Sunday, January 8, 2023

ಮುಕ್ತಕಗಳು - ೯೦

ಕಡಲಾಳದಲ್ಲಿರುವ ಸಂಪತ್ತು ದೊರೆಯುವುದೆ

ದಡದ ಮೇಗಡೆ ಕುಳಿತು ತಪವ ಮಾಡಿದರೆ? |

ಬಿಡಬೇಕು ಭಯವನ್ನು ತರಬೇಕು ಪರಿಕರವ

ನಡುನೀರ ಲಿಳಿಬೇಕು ~ ಪರಮಾತ್ಮನೆ ||೪೪೬||


ಜನುಮ ಯೌವನ ಮುಪ್ಪು ವಪುರೋಗ ಮರಣಗಳು

ತನುವಿಗೊದಗುವ ಪರಿಸ್ಥಿತಿಗಳಾಗಿರಲು |

ಮನವ ಸಜ್ಜುಗೊಳಿಸುವ ವೇಷಗಳ ಧಾರಣೆಗೆ 

ಅನುಗಾಲ ನೆಮ್ಮದಿಗೆ ~ ಪರಮಾತ್ಮನೆ ||೪೪೭||


ತುಟಿ ಪಿಟಕ್ಕೆನ್ನದಿರೆ ಬಿಕ್ಕಟ್ಟು ಹುಟ್ಟದದು,

ತುಟಿ ಬಿರಿಯೆ ಕರಗುವವು ಹಲವಾರು ತೊಡಕು |

ಹಟ ತೊರೆದು ನಸುನಗಲು ಗಂಟೇನು ಕರಗುವುದು?

