Wednesday, May 6, 2020

ಪುಂಡ ಮಕ್ಕಳು























ನಿಸರ್ಗ ತಾಯ ಮಕ್ಕಳಿವರು
ತುಂಟರು, ತುಡುಗರು,
ಪುಂಡಾಟದಲಿ ಮಗ್ನರು,
ಮೊಂಡಾಟದಲಿ ಶ್ರೇಷ್ಠರು!

ಮಾತೆ ಇತ್ತ ಊಟದಲ್ಲಿ,
ವಿಷವ ಬೆರೆಸಿಕೊಂಡರು.
ದಾಹ ನೀಗೋ ನೀರಿನಲ್ಲಿ,
ಕಸವ ಕಲೆಸಿಕೊಂಡರು.

ಮನಬಂದಂತೆ ಆಡುವರು,
ಪರಿಣಾಮಗಳ ನೋಡರು.
ಆಟ ಆಡುತಲೇ ತಾಯ,
ಎದೆಗೆ ಲಗ್ಗೆಯಿಟ್ಟರು!

ತಾವೇ ಒಡೆಯರೆಂದು ಭ್ರಮಿಸಿ,
ಎಲ್ಲೆ ಮೀರಿ ಕುಣಿದರು,
ಮಾತೆ ಇತ್ತ ಸೂಚನೆಗಳ,
ಧಿಕ್ಕರಿಸಿ ನಡೆದರು.

ಅಗೋ ಗುಮ್ಮ ಎಂದಳು,
ಹೆದರಲಿಲ್ಲ ಮಕ್ಕಳು.
ಕೆಂಗಣ್ಣ ಬಿಟ್ಟಳು,
ಬೆದರಲಿಲ್ಲ ಮಕ್ಕಳು!

ಎನೂ ತೋಚದಾಗಿ ಅವಳು,
ಪಾಠ ಕಲಿಸೆ ಬಯಸಿದಳು.
ಕೊರೋನಾ ಗುಮ್ಮನವಳು,
ಛೂ ಎಂದು ಬಿಟ್ಟಳು!

Sunday, May 3, 2020

ನಗುವ ನೀರಾಜನ

ನಿನ್ನ ನಯನದಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?

ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ.

ನವವಧುವಿನೊಲು ನಗುವು ನಾಚಿದೆ,
ನಲ್ನುಡಿಗೆ ನಳಿನ, ನಗುತ ನಕ್ಕಿದೆ.
ನಳನಳಿಸುವ ನಯನದ್ವಯಗಳು,
ನಗೆಯ ನಾದವ ನುಡಿಸಿವೆ.

ನಗೆಯ ನಗವ ನನಗಿತ್ತು ನಲ್ಲೆ,
ನನ್ನ ನಗುವನು ನಗಿಸು ನೀ!
ನನ್ನ ನಗುವಿನ ನರ್ತನವಿಲ್ಲಿ,
ನಿನ್ನ ನಗುವಿನ ನೆರಳಲಿ!

ನನ್ನ ನಗುವಿಗೆ, ನಿನ್ನ ನಗುವಿಗೆ,
ನಕ್ಕು ನಲಿಯಲಿ ನಿಕೇತನ.
ನಮ್ಮ ನಗುವಿಗೆ ನಿಷ್ಪತ್ತಿಯಾಗಲಿ,
ನೂರು ನಗೆಗಳ ನೀರಾಜನ!

Friday, May 1, 2020

ಎರಡು ನೂಲು

ಋಣಧನಗಳ, ಪಾಪಪುಣ್ಯಗಳ,
ನೂಲೆರಡು ಹೆಣಿಕೆಯ ಲೋಕವಿದು!

ಹೊಳೆವ ಚಿನ್ನವೋ?
ಮಸಣದ ಬೂದಿಯೋ?
ಋಣಧನಗಳ ಜೋಡಣೆಯ,
ಕಥೆಯಲ್ಲವೇನು?

ಲಕ್ಷ್ಮೀಕಾಂತನೋ?
ದರಿದ್ರನಾರಾಯಣನೋ?
ಪಾಪಪುಣ್ಯಗಳು,
ತಂದ ವ್ಯತ್ಯಾಸವೇನೋ?!

ನೂಲೆರಡಾದರೂ,
ಹೆಣಿಕೆಯ ಕ್ಲಿಷ್ಟತೆ,
ಬಿಡಿಸಲಾಗದ ಗಂಟು,
ನಮಗಿಲ್ಲ ಸ್ಪಷ್ಟತೆ.

ಅರಿಯಹೋದಂತೆಲ್ಲ,
ಹೆಚ್ಚುವುದು ಗೋಜಲು,
ಅರಿತಿದ್ದು ಕೇವಲ,
ಅಷ್ಟೋ, ಇಷ್ಟೋ!

ಈ ಹೆಣಿಕೆಯಲ್ಲಡಗಿದೆ,
ನಾವರಿಯದ ರಹಸ್ಯ,
ಸಮಯಾಕಾಶಗಳ ರಂಗದಲಿ,
ಆಡುತಿದೆ ಲಾಸ್ಯ!

ಸಮಯದ ಗೊಂಬೆಗಳು,
ನಾವೇನು ಬಲ್ಲೆವು?
ಸೃಷ್ಟಿರಹಸ್ಯದ ಕಗ್ಗಂಟಲಿ,
ಸಿಕ್ಕಿಬಿದ್ದಿಹೆವು!

Thursday, April 30, 2020

ನಮಗಿನ್ನಾರು?













ಹುಟ್ಟಿಸಿದ ದೇವನು,
ಹುಲ್ಲು ಮೇಯಿಸನಂತೆ!
ಶಾಸ್ತ್ರ ಹೇಳುವುದಕ್ಕೆ,
ಬದನೇಕಾಯಿ ತಿನ್ನುವುದಕ್ಕೆ!

ದೇವರಿಗೂ ತಿಳಿಯದಲ್ಲ,
ನಮ್ಮ ವ್ಯಥೆಯ ಕಥೆಯು!
ಇನ್ನಾರು ಬರುವರು, ಬಂದು
ಕಣ್ಣೀರ ಒರೆಸುವರು?

ಹುಲ್ಲೂ ಇಲ್ಲ ತಿನ್ನಲು,
ಬೊಗಸೆ ನೀರಿಲ್ಲ ಕುಡಿಯಲು.
ದೇವರೇ ಕೈಬಿಟ್ಟ ಹಾಗಿದೆ,
ಆಧಾರ ಇನ್ನು ನಮಗೇನಿದೆ?

ಪ್ರತಿದಿನದ ಗಳಿಕೆಯಲಿ,
ತುತ್ತು ನಾಲ್ಕು ಹೊಟ್ಟೆಯಲಿ,
ಬದುಕ ಬಂಡಿಯ ಗಾಲಿ,
ತಿರುಗುತ್ತಿತ್ತು, ಮುಂದೆ ಸಾಗುತ್ತಿತ್ತು.

ಯಾರೋ ಸೋಂಕಿತರಾದರೆ,
ನಮ್ಮ ಹೊಟ್ಟೆಗೇಕೆ ಬರೆ?
ಮಾರಿಯು ರಂಗಕ್ಕಿಳಿದರೆ,
ನಮ್ಮ ಜೀವನಕ್ಕೇಕೆ ತೆರೆ?

ಬಂದಿದ್ದರೆ ಸೋಂಕು ನಮಗೂ,
ಇರುತ್ತಿತ್ತೇನೋ ಬೆಲೆ  ನಮ್ಮ ದನಿಗೂ,
ಕೇಳುತ್ತಿತ್ತೇನೋ ನಮ್ಮದೂ ಕೂಗು!
ಸಿಗುತ್ತಿತ್ತೇನೋ ಅನ್ನ ಕೊನೆಗೂ!



Wednesday, April 29, 2020

ಕಾಲಚಕ್ರ



















ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನಯ ಪ್ರಿಯಚಕ್ರ.
ವಿಕಾರಿಯ ಮಾಡಿ ಹಸಿಮುದ್ದೆ,
ಶಾರ್ವರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಿಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ! 

