Tuesday, July 9, 2024

ವಿರಹದ ನೋವು

ಹೃದಯ ವೀಣೆಯ ಮೀಟಿ,

ಮಧುರ ರಾಗವ ನುಡಿಸು!

ಮಿಲನದಾಸೆಯ ನಾಟಿ,

ಎದೆಯ ನೋವನು ಮರೆಸು!


ಮರೆತು ಹೋದೆಯ ನೀನು?

ಜೊತೆಗೆ ಕಳೆದಾ ಸಮಯ!

ಸಾಕ್ಷಿ ಈ ಶಶಿ, ಬಾನು,

ಮಿಡಿವ ನನ್ನಾ ಹೃದಯ!


ಅಣುಕಿಸಿಹ ಶಶಿ  ನನ್ನ,

ತೊಟ್ಟು ತಾರೆಯ ಮಾಲೆ!

ಬಾನು ನಗುತ ಕೇಳಿತೆನ್ನ,

ಬೇಕೆ ಮೇಘದ ಓಲೆ?


ನೀ ನುಡಿದ ಪಿಸುಮಾತು,

ಕಿವಿಯಲೇ ಗುನುಗುಟ್ಟಿದೆ!

ನಿನ ಕಣ್ಣ ಸವಿಮಾತು,

ಎದೆಯಲೇ ಮನೆ ಕಟ್ಟಿದೆ!


ನೀನು ಬರದಿರೆ ಈಗ,

ಮಿಡಿವುದೇ ಈ ಹೃದಯ?

ಬಂತಿದೋ ಬಹಬೇಗ,

ಕೊನೆಯ ಉಸಿರಿನ ಸಮಯ!


Wednesday, April 24, 2024

ಎರಡು ಹನಿ

ಕಾದು ಕಾದು ಕಾಯುತ್ತಿದ್ದ
ಮಳೆಯು ಬಂದೇಬಿಟ್ಟಿತು
ಹೊರಗೆ ಇಣುಕಿ ಹರುಷದಿಂದ
ಮನಸು ಕುಣಿದುಬಿಟ್ಟಿತು

