Thursday, April 23, 2020

ಬೇಡ ಇಂಥ ಸಾವು!




ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!

ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!

ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ  ಕೈಯ ಹಿಡಿದಳು!

ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!

ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.

ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!

ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!

Wednesday, April 22, 2020

ಯಾರೇ ನೀ ಕೊರೋನಾ?



ಹೇ ಕೊರೋನಾ, ಯಾರೇ ನೀನು?
ನಿನಗೆ ಕರುಣೆಯೇ ಇಲ್ಲವೇನು?

ಹೆಸರಿನಲಿ ಇದ್ದರೂ ಕಿರೀಟ,
ಮರೆಯದಿರು, ನೀನೊಂದು ಕೀಟ!
ರಾಣಿ ಮಹಾರಾಣಿ ಅಲ್ಲ ನೀನು,
ಸಿಂಹಾಸನ ಇಲ್ಲ ಬಲ್ಲೆಯೇನು?



ಹೇಳೇ, ನಿನ್ನ ಕುಲಗೋತ್ರವ,
ಜನ್ಮ ನೀಡಿದ ಜನಕನ ಪಾತ್ರವ.
ಹುಟ್ಟೂರಲೇ ಇದ್ದು, ಸಾಯದೆ,
ನೀ ವಿಮಾನಗಳ ಏಕೆ ಹತ್ತಿದೆ?

ಎಲೈ, ಕಾಲಿಲ್ಲದ  ಕಳ್ಳ ಕುಂಟಿ,
ಬಿಡದ ಬೇತಾಳನಂತೆ ಬೆನ್ನಿಗಂಟಿ,
ಕಾಲಿಲ್ಲದಿರೂ ಓಡುತಲಿರುವೆ,
ಶಿಷ್ಟಸಂಹಾರ ಮಾಡುತಲಿರುವೆ!

ಇನ್ನೂ ಬೇಕೆ ಬಲಿಗಳು ನಿನಗೆ?
ಏನು ಸಾಧಿಸಬೇಕಿದೆ ಕೊನೆಗೆ?
ಮುಗಿದರೆ ನಮ್ಮೆಲ್ಲರ ಜಾತ್ರೆ,
ಅದು ನಿನಗೂ ಕೊನೆಯ ಯಾತ್ರೆ!

ಅಬ್ಭಾ! ಅದೆಷ್ಟು ಕೈಗಳು ನಿನಗೆ?
ನಾಚಿಕೆ ಆಗುತಿದೆ ಅಷ್ಟಪದಿಗೆ.
ಮಣ್ಣಾದನಲ್ಲ ದಶಕಂಠನು ಕೂಡ,
ಖಂಡಿತ, ಕಾಲನು ನಿನ್ನನ್ನೂ ಬಿಡ!

Monday, April 20, 2020

ವಿಧಿಯಾಟ



ಈ ವಿಧಿಯಾಟದ ಮರ್ಮವೇನು?
ನಾವು ಮಾಡಿದ ಕರ್ಮವೇನು?

ನಾಡಲಿ ಸ್ವಚ್ಛಂದದ ಪ್ರಾಣಿಗಳು,
ದಾರಿಕಾಣದೆ ಬೋನು ಸೇರಿದವಲ್ಲ!
ಹಾರಾಡೋ ಹಕ್ಕಿಗಳು ನೆಲಕಚ್ಚಿ,
ಬಾಯಿಮುಚ್ಚಿ, ಗೂಡು ಸೇರಿದವಲ್ಲ!

ಮನೆಯ ಮೂವರದು ಮೂರು ದಾರಿ,
ಈಗವರದು ಒಂದೇ ಕೂಡುಕುಟುಂಬ!
ಒಟ್ಟಿಗೆ ಊಟ, ಒಟ್ಟಿಗೆ ಆಟ, ನೋಟ,
ಹಿಂದೆಂದೂ ಕಾಣದ ವಿಧಿಯ ಆಟ!

ನೆರೆತ ಕೂದಲು ಕಪ್ಪಾಗುತ್ತಿಲ್ಲ,
ಬೆಳೆದ ಕೂದಲು ಕಟ್ಟಾಗುತ್ತಿಲ್ಲ!
ಕೆಲಸದವಳ ಮೇಲೆ ಸಿಟ್ಟಾಗುತ್ತಿಲ್ಲ!
ಅವಳಿಲ್ಲದವರಿಗೆ ಇರುವ ನಲ್ಲ!

ಕುಳಿತು ಕುಳಿತು ಸಾಕಾಯಿತು,
ಮಲಗಿ ಮಲಗಿ ಬೋರಾಯಿತು.
ಅಡುಗೆ ಒಲ್ಲದ ಲಲನೆಯರೂ ಹಿಡಿದರು,
"ಮಾಡು ಇಲ್ಲವೇ ಮಡಿ" ಮಂತ್ರ!

ಜಗವನೆಲ್ಲ ಕಾಯವ ದೈವವೂ ಒಂದೇ,
ಎಲ್ಲರನು ಕಾಡುವ ಭಯವೂ ಒಂದೇ!
ಎಲ್ಲರ ಕಾತುರದ ನಿರೀಕ್ಷೆಯೂ ಒಂದೇ,
ಮುಗಿವುದೆಂದು ಲಾಕ್ಡೌನ್‌ ಎನ್ನುವುದೊಂದೇ!

Monday, April 13, 2020

ನಿಮಗೊಂದು ಸಲಾಮ್!


ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.

ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!

ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!

ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!

ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!

ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!

ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್‌,
ನಿಮಗೆಲ್ಲರಿಗೆ ನಮ್ಮ ಸಲಾಮ್!

Saturday, April 11, 2020

ಹನುಮ ನೀನೇ ಬರಬೇಕು




ಬೇಕು ಸಂಜೀವಿನಿ ಬೇಕು,
ದಿವ್ಯ ಸಂಜೀವಿನಿ ಬೇಕು.

ಕೀಟ ಕಾಟ ತೊಲಗಿಸುವ,
ಮದ್ದುಸಂಜೀವಿನಿ ಬೇಕು.
ಮೃತ್ಯು ಬಾಧೆ ನೀಗಿಸುವ,
ಪ್ರಾಣಸಂಜೀವಿನಿ ಬೇಕು.

ಧರೆಯು ನಳನಳಿಸಲು,
ನವಸಂಜೀವಿನಿ ಬೇಕು.
ವಿಷಗಾಳಿಯ ಹಿತವಾಗಿಸಲು,
ಅಮೃತಸಂಜೀವಿನಿ ಬೇಕು.

ಮಾತಲಿ ಪ್ರೀತಿ ತುಂಬುವ,
ಪ್ರೇಮಸಂಜೀವಿನಿ ಬೇಕು.
ನೋಟಕ್ಕೆ ಪಾವಿತ್ರ್ಯತೆಯನೀವ,
ದೃಷ್ಟಿಸಂಜೀವಿನಿ ಬೇಕು.

ಸಂಬಂಧಗಳ ಬೆಸೆಯುವ,
ಬಂಧಸಂಜೀವಿನಿ ಬೇಕು.
ಆಸೆಗಳಿಗೆ ಕಡಿವಾಣಕ್ಕೆ,
ಅಂಕೆಸಂಜೀವಿನಿ ಬೇಕು.

ಮನುಜಗೆ ಸದ್ಗುಣಗಳನೀವ,
ಮನೋಸಂಜೀವಿನಿ ಬೇಕು.
ಇವನೆಲ್ಲ ತಂದು ಕೊಡಲು,
ಹನುಮ ನೀನೇ ಬರಬೇಕು!


Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!