ನ ತವರಿನಾ ಸಖಿಯ!



ನೆರಳಾಗುವೆ

ಮಳೆಯೇ ಬರಲಿ, ಬಿಸಿಲೇ ಇರಲಿ,

ನೆರಳಾಗುವೆ ನಿನಗೆ ಬಾ ತಮ್ಮ!


ಬಾಳ ಹಾದಿಯು ಸುಲಭವೇ ಅಲ್ಲ,

ಹಳ್ಳ, ಗುಂಡಿ, ಇದೆ ಕೆಸರೆಲ್ಲ!

ಜೊತೆಯಲೇ ನಡೆವೆ, ತಂಪನು ಎರೆವೆ,

ನೆರಳಾಗುವೆ ನಿನಗೆ ಬಾ ತಮ್ಮ!


ಬಣ್ಣ, ಬಣ್ಣದ ಛತ್ರಿಯು ಏಕೆ?

ಸೊಗಸಾಗಿದೆ ಈ ಹಸಿರೆಲೆಯು!

ಮರುಳಾಗದಿರು ನೀ ಬಣ್ಣಕ್ಕೆ,

ನೆರಳಾಗುವೆ ನಿನಗೆ ಬಾ ತಮ್ಮ!


ನಗುತಾ ನಾವು ನಡೆಯುವ,

ಎಂದಿಗೂ ಹೀಗೇ ಜೊತೆಯಿರುವ,

ನಗುವು ನಿನ್ನದು, ಆನಂದ ನನ್ನದು,

ನೆರಳಾಗುವೆ ನಿನಗೆ ಬಾ ತಮ್ಮ!


ಹೆಜ್ಜೆಗೆ ನಾನು ಹೆಜ್ಜೆಯ ಹಾಕುವೆ,

ತಪ್ಪು ದಾರಿಗೆ ಬಿಡೆ ನಾನು!

ಬಾಳ ದಾರಿಯ ಕೊನೆವರೆಗೂ,

ನೆರಳಾಗುವೆ ನಿನಗೆ ಬಾ ತಮ್ಮ!



ಪಾಠ

ಸಿದ್ಧಪಡಿಸುತಿಹಿಳು ತಾಯಿ ಮಗಳನ್ನು,

ಅವಳ ಹೊಸ ಬಾಳ ಪಯಣಕೆ,

ತಾ ಕಲಿತ ಪಾಠಗಳ ಕಲಿಸುತ್ತ.


ಕೂದಲಲಿ ಗಂಟಾಗದಂತೆ ಬಿಡಿಸುತ್ತ,

ಸಂಬಂಧಗಳು ಗಂಟಾಗದಂತೆ,

ಚತುರತೆಯಲಿ ಬಿಡಿಸಬೇಕೆಂದು.


ಕೂದಲಿಗೆ ಘಮದ ಎಣ್ಣೆ ಸವರುತ್ತ,

ಕುಟುಂಬಕೆ ಪೋಷಣೆ ಕೊಡಲು,

ಪ್ರೀತಿಯ ಸುಗಂಧದೆಣ್ಣೆ ಬೇಕೆಂದು.


ಜಡೆಯನು ಹೆಣೆಯುತಿಹಳು ತಾಯಿ,

ಕೂಡುಕುಟುಂಬದ ಸಬಲತೆಗೆ,

ಒಗ್ಗಟ್ಟಿನಲಿ ಬಲದ ಗುಟ್ಟಿದೆಯೆಂದು.


ಕನ್ನಡಿಯಲಿ ನೋಡೆನ್ನುತಿಹಳು,

ತನ್ನ ನಡವಳಿಕೆ ತಾನೇ ಕಂಡು,

ತಪ್ಪುಗಳನು ತಿದ್ದಿಕೊಳಬೇಕೆಂದು.


ತಲೆಮಾರಿನಿಂದ ತಲೆಮಾರಿಗೆ,

ಸಂಸ್ಕಾರವಿಲ್ಲಿ ಹಸ್ತಾಂತರ,

ಜೆಡೆ ಹೆಣಿಕೆ ಇಲ್ಲಿ ಪ್ರೀತಿಗೆ ಮಾತ್ರ!