ಮಹಾಯುದ್ಧ
















ಕತ್ತಿ ಗುರಾಣಿಗಳಿಲ್ಲ,
ಆದರೂ ಇದು ಯುದ್ಧ!
ಮದ್ದು ಗುಂಡುಗಳಿಲ್ಲ,
ಆದರೂ ಇದು ಯುದ್ಧ!

ಹೊರಗೆ ಓಡಾಡದಿರು,
ಇದು ಮಹಾಯುದ್ಧ!
ವ್ಯಕ್ತಿ ಸ್ವಾತಂತ್ರ್ಯವೆನದಿರು,
ಇದು ಮಹಾಯುದ್ಧ!

ಬರಿಗಣ್ಣಿಗೆ ಕಾಣದ ವೈರಿ,
ಯಾರದೋ ಬೆನ್ನೇರಿ ಬರಬಹುದು!
ಕರುಣೆಯೇ ಇಲ್ಲದ ಮಾರಿ,
ಯಾರನ್ನೇ ಬಲಿ ಹಾಕಬಹುದು!

ಸೋತು ತಲೆ ಬಾಗಿದರೂ ನಿಲ್ಲದು,
ಕಥೆಯ ಮುಗಿಸದೇ ಬಿಡದು!
ಮರಣ ಮೃದಂಗವ ಬಾರಿಸುತ್ತ,
ಹುರುಪಲಿ ಮುಂದೆ ಸಾಗುವುದು!

ಸಾಬೂನೇ ಕತ್ತಿ, ಮುಸುಕೇ ಗುರಾಣಿ,
ನಮ್ಮೆಲ್ಲರ  ಆತ್ಮರಕ್ಷಣೆಗೆ!
ವೈದ್ಯನೇ ಸೈನಿಕ, ಔಷಧಿಯೇ ಗುಂಡು,
ಆಸ್ಪತ್ರೆಯ ರಣರಂಗಕೆ!

ಕೂಡು ಮನೆಯಲಿ, ಬೇಡು ದೇವರನು,
ಎಲ್ಲರ ಜೀವ ಉಳಿಯಲಿ ಎಂದು,
ಜಿದ್ದಿನ ಯುದ್ಧ ಮುಗಿಯಲಿ ಎಂದು,
ವೈರಿ ಸರ್ವನಾಶವಾಗಲಿ ಇಂದು!

Tuesday, April 28, 2020

ಅಕ್ಷಯ






















ಅಕ್ಷಯ ಅಕ್ಷಯ ಅಕ್ಷಯ
ಆಸೆಗಳಿಂದು ಅಕ್ಷಯ

ದೇವರ ತಲಪುವ ಮೊರೆಗಳು ಅಕ್ಷಯ.
ಪಾದಕೆ ಬೀಳುವ ಕಾಣಿಕೆ ಅಕ್ಷಯ!

ಪತಿಯನು ಕಾಡುವ ಬೇಡಿಕೆಗಳಕ್ಷಯ.
ಮಕ್ಕಳ ಕೋರಿಕೆ ತೀರದ ಅಕ್ಷಯ!

ರಾಜಕಾರಣಿಗಳ ದಾಹವು ಅಕ್ಷಯ.
ಕುರ್ಚಿಯ ಮೇಲಿನ ಮೋಹವು  ಅಕ್ಷಯ!

ವ್ಯಾಪಾರಿಗಳ ಲೋಭವು ಅಕ್ಷಯ.
ದಲ್ಲಾಳಿಗಳ ಲಾಭವು ಅಕ್ಷಯ.

ನಿಲ್ಲಲಿ ಇಂದೇ, ಬೇಡುವ ಅಕ್ಷಯ,
ಆಗಲಿ ಇಂದು, ನೀಡುವ ಅಕ್ಷಯ!

ಆಗಲಿ ಕರುಣೆ, ಪ್ರೇಮಗಳಕ್ಷಯ,
ಆಗಲಿ ರೀತಿ, ನೀತಿಗಳಕ್ಷಯ,

ಅಕ್ಷಯವಾಗಲಿ ಕೊಡುಗೆ,
ಅಕ್ಷಯವಾಗಲಿ ಮುನ್ನಡೆಗೆ!