Wednesday, March 31, 2021

ನಿವೇದನೆ (ಪರಿವರ್ಧಿನಿ ಷಟ್ಪದಿ)

ಮೋಹಕ  ಚೆಲುವೆಯೆ  ಮಾದಕ  ನೋಟವು 

ದಾಹವ  ಹೆಚ್ಚಿಸಿ  ಹುಚ್ಚನು  ಹಿಡಿಸಿದೆ 

ಸಾಹಸಿಯಾಗಿಹೆ ಚಂಚಲ ಕಂಗಳ ಬಾಣಕೆ ಗುರಿಯಾಗಿ!

ರೋಹಿತ ತುಟಿಗಳ ಚುಂಬಿಸೊ ಬಯಕೆಗೆ

ಮೋಹವು ಹೆಚ್ಚಿದೆ ತನುವದು ಕಾದಿದೆ

ದೇಹಕೆ ತಣ್ಣನೆ ಮದ್ದದು ಬೇಕಿದೆ ತಾಪವ ತಗ್ಗಿಸಲು!


ನಿನ್ನಯ  ಬಾಹ್ಯದ  ಚೆಲುವದು ಚುಂಬಕ

ನಿನ್ನಯ ಮನಸೂ ಬಹುವಿಧ ಸುಂದರ

ಮನ್ನಿಸಿ ಬೆಡಗಿಯೆ ನನ್ನಯ ಜೊತೆಯಲಿ ಪಯಣಿಗಳಾಗುವೆಯಾ?

ಮುನ್ನುಡಿ ಬರೆಯುವ ನಮ್ಮಯ ಬಾಳಿಗೆ

ಕನ್ನಡಿಯಾಗುವ ದೈವದ ತತ್ವಕೆ

ಹೊನ್ನಿನ ಮಾದರಿ ಮಿನುಗುತಲಿರುವ ಪ್ರೇಮದ ಲೋಕದಲಿ! 

Thursday, March 25, 2021

ನಾನು ನೀನು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Sunday, March 21, 2021

ಮಾತೃಭಾಷೆ

ಮಾತೃ ಭಾಷೆಯೇ ಮಧುರ  ನುಡಿಯು, 

ನಾಲಿಗೆಯ ಕುಣಿಸುವ ಪದಗಳ ಖನಿಯು! 

ಎದೆಯ ಹಾಲಿನ ಸುಮಧುರ ಸವಿಯು, 

ಕಿವಿಗಳಿಗೆ ತಾಯ ಎದೆಬಡಿತದ ದನಿಯು! 


ಕಣ್ಣುಗಳು ಕಂಡರೂ ಪರದೇಶವನು, 

ಪರಭಾಷೆಯೇ ತಲುಪಲಿ ಕಿವಿಗಳನು, 

ನಾಲಿಗೆ ನುಡಿಯಲಿ ಅಮ್ಮನ ಭಾಷೆ, 

ಅಮ್ಮಗೆ ನೀನೆಂದೆಂದಿಗೂ ಕೂಸೇ! 


ವ್ಯವಹಾರದ ಭಾಷೆಯು ಏನೇ ಇರಲಿ, 

ಅದು ಹೊರಬಾಗಿಲ ಹೊರಗೇ ಇರಲಿ! 

ಮಮತೆಯ ಮಾತೆಯ ತೊರೆಯದಿರು, 

ಹೂರಗಿನ ಥಳುಕಿಗೆ ಮರುಳಾಗದಿರು! 


ಮರೆತರೆ ನಾವು ನಮ್ಮಯ ಭಾಷೆ, 

ಅನಾಥರು ನಮ್ಮಯ ಮನೆಯಲ್ಲೇ! 

ಕಲಿತರೂ ಬುಧ್ಧಿಯು ಪರಭಾಷೆಯನು,

ಎದೆ ಮಿಡಿಯಲಿ ಮಣ್ಣಿನ ಭಾಷೆಯಲಿ!


ಕನ್ನಡ ತಾಯಿಯ ಪ್ರೀತಿಯ ಕೂಸೆ,

ಕನ್ನಡ ನಮ್ಮಯ ಹೆಮ್ಮೆಯ ಭಾಷೆ, 

ಭಾಷೆಯು ಬರದವಗೆ ನೀ ಕಲಿಸು, 

ಮಣ್ಣಿನ ಋಣವನು ಪರಿಹರಿಸು! 

ರುಬಾಯಿಗಳು - ೧

1. ವಿಷಯ: *ಅನ್ವೇಷಣೆ*

ಮುಗಿಯದಾಗಿದೆ ಈ ಅನ್ವೇಷಣೆ,

ಬೇಕಾಗಿದೆ ಇಂದ್ರಿಯ ಸಮರ್ಪಣೆ,

ಮೋಕ್ಷದ್ವಾರಕೆ ಇದೊಂದೇ ದಾರಿಯು, 

ಆಗಿದೆ ದೇವದೇವನ ಘೋಷಣೆ! 


2. ವಿಷಯ: *ಜೋಮಾಲೆ*

ಬಂಧಿಯಾಗಿಸಲಿ ನಿನ್ನ ತೋಳಮಾಲೆ

ಅದೇ ನನ್ನ ಸಿಂಗರಿಸುವ ಹೂಮಾಲೆ

ನಿನ್ನ ಪ್ರೀತಿಯ ಪ್ರೇಮದ ಕಾಣಿಕೆಗೆ

ಇಗೋ ಕೊರಳಿಗೆ ರನ್ನದ ಜೋಮಾಲೆ 


3. ಸುಗ್ಗಿ ಹಬ್ಬ

ಸುಗ್ಗಿಯ ಹಬ್ಬದ ಸುಂದರ ಘಳಿಗೆ

ಸಗ್ಗದ ಸಂಭ್ರಮ ಬಂದಿದೆ ಇಳೆಗೆ

ಎಳ್ಳು ಬೆಲ್ಲದ ಸವಿಯನು ಹಂಚುತ

ಸೇರಲು ತಂದಿದೆ ಸ್ನೇಹದ ಗುಳಿಗೆ


4. ಕ್ಷಣಿಕ

ಹಣ ತರುವ ಆನಂದ ಕ್ಷಣಿಕವೇ ಮಾತ್ರ

ಕಳೆದುಹೋಗುವುದು ಎಷ್ಟೇ ಇರಲಿ ಗಾತ್ರ

ಜೀವನದಿ ಬೇಕಿಹುದು ಶಾಶ್ವತ ಆನಂದ

ಗುಣವು ಕೊಡುವುದು ಸದಾನಂದದ ಸೂತ್ರ


5. ವ್ಯಕ್ತಿತ್ವ

ದೇಹ ಊನವಾಗಿರಲು ದೈವವೇ ಕಾರಣ

ವ್ಯಕ್ತಿತ್ವವೇ ಊನವಿರಲು ನಾವೇ ಕಾರಣ

ದೇವ ಕೊಟ್ಟಿದುದ ನಗುತ ಸ್ವೀಕರಿಸುತ

ನಮದಾದ ವ್ಯಕ್ತಿತ್ವವ ನಾವೇ ರೂಪಿಸೋಣ


ವ್ಯಕ್ತಿಗಳ ನಡೆನುಡಿಯು ಆಂತರಿಕ ಭಾವಗಳು

ಕಷ್ಟನಷ್ಟಗಳು ಬಂದಾಗ ಆರಿಸುವ ದಾರಿಗಳು

ಧನಕನಕ ಗಳಿಸುವ ವ್ಯಯಿಸುವ ರೀತಿ ನೀತಿ

ಆಗುತಿವೆ ಮನುಜನ ವ್ಯಕ್ತಿತ್ವದ ಪದರಗಳು


ಉಚಿತದಲಿ ಆಹಾರ ಉಚಿತದಲಿ ವಿಹಾರ

ಉಚಿತಗಳ ಮಳೆಯಿಂದು ಸುರಿಯುತಿದೆ ಪೂರ

ದುಡಿಯುವ ದೇಹಗಳಿಗೆ ಆಲಸ್ಯ ತಾಕುತಿದೆ

ದಿನದಿನಕೆ ಸೋಮಾರಿ ಆಗುತಿಹ ಮತದಾರ


ಮತದಾರ ಆರಿಸಿಹ ಆಳುವವರನಿಂದು

ಯಥಾ ಪ್ರಜಾ ತಥಾ ರಾಜರು ಆಗಿಹರು ಬಂಧು

ಅಧಿಕಾರ ಅವಕಾಶ ಅವರಿಗೆ ಸಿಕ್ಕಾಗ

ಬಾಚುತ್ತ ಬೆಳೆಯುವರು ಸಕಲವನೂ ತಿಂದು!


ಮಲ್ಲಿಗೆಯ ಪರಿಮಳವು ಮನಸೂರೆಗೈಯುವುದು

ಮೊಗದಲ್ಲಿ ನಗೆಮಲ್ಲಿಗೆಯನು ಅರಳಿಸುವುದು

ಅಲಗಿಹ ನಲ್ಲೆಯ ಕೋಪವನು ಕರಗಿಸುತಲಿ

ನಗುನಗುತ ಬಳಿಸಾರಿ ಬರುವಂತೆ ಮಾಡುವುದು


ಒಮ್ಮೆ ನೋಡಲು ನಿನ್ನ ಮತ್ತೆ ನೋಡಬೇಕೆನಿಸುವುದು

ಕಣ್ಣು ಮುಚ್ಚಲೂ ನಿನ್ನದೇ ಮುಖಕಮಲ ಕಾಣುವುದು

ನನ್ನ ಮರೆತರೂ ನಾ ನಿನ್ನ ಮರೆಯಲೇ ಆಗುತಿಲ್ಲ

ಏತಕೆ ನೀ ನನ್ನ ಮನವನ್ನಾವರಿಸಿರುವೆ ಇಂದು?


ದೇವನೆಂದೂ ನನ್ನ ಕಂಗಳಿಗೆ ಕಂಡಿಲ್ಲ ತಾನು!

ಬೇರಾವುದೋ ಲೋಕದಲಿ ಕುಳಿತಿರುವನೇನು?

ಈ ಬಾನು, ಬುವಿ, ತಾರೆ ಚಂದ್ರರನು ನಮಗಿತ್ತು

ನಮ್ಮಿಂದ ಮರೆಯಾಗಿ ಅಡಗಿಕೊಂಡಿಹನೇನು?


ಪ್ರಿಯನೆಂದ ಪ್ರಿಯೆಗೆ "ನನ್ನೆದೆಯಲೇ ಮನೆಮಾಡಿರುವೆ ನೀನು,

ನೀ ಕೇಳು ನಿನಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧ ನಾನು!"

ಪ್ರಿಯೆಯೆಂದಳು, "ನಿನ್ನೆದೆಯ ಗೂಡಿನಲಿ ತೋರು ನನ್ನ ನನಗೆ"

ಏಕೋ, ಏನೋ, ಅಂದಿನಿಂದ ಅವಳ ಕಣ್ಣಿಗೆ ಕಂಡಿಲ್ಲ ಅವನು!


ಕೊಡುವವನೇ ದೇವ ಕಾಯುವವನೇ ತಂದೆ

ಅನ್ನವಿತ್ತವಳೇ ತಾಯಿ ಬೇಕಿನ್ನೇನು ಮುಂದೆ?

ಜತೆಯಲಿರುವವರೇ ಬಂಧು ಬಳಗವು

ಬುವಿಯ ತನುಜಾತರೆಲ್ಲರೂ ಒಂದೇ ಒಂದೇ!




