Monday, July 11, 2022

ಮುಕ್ತಕಗಳು - ೧೪

ಧನವನಾಕರ್ಷಿಸುವುದುಂಟು ಧನ ಚುಂಬಕವು

ಧನವು ಬೆಳೆಸುವುದು ಸಂತತಿಯನತಿಶಯದಿ |

ಕೊನೆಗೆ ಹೂತಿಟ್ಟರೂ ಪಡೆಯುವುದು ಮರುಜನುಮ

ಧನಪುರಾಣವಿದುವೇ ಪರಮಾತ್ಮನೆ ||೬೬||


ಕಲಿಯುವುದು ಮುಗಿಯುವುದೆ ಜೀವನದ ಕೊನೆವರೆಗೆ

ಕಲಿಕೆ ಜೀವದ ಸೂಕ್ಷ್ಮ ಸಂಕೇತ ಸಾಕ್ಷಿ |

ಕಲಿವುದೇನಿಲ್ಲದಿರೆ ಬದುಕಲೇನಿದೆ ನಮಗೆ

ಕಲಿಕೆ ನಾಡಿಮಿಡಿತವು ಪರಮಾತ್ಮನೆ ||೬೭||


ವೈರಾಣು ಬಂದಿಹುದು ವೈರಿರೂಪದಲಿಂದು

ಬಾರಿಸುತ ಮರಣಭೇರಿಯ ನಿಲ್ಲದಂತೆ |

ಮೀರಿ ಭೇದಗಳ ಹೋರಾಡಬೇಕಿದೆಯಿಂದು

ತೋರಿಕೆಯು ಸಲ್ಲದದು ಪರಮಾತ್ಮನೆ ||೬೮||


ರಾಜಧರ್ಮವಮರೆತ ದೇಶನಾಶಕರಿವರು

ರಾಜಕೀಯದ ಮುಸುಕು ಧರಿಸಿ ನಿಂದಿಹರು |

ಗಾಜಿನಾ ಮನೆಯಲ್ಲಿ ಕಲ್ಲು ತೂರಾಡಿಹರು

ರಾಜಿಯಾಗಿಹೆವಲ್ಲ ಪರಮಾತ್ಮನೆ ||೬೯||


ತಂಗದಿರ ಬುವಿಗಿತ್ತ ರಜತಮಯ ಕಾಂತಿಯನು

ಚಂಗದಿರನಿತ್ತಿಹನು ಹೊನ್ನಿನಾಭರಣ |

ರಂಗನಾಥನ ಸತಿಗೆ ವೈಭವದಲಂಕಾರ

ಸಿಂಗರದ ಸಂಭ್ರಮವು ಪರಮಾತ್ಮನೆ ||೭೦||

ಮುಕ್ತಕಗಳು - ೧೩

ವೇದದಲಿ ತಿಳಿಸಿರುವ ಸಂಕಲ್ಪ ಪೂಜೆಗಳು

ಹಾದಿಯಲ್ಲವು ಸಾತ್ವಿಕರಿಗಾಗಿ ಮರುಳೆ |

ಕಾದಿರಿಸಿ ನಾರದರು ಪೇಳಿರುವ ಸತ್ಯವಿದು

ನಾದದಲ ಪಸ್ವರವು ಪರಮಾತ್ಮನೆ ||೬೧||


ಸಮತೆಯೆಲ್ಲಿದೆ ಜಗದ ಸೃಷ್ಟಿಯಲಿ ಬಂಧುಗಳೆ

ಸಮತೆ ಬೇಕೆನ್ನದಿರಿ ಮಾನವರ ನಡುವೆ |

ಮಮತೆಯಿರಬೇಕೆಲ್ಲ ಜೀವರಾಶಿಗಳಲ್ಲಿ

ಮಮತೆಸಮ ವಾಗಿರಲಿ ಪರಮಾತ್ಮನೆ ||೬೨||

 

