Wednesday, February 8, 2023

ನೀನಿಲ್ಲದೆ...

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||


Tuesday, February 7, 2023

ನಿನ್ನ ನಗು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Sunday, January 8, 2023

ಮುಕ್ತಕಗಳು - ೧೦೦

ನಮ್ಮ ಭಾಗ್ಯವು ಕರ್ಮ ಶ್ರಮಗಳ ಮಿಶ್ರಣವು

ಎಮ್ಮೆಯಂತಿರಬೇಕೆ ಕರ್ಮಕ್ಕೆ ಬಾಗಿ |

ಹೊಮ್ಮಿಸುವ ಶ್ರಮದಿಂದ ಹೊಸತು ಸತ್ಫಲಗಳನು

ಚಿಮ್ಮಿಸುವ ಆನಂದ ~ ಪರಮಾತ್ಮನೆ ||೪೯೬||


ಹೇರಿದರೆ ನಿಮ್ಮಾಸೆಗಳನು ಮಕ್ಕಳಮೇಲೆ

ದೂರದಿರಿ ತೀರದಿರೆ ನಿಮ್ಮ ಬಯಕೆಗಳು |

ಯಾರ ತಪ್ಪದು ಎಣ್ಣೆ ನೀರಿನಲಿ ಕರಗದಿರೆ

ನೀರಿನದೊ? ಎಣ್ಣೆಯದೊ? ~ ಪರಮಾತ್ಮನೆ ||೪೯೭||


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ ||೪೯೮||


ಅನೃತವನು ನುಡಿಯುತ್ತ ಪಡೆದ ಉತ್ತಮ ಪದವಿ

ಜನರ ಹಿಂಸಿಸಿ ಪಡೆದ ಗೌರವಾದರವು |

ಧನವ ಗಳಿಸಿಟ್ಟಿರಲು ಮೋಸದಾ ಹಾದಿಯಲಿ

ಇನನ ಎದುರಿನ ಹಿಮವು ~ ಪರಮಾತ್ಮನೆ ||೪೯೯||


ಎಲ್ಲವನ್ನೂ ನಮಗೆ ಕೊಟ್ಟಿರುವ ಲೋಕಕ್ಕೆ

ಎಳ್ಳಿನಷ್ಟಾದರೂ ಕೊಡಬೇಕು ನಾವು |

ಕಳ್ಳರಾಗುವೆವು ಕೊಡದೆಲೆ ಲೋಕ ತೊರೆದಲ್ಲಿ

ಜೊಳ್ಳು ಜೀವನವೇಕೆ? ~ ಪರಮಾತ್ಮನೆ ||೫೦೦||

ಮುಕ್ತಕಗಳು - ೯೯

ಸಿರಿ ತಾನು ಕೀಲಿಕೈಯಲ್ಲ ಸುಖ ಸಂತಸಕೆ

ಸಿರಿಯಿಂದ ಕೊಳ್ಳಲಾಗದು ಸಂತಸವನು |

ಸಿರಿಯಿರಲು ಸಂತಸದ ಕೀಲಿ ಮಾಡಿಸೆ ಸಾಧ್ಯ

ಸಿರಿಯ ಸರಿ ಬಳಕೆಯದು ~ ಪರಮಾತ್ಮನೆ ||೪೯೧||


ಸಿಕ್ಕರೂ ಸಿಗಬಹುದು ಗೌರವವು ಹಣದಿಂದ

ಸಿಕ್ಕರೂ ಸಿಗಬಹುದು ಅದು ವಿದ್ಯೆಯಿಂದ |

ಸಿಕ್ಕುವುದು ಖಂಡಿತವು ಸತತ ಸನ್ನಡೆತೆಯಿಂ

ಪಕ್ಕವಾದ್ಯಗಳೇಕೆ? ~ ಪರಮಾತ್ಮನೆ ||೪೯೨||


ಕಣ್ಣುಕಿವಿಗಳು ತರುವ ಅರಿವಿನಾ ತುಣುಕುಗಳ

ಮುನ್ನ ಇರಿಸುತ ಮನದ ಉಗ್ರಾಣದಲ್ಲಿ |

ಚೆನ್ನ ಮನನವ ಮಾಡಿ ಬೆಸೆಯುತ್ತ ತುಣುಕುಗಳ