ಅಗ್ನಿಪರ್ವತ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ



ಕೋಟಿಕೋಟಿ ಜನರ ಒಡಲ ಬೆಂಕಿ

ಹೊರ ಹರಿಯಿತು ಶತ್ರುಗಳ

ಮಾರಣ ಹೋಮಕ್ಕೆ ಸಾಕ್ಷಿಯಾಗಿ



ವರುಷ ವರುಷಗಳ ತಾಪ

ಒಳಗೊಳಗೇ ಕುದಿಯುತಿತ್ತು

ಪಾಪದ ಕೊಡ ತುಂಬಿ ನಿಂತಿತ್ತು



ಬೆನ್ನಿಗೆ ಚೂರಿ ಹಾಕುವ ಹೇಡಿಗಳ

ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ

ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ

ನಂತರದಲ್ಲಿ ಸ್ಮಶಾನ ಮೌನ



ಓಂ ಶಾಂತಿ ಶಾಂತಿ ಶಾಂತಿಃ


ಸನ್ನಿಹಿತ

ಬ್ರಹ್ಮಚರ್ಯಾಶ್ರಮದಲ್ಲಿ ಕಾಮ ಕುಸುಮಗಳ ತೋಟ,

ಗೃಹಸ್ಥಾಶ್ರಮದಲ್ಲಿ ಕೊಲೆ, ಸುಲಿಗೆಗಳ ಪರಿಪಾಠ,

ವಾನಪ್ರಸ್ಥದಲ್ಲಿ ಜೀವಿಸಲು ಜಂಜಾಟ,

ಸನ್ಯಾಸಾಶ್ರಮದಲ್ಲಿ ಸಕಲ ವೈಭೋಗದಾಟ!

 

ತೋಟವ ಮೇಯುವ ಬೇಲಿಯಂತಹ ಅಧಿಕಾರವರ್ಗ,

ಕಾರ್ಮಿಕವರ್ಗದಲಿ ಸೋಮಾರಿತನದ ಅಧಿಪತ್ಯ,

ಆರಕ್ಷಕ ದಳದಲ್ಲಿ ಭಕ್ಷಕರೆ ಬಹಳ,

ಯಥಾ ಪ್ರಜಾ ತಥಾ ರಾಜ! ಯಥಾ ಪ್ರಜಾ ತಥಾ ರಾಜ!

 

ತಾಯ ಹಾಲಿನಲೇ ಮೂಡುತಿದೆ ನಂಜು,

ಒಳಗಣ್ಣುಗಳಿಗೆ ಕವಿಯುತಿದೆ ಮಂಜು,

ಮುಳುಗುತಿದೆ ಇಂದು ಅಧರ್ಮದಲಿ ಭಾರತ,

ಧರ್ಮಸಂಸ್ಥಾಪನೆ ಇನ್ನು ಸನ್ನಿಹಿತ! ಸನ್ನಿಹಿತ!


ಮಸಣವಾಯಿತು ದೇವಭೂಮಿ...

ಮೇಘ ಸಿಡಿಯಿತು, ಭುವಿಯು ನಡುಗಿತು,

ಮುಸಲಧಾರೆಯ ಏಟಿಗೆ, ಉಕ್ಕೊ ನದಿಗಳ ರಭಸಕೆ.



ಮಸಣವಾಯಿತು ದೇವಭೂಮಿ

ಪ್ರಳಯನಾದದ ಧಾಟಿಗೆ,

ನಿಂತ ನೆಲವು ಹಾಗೇ ಕುಸಿದರೆ

ಆಸರೆಯೆಲ್ಲಿದೆ ಬದುಕಿಗೆ.



ತಂದೆ ತಾಯರ, ಮುದ್ದುಮಕ್ಕಳ

ತೋಳಹಾರದ ಬದಲಿಗೆ,

ಅಗಲಿಕೆಯ ಕಲ್ಲ ಬಂಡೆಯು

ಜೋತುಬಿದ್ದಿತು ಕೊರಳಿಗೆ!



ಗರ್ಭಗುಡಿಯಲಿ, ದೇವನೆದುರಲಿ

ಪ್ರಾಣಭಿಕ್ಷೆಯ ಹರಕೆಗೆ,

ಸಾವುನೋವಿನ ವರವು ದೊರೆಯಿತು,

ಸ್ತಬ್ಧವಾಯಿತು ಗುಂಡಿಗೆ!



ಕ್ರೂರಮೃಗಗಳ, ಕ್ಷುದ್ರಮನಗಳ,

ಕಾಮ, ಲೋಭದ ಮತ್ತಿಗೆ,

ಸತ್ತ ಶವಗಳು ಮತ್ತೆ ಮಡಿದವು,

ನಾಚಿಕೆಗೇಡು ನಾಡಿಗೆ, ನಾಚಿಕೆಗೇಡು ನಾಡಿಗೆ!