Thursday, April 20, 2023

ನೆರಳಾಗುವೆ

ಮಳೆಯೇ ಬರಲಿ, ಬಿಸಿಲೇ ಇರಲಿ,

ನೆರಳಾಗುವೆ ನಿನಗೆ ಬಾ ತಮ್ಮ!


ಬಾಳ ಹಾದಿಯು ಸುಲಭವೇ ಅಲ್ಲ,

ಹಳ್ಳ, ಗುಂಡಿ, ಇದೆ ಕೆಸರೆಲ್ಲ!

ಜೊತೆಯಲೇ ನಡೆವೆ, ತಂಪನು ಎರೆವೆ,

ನೆರಳಾಗುವೆ ನಿನಗೆ ಬಾ ತಮ್ಮ!


ಬಣ್ಣ, ಬಣ್ಣದ ಛತ್ರಿಯು ಏಕೆ?

ಸೊಗಸಾಗಿದೆ ಈ ಹಸಿರೆಲೆಯು!

ಮರುಳಾಗದಿರು ನೀ ಬಣ್ಣಕ್ಕೆ,

ನೆರಳಾಗುವೆ ನಿನಗೆ ಬಾ ತಮ್ಮ!


ನಗುತಾ ನಾವು ನಡೆಯುವ,

ಎಂದಿಗೂ ಹೀಗೇ ಜೊತೆಯಿರುವ,

ನಗುವು ನಿನ್ನದು, ಆನಂದ ನನ್ನದು,

ನೆರಳಾಗುವೆ ನಿನಗೆ ಬಾ ತಮ್ಮ!


ಹೆಜ್ಜೆಗೆ ನಾನು ಹೆಜ್ಜೆಯ ಹಾಕುವೆ,

ತಪ್ಪು ದಾರಿಗೆ ಬಿಡೆ ನಾನು!

ಬಾಳ ದಾರಿಯ ಕೊನೆವರೆಗೂ,

ನೆರಳಾಗುವೆ ನಿನಗೆ ಬಾ ತಮ್ಮ!



ಪಾಠ

ಸಿದ್ಧಪಡಿಸುತಿಹಿಳು ತಾಯಿ ಮಗಳನ್ನು,

ಅವಳ ಹೊಸ ಬಾಳ ಪಯಣಕೆ,

ತಾ ಕಲಿತ ಪಾಠಗಳ ಕಲಿಸುತ್ತ.


ಕೂದಲಲಿ ಗಂಟಾಗದಂತೆ ಬಿಡಿಸುತ್ತ,

ಸಂಬಂಧಗಳು ಗಂಟಾಗದಂತೆ,

ಚತುರತೆಯಲಿ ಬಿಡಿಸಬೇಕೆಂದು.


ಕೂದಲಿಗೆ ಘಮದ ಎಣ್ಣೆ ಸವರುತ್ತ,

ಕುಟುಂಬಕೆ ಪೋಷಣೆ ಕೊಡಲು,

ಪ್ರೀತಿಯ ಸುಗಂಧದೆಣ್ಣೆ ಬೇಕೆಂದು.


ಜಡೆಯನು ಹೆಣೆಯುತಿಹಳು ತಾಯಿ,

ಕೂಡುಕುಟುಂಬದ ಸಬಲತೆಗೆ,

ಒಗ್ಗಟ್ಟಿನಲಿ ಬಲದ ಗುಟ್ಟಿದೆಯೆಂದು.


ಕನ್ನಡಿಯಲಿ ನೋಡೆನ್ನುತಿಹಳು,

ತನ್ನ ನಡವಳಿಕೆ ತಾನೇ ಕಂಡು,

ತಪ್ಪುಗಳನು ತಿದ್ದಿಕೊಳಬೇಕೆಂದು.


ತಲೆಮಾರಿನಿಂದ ತಲೆಮಾರಿಗೆ,

ಸಂಸ್ಕಾರವಿಲ್ಲಿ ಹಸ್ತಾಂತರ,

ಜೆಡೆ ಹೆಣಿಕೆ ಇಲ್ಲಿ ಪ್ರೀತಿಗೆ ಮಾತ್ರ!



