Friday, July 29, 2022

ಮುಕ್ತಕಗಳು - ೩೦

ಬಂಧುಗಳು ಇವರೇನು? ಮತ್ಸರದ ಮೂಟೆಗಳು

ಕಂದಕಕೆ ಬಿದ್ದವಗೆ ಕಲ್ಲು ಹೊಡೆಯುವರು |

ಚಂದದಲಿ ಸಂಬಂಧ ತೂಗಿಸಲು ಒಲ್ಲದಿರೆ

ಬಂಧುತ್ವವೆಲ್ಲಿಹುದು ಪರಮಾತ್ಮನೆ ||೧೪೬||


ಕಲ್ಲಿನೊಲು ಎದೆಯಿರಲು ದೂರ ಸರಿಯುವರೆಲ್ಲ

ಮುಳ್ಳಿನೊಲು ಮನವಿರಲು ಮಾತನಾಡಿಸರು

ಜೊಳ್ಳುಮಾತಿಗೆ ಬೆಲೆಯ ನೀಡುವವರಾರು? ಹೂ

ಬಳ್ಳಿಯಂತಿರಬೇಕು ಪರಮಾತ್ಮನೆ ||೧೪೭||


ಅನುಭವದೆ ಮಾಗಿರಲು ಅರಿವಿನಿಂ ತುಂಬಿರಲು

ಹಣತೆಗಳ ಹಚ್ಚುವಾ ಮನದಾಸೆಯಿರಲು |

ಘನಪಾದವನು ಬಿಡದೆ ಹಿಡಿ ಪಾಠಕಲಿಯಲೀ

ತನಗಿಂತ ಗುರುವೆಲ್ಲಿ ಪರಮಾತ್ಮನೆ ||೧೪೮||


ಗಾನಕ್ಕಿಹುದು ಮೈಮರೆಸುವ ಸನ್ಮೋಹಕತೆ

ಜೇನಿನೊಲು ಸವಿಯಿಹುದು ಚುಂಬಕದ ಸೆಳೆತ |

ಗಾನ ಪಲ್ಲವಿ ರಾಗ ತಾಳಗಳು ಔಷಧವು

ಮಾನಸಿಕ ಶಮನಿಕವು ಪರಮಾತ್ಮನೆ ||೧೪೯||


ವಿಪರೀತ ಮನಗಳೊಡೆ ಗೆಳೆತನವು ತರವಲ್ಲ

ಅಪವಿತ್ರ ಸಂಬಂಧ ಸಂದೇಹ ನಿತ್ಯ |

ಅಪನಂಬಿಕೆಯ ಬಿತ್ತಿ ದಮನಕರು ಕರಟಕರು

ಕಪಟವನೆ ಎಸಗುವರು ಪರಮಾತ್ಮನೆ ||೧೫೦||

ಮುಕ್ತಕಗಳು - ೨೯

ಧರೆಯಲ್ಲಿ ಬಾಳುವುದ ಕಲಿಯುವಾ ಮುನ್ನವೇ

ಪುರವನ್ನು ಕಟ್ಟುವುದೆ ಚಂದಿರನ ಮೇಲೆ |

ಹೊರಗೆಲ್ಲೊ ಕಾಲಿಟ್ಟು ಎಡವುವಾ ಮುನ್ನವೇ

ಧರಣಿಯಲಿ ಬದುಕೆ ಕಲಿ ಪರಮಾತ್ಮನೆ ||೧೪೧||


ದುಃಖವನು ನುಂಗುವಳು ಅನುದಿನವು ಅಮ್ಮ ತಾನ್

ದುಃಖದನಲವು ದಹಿಸುತಿಹುದು ಒಡಲಿನಲಿ |

ಯಃಕಶ್ಚಿತ್‌ ನೋವು ಕಾಣದು ನಗುಮೊಗದಲಿ, ಅಂ

ತಃಕರಣವೆನೆ ಅಮ್ಮ ಪರಮಾತ್ಮನೆ ||೧೪೨||


ವಿಜ್ಞಾನ ನೀಡುತಿದೆ ಭೌತಿಕದ ಜ್ಞಾನವನು

