Tuesday, November 21, 2023

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು

ಆರ್ಯವೈಶ್ಯ ಸಾಹಿತ್ಯ ಪರಿಷತ್ತು,

ನಮಗು ಗೊತ್ತು, ನಿಮಗು ಗೊತ್ತು,ಎಲ್ಲರಿಗೂ ಗೊತ್ತು!


ಅಂಬೆಗಾಲ ಇಡುತ್ತಿದ್ದ ಈ ನಿಮ್ಮ ಪೋರ,

ಆಗಿಹನು ಹದಿಹರೆಯದ ಚಿತ್ತ ಚೋರ!

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗಮನವ ಸೆಳೆದವ,

ಚಿಗುರು ಮೀಸೆ ತೀಡುತ್ತ ನಗುನಗುತ ನಿಂತಿರುವ!


ಸಾಹಿತ್ಯ ಸಂಸ್ಕೃತಿಗೆ ನಮಿಸಿ ಹೆಜ್ಜೆ ಇಟ್ಟವ,

ಎಲೆಯ ಮರೆಯ ಕಾಯ್ಗಳಿಗೆ ಬೆಳಕನು ಕೊಟ್ಟವ!

ಉದಯಿಸುವ ಪ್ರತಿಭೆಗಳ ಕೈಯ ಹಿಡಿದವ,

ಬೆನ್ನ ತಟ್ಟಿ ಧೈರ್ಯ ತುಂಬಿ ಅಭಯವಿತ್ತವ!


ದಾನಿಗಳ ಕೊಡುಗೆಯಿಂದ ಶಕ್ತಿವಂತನು,

ಅವರ ನೆರವನೆಂದೂ ಮರೆತು ನಡೆಯನು!

ಸದಸ್ಯರು ಕೊಟ್ಟ ಹುರುಪು ರಕ್ಷೆಯಾಯಿತು,

ಕಾರ್ಯಕಾರಿ ಶ್ರಮದಿಂದ ಯಶವು ಬಂದಿತು!


ಸಾಧಿಸಲು ಕಲಿಯುಲು ಇನ್ನೂ ಇದೆ ಬಹಳ,

ಬೆಳೆಯುವನು ಬೆಳೆಸುವನು ದಾರಿ ಮಾಡಿ ಸರಳ!

ಹೀಗೆ ಇರಲಿ ಸದಾ ನಿಮ್ಮ ಪೋಷಿಸುವ ಪಾತ್ರ,

ಆಗುವನು ಜನಾಂಗಕೆ ಕಂಗಳ ನಕ್ಷತ್ರ!

Friday, October 13, 2023

ಹನಿಗವನಗಳು


ಹನಿಗವನ:

ಆರು ಸಾಲಿನ ಕವನ. ೧,೨,೪,೫ ಸಾಲುಗಳಲ್ಲಿ ಒಂದೆರಡು ಪದಗಳಿರಬೇಕು. ೩,೬ ಸಾಲುಗಳಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಮತ್ತು ಇವೆರಡರಲ್ಲಿ ಅಂತ್ಯಪ್ರಾಸವಿರಬೇಕು.


೧. ಹೆಣ್ಣು

ಹೆಣ್ಣಲ್ಲ ಅಬಲೆ

ತಾಯಾಕೆ ವಿಮಲೆ

ಜಗಕೆ ಮಡಿಲಿತ್ತ ಸಬಲೆ

ಸಂಕೀರ್ಣ ಈ ಹೆಣ್ಣು

ಅರ್ಥವಾಗದ ಹಣ್ಣು

ಸುಖ ಸಂಸಾರದ ಕಣ್ಣು




೨. ಕನಸು


ಬಣ್ಣಬಣ್ಣದ ಕನಸು
ಕಾಣಲೇನೂ ಶ್ರಮವಿಲ್ಲ
ನನಸಾಗಿಸಲು ಬಾಗುವುದು ಬೆನ್ನು
ಬಣ್ಣಬಣ್ಣದ ಕನಸು
ಕಾಣಲೇನೂ ಖರ್ಚಿಲ್ಲ
ನನಸಾಗಿಸಲು ಕಳೆಯುವುದು ಹೊನ್ನು


೩. ಅಪ್ಪ

ಮೊದಮೊದಲು
ನೀನೆನಗೆ
ಅರ್ಥವಾಗಿರಲಿಲ್ಲ ಅಪ್ಪ
ನಿನ್ನ ಕಾಳಜಿ, ಶಿಸ್ತು
ನಾ ಅಪ್ಪನಾದಾಗ
ಸರಿಯಾಗಿ ಅರ್ಥವಾಯಿತಪ್ಪ!

೪. ವಿಷಯ : ಯುದ್ಧ /ಸಮರ

ಚುಚ್ಚಿದರು
ಕೆಣಕಿದರು
ಹಲವು ವರ್ಷಗಳ ಕಾಲ
ಉಂಡಿಹರು
ಸಮರದಲಿ
ನಾವು ತೀರಿಸುವ ಸಾಲ


೫. ವಿಷಯ : ಮಳೆ, ಗಾಳಿ, ಕರೆಂಟು

ಮಳೆ ಗಾಳಿಗೂ
ಕರೆಂಟಿಗೂ
ಇದೆ ವೈರತ್ವದ ನಂಟು
ಬಂದಿತೆಂದರೆ
ಮಳೆ ಗಾಳಿ
ಓಡಿ ಹೋಗುವುದು ಕರೆಂಟು


೬. ವಿಷಯ : ಮೌನ

ಬಡಬಡಿಸುವ ಮಾತೇಕೆ,
ಪಿಸುಗುಟ್ಟೊ ನುಡಿಯೇಕೆ,
ನೀರವ ಮೌನದಲಿ ಮಾತಿಲ್ಲವೇನು?
ಕಣ್ಣಿನಾ ಮಿಂಚುಗಳು,
ತುಟಿಗಳಾ ಕೊಂಕುಗಳು,
ಸೆಳೆದು ಮನಕೆ ಮಾತನುಸಿರಿಲ್ಲವೇನು?

೭. ವಿಷಯ : ಕ್ರೌರ್ಯ
1.
ಕೆಂಪಾಯ್ತು ಹಿಮರಾಶಿ
ಕಟುಕರ ಕ್ರೌರ್ಯಕ್ಕೆ
ಮತಾಂಧರ ನಿರ್ದಯ ರಾಕ್ಷಸತ್ವಕ್ಕೆ!
ಉತ್ತರವಿದೆಯೇ ನಮ್ಮಲ್ಲಿ
ಆಕ್ರಮಣದ ಸಂಚಿಗೆ
ಮರೆಯಲಾಗದ ಪಾಠ ಕಲಿಸುವುದಕ್ಕೆ?
2.
ದಯೆಯಿಲ್ಲದ ಧರ್ಮ
ಉಂಟು ಬುವಿಯಲ್ಲಿ
ನಂಬಿದವರು ಆಗಿಹರು ರಾಕ್ಷಸರು
ಹಿಂಸೆಯೇ ವಿಚಾರ
ಕ್ರೌರ್ಯವೇ ಪ್ರಚಾರ
ದಾನವತ್ವಕ್ಕೆ ಮತ್ತೊಂದು ಹೆಸರು!  

೮. ವಿಷಯ: ಬಣ್ಣ

ಪ್ರತಿಯೊಬ್ಬರೂ ಒಂದು
ಬಣ್ಣವಿದ್ದಂತೆ, ಅವರ
ವ್ಯಕ್ತಿತ್ವವೇ ಆ ಬಣ್ಣದ ಚೆಲ್ಲು
ಕಲಬೆರಕೆಯಾಗದೆ
ಸುಂದರ ಸಮರಸದಿ
ಕಲೆತಾಗೋಣ ಸುಂದರ ಕಾಮನಬಿಲ್ಲು

೯. ವಿಷಯ: ಯಾತ್ರೆ

ಜೀವನದ ಯಾತ್ರೆಯಿದು
ನಿಲ್ಲದಿಹ ಪಯಣವಿದು
ಸೇರಲು ನಾವು ಕಾಣದಿಹ ಪುಣ್ಯಕ್ಷೇತ್ರ
ಗುರಿಯು ಮರೆಯದೆ ಇರಲಿ
ದಾರಿ ತಪ್ಪದೆ ಇರಲಿ
ತಲುಪುವೆವುಗಮ್ಯವ ಆಗ ಮಾತ್ರ

೧೦. ವಿಷಯ: ರಕ್ಷಾ ಬಂಧನ

ಅಣ್ಣ ತಂಗಿಯರ 
ಸವಿ ಬಂಧ
ಅದುವೇ ರಕ್ಷಾ ಬಂಧನ
ಪ್ರತಿ ವರುಷ
ತಂದು ಹರುಷ
ಮನೆಯನಾಗಿಸಿತು ನಂದನ

೧೧. ವಿಷಯ: ಗುರು ಶಿಷ್ಯರು

ಗುರುಶಿಷ್ಯರ ಸರಪಳಿ
ನೀಡುತಿದೆ
ಜ್ಞಾನ ವಿಜ್ಞಾನದ ಬಳುವಳಿ
ಕತ್ತಲೆಯ ಕಳೆಯುತ
ನಿರಂತರ
ಅಂಧ ಅಜ್ಞಾನದ ಸವಕಳಿ

೧೨. ವಿಷಯ: ನಿದ್ದೆ

ಬರದೇ ಬರದೇ
ಬಹಳ ಸಮಯಕೆ
ಬಂದಿತು ಗಾಢವಾದ ನಿದ್ದೆ
ಪುಟಿದು ಬಂದಿತು
ಕಾಲ್ಚೆಂಡು ಕನಸಿನಲಿ
ಜೋರಾಗಿ ನನ್ನವಳಿಗೆ ಒದ್ದೆ!

೧೩. ವಿಷಯ : ಕೃಷ್ಣಜನ್ಮಾಷ್ಟಮಿ

ಆ ಮುರುಳಿಯಲಿ
ಊದುತ ಉಸಿರನು
ನಾದ ಹೊರಡಿಸಿದೆ ನೀ ಕೃಷ್ಣ
ತೊಗಲು ಬೊಂಬೆಗಳಲಿ
ತುಂಬುತ ಉಸಿರನು
ಪ್ರಾಣ ನೀಡಿದೆ ನೀನೇ ಕೃಷ್ಣ

Sunday, October 1, 2023

ದೀಪಾವಳಿ

ಕಾಣುತಿಹುದು ದೀಪ ಮಾಲೆ,

ಬೀದಿಯಲ್ಲಿ ಸಾಲು ಸಾಲೆ.

ಬೆಳಕ ಬೀರಿ ನಗುವ ಚಿಮ್ಮಿದೆ,

ದೀಪಾವಳಿಯ ಹುರುಪು ತಂದಿದೆ.


ಗಂಗಾ ಮಾತೆಯೆ ಶರಣು ಶರಣು

ನೀರ ತುಂಬುವೆ ಇಂದು ನಾನು

ಶುದ್ಧವಾಗಲಿ ಮಲಿನ ತನುವು

ಹಗುರವಾಗಲಿ ನೊಂದ ಮನವು


ಕೃಷ್ಣ ದೇವನೆ ನಿನಗೆ ನಮನ

ಆಗಲಿಂದೇ ಅಸುರ ದಮನ

ನರಕ ಚತುರ್ದಶಿಯ ಶುಭದಿನ

ನರಕಾಸುರರಿಗೆ ಕೊನೆ ದಿನ


ಕೇಳುತಿಹುದು ಗೆಜ್ಜ ನಾದ,

ನೋಡು ಅಲ್ಲಿ ದಿವ್ಯ ಪಾದ,

ಬಂದಳಗೋ ಲಕುಮಿ ತಾಯಿ,

ಸಲಹು ಎಮ್ಮನು ನೀನು ಮಾಯಿ.


ವಾಮನಮೂರ್ತಿ ನೀನು ಬಂದೆ

ಭೂಮ್ಯಾಕಾಶಗಳ ತುಳಿದು ನಿಂದೆ

ಬಲಿಗೆ ಮೋಕ್ಷವ ಬಳಿಗೆ ತಂದೆ

ಪಾಲಿಸು ಎಮ್ಮನು ನೀನೆ ತಂದೆ



ಬಕುತಿ ಭಾವಗಳು ಚಿಮ್ಮಿ ಓಕುಳಿ

ಹರುಷದಾ ದೀಪಾವಳಿ

ದೀಪಗಳ  ಸಿರಿ ಬೆಳಕಲಿ

ವಿಶ್ವ ಶಾಂತಿಯು ಹರಡಲಿ


ಬೆಳಕಿನ ಎರವಲು

ನೀಡಿ ಬೆಳಕಿನ ಎರವಲು

ದೀಪವಾಗಿಸು ಎನ್ನನು.

ದೀಪಾವಳಿಗಳ ಮಾಲೆಯಲ್ಲಿ,

ಚೆಂದ ಪೋಣಿಸು ಎನ್ನನು.


ಜಗಕೆ ಮಿಣುಕು ಬೆಳಕನಿತ್ತು

ಕುಣಿವೆ ನಿನ್ನ ಹೆಸರಲಿ.

ಕೆರೆಯ ನೀರನು ಕೆರೆಗೆ ಚೆಲ್ಲಿದ,

ಧನ್ಯ ಭಾವವು  ನನ್ನದಿರಲಿ.


ಮನದ ತಮವು ಕರಗಲಿ,

ಜಡತೆ ಮಾಯವಾಗಲಿ.

ಜಗದ ನೋವು ನೀಗಲಿ,

ಹೊಸ ಬೆಳಕಿನಾ ಬೆಳಕಲಿ.


ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||