Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?









No comments: