ಪಡುವಣದ ದಿನಮಣಿಗೆ ದಣಿವಾಗಿ ದಾಹವಿರೆ
ಕಡಲಿನಲಿ ತಣಿವರಸಿ ಮುಳುಗುಹಾಕುತ್ತಿಹನು
ಕಡುಕೆಂಪಿನಾ ದೇಹ ಸಾಗರವ ತಾಕಿದೊಡೆ ತಂಪಾಗಿ ನಿದ್ರಿಸಿದನು |
ಅಡಗಿದ್ದ ಚಂದಿರನು ಮದವೇರಿ ಬಂದಿಹನು
ಮಡದಿಯರ ಜೊತೆಗೂಡಿ ರಸಸಂಜೆ ಮೋದದಲಿ
ಹುಡುಕಾಟ ಹುಡುಗಾಟ ಸರಸಸಲ್ಲಾಪಗಳು ರಾತ್ರಿಯಲಿ ಸಾಗುತಿಹವು ||
ಅಂಬರದ ಹೊಸ ಬೆಳಕು ಬುವಿಯಲ್ಲಿ ಚೆಲ್ಲಿರಲು
ತಂಬೆಳಕು ಕರೆಯುತಿದೆ ಸೆಳೆಯುತ ಪ್ರೇಮಿಗಳ
ಸಂಬಾಳಿಸುತ ಮಾರುತನು ತನುವ ಪುಳಕಿಸುತ ನವಲೋಕ ಸೃಷ್ಟಿಸಿಹನು |
ಅಂಬರದ ಸಂಭ್ರಮವು ಬುವಿಯಲ್ಲಿ ಬಿಂಬಿಸಿದೆ
ಹುಂಬ ಚಂದಿರ ತಾರೆಯರೊಲುಮೆ ಹೊಮ್ಮಿಸಿದೆ
ಚುಂಬಕದ ವಾತಾವರಣ ಬೆರೆಸಿ ಮೋಹದಲೆಯ ರಂಗುಗಳಾಟವ ||
No comments:
Post a Comment