ಪೂಜೆಯನು ಮಾಡಿದರೆ ಪುಣ್ಯವದು ಬರುವುದೇ
ಮೋಜಿನಲಿ ಮನ ಮುಳುಗಿ ತೇಲುತಿರೆ ನಿತ್ಯ |
ಗಾಜಿನಾ ಕಿಟಕಿಗಳು ಗೋಣಿಯಲಿ ಮುಚ್ಚಿರಲು
ತೇಜಸ್ಸು ಒಳಬರದು ~ ಪರಮಾತ್ಮನೆ ||೧||
ಬಿಸಿಯೂಟ ಹಸಿವಳಿಸೆ ಸಿಹಿನೀರು ಮನತಣಿಸೆ
ಉಸಿರಾಡೆ ತಂಗಾಳಿ ಸೂರು ತಲೆಮೇಲೆ |
ಹಸಿವ ತೀರಿಸುವುಗಳನೆಲ್ಲವನು ನನಗಿತ್ತೆ
ಕೊಸರು ಬೇಡೆನು ನಿನ್ನ ಪರಮಾತ್ಮನೆ ||೨||
ಯೋಗಿಯಾಗೆಂದಾಸೆಗಳ ತುಂಬಿಸಿ, ತ್ಯಜಿಸು
ಭೋಗಗಳನೆಂದೆ, ಮುಳುಗಿಸಿ ವಿಷಯಗಳಲಿ |
ರಾಗಗಳ ಗುಲಾಮನ ಮಾಡಿಟ್ಟೆ ನನ್ನನ್ನು
ಹೇಗೆ ಗುರಿ ಮುಟ್ಟುವುದು ಪರಮಾತ್ಮನೆ? ||೩||
ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ
ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |
ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ
ಒಳಗಣ್ಣ ತೆರೆಸು ನೀ ಪರಮಾತ್ಮನೆ ||೪||
ದಿನದಿನದ ಬದುಕಿನಲಿ ನಿಲ್ಲದಿಹ ಓಟದಲಿ
ಕನಸುಗಳ ಬೇಟೆಯಲಿ ಮನಕಿಲ್ಲ ಶಾಂತಿ |
ದನಕೆ ಬೇಕಿದೆ ಮೂಗುದಾರದಾ ಕಡಿವಾಣ
ಮಣಿಸಿ ಚಿಂತನೆ ನೀಡು ಪರಮಾತ್ಮನೆ ||೫||
No comments:
Post a Comment