ಚಿನ್ನದಾ ಸರಮಾಡು ~ ಪರಮಾತ್ಮನೆ ||೪೯೩||


ಒಂದು ವೀಣೆಯ ಹಾಗೆ ಮಾನವರ ಸಂಬಂಧ

ಚೆಂದದಾ ನಾದ ಹೊಮ್ಮದಿರಲೇನಿಂದು |

ಬಂಧಗಳ ಕಾಪಾಡು ಮುರಿಯದಾ ತಂತಿಯೊಲು

ಮುಂದಿಹುದು ಸವಿನಾದ ~ ಪರಮಾತ್ಮನೆ ||೪೯೪||


ಹಂಚಬಲ್ಲದು ನಾಲಿಗೆಯು ಸಿಹಿಯ ಅಮೃತವನು

ಹಂಚಬಲ್ಲದದು ಕಹಿ ಹಾಲಾಹಲವನು |

ಕೊಂಚ ಹಿಡಿತವು ಇರಲಿ ಈ ಮರ್ಕಟದ ಮೇಲೆ

ಪಂಚರಲಿ ಪಾತಕಿಯು ~ ಪರಮಾತ್ಮನೆ ||೪೯೫||

ಮುಕ್ತಕಗಳು - ೯೮

ತಿರುಮಲೆಯ ಗೋವಿಂದ ಸಿಹಿರುಚಿಯ ಮಕರಂದ

ಮರಳಿ ದುಂಬಿಗಳು ಸವಿಯುತಿವೆ ಆನಂದ |

ಹರಿದು ಬಕುತಿಯ ಜೇನು ನಲಿದಿಹವು ಮುದದಿಂದ

ಮರೆತು ಕೋಟಲೆಗಳನು ~ ಪರಮಾತ್ಮನೆ ||೪೮೬||


ಅರಿತು ನಡೆಯಲುಬೇಕು ಕೆಲವನ್ನು ಬದುಕಿನಲಿ

ಮರೆತು ನಡೆಯಲುಬೇಕು ಮತ್ತೆ ಕೆಲವನ್ನು  |

ಬೆರೆತು ಬಾಳಲುಬೇಕು ಪ್ರೀತಿಯಿಂ ಎಲ್ಲರಲಿ

ಮರೆತು ಸೇಡಿನ ದಾರಿ ~ ಪರಮಾತ್ಮನೆ ||೩೮೭||


ಗಳಿಸದಿದ್ದರೆ ಏನು ಕೋಟಿ ಸಕ್ರಮವಾಗಿ

ಬೆಳೆಯುವವು ಶಾಂತಿ ನೆಮ್ಮದಿ ಸಂತಸಗಳು  |

ಮೊಳಕೆಯೊಡೆಯುವವು ನಿಸ್ವಾರ್ಥದಾ ಬೀಜಗಳು

ಹುಳುಕಿಲ್ಲದಿಹ ಫಲವು ~ ಪರಮಾತ್ಮನೆ ||೪೮೮||


ಬದಲಿಸುವ ಬಟ್ಟೆಗಳ ಬಗ್ಗೆ ಚಿಂತಿಸಬೇಡ

ಬದಲಿಸಿದೆ ಲಕ್ಷ್ಯವನು  ಎಡೆಬಿಡದೆ ಸಾಗು |

ಮುದದಿ ಮಾಧವ ತಾನು ಬಟ್ಟೆಯನು ತೋರುವನು

ಕದವ ತೆರೆಯುತ ಮನೆಯ ~ ಪರಮಾತ್ಮನೆ ||೪೮೯||


ಬಲ್ಲಿದರು ಪೇಳಿಹರು ಕಿವಿಮಾತು ನೆನಪಿಡಲು

ಕಲ್ಲೆಸೆಯೆ ಕೆಸರಿನಲಿ ಮುಖವೆಲ್ಲ ಮಣ್ಣು |

ನಲ್ಲವರು ಚೇಷ್ಟೆಯನು ಮಾಡದಿರುವರು, ತಮ್ಮ

ಗಲ್ಲಿಯಲಿ ಕೆಸರಿರಲು ~ ಪರಮಾತ್ಮನೆ ||೪೯೦||

ನಲ್ಲವರು = ಉತ್ತಮರು

ಮುಕ್ತಕಗಳು - ೯೭

ನೂರು ಸಂತತಿಯ ಸಂಸಾರಿ ಒಂದೇ ಸುಳ್ಳು

ಯಾರಿರದ ಬ್ರಹ್ಮಚಾರಿಯು ಒಂಟಿ ಸತ್ಯ |

ನೂರು ಸುಳ್ಳಿನ ಬಲೆಯ ಕತ್ತರಿಸುವುದು ಸತ್ಯ

ತೋರಿಸುವ ಸಮಯಕ್ಕೆ ~ ಪರಮಾತ್ಮನೆ ||೪೮೧||


ಉಪಕಾರಿ ಮುಡುಪಿಡುವ ಪರರಿಗೇ ಅವನಧನ

