Friday, March 6, 2020

ದೇವರ ಕಣ್ಣು

ಭರ್ಜರಿ ರಸ್ತೆಯಲಿ ಭಾರೀ ಮಳಿಗೆ,
ಭರಪೂರ ಜೇಬಿನ ಮಂದಿ ಒಳಗೆ.
ಕಣ್ಣು ಕೋರೈಸುವ ದೀಪಗಳ ಬೆಳಕು,
ಪತಂಗಗಳ ಸೆಳೆಯಲು ಇನ್ನೇನು ಬೇಕು?

ಕೈಗೆಟಕುತಿವೆ ಬೆಲೆಯ ಒಡವೆ ವಸ್ತ್ರಗಳು,
ಮುಟ್ಟಿದರೆ ಸಾಕು ಅರಳುತಿವೆ ಮನಗಳು,
ಎಲ್ಲ ಬೇಕೆನ್ನುವ  ಮನದ ಕಾಮನೆಗಳು,
ಸಾಕಾಗದಾಗಿದೆ ಕಿಸೆಯ ಕಾಂಚಾಣಗಳು.

ಇರುವರೆಲ್ಲರೂ ಅವರವರ ಲೋಕದಲಿ,
ಯಜಮಾನ, ಸಿಬ್ಬಂದಿ ಅವರವರ ಕೆಲಸದಲಿ.
ಮನವ ಕಾಡುತಿವೆ ನೂರು ಬಯಕೆಗಳು,
ಕಣ್ತಪ್ಪಿಸಿ ಕದಿಯಲು ಸುಲಭ ಸಂದರ್ಭಗಳು.

ಯಜಮಾನನಿಗೆ ಇಲ್ಲ ಚಿಂತೆಗಿಂತೆಗಳು,
ಇಲ್ಲವೇ ಕಾವಲಿಗೆ  ನೂರೆಂಟು ನಯನಗಳು?
ಕಾಯುತಿವೆ ಎಲ್ಲೆಡೆ ಕ್ಯಾಮೆರಾ ಕಣ್ಣುಗಳು,
ಗಮನದಲ್ಲಿದೆ ಎಲ್ಲರ ಚಲನ ವಲನಗಳು!

ಭಗವಂತ ಬುದ್ಧಿವಂತ ಈ ಯಜಮಾನನಂತೆ,
ನಿಯುತ ಕಣ್ಣುಗಳ ಜಗದಿ ಅಳವಡಿಸಿಹನಂತೆ,
ತಪ್ಪು ಒಪ್ಪುಗಳ ನಡೆಯುತ್ತಿದೆ ಚಿತ್ರಣ,
ಸಂದೇಶ ಹೋಗುತಿದೆ ಅನುದಿನ ಅನುಕ್ಷಣ!

ನಮ್ಮ ಕಂಗಳೇ ಅವನ ಕ್ಯಾಮೆರಾಗಳು!
ನಮ್ಮ ತಪ್ಪನ್ನು ಚಿತ್ರಿಸಿವೆ ನಮ್ಮವೇ ಕಂಗಳು!
ಕಥೆಯ ಹೇಳುತಿವೆ ನಮ್ಮವೇ ಮನಗಳು!
ಚಿತ್ರಗುಪ್ತನ ತಾಣವೇ ನಮ್ಮ ಜೀವಕಣಗಳು!

ಸಕಲ ಜೀವರಾಶಿಯೇ ಅವನ ಸಂಪರ್ಕ ಜಾಲ!
ನಮಗೆ ನಮ್ಮನೇ ಕಾವಲಿಟ್ಟು ನಗುತಿಹನು ಕಳ್ಳ!

370 ಎಂಬ ವಿಷ

ನಾ ತಾಯಿ ಭಾರತಾಂಬೆ,
ಆದೆ ಕೆಲ ಮಕ್ಕಳ ಕೈಗೊಂಬೆ.
ಸ್ವಾರ್ಥದಾಟದಲಿ ಅವರು,
370 ಎಂಬ ವಿಷವನುಣಿಸಿದರು!

ವಿಷ ಬೆರೆತು, ಕಹಿ ಸುರಿದು,
ಅರ್ಬುದವಾಗಿ ಬೆಳೆದು,
ರಕ್ತ ಹರಿಯಿತು ಕೋಡಿ,
ಇದಾವ ಪುರುಷಾರ್ಥ ನೋಡಿ.