ವಿಜ್ಞಾನಿಯತಿಯಾಸೆ ವಿಧ್ವಂಸಕಾರಿ |

ಅಜ್ಞಾನ ಕಳೆಯುತಿದೆ ಆಧ್ಯಾತ್ಮ ಜ್ಞಾನವನು 

ಸುಜ್ಞಾನ ಬೇಕಿಂದು ಪರಮಾತ್ಮನೆ ||೧೪೩||


ನಿನ್ನ ನೀ ತಿಳಿವದಿದೆ ಮುನ್ನಡೆಯ ಸಾಧಿಸಲು

ಕನ್ನಡಿಯು ತೋರುವುದು ನಿನ್ನನೇ ನಿನಗೆ |

ಮಣ್ಣಿನಾ ದೇಹವನು ನೋಡಿದರೆ ಫಲವಿಲ್ಲ

ಕನ್ನಡಿಯ ಹಿಡಿ ಮನಕೆ ಪರಮಾತ್ಮನೆ ||೧೪೪||


ಇರುವೆಯೆಂದರೆ ಶಿಸ್ತಿರುವ ಸಿಪಾಯಿಯ ತೆರದಿ

ಕೊರತೆಯೇನಿಲ್ಲ ಮುಂದಾಲೋಚನೆಗೂ |

ಮರೆಯದೆಂದೂ ತನ್ನವರ ಕೂಡಿಬಾಳುವುದ

ಇರುವೆಯಿಂ ಕಲಿವುದಿದೆ ಪರಮಾತ್ಮನೆ ||೧೪೫||

ಮುಕ್ತಕಗಳು - ೨೮

ಗುರುವಾದ ಶಕುನಿ ತಾ ಗಾಂಧಾರಿ ಪುತ್ರನಿಗೆ

ಹರಿಯೆ ಗುರುವೆಂದ ಬಕುತಿಯಲಿ ಅರ್ಜುನನು |

ಗುರುತರವು ಗುರುಪಾದವನರಸುವ ಕಾರ್ಯವದು

ಸರಿಗುರುವು ಕೈವಲ್ಯ ಪರಮಾತ್ಮನೆ ||೧೩೬||


ಅನ್ನವನು ಉಣ್ಣುತಿರೆ ಅನ್ನದಾತನ ನೆನೆಸು

ನಿನ್ನ ಭೂಮಿಗೆ ತಂದ ಜನ್ಮದಾತರನು |

ತನ್ನಾತ್ಮದೊಂದು ಭಾಗವನಿತ್ತವನ ನೆನೆಸು

ಉನ್ನತಿಗೆ ಮಾರ್ಗವದು ಪರಮಾತ್ಮನೆ ||೧೩೭||


ಮೊಳೆತು ಮರವಾಗಲಿಕೆ ತಂತ್ರಾಂಶ ಬೀಜದಲಿ

ಬೆಳೆದು ಮಗುವಾಗೊ ತಂತ್ರ ಭ್ರೂಣದಲ್ಲಿ |

ಕೊಳೆತು ಮಣ್ಣಲಿ ಕಲೆವ ಸೂತ್ರ ನಿರ್ಜೀವದಲಿ

ಅಳೆದು ಇಟ್ಟವರಾರು ಪರಮಾತ್ಮನೆ ||೧೩೮||


ಬೇಡು ದೇವರನು ನಿನಗಾಗಿ ಅಲ್ಲದೆ, ಪರರ

ಕಾಡುತಿಹ ನೋವುಗಳ ಕೊನೆಗಾಣಿಸಲಿಕೆ |

ಓಡಿ ಬರುವನು ದೇವ ನಿಸ್ವಾರ್ಥ ಕೋರಿಕೆಗೆ

ತೀಡುವನು ನಿನ ಕರುಮ ಪರಮಾತ್ಮನೆ ||೧೩೯||


ದೇವರೆಂದರೆ ಕಾವ ದೊರೆ, ಕೋರಿಕೆಗೆ ಪಿತನೆ?

ಜೀವಸಖ, ಅರಿವ ಕೊಡುವಂಥ ಗುರುವೇನು? |

ಜೀವಿಯೊಳಿರುವ ಆತ್ಮ, ಸರ್ವಶ ಕ್ತನೆ, ಯಾರು?

ನಾವು ಭಾವಿಸಿದಂತೆ ಪರಮಾತ್ಮನೆ ||೧೪೦||

Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||

ಮುಕ್ತಕಗಳು - ೨೬

ಹದ್ದಿರದ  ಹಯಗಳೊಲು ಪಂಚೇಂದ್ರಿ ಯಗಳಿರಲು

ಬಿದ್ದಿಹುದು ಕಡಿವಾಣ ಮನವೆಂಬ ಹಿಡಿತ |

ಬುದ್ಧಿಯೇ ಕಡಿವಾಣ ಹಿಡಿದೊಡೆಯನಲ್ಲವೇ

ಬುದ್ಧಿಗಿಷ್ಟರಿವ ತಾ ಪರಮಾತ್ಮನೆ  ||೧೨೬||


ಅನುದಿನವು ಸಿಗುತಿಹುದು ಹೊಸದೊಂದು ದಿನವೆಮಗೆ

ಚಣಚಣವು ಕರಗುತಿದೆ ದಕ್ಕಿರುವ ದಿನವು |

ಕನಸಿನಲಿ ಕಳೆಯದೆಲೆ ಅತಿಮುಖ್ಯ ಚಣಗಳನು

ಇನಿತಿನಿತು ಕಲಿಯೋಣ ಪರಮಾತ್ಮನೆ ||೧೨೭||


ಸೇವೆಯನು ಮಾಡುತ್ತ ದಾದಿಯರು ಬೆಂದಿಹರು

ಸಾವುನೋವುಗಳ ದಿನನಿತ್ಯ ನೋಡುತಲಿ |

ಜೀವಕ್ಕೆ ಸೋದರಿಯು ವೈದ್ಯರಿಗೆ ಬಲದಕೈ

ನೋವಿರದಿರಲವರಿಗೆ ಪರಮಾತ್ಮನೆ ||೧೨೮||


ಕರಿನೆರಳ ಮುಷ್ಟಿಯಲಿ ನಮ್ಮ ಭೂಲೋಕವಿರೆ

ಬಿರುಗಾಳಿ ಬೀಸಿ ದೇಹಗಳು ಧರೆಗುರುಳೆ

ಗಿರಿಧರನ ಕರುಣೆಯೇ ರಕ್ಷಣೆಗೆ ಸಾಧನವು

ಮೊರೆಯಿಡುವೆ ಕಾಪಾಡು ಪರಮಾತ್ಮನೆ ||೧೨೯||


ಉಕ್ಕಿ ಬಂದರೆ ಕೋಪ ಹಿತಬಯಸುವವರಲ್ಲಿ

ಸೊಕ್ಕು ತೋರದೆ ಬಾಯಿಮುಚ್ಚೆರಡು ಘಳಿಗೆ |

ಸಿಕ್ಕಿ ಬೀಳದಿರು ನೀ ತಾಮಸದ ಬಲೆಯಲ್ಲಿ

ನಕ್ಕುಬಿಡು ಗೆದ್ದೆ ನೀ ಪರಮಾತ್ಮನೆ ||೧೩೦||

ಮುಕ್ತಕಗಳು - ೯

ಹಸ್ತವನು ಚಾಚುವೆನು ಸ್ನೇಹಕ್ಕೆ ದಾನಕ್ಕೆ

ವಿಸ್ತರಿಸಲರಿವನ್ನು ಪುಸ್ತಕಕೆ ಶರಣು |

ಮಸ್ತಕವು ಬಾಗುವುದು ದೈವಕ್ಕೆ ಹಿರಿಯರಿಗೆ

ಹಸ್ತಾಕ್ಷರವಿದೆನ್ನ ಪರಮಾತ್ಮನೆ ||೪೧||


ಒಬ್ಬನಿಗೆ ಕೊಟ್ಟೆ ಧನವಧಿಕ ಮಿತಬಲವ ಇ