ನೀನಿಲ್ಲದ ಬದುಕು

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||

ಕನಕದೇಹಿ ವೃತ್ತ

ಮುರಳಿ ಮಾಧವನೆ ಕರುಣ ಸಾಗರನೆ ಚರಣ ತೋರಿಸೆನೆಗೇ|

ವರದ ವೇದಗಳ ಅಸುರ ಬಂಧನವ ಬಿಡಿಸೊ ಮೀನತನುನೀ|

ಸುರರ ಜೋಳಿಗೆಗೆ ಕೊಡಲು ಜೀವಸುಧೆ ಪಡೆದೆ ಕೂರ್ಮಜನುಮಾ|

ಪೊರೆದೆ ಭೂಮಿಯನು ಶರಧಿಯಾಳದಲಿ ಮೆರೆದೆ ಸೂಕರಮುಖಾ|


ಪಡೆದೆ  ಸಿಂಹನರ ಜನುಮ ರಕ್ಕಸನ ಉದರ ಸೀಳಿಬಿಡಲೂ|

ನಡೆದೆ ಮೂರಡಿಯ ಬಲಿಯ ಭೂತಳಕೆ ತುಳಿದು ನೂಕಿಬಿಡಲೂ|

ಬಿಡದೆ ಭೂಸುರರ ತರಿದು ಕೊಲ್ಲುತಲಿ ಪರಶು ಬೀಸುತಿರಲೂ|

ನಡೆದೆ ಕಾಡಿನಲಿ ಪಿತನ ಮಾತುಗಳ ಗೌರವ ಕಾಪಿಡುತಲೀ|


ನರರ ಭಾಗ್ಯದಲಿ ಬರೆದೆ ಗೀತೆಯನು ಮೆರೆದೆ ವೇದಗಳನೂ|

ಪರರ ಕಷ್ಟಗಳ ಅಳಿಸಿ ದಮ್ಮವನು ಮೆರೆದೆ ಬದ್ಧತೆಯಲೀ|

ಅರಿವು ಬಿಟ್ಟವರ ತರಿದು ಅಟ್ಟಲಿಕೆ ಯುಗದ ಕಲ್ಕಿಪುರುಷಾ|

ಗುರುವೆ ಉದ್ಧರಿಸು ಕೊಡುತ ಮೋಕ್ಷವನು ಮನುಜ ಜನ್ಮಗಳಿಗೇ|

ಬಣ್ಣದ ಚಿಟ್ಟೆ (ಶಿಶುಗೀತೆ)

ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ, 

ಚೆಂದವು ನಿನ್ನ ಬಣ್ಣದ ಬಟ್ಟೆ! 

ಕೆಂಪು, ಹಳದಿ, ನೀಲಿ, ಹಸಿರು, 

ಹೋಳಿ ಹಬ್ಬವು ತುಂಬಾ ಜೋರು!


ಚಿಟ್ಟೆ ಚಿಟ್ಟೆ ಹಾರುವ ಚಿಟ್ಟೆ, 

ಹಾರುತ ನೀನು ಎಲ್ಲಿಗೆ ಹೊರಟೆ? 

ಮೇಲೆ ಕೆಳಗೆ ಏತಕೆ ಹಾರುವೆ? 

ಹೂವಿನ ಮೇಲೆ ಏತಕೆ ಕೂರುವೆ? 


ಹೂವಲಿ ಏನನು ಹೀರುವೆ ನೀನು? 

ಅದರಲಿ ಇದೆಯೇ ಸಿಹಿ ಸಿಹಿ ಜೇನು? 

ಸಿಹಿ ಸಿಹಿ ಸಕ್ಕರೆ ಕೊಡುವೆನು ಬಾ, 

ಗಡಿಬಿಡಿ ಮಾಡದೆ ಸುಮ್ಮನೆ ಬಾ! 


ಬಂದರೆ ನಿನ್ನ ಜೊತೆಯಲಿ ಆಡುವೆ, 

ಹಾರುವ, ಓಡುವ, ಮರಗಳ ನಡುವೆ!

ಆಡಲು ನಿನಗೆ ಗೊಂಬೆಯ ಕೊಡುವೆ, 

ಬೇರೆ ಬಣ್ಣದ ಬಟ್ಟೆಯ ತೊಡಿಸುವೆ! 


ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ, 

ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ! 


Friday, March 12, 2021

ಬೆಳಕಿನ ಚೆಂಡು

 ಅಮ್ಮಾ ಅಮ್ಮಾ ಬಾರಮ್ಮ, 

ಆಗಸದಲ್ಲೇನಿದೆ ನೋಡಮ್ಮ!


ಹೊಳೆಯುವ ಚೆಂಡು, 

ಬಿಳಿ ಬೆಳಕಿನ ಗುಂಡು,

ಮೊಲದ ಚಿತ್ರ ಇದೆಯಮ್ಮ, 

ಆಡಲು ಬೇಕು ನೀಡಮ್ಮ! 


ಅಂಗಳದಲ್ಲೂ ಕಾಣುವುದು, 

ಹಿತ್ತಲಲೂ ಜೊತೆ ಓಡುವುದು,

ನಾನೊಬ್ಬನಿದ್ದರೆ ಸಾಕಂತೆ, 

ಆಡಲು ಜೊತೆಯು ಬೇಕಂತೆ! 