ಮಕ್ಕಳು ಮಕ್ಕಳ ನಡುವೆ,
ಬಡಿದಾಟದಲಿ ಆದೆ ಬಡವೆ.
ಯಾರಿಗೆ ಹೇಳಲಿ ನನ್ನ ಕಥೆಯ,
ಮನದಾಳದ ಮಾಸದ ವ್ಯಥೆಯ?

ಏಳು ದಶಕಗಳ ನೋವು,
ಸಹಿಸಲಾಗದ ಕಹಿ ಬೇವು.
ಆಗ ಹುಟ್ಟಿದ  ಹಸಿ ಹುಣ್ಣು,
ಕೆಲವರಿಗೆ ಮಾತ್ರ ಸಿಹಿ ಗಿಣ್ಣು.

ಎದ್ದು ನಿಂತನೊಬ್ಬ ಹೆಮ್ಮೆಯ ಪುತ್ರ,
ಛಾತಿ ಛಪ್ಪನ್ನಿಂಚಿನ ಗಾತ್ರ!
ಅರ್ಬುದವ ಛೇದಿಸಿ, ಮುಲಾಮು ಹಚ್ಚಿ,
ತಪ್ಪಿಸಿದ ನಾ ಆಗುವುದ ಹುಚ್ಚಿ!

ಇಂದು ಸುರಿದ ಆನಂದ ಭಾಷ್ಪದೆ,
ಆರ್ದ್ರವಾಯಿತು ಒಣಗಿದೆದೆ.
ಚಿರಕಾಲ ಸುಖವಾಗಿ ಬಾಳಿ,
ಹೊಂಗಿರಣದ ಬೆಳಗಾಗಲಿದೆ ತಾಳಿ.



ಹೊಸ ವರ್ಷ

ಬಂತಿದೋ ಮತ್ತೊಂದು ಬುತ್ತಿ,
ಹೊಚ್ಚ ಹೊಸದೆಂದು ಸುದ್ದಿ.

ಬುತ್ತಿಯಲಿ ಹೊಸರುಚಿಯ ನಿರೀಕ್ಷೆ,
ಉಂಟೇನೋ ಬಿಸಿಬಿಸಿಯ ದೋಸೆ.
ಕಹಿಯ ಮರೆಯುವ ಆಕಾಂಕ್ಷೆ,
ಸಿಹಿಯ ಮೂಟೆಯ ಆಸೆ.

ಜಿಹ್ವೆಯಲ್ಲಿ ಜಿನುಗಿದೆ ತೇವ,
ಕಾತುರದೆ ಸಂಭ್ರಮಿಸಿದೆ ಜೀವ.
ಪ್ರತಿ ಸಾರಿಯೂ ಹೀಗೇ,
ಅಮೃತವೇ ಸಿಕ್ಕ ಹಾಗೆ.

ಆಶಿಸುವುದು ಸಹಜ ಗುಣ,
ಮನುಜನ ಮನದ ತಾನ.
ಕನಸಿನ ಲೋಕದ ಸೀಮೆ,
ಆಗದಿರಲಿ ಬರಿಯ ಭ್ರಮೆ.

ಅಡುಗೆ ಆಕೆಯದೇ ಉಂಟು,
ಸರಕಿಗೆ ನನ್ನದೇ ಗಂಟು,
ನನ್ನ ಸಂಪಾದನೆಗೆ ತಕ್ಕದ್ದು,
ನನ್ನ ಪರಿಶ್ರಮಕ್ಕೆ ದಕ್ಕಿದ್ದು.

ಆದರೂ ಇದೆಯಿಲ್ಲಿ ನಿರೀಕ್ಷೆ,
ಹೊಸದನ್ನು ಪಡೆಯುವ ಕಾಂಕ್ಷೆ.
ಆಗದಿರಲಿ ಯಾರಿಗೂ ನಿರಾಶೆ,
ಎಲ್ಲರಿಗೂ ಪ್ರೀತಿಯ ಶುಭಾಕಾಂಕ್ಷೆ!