ತಿಂಡುಂಡು ಮಲಗಿದರೆ ಮಂಡೆ ಬೆಂಡಾಗುವುದು

ದಂಡ ಮಾಡಿದ ಸಮಯ ಹಿಂದೆ ಬರಬಹುದೆ |

ದಂಡಿಸಲು ದೇಹವನು ಚೈತನ್ಯ ತುಂಬುವುದು 

ಗುಂಡಿಗೆಗೆ ಮಯ್ಯೊಳಿತು ಪರಮಾತ್ಮನೆ ||೬೩||


ನದಿಯ ಹಾದಿಯ ಬದಲಿಸಲು ಸಾಧ್ಯ ಬುವಿಯಲ್ಲಿ

ಬದಲಿಸಲು ಸಾಧ್ಯವೇ ವಿಧಿವಿಲಾಸವನು |

ಎದೆತಟ್ಟಿ ಪೇಳುವೆ ಶ್ರದ್ಧೆಯಚಲವಿರೆ ನೀ

ಬದಲಿಸುವೆಯೆಮಗಾಗಿ ಪ್ರಮಾತ್ಮನೆ ||೬೪||


ಪ್ರಾರಬ್ಧವೆನೆ ಹಿಂದೆ ನಾ ಮಾಡಿರುವ ಕರ್ಮ

ಯಾರು ಬದಲಿಸಬಲ್ಲರದ ನನ್ನ ಹೊರತು |

ಪಾರಾಯಣ ಧ್ಯಾನ ಸೇವೆ ಲಂಘನದಿಂದ

ಪ್ರಾರಬ್ಧ ಬದಲಿಸುವೆ ಪರಮಾತ್ಮನೆ ||೬೫||

ಮುಕ್ತಕಗಳು - ೧೨

ಯಂತ್ರಗಳ ಮಿತಿ ಮಾನವನ ಮತಿಗೆ ಸೀಮಿತವು

ತಂತ್ರಗಳು ಎಲ್ಲ ಪ್ರಕೃತಿಗೆ ಸೀಮಿತವು |

ಯಂತ್ರಗಳ ತಂತ್ರಗಳ ಮೀರಿಸಿದೆ ಭಕ್ತಿಯಾ

ಮಂತ್ರ ನಿನ್ನ ಪಡೆಯಲು ಪರಮಾತ್ಮನೆ ||೫೬||


ಹೊಸಯುಗವಿದೆನಲೇಕೆ ಕಲಿಗಾಲ ಕಳೆಯಿತೇ

ದೆಸೆಯು ಬದಲಾಗಿ ಶುಕ್ರದೆಸೆ ಬಂದಿಹುದೆ |

ಹೊಸಬಟ್ಟೆ ತೊಟ್ಟೊಡನೆ ತುಸುಬುದ್ಧಿ ಬಂತೇನು

ಹೊಸಮಾತು ಹೇಳಯ್ಯ ಪರಮಾತ್ಮನೇ ||೫೭||


ಬಾಗಿಲಿಗೆ ತೋರಣವು ಹೋಳಿಗೆಗೆ ಹೂರಣವು

ಭಾಗಿಯಾಗಿವೆ ಜೊತೆಗೆ ಬೇವುಬೆಲ್ಲಗಳು |

ತೂಗಿತೊನೆಯುವ ಮಾವು ಹಾಡಿಕುಣಿಯುವ ನಾವು

ಹೀಗಿದೆಯೊ ಯುಗದಾದಿ ಪರಮಾತ್ಮನೆ ||೫೮||


ವ್ಯಕ್ತಿ ಯಾರಾದರೇನವನರಸನಾಗಿರಲಿ

ಶಕ್ತಿ ತುಂಬಿರಲಿ ಬಾಹುಗಳಲ್ಲಿ ಅಧಿಕ |

ಯುಕ್ತಿಯಲಿ ಅತಿಕುಶಲ ಚತುರಮತಿಯಾದರೂ

ಭಕ್ತಿಗೊಲಿಯುವೆ ಮಾತ್ರ ಪರಮಾತ್ಮನೆ ||೫೯||


ಮರದ ಮೇಲಿನ ಹಕ್ಕಿ ಮರಬೀಳೆ ಹೆದರುವುದೆ

ಶರಧಿಯಲಿರುವ ಮೀನು ಜಲವುಕ್ಕಿಬರಲು |

ನೆರೆಯಲ್ಲ ಜಗದಪ್ರಳಯಕು ಹೆದರೆನು ನಿನ್ನ

ಕರತಲದ ರಕ್ಷೆಯಿರೆ ಪರಮಾತ್ಮನೆ ||೬೦||

ಮುಕ್ತಕಗಳು - ೧೧

ಪ್ರಣವವೇ ಪ್ರಥಮ ರವ ಸೃಷ್ಟಿಯಾರಂಭದಲಿ

ಕಣಕಣಕೆ ತಾಯ್ನಾಡಿಯನುಭವವ ನೀಡಿ |

ತಣಿಸಿ ಮನ ತನುವಿಗೀಯ್ವುದು ಮುದದ ಚೈತನ್ಯ

ಮಣಿವೆ ನಾ ಪ್ರಣವಕ್ಕೆ ಪರಮಾತ್ಮನೆ ||೫೧||


ಈಶ್ವರನ ದಯವಿರದೆ ಕಾಗೆ ಕಾಯೆನದು ಜಗ

ದೀಶ್ವರನ ದಯವಿರದೆ ಮೋಕ್ಷವದು ಹೇಗೆ |

ಈಶ್ವರನೆ ಬದುಕಿನಲಿ ಶ್ರೀಚರಣ ಪಿಡಿದಿಹೆನು

ಶಾಶ್ವತದೆಡೆಯ ನೀಡು ಪರಮಾತ್ಮನೆ ||೫೨||


ವೇದಗಳ ಕಾಲದಲಿ ಕಂಡ ನಾರೀಸಮತೆ

ಗಾದೆಗಳ ಕಾಲಕ್ಕೆ ಕಾಣದಾಯ್ತಲ್ಲ |

ಪಾದಗಳ ತೊಳೆದರೂ ನೀಡಿಲ್ಲ ಸಮತೆಯನು

ಭೇದವನಳಿಸಿ ಪೊರೆಯೊ ಪರಮಾತ್ಮನೆ ||೫೩||


ದಾನವರ ಸಂಹರಿಸಲವತಾರಗಳನೆತ್ತಿ

ನೀನವರ ಸಂಹರಿಸಿ ಜಗವನ್ನು ಕಾಯ್ದೆ |

ಮಾನವರೆದೆಯ ದಾನವತೆ ಕಾಣಲಿಲ್ಲವೇ

ನೀನದನು ಮರೆತೆಯಾ ~ ಪರಮಾತ್ಮನೆ ||೫೪||


ಕರ್ಮದಾ ವಿಧಿಯಾಟ ಯಾರಿಗೂ ತಪ್ಪದದು

ಮರ್ಮವನರಿತು ಜರಿಯದಿರು ನೋಯಿಸಿದರೆ |

ಧರ್ಮವನು ಪಾಲಿಸುತ ಕರ್ಮವನು ಸವೆಸುತಿರು

ನಿರ್ಮಲದ ಮನದಿಂದ ~ ಪರಮಾತ್ಮನೆ ||೫೫||


ಮುಕ್ತಕಗಳು - ೧೦

ವಾದಮಾಡಿದರೆ ಫಲವಿಲ್ಲ ಮೂರ್ಖರ ಜೊತೆಗೆ 

ವಾದ ಮಾಡುವುದು ಸಲ್ಲದು ವಿತಂಡಿಯೊಡೆ |

ವಾದ ಮಾಡುವುದು ಗೆಲುವಿಗೆನಲದು ಸರಿಯಲ್ಲ

ವಾದವಿದೆ ಮಂಥನಕೆ ಪರಮಾತ್ಮನೆ ||೪೬||


ಕ್ರೋಧವದು ಮೆರೆವಾಗ ವಾದಕಿಳಿಯುದಿರು ನೀ

ವ್ಯಾಧಿಯನು ಮುಚ್ಚಿಟ್ಟು ರೋಧಿಸಲು ಬೇಡ |

ಸಾಧನೆಗೆ ಗುರಿಯಿಂದ ದೃಷ್ಟಿ ಸರಿಸದೆ ಸದಾ

ಮಾಧವನ ನೆನೆಬೇಕು ಪರಮಾತ್ಮನೆ ||೪೭||


ಕರುಣೆಯಿಲ್ಲದ ಹೃದಯ ಎಣ್ಣೆಯಿಲ್ಲದ ದೀಪ

ಧರಣಿಯಲಿ  ಸಲ್ಲನೀ ದುರುಳದಾ ನವನು |     

ಮರಣದಲಿ ಜೊತೆಯಿಲ್ಲದೊಂಟಿಯಾಗುವನಲ್ಲ

ಕರುಣೆಯಿರೆ ಸಹಬಾಳ್ವೆ ಪರಮಾತ್ಮನೆ ||೪೮||


ಒಳಗಿನಾತ್ಮಕ್ಕಿದೆಯೊ ಕಣ್ಣು ಕಿವಿಯರಿವೆಲ್ಲ

ಬಳಿಯಿದ್ದು ನೋಡುತಿಹ ಸಿಸಿಕ್ಯಾಮೆರವು |

ಒಳಗಿನದು ಮನದ ಹೊರಗಿನದೆಲ್ಲವಚ್ಚಾಗಿ

ತಿಳಿಯುತಿದೆ ನಿನಗೆಲ್ಲ ಪರಮಾತ್ಮನೆ ||೪೯||


ಕಲಿಗಾಲ ಕವಿದಿಹುದು ಸತ್ಯಕ್ಕೆ ಕಾರ್ಮೋಡ

ಲಲನೆಯರಿಗಾಗುತಿದೆ ಶೋಷಣೆಯ ಶಿಕ್ಷೆ |

ಹುಲಿಗಳೇ ತೊಟ್ಟಿಹವು ಗೋಮುಖದ ಮುಖವಾಡ 

ಬಲಿಗಳೇ ಬೇಕೇನು ಪರಮಾತ್ಮನೆ ||೫೦||

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||

ಕೃಷ್ಣಾ ಮುಕುಂದ

 ಕೃಷ್ಣಾ ಮುಕುಂದ ಹೇ ಪರಮಾತ್ಮ,

ಹೇಗೆ ಕರೆದರೂ ನಿನ್ನ ತೃಪ್ತ ನನ್ನಾತ್ಮ!

ನಾಮಮಾತ್ರದಲ್ಲೇ ಜೇನಿನ ಸ್ವಾದವು,

ದರುಶನದಲ್ಲಿ ಏನುಂಟೋ ಭಾಗ್ಯವು!    


ಈ ಬದುಕಲಿ ನಿನ್ನ ಕಾಣುವ ಬಯಕೆ,

ತೋರೋ ದಾರಿಯ ನಿನ್ನಯ ಗಮ್ಯಕೆ.

ವಿಶ್ವರೋಪ ತೋರಿದೆ ಆ ಪಾರ್ಥನಿಗೆ,

ತೋರೋ ನಿನ್ನ ನಿಜ ರೂಪ ಎನಗೆ!


ಆ ಮುರಳಿಯಲಿ ನಿನ್ನ ಉಸಿರು ಹರಿಸಿ ,

ನುಡಿಸಿದೆ ಎದೆಯಾ ಪ್ರೀತಿಯ ಬೆರೆಸಿ!

ಈ ದೇಹದಲಿ ನಿನ್ನ ಉಸಿರು ಸೇರಿಸಿದೆ,

ತೊಗಲು ಬೊಂಬೆಗೆ ಜೀವವ ತುಂಬಿದೆ!


ಈ ಜೀವ ನಿನ್ನದೇ ನಿನ್ನ ದಾಸ ನಾನು,

ನಿನ್ನಯ ಪಾದದ ಸೇವೆ ಕೊಡುವೆಯೇನು?

ನಿನ್ನ ಪಾದದಾಣೆ ಎಂದೂ ಬಿಡೆ ನಾನು,

ನಾಮವ ರೂಪವ ತುಂಬಿಕೊಂಡಿಹೆನು!


ನಿನ್ನ ಕಂಡ ಕೂಡಲೇ ಸಾಕು ಈ ಜೀವನ,

ನಿನ್ನ ಕಂಡ ರಾಧೆಯಂತೆ ಆಯಿತು ಪಾವನ!

ನೀ ಸಾಲ ಕೊಟ್ಟ ಉಸಿರು ಆ ನಿನ್ನ ಪಾದದಲೇ,

ಅರ್ಪಿಸಿ ಸಮರ್ಪಿಸಿ ಲೀನವಾಗುವೆ ನಿನ್ನಲೇ!