Showing posts with label ಮನಸು. Show all posts
Showing posts with label ಮನಸು. Show all posts

Tuesday, August 16, 2022

ಮುಕ್ತಕಗಳು - ೪೫

ಚಪಲದಾ ಮನಸಿಂದು ಅಂಕೆಯೇ ಇಲ್ಲದೇ

ಕಪಿಯಂತೆ ಕುಣಿಯುತಿರೆ ಎಲ್ಲೆಯಿರದಂತೆ |

ಉಪಯೋಗವೇನಿಲ್ಲ ಚುಚ್ಚುವುವು ಮಳ್ಳುಗಳು

ಜಪಮಾಲೆ ನೀಡದಕೆ ಪರಮಾತ್ಮನೆ ||೨೨೧||


ಗೆದ್ದವರ ಬಿದ್ದವರ ಕಥೆಯು ಇತಿಹಾಸವೇ

ಇದ್ದವರು ಸುಮ್ಮನೆಯೆ ನೆನಪಾಗರಲ್ಲ |

ಗೆದ್ದಲಿನ ಮನದ ಕುಹಕಿಗಳು ಕಥೆಯಾಗುವರೆ

ಸದ್ದಿರದೆ ಕರಗುವರು ~ ಪರಮಾತ್ಮನೆ ||೨೨೨||


ಎತ್ತರಕ್ಕೊಯ್ದರೂ ಮನುಜನನು ವಿದ್ಯೆಯೇ 

ಮತ್ತದೇ ಪೀಠದಲಿ ನಿಲಿಸೊ ಬಲವುಂಟೆ? |

ಬಿತ್ತಿಬೆಳೆಸುತಿರೆ ಆದರ್ಶ ನಡೆ ನುಡಿಗಳನು

ಕುತ್ತಿರದು ಪೀಠಕ್ಕೆ ಪರಮಾತ್ಮನೆ ||೨೨೩||


ಚಂದದಲಿ ತಿಳಿಹೇಳಿ ಅಕ್ಕರವ ಕಲಿಸಿರುವೆ

ಮಂದಮತಿ ಮಂಡೆಯಲಿ ಬೀರಿ ಬೆಳಕನ್ನು |

ಬಿಂದಿಗೆಗೆ ತುಂಬಿಸಿದೆ ಅಮೃತದಾ ಸಾರವನು

ವಂದಿಪೆನು ಗುರುದೇವ ~ ಪರಮಾತ್ಮನೆ ||೨೨೪||

 