ಮಧುರ ಮಧುರವೀ ಮಂಜುಳ ಗಾನ

ಕವಿಯ ಭಾವಗಳು,
ಸುಂದರ ಸ್ವಪ್ನಗಳು.
ಪದಗಳು ಹುಟ್ಟುತಿವೆ,
ಹಂದರವ ಕಟ್ಟುತಿವೆ,
ಹಾಡಿಗೆ ಅಸ್ತಿಪಂಜರವ ಕಟ್ಟುತಿವೆ!

ಬಂದನಿಗೋ ಮಾಯಗಾರ,
ಸರಿಗಮದ  ಜಾದೂಗಾರ.
ದಂಡವನ್ನು ಆಡಿಸಿದ,
ರಕ್ತಮಾಂಸ ಕೂಡಿಸಿದ,
ಹಾಡಿಗೆ ಸುಸ್ವರೂಪವ ನೀಡಿದ!

ಸುಸ್ವರದ ಮಾಂತ್ರಿಕ,
ಕಂಠೀರವ ಗಾಯಕ.
ಗುಂಡಿಗೆಯ ತೆರೆದ,
ಉಸಿರನ್ನು ಹೊಸೆದ,
ಹಾಡಿಗೆ ಪ್ರಾಣವನು ತುಂಬಿದ!

ಕೇಳುತಿವೆ ಕಿವಿಗಳು,
ಮಧುರತಮ ಸ್ವರಗಳು.
ಮಕರಂದದ ಝರಿಗಳು,
ಗಂಧರ್ವರ ವರಗಳು,
ಮಧುರ ಮಂಜುಳ ಗಾನಗಳು!

ಸೌರಮಂಡಲಾಧಿಪ

ಸ್ವರ್ಣ ಹಸ್ತ, ವರ್ಣ ಜನಕ,
ಆತ್ಮಕಾರಕ, ಕರ್ಮಯೋಗಿ.
ಅಂಬರ ತಿಲಕ, ದಿವ್ಯ ಚೇತನ,
ನಿತ್ಯ ನೂತನ ದಿನಕರ.

ಸಹಸ್ರ ದೀಪ, ಸಹಸ್ರ ಹಸ್ತ,
ನವ ಗ್ರಹಗಳ ನಾಯಕ.
ಸರ್ವ ಪೂಜಿತ, ಚಂದ್ರ ಸ್ನೇಹಿತ,
ಉಷಾ, ಸಂಧ್ಯಾ ಪ್ರಿಯಕರ.

ಛಾಯಾ ಪ್ರಿಯಪತಿ, ಪುತ್ರ ವೈರಿ,
ಸಪ್ತಾಶ್ವ ರಥನಾಯಕ.
ಅಸ್ತಿ ಕಾರಕ, ಅಸ್ತು ಹಸ್ತ,
ವೃಕ್ಷ ಸಂಕುಲ ರಕ್ಷಕ.

ದಿವ್ಯ ಜ್ಯೋತಿ, ಭವ್ಯ ಬಂಧು,
ಮಾಣಿಕ್ಯ ರತ್ನ ಭೂಷಿತ.
ಕ್ರೂರ ಹಸ್ತ, ಅಂಬರ ನೇತ್ರ,
ಮನುಕುಲ ಸಂಪೂಜಿತ.

ಭೂಮಂಡಲ ಭಾಗ್ಯಜ್ಯೋತಿ,
ಸೌರಮಂಡಲಾಧಿಪ.
ವಂದೇ ದೇವ, ವಂದೇ ದೇವ,
ರಥಸಪ್ತಮಿಯ ಶುಭದಿನ.



ಸಪ್ತಾಶ್ವನ ಸಂದಿಗ್ಧತೆ


(ಜ್ಯೋತಿಷ್ಯ ತಿಳಿದವರಿಗಾಗಿ, ಸಂಕ್ರಾಂತಿ 2020)

ಇಳೆಯು ನೋಡು ನಲಿಯುತಿಹಳು,
ಬೆಳೆಯ ಕೊಟ್ಟು ಹರಸುತಿಹಳು,
ನಿನ್ನ ಬೆಳಕಿನ ವರವ ಪಡೆದು,
ತನ್ನ ಮಕ್ಕಳ ಹಸಿವ ತೊಡೆದು.

