Thursday, April 30, 2020

ನಮಗಿನ್ನಾರು?













ಹುಟ್ಟಿಸಿದ ದೇವನು,
ಹುಲ್ಲು ಮೇಯಿಸನಂತೆ!
ಶಾಸ್ತ್ರ ಹೇಳುವುದಕ್ಕೆ,
ಬದನೇಕಾಯಿ ತಿನ್ನುವುದಕ್ಕೆ!

ದೇವರಿಗೂ ತಿಳಿಯದಲ್ಲ,
ನಮ್ಮ ವ್ಯಥೆಯ ಕಥೆಯು!
ಇನ್ನಾರು ಬರುವರು, ಬಂದು
ಕಣ್ಣೀರ ಒರೆಸುವರು?

ಹುಲ್ಲೂ ಇಲ್ಲ ತಿನ್ನಲು,
ಬೊಗಸೆ ನೀರಿಲ್ಲ ಕುಡಿಯಲು.
ದೇವರೇ ಕೈಬಿಟ್ಟ ಹಾಗಿದೆ,
ಆಧಾರ ಇನ್ನು ನಮಗೇನಿದೆ?

ಪ್ರತಿದಿನದ ಗಳಿಕೆಯಲಿ,
ತುತ್ತು ನಾಲ್ಕು ಹೊಟ್ಟೆಯಲಿ,
ಬದುಕ ಬಂಡಿಯ ಗಾಲಿ,
ತಿರುಗುತ್ತಿತ್ತು, ಮುಂದೆ ಸಾಗುತ್ತಿತ್ತು.

ಯಾರೋ ಸೋಂಕಿತರಾದರೆ,
ನಮ್ಮ ಹೊಟ್ಟೆಗೇಕೆ ಬರೆ?
ಮಾರಿಯು ರಂಗಕ್ಕಿಳಿದರೆ,
ನಮ್ಮ ಜೀವನಕ್ಕೇಕೆ ತೆರೆ?

ಬಂದಿದ್ದರೆ ಸೋಂಕು ನಮಗೂ,
ಇರುತ್ತಿತ್ತೇನೋ ಬೆಲೆ  ನಮ್ಮ ದನಿಗೂ,
ಕೇಳುತ್ತಿತ್ತೇನೋ ನಮ್ಮದೂ ಕೂಗು!
ಸಿಗುತ್ತಿತ್ತೇನೋ ಅನ್ನ ಕೊನೆಗೂ!



Wednesday, April 29, 2020

ಕಾಲಚಕ್ರ



















ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನಯ ಪ್ರಿಯಚಕ್ರ.
ವಿಕಾರಿಯ ಮಾಡಿ ಹಸಿಮುದ್ದೆ,
ಶಾರ್ವರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಿಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ! 

ಮಹಾಯುದ್ಧ
















ಕತ್ತಿ ಗುರಾಣಿಗಳಿಲ್ಲ,
ಆದರೂ ಇದು ಯುದ್ಧ!
ಮದ್ದು ಗುಂಡುಗಳಿಲ್ಲ,
ಆದರೂ ಇದು ಯುದ್ಧ!

ಹೊರಗೆ ಓಡಾಡದಿರು,
ಇದು ಮಹಾಯುದ್ಧ!
ವ್ಯಕ್ತಿ ಸ್ವಾತಂತ್ರ್ಯವೆನದಿರು,
ಇದು ಮಹಾಯುದ್ಧ!

ಬರಿಗಣ್ಣಿಗೆ ಕಾಣದ ವೈರಿ,
ಯಾರದೋ ಬೆನ್ನೇರಿ ಬರಬಹುದು!
ಕರುಣೆಯೇ ಇಲ್ಲದ ಮಾರಿ,
ಯಾರನ್ನೇ ಬಲಿ ಹಾಕಬಹುದು!

ಸೋತು ತಲೆ ಬಾಗಿದರೂ ನಿಲ್ಲದು,
ಕಥೆಯ ಮುಗಿಸದೇ ಬಿಡದು!
ಮರಣ ಮೃದಂಗವ ಬಾರಿಸುತ್ತ,
ಹುರುಪಲಿ ಮುಂದೆ ಸಾಗುವುದು!

ಸಾಬೂನೇ ಕತ್ತಿ, ಮುಸುಕೇ ಗುರಾಣಿ,
ನಮ್ಮೆಲ್ಲರ  ಆತ್ಮರಕ್ಷಣೆಗೆ!
ವೈದ್ಯನೇ ಸೈನಿಕ, ಔಷಧಿಯೇ ಗುಂಡು,
ಆಸ್ಪತ್ರೆಯ ರಣರಂಗಕೆ!

ಕೂಡು ಮನೆಯಲಿ, ಬೇಡು ದೇವರನು,
ಎಲ್ಲರ ಜೀವ ಉಳಿಯಲಿ ಎಂದು,
ಜಿದ್ದಿನ ಯುದ್ಧ ಮುಗಿಯಲಿ ಎಂದು,
ವೈರಿ ಸರ್ವನಾಶವಾಗಲಿ ಇಂದು!

Tuesday, April 28, 2020

ಅಕ್ಷಯ






















ಅಕ್ಷಯ ಅಕ್ಷಯ ಅಕ್ಷಯ
ಆಸೆಗಳಿಂದು ಅಕ್ಷಯ

ದೇವರ ತಲಪುವ ಮೊರೆಗಳು ಅಕ್ಷಯ.
ಪಾದಕೆ ಬೀಳುವ ಕಾಣಿಕೆ ಅಕ್ಷಯ!