ಬಿರಿದರೂ ವನಸುಮವು ಅರ್ಚನೆಗೆ ಸಿಗದಲ್ಲ

ಪರಮಪುರುಷನ ಪಾದ ಸೇರದಳಿಯುವುದು |

ತೊರೆ ಕಾಡ ಹಿಡಿ ನಾಡ ಮೂಢ ಸನ್ಯಾಸಿಯೇ

ವರವಾಗು ಪುರಜನಕೆ ~ ಪರಮಾತ್ಮನೆ ||೨೨೫||


Monday, July 11, 2022

ಮುಕ್ತಕಗಳು - ೨೫

ಡೊಂಕಿರಬಹುದು ನಾಯಿ ಬಾಲದಲಿ ಬಣ್ಣದಲಿ

ಡೊಂಕೆಲ್ಲಿಹುದು ತೋರಿ ಸ್ವಾಮಿನಿಷ್ಠೆಯಲಿ |

ಡೊಂಕು ಹುಡುಕುವ ಮುನ್ನ ಹುಡುಕೋಣ ಸದ್ಗುಣವ

ಕೊಂಕುಗುಣ ತೊರೆಯೋಣ ಪರಮಾತ್ಮನೆ ||೧೨೧||


ಕಲಿಗಾಲವಿದೆಯೆಂದು ಕೈಚೆಲ್ಲಿ ಕೂರದಿರಿ

ಕಲಿಯ ಮನದಿಂದ ಕಿತ್ತೆಸೆಯೋಣ ಎಲ್ಲ |

ಬಲಿಯಲಿಲ್ಲದೆ ಎಡೆಯು ಕಲಿಕಾಲು ಕೀಳುವನು

ಕಲೆತು ಮಾಡುವ ಬನ್ನಿ ಪರಮಾತ್ಮನೆ ||೧೨೨||


ಚಂಚಲವು ನೀರಿನೊಲು ಆಕಾಶದಗಲವದು

ಮಿಂಚಿಗೂ ವೇಗ ಬೆಂಕಿಯೊಲು ತೀ ಕ್ಷ್ಣವದು |

ಪಂಚಭೂತಗಳ ಗುಣ ಪಂಚೇಂದ್ರಿಯಗಳೊಡೆಯ

ಸಂಚು ಮಾಡುವ ಮನಸು ಪರಮಾತ್ಮನೆ ||೧೨೩||


ಅನುಕಂಪ ಕರುಣೆಗಳು ಅವನಿತ್ತ ಕೊಡುಗೆಗಳು

ಜನಕೆ ಹಂಚುವ ಕೊಂಚಕೊಂಚವಾದರೂ |

ಜನಕನಿತ್ತಾಸ್ತಿಯನು ತನುಜನುಜರಿಗೆನೀಡೆ

ನನಗೇನು ನಷ್ಟವಿದೆ ಪರಮಾತ್ಮನೆ ||೧೨೪||


ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಕೊಳೆ ತೆಗೆಯಬೇಕು ದಿನದಿನ ಧ್ಯಾನಗಳಿಂದ

ತಿಳಿಯಾಗುವುದು ಮನವು ಪರಮಾತ್ಮನೆ ||೧೨೫||

ಮುಕ್ತಕಗಳು - ೧೫

ಮುಂಗವುಸ ಮರೆಯಲ್ಲಿ ಮುಖವ ಮರೆಮಾಚಿಹೆವು

ಟೊಂಗೆಯಿಲ್ಲದ ಮರವನಾಶ್ರಯಿಸಿ ನಿಂದು |

ರಂಗಾಗಿ ಬದುಕಲಿಕೆ ಟೊಂಗೆಗಳ ಕಡಿದಿರುವ

ಮಂಗಗಳ ಕಾಪಾಡು ಪರಮಾತ್ಮನೆ ||೭೧||


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು

ಬುವಿಯೊಳಗೆ ತಳ್ಳಿಹೆವು ~ ಪರಮಾತ್ಮನೆ ||೭೨||


ಕಾಮ ಲೋಭ ಕ್ರೋಧ ನರಕದಾ ದ್ವಾರಗಳು

ವಾಮಮಾರ್ಗಗಳ ತೊರೆಯೋಣ ಬಂಧುಗಳೆ

ರಾಮರಾಜ್ಯವ ತರಲು ಬೇಡ ಯಾರೂ, ಸಾಕು

ರಾಮನಾಮದ ಶಕ್ತಿ ~ ಪರಮಾತ್ಮನೆ ||೭೩||


ವಿಕೃತದೀ ಮನಸಿಗಿನ್ನೂ ಬೇಕೆನುವ ದಾಹ

ಸಕಲವಿರಲೂ ತೃಪ್ತಿಯಿಲ್ಲದಿಹ ಲೋಪ |

ಅಕಳಿಕೆಯ ಬಲೆಯಲ್ಲಿ ಸಿಲುಕಿರುವ ಕೂಸು ನಾ

ವಿಕಲತೆಯ ಗುಣಪಡಿಸು ಪರಮಾತ್ಮನೆ ||೭೪||

ಅಕಳಿಕೆ = ಕಚಗುಳಿ


ಮಂದಿರದ ಹುಂಡಿಯಲಿ ಕಾಣಿಕೆಯನೊಪ್ಪಿಸುತ

ಮಂದಿ ದುಃಖಗಳ ಮರೆಸುವ ಸುಖವ ಕೋರೆ

ತಿಂದಿರದ ಹೊಟ್ಟೆಗನ್ನವ ನೀಡಲದು ಹೆಚ್ಚು

ಮಂದಿರದ ಕಾಣಿಕೆಗೆ ~ ಪರಮಾತ್ಮನೆ ||೭೫||