ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?
ಕನ್ಯೆ ಬೇಕೆನುವಾಭರಣದಲಂಕಾರ |
ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ
ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||
ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?
ಶಕ್ತ ಚೌಕಟ್ಟಿನಲ್ಲನುಭಾವ ಹೊಂದಿ |
ರಕ್ತಮಾಂಸಗಳಿರುವ ಜೀವಂತ ಗೊಂಬೆಯದು
ಭಕ್ತನಾಗಿಹೆ ನಾನು ಪರಮಾತ್ಮನೆ ||೭||
ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ
ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |
ಇಂದು ಆ ಕಗ್ಗವೇ ದಿಕ್ಸೂಚಿ ಬದುಕಲಿಕೆ
ಸಂದೇಹ ಎಲ್ಲಿಹುದು ಪರಮಾತ್ಮನೆ ||೮||
ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ
ಮುಕ್ತಕವನೋದಿದರೆ ತಲೆ ತೂಗಬೇಕು |
ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು
ಮುಕ್ತಮನ ಶರಣೆನಲಿ ಪರಮಾತ್ಮನೆ ||೯||
ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು
ವಾಸುದೇವನ ಕೃಪೆಯು ಜೊತೆಯಾಗಬೇಕು |
ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ
ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ ||೧೦||