ಕೃಪಣನಾ ಧನ ಕೂಡ ಪರರ  ಸೇರುವುದು |

ಚಪಲತೆಯು ಕಾಡದದು ಈರ್ವರನು ಲವಲೇಶ

ಅಪವಾದ ಇನ್ನೆಲ್ಲ ~ ಪರಮಾತ್ಮನೆ ||೪೮೨||


ಛಡಿಯೇಟು ತಿಂದವನು ಗುರುಗಳಾ ಅಂಕೆಯಲಿ

ಹೊಡೆಸಿಕೊಂಡಿಹ ಮಗನು ತನ್ನ ಪಿತನಿಂದ |

ಕೊಡತಿಯಾ ಏಟು ತಿಂದಿಹ ಹೊನ್ನಿನಾ ತುಂಡು

ತಡೆಯಿರದೆ ಬೆಳಗುವರು ~ ಪರಮಾತ್ಮನೆ ||೪೮೩||

ಕೊಡತಿ = ಸುತ್ತಿಗೆ


ತೊರೆಯಿತಾದರೆ ಮೀನು ನೀರಿನಾಸರೆಯನ್ನು   

ಅರಗುವುದು ಯಾರದೋ ಜಠರಾಗ್ನಿಯಲಿ |

ತೊರೆದೆಯಾದರೆ ಬದುಕಿನಲಿ ನೈತಿಕತೆಯನ್ನು

ಕರಗುವೆಯೊ ಕತ್ತಲಲಿ ~ ಪರಮಾತ್ಮನೆ ||೪೮೪||


ಕರೆಯುತಿದೆ ಕೈಬೀಸಿ ಗೋವಿಂದನಾ ಮಲೆಯು

ಮೆರೆಯುತಿದೆ ಬಕುತಿಯಲೆ ಮಿತಿಯಿಲ್ಲದಂತೆ |

ಹರಿಯುತಿದೆ ಜನಸಾಗರವು ಮಲೆಯ ಮುಚ್ಚುವೊಲು

ಧರೆಯ ಅಚ್ಚರಿಯಿದುವೆ ~ ಪರಮಾತ್ಮನೆ ||೪೮೫||

ಮುಕ್ತಕಗಳು - ೯೬

ಮಕ್ಕಳಾ ಮಾತುಗಳು ಚಿಲಿಪಿಲಿಯ ಇಂಪಂತೆ

ಪಕ್ಕದಲೆ ಅರಳುತಿಹ ಚೆಲುವ ಹೂವಂತೆ |

ಚಿಕ್ಕದಾದರು ಕೂಡ ದೊಡ್ಡ ಹರುಷವನೀವ

ಸಕ್ಕರೆಯ ಗೊಂಬೆಗಳು ~ ಪರಮಾತ್ಮನೆ ||೪೭೬||


ಉತ್ತಮರು ಆಗೋಣ ಇಂದಿಗಿಂತಲು ನಾಳೆ

ಉತ್ತಮರು ಆಗೋಣ ನಮಗಿಂತ ನಾವು |

ಇತ್ತ ಎದುರಾಳಿಗಳು ಬೇರೆ ಯಾರೂ ಅಲ್ಲ

ಕುತ್ತಿರದ ದಾರಿಯಿದು ~ ಪರಮಾತ್ಮನೆ ||೪೭೭||


ಶಿಶುವಾಗುವರು ಜನರು ಆನಂದ ಹೆಚ್ಚಿರಲು

ಪಶುವಾಗುವರು ಅವರೆ ಕ್ರೋಧ ಉಕ್ಕಿರಲು! |

ವಶವಾಗದಿರಬೇಕು ವಿಷಯಗಳ ಹಿಡಿತಕ್ಕೆ

ನಶೆಯು ಮನ ಕೆಡಿಸುವುದು ~ ಪರಮಾತ್ಮನೆ ||೪೭೮||


ವೇಗ ಹೆಚ್ಚಾದಂತೆ ಮಾನವನ ಬದುಕಿನಲಿ

ಸೋಗು ಹೆಚ್ಚಾಗುತಿದೆ ನೀತಿ ಕೊರೆಯಾಗಿ |

ಜೌಗಿನಲಿ ಜಾರುತಿರೆ ಮುನ್ನೆಡವ ಕಾಲುಗಳು

ಜಾಗರೂಕತೆ ಇರಲಿ ~ ಪರಮಾತ್ಮನೆ ||೪೭೯||


ತೇಲದಿರು ಕನಸಿನಲಿ ಸಾಲ ದೊರೆತಿದೆಯೆಂದು

ಸಾಲವೆಂಬುದು ಎರಡು ಮೊನಚಿನಾ ಖಡ್ಗ! |

ಬೇಲಿಯಿಲ್ಲದ ಹೊಲಕೆ ಆನೆ ನುಗ್ಗಿದ ಹಾಗೆ

ಸಾಲ ಮಿತಿಮೀರಿದರೆ ~ ಪರಮಾತ್ಮನೆ ||೪೮೦||