Thursday, February 11, 2021

ಪ್ರೇಮಪಯಣ (ಭೋಗಷಟ್ಪದಿ)

ಏನು ಹೇಳು ಮನದ ನುಡಿಯ

ಜೇನ ಸಿಹಿಯು ನಿನ್ನ ಹೃದಯ

ನಾನು ನೀನು ಬೆಸೆವ ನಮ್ಮ ಬದುಕ ಕೊಂಡಿಯ! 

ಬಾನು ಸೇರಿ ತಾರೆ ಮೀರಿ

ಯಾನ ಮಾಡಿ ಗಡಿಯ ದಾಟಿ

ಗಾನ ಪಾಡಿ ಲಯದಿ ನಡೆಸು ಬದುಕ ಬಂಡಿಯ! 


ಇದ್ದರಿರಲಿ ಗಾಳಿ ಸುದ್ದಿ

ಬದ್ಧ ನಾವು ನಮ್ಮ ನುಡಿಗೆ

ಶುದ್ಧ ಮನದ ಪ್ರೇಮ ಗೀತೆ ನಾವು ಹಾಡುವ!

ಇದ್ದರಿರಲಿ ಕೊಂಕು ನುಡಿಯು

ಹದ್ದುಮೀರಿ ಜಂಟಿಯಾಗಿ

ಗೆದ್ದು ನಾವು ಬಾಳ ಪಂದ್ಯ ಗುರಿಯ ಸೇರುವ! 

Tuesday, February 2, 2021

ಪಾಪನಾಶಿನಿ (ಭಾಮಿನಿ ಷಟ್ಟದಿ)

 ಹರಿದು ಬಂದೆಯ ಗಂಗೆ ತಾಯೇ 

ಹರಿಯ ಚರಣದ ಕಮಲದಿಂದಲೆ 

ಹರನ ಜಟೆಯನು ಸೇರಿ ನಿಂದಿಹೆ ದಿವ್ಯಪಾವನಿಯೇ!

ಪರರ ಪಾಪವ ತೊಳೆಯಲೆಂದೇ 

ಹರಿಹರರ ತಾಕುತಲಿಳಿದೆ ನೀ 

ಪರಮ ಪಾವನಿ ನಮಗೆ ಸದ್ಗತಿ ನೀಡಲೋಸುಗವೇ!


ಕಪಿಲ ಮುನಿಗಳ ಶಾಪ ತೊಳೆಯಲು

ನೃಪ ಭಗೀರಥ ಕರೆದ ಧರಣಿಗೆ

ಶಪಿತ ಪಿತೃಗಳಿಗಾಗಿ ಬಂದರು ಪೊರೆದೆ ಭಕ್ತರನು!

ನೃಪನ ತಪಸಿಗೆ ಫಲವು ದೊರಕಿತು 

ತಪಿತ ಧರಣಿಗೆ ಮೋಕ್ಷ ಸಿಕ್ಕಿತು

ದಿಪುತ ಜಲದ ಹೊನಲು ಬುವಿಯಲಿ ಹರಿದರಿದು ನಲಿದಿದೆ!


ಇಳಿದೆ ಪಾವನ ಮಾಡೆ ಬುವಿಯನು

ಕಳೆದೆ ಜನಗಳ ಪಾಪಗಳನೇ

ಬಳಿಗೆ ಬಂದರೆ ಮಮತೆಯಿಂದಲೆ ತಂಪನೆರೆವೇ ನೀ

ಜಳಕ ಮಾಡಲು ನಿನ್ನ ಮಡಿಲಲಿ

ಪುಳಕ ನಮ್ಮಯ ಮನಸು ದೇಹವು

ಕೊಳಕು ಕಳೆದಿಹ ಭಾವ ನಮ್ಮಲಿ ಪುಣ್ಯ ಪಡೆದಿಹೆವು

ದೇವಗಂಗೆ

ಇಳಿದು ಬಂದೆ ಗಂಗೆ ತಾಯೇ

ಹರಿಯ ಚರಣ ಕಮಲದಿಂದ

ಶಿವನ ಜಟೆಯ ಸೇರಿ ನಿಂದೆ ದಿವ್ಯ ಪಾವನೀ!

ನಮ್ಮ ಪಾಪ ತೊಳೆಯಲೆಂದೇ

ಹರಿಹರರ ತಾಕಿ ಬುವಿಗೆ ಬಂದೆ

ಪಾಪನಾಶಿನಿ ನಮಗೆ ಸದ್ಗತಿ ನೀಡಲೋಸುಗ!


ಕಪಿಲ ಮುನಿಗಳ ಶಾಪ ತೊಳೆಯೆ

ಜೀವದುಂಬಲು ಭಗೀರಥನಾ

ಪಿತರಿಗೋಸುಗೆ ಬಂದೆಯಾದರೂ ಪೊರೆದೆ ಎಮ್ಮನು!

ನಮಿಪೆ ತಾಯೇ ನಮ್ಮ ಕಾಯೇ

ಪಾಪ ನಾಶಿನಿ ಪುಣ್ಯದಾಯಿನಿ

ವರವ ನೀಡುವ ದೇವ ಕನ್ಯೆಗೆ ತಲೆಯ ಬಾಗುವೆ!


ಅಲಕನಂದೆಯೆ ಭೋಗವತಿಯೇ

ಬಾರೆ ಭಾಗೀರಥಿಯೆ ಜಾಹ್ನವಿ

ದೇವಗಂಗೆ ಗಿರಿಮಂಡಲಗಾಮಿನಿ ನಮನ ನಿನಗೆ!

ವಿಷ್ಣುಪಾದೀ ನರಕಭೀತಿಹೃತೇ

ದೇವಭೂತಿ ಹರಶೇಖರಿಯೇ

ಭಾಗ್ಯವತೀ ವರನದಿ ನಮಸ್ತೆ ನಮೋನಮಃ!

Thursday, January 28, 2021

ಚಂಚಲ ಮನಸ್ಸು

 ಊಸರವಳ್ಳಿ, ಊಸರವಳ್ಳಿ,

ಬಣ್ಣವ ಬದಲಿಸೊ ಕಳ್ಳಿ, ಮಳ್ಳಿ!

ನಿಮಿಷಕೆ ಒಂದು, ಚಣಕೆ ಒಂದು,

ಬಣ್ಣವು ಈ ಮನಸಿನ ಬಂಧು!


ಪಾತರಗಿತ್ತಿ, ಪಾತರಗಿತ್ತಿ,

ಹೂವಿಂದ ಹೂವಿಗೆ ಹಾರುತ್ತಿ!

ಆಕಡೆ, ಈಕಡೆ ಹಾರು ಬೇಡ,

ಮನಸೇ ನಿಲ್ಲು ನೀ ಒಂದು ಕಡೆ!


ಮನಸೇ ನೀನು ತಂಪಿನ ಗಾಳಿ,

ಆಗುವೆ ಆಗಾಗ ಸುಂಟರಗಾಳಿ!

ತಲ್ಲಣಗೊಳಿಸಿ, ತಪ್ಪನು ಮಾಡಿಸಿ,

ಬಿರುಗಾಳಿ ಎಬ್ಬಿಸುವೆ ಬಾಳಿನಲಿ!


ಬೆಣ್ಣೆಯು ನೀನೇ, ಬಂಡೆಯು ನೀನೇ,

ಕೋಪದ ಬೆಂಕಿಯ ಉಂಡೆಯು ನೀನೇ!

ಕರುಣೆಯು ನೀನೇ, ಧರಣಿಯು ನೀನೇ!

ಸಹಸ್ರ ಮುಖದ ಮಾಯೆಯೂ ನೀನೇ!

Tuesday, January 26, 2021

ಅನ್ನವ ನೀಡುವ ಸೌಭಾಗ್ಯ

 ಎದ್ದು ಬಂದನೋ ಮೂಡಣ ವಿಕ್ರಮ,

ಚಾಲನೆ ಕೊಟ್ಟನು ಬದುಕಿಗೆ ಸಕ್ರಮ!


ಕೋಳಿಯು ಕೂಗಿದೆ ಹಿತ್ತಲಲಿ,

ಗುಬ್ಬಿಯ ಚಿಲಿಪಿಲಿ ಕಿವಿಗಳಲಿ!

ನೇಗಿಲು ಏರಿತು ಹೆಗಲನ್ನು,

ಭೂಮಿಯು ನೀಡಿತು ವರವನ್ನು!