ಅಗ್ನಿಪರ್ವತ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ



ಕೋಟಿಕೋಟಿ ಜನರ ಒಡಲ ಬೆಂಕಿ

ಹೊರ ಹರಿಯಿತು ಶತ್ರುಗಳ

ಮಾರಣ ಹೋಮಕ್ಕೆ ಸಾಕ್ಷಿಯಾಗಿ



ವರುಷ ವರುಷಗಳ ತಾಪ

ಒಳಗೊಳಗೇ ಕುದಿಯುತಿತ್ತು

ಪಾಪದ ಕೊಡ ತುಂಬಿ ನಿಂತಿತ್ತು



ಬೆನ್ನಿಗೆ ಚೂರಿ ಹಾಕುವ ಹೇಡಿಗಳ

ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ

ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ

ನಂತರದಲ್ಲಿ ಸ್ಮಶಾನ ಮೌನ



ಓಂ ಶಾಂತಿ ಶಾಂತಿ ಶಾಂತಿಃ


ಸನ್ನಿಹಿತ

ಬ್ರಹ್ಮಚರ್ಯಾಶ್ರಮದಲ್ಲಿ ಕಾಮ ಕುಸುಮಗಳ ತೋಟ,

ಗೃಹಸ್ಥಾಶ್ರಮದಲ್ಲಿ ಕೊಲೆ, ಸುಲಿಗೆಗಳ ಪರಿಪಾಠ,

ವಾನಪ್ರಸ್ಥದಲ್ಲಿ ಜೀವಿಸಲು ಜಂಜಾಟ,

ಸನ್ಯಾಸಾಶ್ರಮದಲ್ಲಿ ಸಕಲ ವೈಭೋಗದಾಟ!

 

ತೋಟವ ಮೇಯುವ ಬೇಲಿಯಂತಹ ಅಧಿಕಾರವರ್ಗ,

ಕಾರ್ಮಿಕವರ್ಗದಲಿ ಸೋಮಾರಿತನದ ಅಧಿಪತ್ಯ,

ಆರಕ್ಷಕ ದಳದಲ್ಲಿ ಭಕ್ಷಕರೆ ಬಹಳ,

ಯಥಾ ಪ್ರಜಾ ತಥಾ ರಾಜ! ಯಥಾ ಪ್ರಜಾ ತಥಾ ರಾಜ!

 

ತಾಯ ಹಾಲಿನಲೇ ಮೂಡುತಿದೆ ನಂಜು,

ಒಳಗಣ್ಣುಗಳಿಗೆ ಕವಿಯುತಿದೆ ಮಂಜು,

ಮುಳುಗುತಿದೆ ಇಂದು ಅಧರ್ಮದಲಿ ಭಾರತ,

ಧರ್ಮಸಂಸ್ಥಾಪನೆ ಇನ್ನು ಸನ್ನಿಹಿತ! ಸನ್ನಿಹಿತ!


ಮಸಣವಾಯಿತು ದೇವಭೂಮಿ...

ಮೇಘ ಸಿಡಿಯಿತು, ಭುವಿಯು ನಡುಗಿತು,

ಮುಸಲಧಾರೆಯ ಏಟಿಗೆ, ಉಕ್ಕೊ ನದಿಗಳ ರಭಸಕೆ.



ಮಸಣವಾಯಿತು ದೇವಭೂಮಿ

ಪ್ರಳಯನಾದದ ಧಾಟಿಗೆ,

ನಿಂತ ನೆಲವು ಹಾಗೇ ಕುಸಿದರೆ

ಆಸರೆಯೆಲ್ಲಿದೆ ಬದುಕಿಗೆ.



ತಂದೆ ತಾಯರ, ಮುದ್ದುಮಕ್ಕಳ

ತೋಳಹಾರದ ಬದಲಿಗೆ,

ಅಗಲಿಕೆಯ ಕಲ್ಲ ಬಂಡೆಯು

ಜೋತುಬಿದ್ದಿತು ಕೊರಳಿಗೆ!



ಗರ್ಭಗುಡಿಯಲಿ, ದೇವನೆದುರಲಿ

ಪ್ರಾಣಭಿಕ್ಷೆಯ ಹರಕೆಗೆ,

ಸಾವುನೋವಿನ ವರವು ದೊರೆಯಿತು,

ಸ್ತಬ್ಧವಾಯಿತು ಗುಂಡಿಗೆ!



ಕ್ರೂರಮೃಗಗಳ, ಕ್ಷುದ್ರಮನಗಳ,

ಕಾಮ, ಲೋಭದ ಮತ್ತಿಗೆ,

ಸತ್ತ ಶವಗಳು ಮತ್ತೆ ಮಡಿದವು,

ನಾಚಿಕೆಗೇಡು ನಾಡಿಗೆ, ನಾಚಿಕೆಗೇಡು ನಾಡಿಗೆ!

Wednesday, February 8, 2023

ನೀನಿಲ್ಲದೆ...

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||


Tuesday, February 7, 2023

ನಿನ್ನ ನಗು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ!