Showing posts with label ವನಸುಮ. Show all posts
Showing posts with label ವನಸುಮ. Show all posts

Tuesday, August 16, 2022

ಮುಕ್ತಕಗಳು - ೪೫

ಚಪಲದಾ ಮನಸಿಂದು ಅಂಕೆಯೇ ಇಲ್ಲದೇ

ಕಪಿಯಂತೆ ಕುಣಿಯುತಿರೆ ಎಲ್ಲೆಯಿರದಂತೆ |

ಉಪಯೋಗವೇನಿಲ್ಲ ಚುಚ್ಚುವುವು ಮಳ್ಳುಗಳು

ಜಪಮಾಲೆ ನೀಡದಕೆ ಪರಮಾತ್ಮನೆ ||೨೨೧||


ಗೆದ್ದವರ ಬಿದ್ದವರ ಕಥೆಯು ಇತಿಹಾಸವೇ

ಇದ್ದವರು ಸುಮ್ಮನೆಯೆ ನೆನಪಾಗರಲ್ಲ |

ಗೆದ್ದಲಿನ ಮನದ ಕುಹಕಿಗಳು ಕಥೆಯಾಗುವರೆ

ಸದ್ದಿರದೆ ಕರಗುವರು ~ ಪರಮಾತ್ಮನೆ ||೨೨೨||


ಎತ್ತರಕ್ಕೊಯ್ದರೂ ಮನುಜನನು ವಿದ್ಯೆಯೇ 

ಮತ್ತದೇ ಪೀಠದಲಿ ನಿಲಿಸೊ ಬಲವುಂಟೆ? |

ಬಿತ್ತಿಬೆಳೆಸುತಿರೆ ಆದರ್ಶ ನಡೆ ನುಡಿಗಳನು

ಕುತ್ತಿರದು ಪೀಠಕ್ಕೆ ಪರಮಾತ್ಮನೆ ||೨೨೩||


ಚಂದದಲಿ ತಿಳಿಹೇಳಿ ಅಕ್ಕರವ ಕಲಿಸಿರುವೆ

ಮಂದಮತಿ ಮಂಡೆಯಲಿ ಬೀರಿ ಬೆಳಕನ್ನು |

ಬಿಂದಿಗೆಗೆ ತುಂಬಿಸಿದೆ ಅಮೃತದಾ ಸಾರವನು

ವಂದಿಪೆನು ಗುರುದೇವ ~ ಪರಮಾತ್ಮನೆ ||೨೨೪||

 

ಬಿರಿದರೂ ವನಸುಮವು ಅರ್ಚನೆಗೆ ಸಿಗದಲ್ಲ

ಪರಮಪುರುಷನ ಪಾದ ಸೇರದಳಿಯುವುದು |

ತೊರೆ ಕಾಡ ಹಿಡಿ ನಾಡ ಮೂಢ ಸನ್ಯಾಸಿಯೇ

ವರವಾಗು ಪುರಜನಕೆ ~ ಪರಮಾತ್ಮನೆ ||೨೨೫||


ಮುಕ್ತಕಗಳು - ೪೩

ನಿನ್ನ ನೀ ತಿದ್ದುತಿರು ಅನುದಿನವು ಬೆಳೆಯುತಿರು

ಮನ್ನಿಸುತ ತಪ್ಪುಗಳ ಒಪ್ಪುಗಳ ಹುಡುಕು |

ಉನ್ನತಿಯು ದೊರಕುವುದು ಬಹುಬೇಗ ಸುಳ್ಳಲ್ಲ

ಜೊನ್ನವೇ ಜೀವನವು ~ ಪರಮಾತ್ಮನೆ ||೨೧೧||


ವನಸುಮವು ಏನ ಸಾಧಿಸಿತು ಕಿರು ಬದುಕಿನಲಿ?

ಜನಕಿತ್ತಿತೇ ಗಂಧ ಮುಡಿಯೇರಿತೇನು? |

ಬನದ ಸನ್ಯಾಸಿ ತಾ ಏನು ನೀಡಿದ ಜಗಕೆ?

ಜನನಿಗೂ ಸುಖವಿಲ್ಲ ~ ಪರಮಾತ್ಮನೆ ||೨೧೨||


ಬೆಲೆಯುಂಟು ಮರಗಳಿಗೆ ಧರೆಗೆ ಬಿದ್ದರು ಕೂಡ

ಫಲನೆರಳುಗಳ ನೀಡುವವು ಜೀವವಿರಲು |

ಕಲಿಯಬೇಕಿದೆ ಪಾಠ ಮರದಂತಹವರಿಂದ

ಬೆಲೆಬಾಳುವುದು ಬಾಳು ~ ಪರಮಾತ್ಮನೆ ||೨೧೩||


ಕನ್ನಡಿಯು ದೋಷಿಯೇ ಬಿಂಬ ಅಂದವಿರದಿರೆ

ಭಿನ್ನರೂಪವ ತೋರದದು ನಿನ್ನ ಹೊರತು |

ನಿನ್ನಜನ ದೂರಿದರೆ ನಿನ್ನ ನಡೆ ಕಂಡವರು

ಸನ್ನಡತೆ ಬೆಳೆಸಿಕೋ ~ ಪರಮಾತ್ಮನೆ ||೨೧೪||


ಕರುಗಳಿಗೆ ಇರಬೇಕು ಹಸುಗಳಾ ಮೊಲೆಯುಣಿಕೆ

ತರುವೊಂದೆ ಆಧಾರ ಬೆಳೆಯುವಾ ಲತೆಗೆ |

ಇರಬೇಕು ನಿನ್ನಾಸರೆಯು ನನಗೆ ಬಾಳಿನಲಿ

ಕರಪಿಡಿದು ನಡೆಸುವೆಯ  ಪರಮಾತ್ಮನೆ? ||೨೧೫||