ಅಯ್ಯೋ ಅಮ್ಮಾ ಇಲ್ನೋಡು, 

ಬೆಳಕಿನ ಚೆಂಡಿನ ಈ ಪಾಡು! 

ಅಯ್ಯೋ ಪಾಪ ನೀರಲಿ ಬಿದ್ದಿದೆ, 

ಚಳಿಯಲಿ ನಡಗುತ ನನ್ನನೇ ಕರೆದಿದೆ! 


ನೀರಿಂದ ಮೇಲೆ ಎತ್ತೋಣ, 

ಬಿಸಿ ಬಿಸಿ ಶಾಖ ನೀಡೋಣ,

ಕುಡಿಯಲು ಹಾಲು ನೀಡೋಣ, 

ಜೊತೆಯಲಿ ಆಟ ಆಡೋಣ! 

Tuesday, March 2, 2021

ಗಡಿಯ ಗೊಡವೆ ನೀಗೋಣ

 ಗಡಿಗಳು, ಗಡಿಗಳು, ಬೇಡದಾ ಬೇಲಿಗಳು,

ಸಂಘರ್ಷವ ಹುಟ್ಟಿಸುವ ಗಟ್ಟಿ ಬೇರುಗಳು!


ಸಂಕುಚಿತ ಮನಸಿನ ಫಲಗಳೇ ಗಡಿಗಳು,

ಎದ್ದಿವೆ ಎಲ್ಲೆಲ್ಲೂ ಕೃತಕ ಗೋಡೆಗಳು!

ಗಡಿಯಿರುವ ಎಲ್ಲಡೆಯೂ ಸಂಘರ್ಷ ಖಚಿತ,

ಪಾಪದ ಜನರಿಗೆ ಸಂಕಷ್ಟ ಉಚಿತ!


ದೇಶಗಳ ಗಡಿಗಳಲಿ ಯೋಧರದೇ ಬಲಿದಾನ.

ರಾಜ್ಯದ ಗಡಿಗಳಲಿ ಭಾಷೆಯದೇ ಪ್ರಾಧಾನ್ಯ!

ಜಾತಿ, ಧರ್ಮದ ಗಡಿಗಳು ಮನಸುಗಳ ನಡುವೆ!

ಶಾಂತಿ, ಸಹನೆ ಪಾಠಗಳ, ಯಾರಿಗಿದೆ ಗೊಡವೆ?


ಬಾನಿಗೆಲ್ಲಿದೆ ಗಡಿಯು, ಗಾಳಿಗೆಲ್ಲಿದೆ ಗಡಿಯು?

ಹತ್ತಿ ಉರಿಯುವ ಅಗ್ನಿಗೆಲ್ಲಿಹುದು ಗಡಿಯು?

ಪ್ರಳಯದ ಪ್ರವಾಹವ ತಡೆವುದಾವ ಗಡಿಯು?

ಭೂತಾಯ ಪ್ರೀತಿಗೆ ಎಲ್ಲಿಹುದು ಗಡಿಯು?


ದೇವ ದೇವನಿಗಿಲ್ಲ ಯಾವುದೇ ಗಡಿಯು

ಎಲ್ಲರ ದೇಹಗಳೂ ಅವನ ನಿಜ ಗುಡಿಯು

ನನ್ನ ನಿನ್ನ ಅವನ ನಡುವೆ ಬೇಕೆ ಗಡಿಯು?

ವಸುದೈವ ಕುಟುಂಬವು ಅಲ್ಲವೇ ಈ ಜಗವು!


ದೇವ ನೀಡದ ಗಡಿಯ ಗೊಡವೆ ನೀಗೋಣ,

ನಾವೆ ಕಟ್ಟಿದ ಬೇಲಿಗಳ ಕಿತ್ತು ಎಸೆಯೋಣ!

ಒಡೆದು ಹಾಕುವ ಗೋಡೆಗಳ ಗಡಿಯಿಲ್ಲದಂತೆ,

ಸ್ನೇಹದ ಗಾಳಿಯಾಡಲಿ ಎಲ್ಲೆಡೆ ತಡೆಯಿಲ್ಲದಂತೆ!