ಪತಿಯನು ಕಾಡುವ ಬೇಡಿಕೆಗಳಕ್ಷಯ.
ಮಕ್ಕಳ ಕೋರಿಕೆ ತೀರದ ಅಕ್ಷಯ!

ರಾಜಕಾರಣಿಗಳ ದಾಹವು ಅಕ್ಷಯ.
ಕುರ್ಚಿಯ ಮೇಲಿನ ಮೋಹವು  ಅಕ್ಷಯ!

ವ್ಯಾಪಾರಿಗಳ ಲೋಭವು ಅಕ್ಷಯ.
ದಲ್ಲಾಳಿಗಳ ಲಾಭವು ಅಕ್ಷಯ.

ನಿಲ್ಲಲಿ ಇಂದೇ, ಬೇಡುವ ಅಕ್ಷಯ,
ಆಗಲಿ ಇಂದು, ನೀಡುವ ಅಕ್ಷಯ!

ಆಗಲಿ ಕರುಣೆ, ಪ್ರೇಮಗಳಕ್ಷಯ,
ಆಗಲಿ ರೀತಿ, ನೀತಿಗಳಕ್ಷಯ,

ಅಕ್ಷಯವಾಗಲಿ ಕೊಡುಗೆ,
ಅಕ್ಷಯವಾಗಲಿ ಮುನ್ನಡೆಗೆ!

Sunday, April 26, 2020

ಬಂಗಾರದ ಮನುಷ್ಯ


ಮುತ್ತಿನಂಥ ಮಾತ ನೀ ಬಲ್ಲೆ,
ತಾಳಕ್ಕೆ ತಕ್ಕಂತೆ  ನೀ ಕುಣಿದೆ ,
ನಮ್ಮ ಅದೃಷ್ಟವೋ ಏನೋ,
ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ!

ಹಾಲಿನಂಥ ಕನ್ನಡವನ್ನು,
ಜೇನಿನಂಥ ಕಂಠದಲ್ಲಿ ಬೆರೆಸಿ,
ಸಿಹಿಯ ಕನ್ನಡದ ಸವಿನುಡಿಯ,
ಸುಧೆಯನ್ನು ಉಣಬಡಿಸಿದೆ!

ಒತ್ತಡಗಳಿಗೆ ಮಣಿಯಲಿಲ್ಲ,
ರಾಜಕಾರಣಕೆ ಇಳಿಯಲಿಲ್ಲ,
ಕನ್ನಡವೊಂದೇ ಸಾಕೆಂದೆ,
ನೆಚ್ಚಿನ ರಾಜಕುಮಾರನಾದೆ!


ಕನ್ನಡಕ್ಕೋಸ್ಕರ ಹೋರಾಡಿದ,
ರಣಧೀರ ಕಂಠೀರವ ನೀನು!
ಸಂಪತ್ತಿಗೆ ಸವಾಲೆಸೆದ,
ಬಹದ್ದೂರ್‌ ಗಂಡು ನೀನು!

ಬೀದಿ ಬಸವಣ್ಣನೆಂದರು,
ಚೂರಿ ಚಿಕ್ಕಣ್ಣನೆಂದರು,
ತಲೆ ಕೆಡಸಿಕೊಳ್ಳದೆ ಆದೆ,
ನೀ ದೇವತಾ ಮನುಷ್ಯ!

ನಮ್ಮ ಕನ್ನಡ ನಾಡಿನಲ್ಲಿ,
ಮತ್ತೊಮ್ಮೆ ಹುಟ್ಟಿ ಬಾ,
ಬಂಗಾರದ ಮನುಷ್ಯನೇ,
ಕಾಯುತಿದೆ ಗಂಧದಗುಡಿ!

Saturday, April 25, 2020

ಆತ್ಮಾವಲೋಕನ



ದೇವರು ಕರಣಾ ಮೂರ್ತಿ,
ಸೋಲಲು ಬಿಡನು ಪೂರ್ತಿ.
ಮುಚ್ಚಿದರೆ ಹೋಗುವ ದಾರಿ,
ತೋರುವ ಬೇರೆ ರಹದಾರಿ.

ಮುಚ್ಚಿ ಮನೆಯ ಬಾಗಿಲನು,
ತೆರೆಯೋಣ ಮನದ ಕದವನ್ನು.
ಹೊರಗಿನ ಕೆಲಸವ ಮರೆತು,
ಚಿಂತಿಸೋಣ ಒಳಗಿನ ಕುರಿತು.

ಹೊರಗಿನ ಓಟದ ಓಘದಲಿ,
ಆಗಿದೆ ಸ್ವವಿಮರ್ಶೆಯ ಬಲಿ.
ಕುಳಿತು ಚಿಂತಿಸೊ ಸುಸಮಯ,
ಮತ್ತೆ ಸಿಗುವುದೇ ಈ ಸಮಯ?

ನೆನೆದು ಹಿಂದಿನ ನಡೆನುಡಿಯ,
ಗುರುತಿಸಿ ಮಾಡಿದ ಗಡಿಬಿಡಿಯ,
ಸಂಭಾಷಿಸಿ ಒಳಗಿನ ಗೆಳೆಯನೊಡೆ,
ತಿದ್ದೋಣ ನಮ್ಮ ತಪ್ಪು ನಡೆ.

ಉಳಿಯಲಿ, ಬೆಳೆಯಲಿ ಸಂಬಂಧ,
ಬಿಗಿಯಾಗಲಿ ಪ್ರೀತಿಯ ಅನುಬಂಧ.
ನಗುನಗುವ ನಲಿವ ಕುಟುಂಬಗಳು,
ದೇಶದ ಆಧಾರ ಸ್ತಂಭಗಳು!


Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?