ನಿಟಿಲ ಗಂಟದು ಮಾತ್ರ! ~ ಪರಮಾತ್ಮನೆ ||೪೪೮||


ಸೂಸುವುದು ಪರಿಮಳವ ಚಂದನದ  ಹುಟ್ಟುಗುಣ,

ಈಸುವುದು ಮೀನು ನೀರಿನಲಿ ಮುಳುಗದೆಯೆ ||

ಆಸೆಗಳ ಪೂರೈಸೆ ಬದಲಿಸಿರೆ ಬಣ್ಣಗಳ

ಊಸರವಳ್ಳಿಯೆ ಅವನು ~ ಪರಮಾತ್ಮನೆ ||೪೪೯||


ಪಾಪಾಸುಕಳ್ಳಿಯೂ ತಣಿಸುವುದು ದಾಹವನು

ವಾಪಸ್ಸು ನೀಡುತಿದೆ ಸ್ವಾರ್ಥಿಯಲ್ಲವದು |

ನೀ ಪಡೆದ ವರದಲ್ಲಿ  ನೀಡು ತುಸು ಪರರಿಗೂ

ಪೀಪಾಸು ಆಗದಿರು ~ ಪರಮಾತ್ಮನೆ ||೪೫೦||

Monday, December 26, 2022

ಮುಕ್ತಕಗಳು - ೮೯

ನಿನ್ನ ದುರ್ಗುಣಗಳನು ಕಿತ್ತು ಎಸೆಯಲು ಬೇಕು

ಅನ್ನದಕ್ಕಿಯ ಕಲ್ಲು ಹೆಕ್ಕಿ ತೆಗೆದಂತೆ |

ಮುನ್ನಡೆವ ಹಾದಿಯಲಿ ಮುಳ್ಳುಗಳು ಹೆಚ್ಚಿರಲು

ಸನ್ನಡತೆ ರಕ್ಷಿಪುದು ~ ಪರಮಾತ್ಮನೆ ||೪೪೧||


ಕೊಟ್ಟುಕೊಳ್ಳುವ ಸಂತೆಯಲಿ ಸರಕು ವಿನಿಮಯವು

ಒಟ್ಟು ಕರಗದು ಇಲ್ಲಿ ಸರಕುಗಳ ಗಂಟು! |

ಬಿಟ್ಟು ಗಂಟುಗಳೆಲ್ಲ ನಡೆ ಹಟ್ಟಿಯಾ ಕಡೆಗೆ

ಬೆಟ್ಟದಾ ಹಾದಿಯಿದೆ ~ ಪರಮಾತ್ಮನೆ ||೪೪೨||


ಫಲಭರಿತ ಮರಕುಂಟು ವಂಶ ಬೆಳೆಸುವ ಆಸೆ

ಜಲಧಿ ಸೇರುವ ಆಸೆ ಹರಿಯುವಾ ನದಿಗೆ |

ಇಳೆಯ ಕಣಕಣಕೆ ಇರಲಾಸೆಗಳು ಧರ್ಮವದು

ಅಳತೆ ಮೀರದೆ ಇರಲು ~ ಪರಮಾತ್ಮನೆ ||೪೪೩||


ಕರಿಗೆ ಸಾಕಾಗುವುದೆ ಕುರಿಯು ಮೇಯುವ ಮೇವು

ಉರಿಬಿಸಿಲ ಸೆಕೆಗೆ ಸಿಕ್ಕಂತೆ ಹನಿ ನೀರು |

ಅರೆಮನದ ಕಾರ್ಯಗಳು ನೀಡುವವೆ ಪೂರ್ಣಫಲ?

ಉರಿಸು ಇರುಳಿನ ದೀಪ ~ ಪರಮಾತ್ಮನೆ ||೪೪೪||


ಕಲರವದ ಹಾಡಿರಲು ತಂಗಾಳಿ ಬೀಸಿರಲು 

ಬಳಿಯಲ್ಲೆ ನದಿಯಿರಲು ಹಸಿರು ನಗುತಿರಲು |

ಎಳೆಯ ತುಸು ಬಿಸಿಲಿರಲು ಚುಮುಗುಡುವ ಚಳಿಯಿರಲು

ಗೆಳತಿ ಜೊತೆಗಿರಬೇಕು ~ ಪರಮಾತ್ಮನೆ ||೪೪೫||

ಮುಕ್ತಕಗಳು - ೮೮

ಜಾತಿಧರ್ಮಗಳೀಗ ರಾಜಕೀಯದೆ ಮುಳುಗಿ

ಕೋತಿಗಳ ರೀತಿಯಲಿ ಕುಣಿಸುತಿವೆ ಜನರ |

ಭೀತಿಯನು ಬಿತ್ತುತ್ತ ಮನಗಳನು ಕದಡುತ್ತ

ನೀತಿಯನು ಮರೆತಿಹವು ~ ಪರಮಾತ್ಮನೆ ||೪೩೬||


ಉಪಕಾರ ಮಾಡುತಿರು ಪ್ರತಿಫಲವ ಬಯಸದೆಯೆ

ತಪವ ಗೈಯುವ ರೀತಿ ಎಡೆಬಿಡದೆ ಸತತ |

ಉಪಕಾರ ದೊರೆಯುವುದು ಸಮಯಕ್ಕೆ ಸರಿಯಾಗಿ

ಹಪಹಪಿಸದೆಯೆ ನಿನಗೆ ~ ಪರಮಾತ್ಮನೆ ||೪೩೭||


ಗೋಜಲನು ತುಂಬದಿರಿ ಕಲಿಯುವಾ ಮನಗಳಲಿ

ರಾಜಿಯಾಗಿರಿ ವಿದ್ಯೆ ಕಲಿಸುವಾ ಗುರಿಗೆ |

ಸೋಜಿಗದ ಮನಗಳಿಗೆ ಶುದ್ಧ ಅರಿವನು ನೀಡಿ

ಭೋಜನವು ಸ್ವಾಸ್ಥ್ಯಕ್ಕೆ ~ ಪರಮಾತ್ಮನೆ ||೪೩೮||


ಶಿಸ್ತಿರದ ಬದುಕುನಾ ವಿಕನಿರದ ದೋಣಿ, ಕಥೆ

ಪುಸ್ತಕದ ಪುಟಗಳೇ ಅದಲುಬದಲಂತೆ! |

ಮಸ್ತಕದ ಮಾರ್ಗದರ್ಶನಿವಿರದ ಮನಸಿರಲು

ಬೇಸ್ತು ಬೀಳುವೆ ಬಂಧು ~ ಪರಮಾತ್ಮನೆ ||೪೩೯||


ದೇವರಿಗೆ ಕಾಣುತಿರೆ ಮಾಡುತಿಹ ಪೂಜೆಗಳು

ದೈವಕ್ಕೆ ಕಾಣದೇ ನೀ ಮಾಡೊ ತಪ್ಪು? |

ದೇವನಾ ಕ್ಯಾಮೆರವು ನಮ ಕಣ್ಣೆ ಮರೆಯದಿರು

ನಾವು ನಮಗೇ ಸಾಕ್ಷಿ ~ ಪರಮಾತ್ಮನೆ ||೪೪೦||


ಮುಕ್ತಕಗಳು - ೮೭

ಬಾಳಬಂಡಿಯು ಆಗಬೇಕಿಹುದು ತೇರೊಂದು

ಏಳಿಗೆಯು ದೊರೆಯುವುದು ಶಂಕೆ ಬೇಕಿಲ್ಲ |

ಕೇಳು, ಕೂರಿಸಬೇಕು ಸತ್ಯ ದಯೆ ಧರ್ಮಗಳ

ಈಳುತಿಹ ತೇರಿನಲಿ ~ ಪರಮಾತ್ಮನೆ ||೪೩೧||

ಈಳುತಿಹ = ಎಳೆಯುತಿಹ


ಪದವಿಗಳು ಕಲಿಸುವವೆ ಬದುಕಿನಾ ಪಾಠವನು?

ಪದವಿ ಪಡೆದಿದೆಯೇನು ಜೇನಿನಾ ನೊಣವು? |

ಮುದದಿಂದ ಕಲಿಸದದು ಕೂಡಿ ಬಾಳುವ ರೀತಿ

ಮದವೇಕೆ ಪದವಿಯಿರೆ? ~ ಪರಮಾತ್ಮನೆ ||೪೩೨||


ಮೇಲೆ ಹಾರಲು ಬೇಕು ಖಗಗಳಿಗೆ ರೆಕ್ಕೆಗಳು

ಮೇಲೇರೆ ಮನುಜನಿಗೆ ನಮ್ರತೆಯೆ ರೆಕ್ಕೆ |

ಕಾಲೂರಬೇಕು ಭೂಮಿಯ ಮೇಲೆ ಸೊಕ್ಕಿರದೆ

ಗಾಳಿಗೋ ಪುರಮಿಥ್ಯ ~ ಪರಮಾತ್ಮನೆ ||೪೩೩||


ನೇಹಿಗರ ಸಂಗವದು ಹೆಜ್ಜೇನು ಸವಿದಂತೆ

ದಾಹ ತಣಿಪುದು ಮನಕೆ ಸವಿ ತಂಪನೆರೆದು |

ಬಾಹಿರದ ಬದುಕಿನಲಿ ನೆರಳಂತೆ ನಿಂತವರು

ಜಾಹೀರು ಮಾಡುತಿಹೆ ~ ಪರಮಾತ್ಮನೆ ||೪೩೪||

ಬಾಹಿರ = ಹೊರಗೆ, ಜಾಹೀರು = ಘೋಷಣೆ


ದೇವನೊಬ್ಬನು ಮಾತ್ರ ಎನ್ನುವರೆ ಎಲ್ಲರೂ

ಯಾವುದೇ ಸಂಶಯಗಳಿರದ ನಂಬಿಕೆಯು! |

ಕಾವನೊಬ್ಬನಿರೆ ಕಲಹಿಗಳಾದರೇಕೆ ಜನ?                