ತಂತಿ ಮೇಲೆ ಇರುವ ಬಟ್ಟೆ
ಬೇಗ ತನ್ನಿ ಅಂದಳು
ಒಣಗಲಿಟ್ಟ ಹಪ್ಪಳಗಳ
ತಾನೆ ಓಡಿ ತಂದಳು

ಓಡಿ ಓಡಿ ಮಹಿಡಿ ಹತ್ತಿ
ಬಟ್ಟೆ ತರಲು ಹೊರಟೆನು
ಮಳೆಯ ಹನಿಯ ತಂಪಿಗೆ
ಮೈಯ ಒಡ್ಡಿ ನಿಂತೆನು

ನೆನೆಯಬೇಡಿ ಮೊದಲ ಮಳೆಯು
ರೋಗ ರುಜಿನ ತರುವುದು
ಕೂಗಿ ಕರೆದಳೆನ್ನ ಮಡದಿ
ಬೇಗ ಮರಳಿ ಬಂದೆನು

ಅಯ್ಯೋ ದೇವ ಎರಡೆ ಹನಿಯು
ಪಲ್ಸ್ ಪೋಲಿಯೊ ಹಾಗೆಯೆ
ಇಳಿದು ಹೋಯ್ತು ಹರುಷವೆಲ್ಲ
ಬಂದ ಹಾಗೆ ಬೇಗನೆ

Monday, March 4, 2024

ಚುಟುಕುಗಳು

ಬದಲಾವಣೆ

ಇರಬೇಕು ಸಹನೆ ತಪ್ಪಿಸಲು ಬಲು ಬವಣೆ

ಕರಗಿಸುತ ಕೋಪವನು ಸಹನೆಗೆ ಹಾಕು ಮಣೆ

ಸುರಿಯುವುದು ಎದೆಯಲ್ಲಿ ದಯೆ ಮತ್ತು ಕರುಣೆ

ತರುವುದು ಬದುಕಿನಲಿ ಸುಂದರ ಬದಲಾವಣೆ


ಪ್ರಕಾರ : ಚುಟುಕು
ದತ್ತಪದ : ಧಾರಾಕಾರ

ಧಾರಾಕಾರ ಮಳೆಗೆ ರಸ್ತೆಗಳು ನದಿಯ ಧಾರ,
ವಾಹನ ಸಂಚಾರವಾಯಿತು ಬಹಳ ದುಸ್ತರ!
ಜನತೆ ಕೇಳಿತು ಸರ್ಕಾರವ ಏಕೀ ಅವಾಂತರ?
ಹಿಂದಿನ ಸರ್ಕಾರವ ದೂರಿತು ಈಗಿನ ಸರ್ಕಾರ!

ಪ್ರಕಾರ : ಚುಟುಕು
ದತ್ತಪದ : ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲೇ "ಅಮ್ಮ"!


ವಿಷಯ : ಕ್ರೌರ್ಯ
1.
ಕೆಂಪಾಯ್ತು ಹಿಮರಾಶಿ
ಕಟುಕರ ಕ್ರೌರ್ಯಕ್ಕೆ
ಮತಾಂಧರ ನಿರ್ದಯ ರಾಕ್ಷಸತ್ವಕ್ಕೆ!
ಉತ್ತರವಿದೆಯೇ ನಮ್ಮಲ್ಲಿ
ಆಕ್ರಮಣದ ಸಂಚಿಗೆ
ಮರೆಯಲಾಗದ ಪಾಠ ಕಲಿಸುವುದಕ್ಕೆ?
2.
ದಯೆಯಿಲ್ಲದ ಧರ್ಮ
ಉಂಟು ಬುವಿಯಲ್ಲಿ
ನಂಬಿದವರು ಆಗಿಹರು ರಾಕ್ಷಸರು
ಹಿಂಸೆಯೇ ವಿಚಾರ
ಕ್ರೌರ್ಯವೇ ಪ್ರಚಾರ
ದಾನವತ್ವಕ್ಕೆ ಮತ್ತೊಂದು ಹೆಸರು!

Friday, January 19, 2024

ರಾಮಧ್ಯಾನ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ


ರಾಮನ ನಾಮವೆ ತಾರಕ ಮಂತ್ರವು

ಕಾಮನೆಗಳನೇ ಸುಡುವಾ ಅನಲ

ತಾಮಸ ಕಾಯಕೆ ಚಲಿಸುವ ಬಲವ

ನಾಮದ ಮಾತ್ರದೆ ನೀಡುವ ಸಬಲ ||


ಮರಮರ ಎನ್ನುವ ರತ್ನಾಕರನಿಗೆ

ವರಗಳ ನೀಡಿದೆ ಕಾವ್ಯವ ರಚಿಸೆ

ಸರಯೂ ತೀರದ ಚೆಲುವಿನ ಪುತ್ತಿಗೆ

ಕರೆದರೆ ಬರುವೆಯ ಎನ್ನನು ಹರಸೆ ||


ಜನರನು ಕಾಡುವ ದೈತ್ಯರ ಕೊಂದವ

ಮನದಲಿ ಎನ್ನಯ ದೋಷವ ಕೊಲ್ಲು

ಹನುಮನ ಹೃದಯದಿ ನಿಂತಿಹೆ ರಾಘವ

ಕನಿಕರ ತೋರೋ ಎದೆಯಲಿ ನಿಲ್ಲು ||


ವಂದಿಪೆ ರಾಮನೆ ನಿನ್ನಯ ಪಾದಕೆ

ಬಂದಿಹೆ ನಮಿಸುತ ಕರುಣೆಯ ಬೇಡಿ

ಚಂದದಿ ಕರೆಯೋ ಆತ್ಮದ ಸನಿಹಕೆ

ಗಂಧದ ಹಾಗೆಯೆ ನನ್ನನು ತೀಡಿ ||


ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