ಹಸಿ ಹಸಿರಿನ ಪೈರು ಕಣ್ಣಿಗೆ ತಂಪು,

ಮೂಗನು ತಲುಪಿದೆ ಮಣ್ಣಿನ ಕಂಪು!

ಜುಳು ಜುಳು ಹರಿದಿದೆ ಕಾಲುವೆ ನೀರು,

ಸಂತಸದಲಿ ಕುಣಿದಾಡಿದೆ ಪೈರು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!


Saturday, January 23, 2021

ಬಾಲ್ಯದ ನೆನಪು (ಶರಷಟ್ಪದಿ)

 ಹಿಂದಿನ ದಿನಗಳ,

ಚೆಂದದ ನೆನಪಿನ,

ಬಂದಿದೆ ಸುಂದರ ಮೆರವಣಿಗೆ!

ಅಂದದ ವಯಸಿನ,

ಸುಂದರ ಸಂತಸ,

ಗಂಧದ ಕಂಪಿನ ನೆನಪುಗಳು!


ಮರಗಳ ಹತ್ತುತ,

ಕೆರೆಯಲಿ ಮೀಯುತ,

ಮರೆತೆವು ಸಮಯವ ದಣಿವಿರದೆ!

ಉರಿಯುವ ಬಿಸಿಲಲಿ

ಕರೆಯಲು  ಮಾತೆಯ

ಕೊರಳಿನ ದನಿಗೇ ಬೆದರಿದೆವು!


೪|೪|

೪|೪|

೪|೪|೪|-

೪|೪|

೪|೪|

೪|೪|೪|-

ವಾಸವಿ ಮಾತೆ

ವಾಸವೀ ಮಾತೆ ಬಾರಮ್ಮ ಹರಸಮ್ಮ ನೀ

ವೈಶ್ಯರಾ ವರವು ನೀನಮ್ಮ ||ಪ||


ಕುಸುಮ ಶ್ರೇಷ್ಠಿಯ ಪುತ್ರಿಯು ನೀನು

ಕುಸುಮಾಂಬಿಕೆಯ ಕಣ್ಮಣಿ ನೀನು |

ಕುಸುಮ ಕೋಮಲೇ ಕುಮಾರಿ ಬಾರೇ

ವಸುಧೆಯ ಕಂದರ ತಪ್ಪದೆ ಕಾಯೇ ||೧||

 

ಪೆನುಗೊಂಡೆಯಲಿ ಜನ್ಮವ ಪಡೆದೆ

ಅನುಜನ ಜೊತೆಜೊತೆಯಾಗಿ ಬೆಳೆದೆ |

ತನುಮನ ಬಾಗಿಸಿ ನೇಮದೆ ಭಜಿಸುವೆ

ಜನುಮವ ಸಾರ್ಥಕವಾಗಿಸೆ ಬೇಗ ||೨||

 

ಆದಿಶಕ್ತಿಯ ಅಂಶವು ನೀನು

ಆದಿಗುರುವಿನ ಶಂಕರಿ ನೀನು |

ಕಾದಿಹೆ ನಾನು ನಿನ್ನಯ ಕರುಣೆಗೆ

ಛೇದಿಸು ಎನ್ನಯ ಕರ್ಮವ ತಾಯೇ ||೩||

 

ಅಂಕೆ ಇಲ್ಲದೆ ಭಾಗ್ಯವ ಕೊಟ್ಟು

ಶಂಕೆ ಇಲ್ಲದ ಮನಸನು ನೀಡು |

ಸಂಕಟ ಹರಿಸು ಸಂತಸ ಹರಿಸು

ಬೆಂಕಿಯಿಲ್ಲದ ಬದುಕನು ಹರಸು ||೪||


ವಿಶ್ವರೂಪವ ತೋರುತ ಬಾರೆ

ಆಶ್ವಮನವನು ಹಿಡಿತಕೆ ತಾರೆ |

ನಶ್ವರ ಬದುಕಿಗೆ ದಾರಿಯ ತೋರುತ

ಈಶ್ವರನೆಡೆಗೆ ಮನವನು ಸೆಳೆಯೇ ||೫||


("ಭಾಗ್ಯದಾ ಲಕ್ಷ್ಮೀ ಬಾರಮ್ಮ" ಕೀರ್ತನೆಯ ಧಾಟಿಯಲ್ಲೇ ಹಾಡಬಹುದಾದ ಹಾಡು)