ದೇವನನು ಹೆಸರಿಸಲು! ~ ಪರಮಾತ್ಮನೆ ||೪೩೫||

Sunday, December 25, 2022

ಮುಕ್ತಕಗಳು - ೮೬

ಸುಟ್ಟಿರಲು ಮರವೊಂದ ಮತ್ತೆ ಫಲವೀಯುವುದೆ

ನೆಟ್ಟು ಸಸಿಯನು ಪೋಷಿಸುತ ಕಾಯಬೇಕು |

ಕೆಟ್ಟಕರ್ಮಫಲದಾ ಪರಿಣಾಮ ತಗ್ಗಿಸುವ 

ಗಟ್ಟಿ ದಾರಿಯಿದುವೇ ~ ಪರಮಾತ್ಮನೆ ||೪೨೬||


ಈಯುವುದು ಸಂತಸವ ಬಡವನಿಗೆ ತುತ್ತನ್ನ

ಈಯುವುದೆ ಧನಿಕನಿಗೆ ತೃಪ್ತಿ ಮೃಷ್ಟಾನ್ನ? |

ಬೇಯುವುದು ಮನವಧಿಕ ತೀರದಾಸೆಗಳಿರಲು

ಸಾಯುವುದು ಸಂತಸವು ~ ಪರಮಾತ್ಮನೆ ||೪೨೭||


ಸರ್ವಗುಣ ಸಂಪನ್ನರಾರುಂಟು ಪೃಥುವಿಯಲಿ

ಗರ್ವಪಡದಿರು ನೀನು ಕೊರೆಯುಂಟು ನಿನಗೆ | 

ಕರ್ಮ ತಂದಿಹ ಕೊರತೆ ಮರೆಯಾಗ ಬೇಕೆ? ಹಿಡಿ,

ಪರ್ವಕಾಲದ ಮಾರ್ಗ ~ ಪರಮಾತ್ಮನೆ ||೪೨೮||

ಪರ್ವಕಾಲ = ಪರಿವರ್ತನೆ / ಬದಲಾವಣೆ


ಬಾಗುವುದು ಮರವು ಫಲಭರಿತವಾಗಿರುವಾಗ

ಬಾಗುವುದು ತಲೆಯು ಪಾಂಡಿತ್ಯ ತುಂಬಿರಲು |

ಬೀಗುವರು ಸುಮ್ಮನೆಯೆ ಸೋಗಿನಾ ಪಂಡಿತರು

ಮಾಗಿರದ ಎಳಸುಗಳು ~ ಪರಮಾತ್ಮನೆ ||೪೨೯||


ಅರಳುತಿಹ ಕುಸುಮವರಿಯದು ಪಯಣವೆಲ್ಲಿಗೋ

ಅರಳಿ ದೇವನ ಗುಡಿಗೊ ಮಸಣಕೋ ಕೊನೆಗೆ? |

ಇರುವುದೇ ಕುಸುಮಕ್ಕೆ ನಿರ್ಧರಿಸೊ ಅವಕಾಶ?