ನ್ನೊಬ್ಬನಿಗೆ ದುಡಿಯಲಿಕೆ ಅಧಿಕ ತೋಳ್ಬಲವ |

ಇಬ್ಬರೂ ಕೊಟ್ಟುಪಡೆಯುತ ಬಾಳೆ ಜಗದಲ್ಲಿ 

ತಬ್ಬಲಿಗಳಾಗುವರೆ?  ಪರಮಾತ್ಮನೆ ||೪೨||


ಅತಿಧನದ ಮೋಹವದು ಮನಬಿಟ್ಟು ಪೋಗುವುದೆ

ಹಿತವಚನ ಬಂಡೆ ಮೇಗಡೆಯ ಮಳೆಯಾಯ್ತು |

ಸತಿಯು ಜೊತೆಬಿಟ್ಟರೂ ಬಿಡದಿಹುದು ಜೊತೆಯನ್ನು

ಚಿತೆಯನಕ ಬರುವುದೋ ಪರಮಾತ್ಮನೆ ||೪೩||


ನಂಬಿಕೆಯನಿಟ್ಟಿರಲು ಮೋಸಹೋಗುವ ಚಿಂತೆ

ನಂಬಿಕೆಯನಿಡದಿರಲು ಬದುಕುವುದೆ ಬವಣೆ |

ನಂಬಿಕೆಯನಿಡಬೇಕು ನಂಬುತ್ತ ನಿನ್ನನ್ನು

ನಂಬಿ ಕೆಟ್ಟವರಿಲ್ಲ ಪರಮಾತ್ಮನೆ ||೪೪||


ಇಳಿಗೆ ಬಂದಿಳಿದಿರಲು ಹಸಿಹಸಿರ ಹೊಸಹೊನಲು

ನಳನಳಿಸುತಿವೆಯಲ್ಲ ಹೊಸಬಯಕೆ ಚಿಗುರು |

ಕಳೆದುಹೋಗಿರುವಾಗ ಹಳೆನೆನಪಿನೆಲೆಗಳೂ

ತಳಿರುಟ್ಟ ಯುಗದಾದಿ ಪರಮಾತ್ಮನೆ ||೪೫||

ಪ್ರೇಮಲೋಕ (ವಾರ್ಧಕ ಷಟ್ಪದಿ)

ಪಡುವಣದ ದಿನಮಣಿಗೆ ದಣಿವಾಗಿ ದಾಹವಿರೆ

ಕಡಲಿನಲಿ ತಣಿವರಸಿ ಮುಳುಗುಹಾಕುತ್ತಿಹನು

ಕಡುಕೆಂಪಿನಾ ದೇಹ ಸಾಗರವ ತಾಕಿದೊಡೆ ತಂಪಾಗಿ ನಿದ್ರಿಸಿದನು |

ಅಡಗಿದ್ದ ಚಂದಿರನು ಮದವೇರಿ ಬಂದಿಹನು

ಮಡದಿಯರ ಜೊತೆಗೂಡಿ ರಸಸಂಜೆ ಮೋದದಲಿ

ಹುಡುಕಾಟ ಹುಡುಗಾಟ ಸರಸಸಲ್ಲಾಪಗಳು ರಾತ್ರಿಯಲಿ ಸಾಗುತಿಹವು ||

 

ಅಂಬರದ ಹೊಸ ಬೆಳಕು ಬುವಿಯಲ್ಲಿ ಚೆಲ್ಲಿರಲು

ತಂಬೆಳಕು ಕರೆಯುತಿದೆ ಸೆಳೆಯುತ ಪ್ರೇಮಿಗಳ

ಸಂಬಾಳಿಸುತ ಮಾರುತನು ತನುವ ಪುಳಕಿಸುತ ನವಲೋಕ ಸೃಷ್ಟಿಸಿಹನು |

ಅಂಬರದ ಸಂಭ್ರಮವು ಬುವಿಯಲ್ಲಿ ಬಿಂಬಿಸಿದೆ

ಹುಂಬ ಚಂದಿರ ತಾರೆಯರೊಲುಮೆ ಹೊಮ್ಮಿಸಿದೆ

ಚುಂಬಕದ ವಾತಾವರಣ ಬೆರೆಸಿ ಮೋಹದಲೆಯ ರಂಗುಗಳಾಟವ ||