ಮಿಹಿರ ಹೇಳು ಏಕೀ ತಳಮಳ,
ಎದೆಯ ಗೂಡಲಿ ಏನು ಕಳವಳ?
ಮಗನ ಮನೆಯಲಿ ಇಟ್ಟೆ ಹೆಜ್ಜೆಯ,
ಸುತನ ನೋಡುವ ಇಷ್ಟ, ಆಶಯ.

ಶನಿಯ ಮುನಿಸಿನ ನೆನಪು ಕಾಡಿತೆ?
ಮತ್ತೆ ಜಗಳದ ಭಯವು ಮೂಡಿತೆ?
ಬದುಕಿನಂಚಿನ ದಿನವು ಬಾರದೆ,
ತಂದೆ ಮಕ್ಕಳ ಋಣವು ಮುಗಿವುದೆ?

ಪುತ್ರಮೋಹವ ತೊರೆಯಲಾರೆ,
ಅವನ ಕೋಪವ ಸಹಿಸಲಾರೆ.
ನಿಮ್ಮ ಘರ್ಷಣೆ ನಮಗೆ ತೊಂದರೆ,
ಮುನಿಸು ತೊರೆದು ನಿಲ್ಲಿ ಆದರೆ.

ಮಕರ ಗೃಹದಲಿ ನಿಮ್ಮ ಭೇಟಿ,
ನಿಮ್ಮ ಶಕ್ತಿಗೆ ಯಾರು ಸಾಟಿ?
ಇರಲಿ ಸಂಯಮ ಇಬ್ಬರಲ್ಲಿ,
ಕರುಣೆ ಇರಲಿ ಇತರರಲ್ಲಿ.

ಗುರುಕುಲದಲಿ ಕುವರನಿರುವ,
ಹತ್ತೇ ದಿನದಲಿ ಬಂದು ಸೇರುವ.
ಎದೆಗೆ ಎದೆಯ ಕೊಟ್ಟು ಅಪ್ಪಿಕೋ,
ಮನದ ಮುನಿಸು ಬಿಟ್ಟು ಒಪ್ಪಿಕೊ!


ಬಣ್ಣಗಳ ಹೋಳಿ

ಅಣ್ಣ ತಮ್ಮ, ಅಕ್ಕ ತಂಗಿ,
ತಾಯಿ ತಂದೆ, ಅಜ್ಜಿ ತಾತ,
ಗೆಳೆಯ ಗೆಳತಿ, ಒಲಿದ ಜೋಡಿ,
ಬಂಧ ಹಲವು, ಬಣ್ಣ ಹಲವು.

ಕೆಂಪು, ಹಸಿರು, ಹಳದಿ, ನೀಲಿ,
ಬಂಧ ತಳೆವ ರಂಗು ಹಲವು,
ರಂಗು ಗುಂಗು, ಹೋಳಿ ಇಲ್ಲಿ,
ಬನ್ನಿ ತೋರಿ, ನಿಮ್ಮ ಒಲವು.

ಮನದ ಕಾಮವ ಸುಡುವ ಬನ್ನಿ,
ಸುಡುವ ನೆನಪನು ಸುಟ್ಟು ಬಿಡುವ.
ಮೂಲೆ ಮೂಲೆ ಹುಡುಕಿ ತನ್ನಿ,
ಹಳೆಯ, ಹರಿದ, ತೊರೆದು ಬಿಡುವ.

ನಮ್ಮ ಅಹಂ ನಮಗೆ ವೈರಿ,
ಬೆಂಕಿ ಹಚ್ಚಿ ಸುಟ್ಟು ಬಿಡುವ.
ಧ್ಯಾನ ಮಾಡಿ, ಎಲ್ಲ ಸೇರಿ,
ಶಿವನ ಪಾದ ಹಿಡಿದು ಬಿಡುವ.

ಸುಟ್ಟ ಮೇಲೆ ಹಗುರ ಮನವು,
ಸ್ನಾನ ಮಾಡಿ ಶುದ್ಧ ತನುವು,
ಮತ್ತೆ ಸಜ್ಜು ಬಾಳ ಯಾತ್ರೆಗೆ,
ಜೀವನ ಎನ್ನುವ ಜಾತ್ರೆಗೆ!