ಹರಿ ನಮಗೆ ಕೊಟ್ಟಿಹನು ~ ಪರಮಾತ್ಮನೆ ||೪೩೦||

ಮುಕ್ತಕಗಳು - ೮೪

ನಿದ್ದೆಯಲಿ ಕಂಡ ಕನಸಿನ ಹಿಂದೆ ಬೀಳದಿರು

ನಿದ್ದೆ ಕೆಡಿಸುವ ಕನಸು ನನಸಾಗಬೇಕು |

ಒದ್ದೆಯಾಗಿಸು ಕಂಗಳನು ಕನಸ ಬೆನ್ನಟ್ಟೆ

ನಿದ್ದೆ ಬರದಿರುವಂತೆ ~ ಪರಮಾತ್ಮನೆ ||೪೧೬||


ನಾನು ಮಾಡಿದೆಯೆನ್ನದಿರು, ಹಮ್ಮು ತೋರದಿರು

ನೀನಿಲ್ಲಿ ಮಾಡಿದ್ದು ಏನಿಲ್ಲ ಮರುಳೆ! |

ಆನದೇ, ಅವ ನೀಡಿದೇನನೂ ಬಳಸದೆಯೆ

ಏನುಮಾ ಡಿಡಬಲ್ಲೆ ~ ಪರಮಾತ್ಮನೆ ||೪೧೭||


ಧುಮ್ಮಿಕ್ಕುತಿಹ ಕೋರಿಕೆಗಳ ಧಾರೆಗೆ ಬೆದರಿ

ನಮ್ಮಿಂದ ಮರೆಯಾಗಿ ಕಲ್ಲಿನಲಿ ಅಡಗಿ |

ನಮ್ಮ ನಾಟಕಗಳನು ಕದ್ದು ನೋಡುತ್ತಿರುವೆ

ಹೊಮ್ಮಿ ಬುರುತಿದೆಯೆ ನಗು ಪರಮಾತ್ಮನೆ ||೪೧೮||


ಯಾವ ಚಣದಲಿ ಬಹುದೊ ಯಾವ ರೂಪದಿ ಬಹುದೊ

ಯಾವ ಎಡೆಯಲಿ ಬಹುದೊ ತಿಳಿಯದೀ ಮೃತ್ಯು |

ನಾವೆಯನು ಮುಳುಗಿಸುವುದಾವ ಅಲೆಯೋ ಕಾಣೆ

ಜೀವ ಗಾಳಿಯ ಸೊಡರು ~ ಪರಮಾತ್ಮನೆ ||೪೧೯||


ಯಮಭಟರು ಬಂದಾಗ ಪೊರೆಯುವರು ಯಾರಿಹರು,

ನಮ ಮಡದಿ ಮಕ್ಕಳೇ ಗೆಳೆಯರೇ ಯಾರು? |

ಯಮಪಾಶ ಬೀಸಿರಲು ಧನವು ಕಾಯುವುದೇನು?

ಜಮೆಯು ಕೈಜಾರುವುದು  ~ ಪರಮಾತ್ಮನೆ ||೪೨೦||



ಮುಕ್ತಕಗಳು - ೮೩

ಇರದದನು ಬಯಸಿದರೆ ಸುಖದುಃಖಗಳ ಬಲೆಯು

ಇರುವುದನು ನೆನೆಸಿದರೆ ನೆಮ್ಮದಿಯ ಅಲೆಯು |

ಕರುಬಿದರೆ ಕಬ್ಬಿಣಕೆ ತುಕ್ಕು ಹಿಡಿದಾ ರೀತಿ

ಕೊರಗುವುದು ಸಾಕಿನ್ನು ~ ಪರಮಾತ್ಮನೆ ||೪೧೧||


ಕದ್ದು ಕೇಳುವ ಕಿವಿಗೆ ಕಾದಸೀಸದ ಕಾವು

ಬಿದ್ದುಹೋಗಲಿ ಜಿಹ್ವೆ ಕೆಟ್ಟ ಮಾತಾಡೆ |

ಇದ್ದುದೆಲ್ಲವ ಕಸಿದು  ಪಾಳುಕೂಪಕೆ ತಳ್ಳು

ಶುದ್ಧವಿರದಿರೆ ನಡತೆ ಪರಮಾತ್ಮನೆ ||೪೧೨||


ನಿನಗಿಂತ ಮುಂದಿರುವವರ ಕಂಡು ಕರುಬದಿರು

ನಿನಗಿಂತ ಹಿಂದಿರಲು ಅಣಕಿಸದೆ ತಾಳು |

ನಿನ ಜೊತೆಗೆ ನಡೆಯುವರ ಗಮನಿಸುತ ಆದರಿಸು

ನಿನ ಬಾಳು ಬಂಗಾರ ~ ಪರಮಾತ್ಮನೆ ||೪೧೩||


ಭಕ್ತಿಯಲಿ ಅಸದಳದ ಬಲವುಂಟು, ಮನುಜನನು

ಶಕ್ತನಾಗಿಸಿ ಜಗದ ಕೋಟಲೆಯ ಸಹಿಸೆ |

ರಕ್ತನನು ವಿರಕುತನ ಮಾಡಿಸುತ ಜತನದಲಿ

ಮುಕ್ತಿಯೆಡೆ ಸೆಳೆಯುವುದು ~ ಪರಮಾತ್ಮನೆ ||೪೧೪||


ಒಂದಡಿಯ ಹೊಟ್ಟೆಯನು ತುಂಬಿಸುವ ಯತ್ನದಲಿ

ಹೊಂದಿರುವ ಜನುಮವಿಡಿ ಕೂಲಿ ಮಾಡಿಹೆವು |

ಕಂದರವು ಇದಕೆ ನಾವೇ ಬಲಿಪಶುಗಳಾಗಿ

ಒಂದು ದಿನ ಅಳಿಯುವೆವು ~ ಪರಮಾತ್ಮನೆ ||೪೧೫||