
ನಿಸರ್ಗ ತಾಯ ಮಕ್ಕಳಿವರು
ತುಂಟರು, ತುಡುಗರು,
ಪುಂಡಾಟದಲಿ ಮಗ್ನರು,
ಮೊಂಡಾಟದಲಿ ಶ್ರೇಷ್ಠರು!
ಮಾತೆ ಇತ್ತ ಊಟದಲ್ಲಿ,
ವಿಷವ ಬೆರೆಸಿಕೊಂಡರು.
ದಾಹ ನೀಗೋ ನೀರಿನಲ್ಲಿ,
ಕಸವ ಕಲೆಸಿಕೊಂಡರು.
ಮನಬಂದಂತೆ ಆಡುವರು,
ಪರಿಣಾಮಗಳ ನೋಡರು.
ಆಟ ಆಡುತಲೇ ತಾಯ,
ಎದೆಗೆ ಲಗ್ಗೆಯಿಟ್ಟರು!
ತಾವೇ ಒಡೆಯರೆಂದು ಭ್ರಮಿಸಿ,
ಎಲ್ಲೆ ಮೀರಿ ಕುಣಿದರು,
ಮಾತೆ ಇತ್ತ ಸೂಚನೆಗಳ,
ಧಿಕ್ಕರಿಸಿ ನಡೆದರು.
ಅಗೋ ಗುಮ್ಮ ಎಂದಳು,
ಹೆದರಲಿಲ್ಲ ಮಕ್ಕಳು.
ಕೆಂಗಣ್ಣ ಬಿಟ್ಟಳು,
ಬೆದರಲಿಲ್ಲ ಮಕ್ಕಳು!
ಎನೂ ತೋಚದಾಗಿ ಅವಳು,
ಪಾಠ ಕಲಿಸೆ ಬಯಸಿದಳು.
ಕೊರೋನಾ ಗುಮ್ಮನವಳು,
ಛೂ ಎಂದು ಬಿಟ್ಟಳು!



