Sunday, December 25, 2022

ಮುಕ್ತಕಗಳು - ೮೫

ರಕ್ತದಲಿ ಏನಿದೆಯೊ ಬಂಧವದು ಬಲುಗಟ್ಟಿ

ಶಕ್ತವದು ಮನುಜನ ಸ್ವಾರ್ಥಿಯಾಗಿಸಲು |

ಮುಕ್ತವಾಗದೆ ಸೆಳೆತ ಮುಕ್ತವಾಗದು ಜಗವು

ಉಕ್ತಿಯಲುಳಿಯೆ ಸಾಕೆ? ~ ಪರಮಾತ್ಮನೆ ||೪೨೧||


ಅನ್ನ ವಿದ್ಯೆಗಳು ಸರಕುಗಳು ಆಗಿರದಾಗ

ಚೆನ್ನಿತ್ತು ಜಗವು ನೆಮ್ಮದಿಯ ಕಾಲವದು |

ಇನ್ನವೇ ಸರಕುಗಳು ಆಗಿರಲು ಪೇಟೆಯಲಿ

ಭಿನ್ನವಾಯಿತು ಶಾಂತಿ ~ ಪರಮಾತ್ಮನೆ ||೪೨೨||


ಆಗಸದ ಮೇಘಗಳ ಎತ್ತರದ ಗುರಿಗಳಿರೆ

ಆಗಿರಿಯ ಘನದಷ್ಟು ಯತ್ನವಿರಬೇಕು |

ಸಾಗುತಿರು ನಿಲ್ಲದೆಯೆ ಎಲ್ಲ ಅಡೆತಡೆಗಳಿಗೆ

ಮೇಘ ಸುರಿಸುವುದು ಮಳೆ ~ ಪರಮಾತ್ಮನೆ ||೪೨೩||


ಬುವಿಯಿಂದ ಏಳುತಿವೆ ಹಸಿರಿನಾ ಬುಗ್ಗೆಗಳು

ಅವನಿಯೇ ನೀಡುತಿರೆ ಒಡಲಿನಾ ಸವಿಯ |

ಸವಿಯನೇ ಉಂಡವನು ಹಂಚಿದರೆ ಕಹಿಯನ್ನು

ಇವನ ವಿಷವೆಲ್ಲಿಯದು?! ಪರಮಾತ್ಮನೆ ||೪೨೪||


ಪ್ರತ್ಯೇಕ ಫಲವಿಹುದು ಪ್ರತಿಯೊಂದು ಕರ್ಮಕ್ಕೆ

ಸ್ತುತ್ಯಕರ್ಮವಳಿಸದು ದುಷ್ಟಕರ್ಮಫಲ |

ನಿತ್ಯ ಸುರಿದರೆ ನೀರ ಸುಟ್ಟ ಮರದಾ ಬುಡಕೆ

ಸತ್ಯ, ಫಲವೀಯದದು ~ ಪರಮಾತ್ಮನೆ ||೪೨೫||

ಮುಕ್ತಕಗಳು - ೮೨

ಉಚಿತದಲಿ ದೊರಕಿದರೆ ಕೆಲವೊಂದು ನಮಗೀಗ

ಖಚಿತ ತಿಳಿ ಬೆಲೆ ಪಾವತಿಸಬೇಕು ಮುಂದೆ |

ರಚನೆಯಾಗಿದೆ ಕರ್ಮಸಿದ್ಧಾಂತ ಜಗಕಾಗಿ

ಉಚಿತ ಸಿಗದೇನಿಲ್ಲಿ ~ ಪರಮಾತ್ಮನೆ ||೪೦೬||


ಸಾಯದಿರಿ ಸಾವು ಸನಿಹಕೆ ಬರುವ ಮುನ್ನವೇ

ಕಾಯುದಿರಿ ಬದುಕನ್ನು ಸಂಭ್ರಮಿಸಿ ನಗಲು |

ನೋಯುವುದೆ ನೊಂದವರ ಕಣ್ಣೊರೆಸಿ ನಗಿಸಲಿಕೆ?

ಮಾಯುವುದು ನಮನೋವು ~ ಪರಮಾತ್ಮನೆ ||೪೦೭||


ಮನುಜನಿಗೆ ಸಿಕ್ಕಿಹುದು ಆಲೋಚನೆಯ ಶಕ್ತಿ

ಇನಿಯಾಗಿ ಇಳೆಯಲ್ಲಿ ಬಾಳಿ ತೋರಿಸಲು |

ಕೊನೆಗೊಳ್ಳೆ ಬದುಕದುವೆ ಕಹಿಗಿಂತ ಕಡೆಯಾಗಿ

ಜನಕನದು ತಪ್ಪೇನು ~ ಪರಮಾತ್ಮನೆ ||೪೦೮||

ಇನಿ = ಸಿಹಿ 


ಮನುಜ ಜನುಮದ ನಮಗೆ ಅವಕಾಶಗಳು ಹಲವು

ಕನಸುಗಳ ಬೆನ್ನಟ್ಟಿ ಸಾಧಿಸುವ ಗೆಲುವು |

ಧನಕನಕ ಕೀರ್ತಿ ಪದವಿಗಳ ಬೆಲೆ ತೃಣದಷ್ಟು

ಮನುಜನೊಲು ಬದುಕದಿರೆ ~ ಪರಮಾತ್ಮನೆ ||೪೦೯||


ಹದವಮಾಡುವುದೆಂತು ಬಿರುಕಬ್ಬಿಣದ ಸರಳ,

ತಿದಿಯೊತ್ತದಿರೆ ಬೆಂಕಿಗೆ ಹೆದರಿ ನಿಂತು? |

ಬೆದರುಬೊಂಬೆಗೆ ಹೆದರಿದರೆ ದೊರಕುವುದೆ ಕಾಳು?

ಹೆದರಿದರೆ ಬದುಕಿಹುದೆ? ~ ಪರಮಾತ್ಮನೆ ||೪೧೦||

ಮುಕ್ತಕಗಳು - ೮೧

ಹೊಸದಿನವು ಅನುದಿನವು ಆರಂಭ ಪ್ರತಿದಿನವು

ಹೊಸತು ಅರುಣೋದಯದ ಹೊಸಕಿರಣ ಮೂಡಿ |

ಪಸರಿಸುವ ಬೆಳಕಲ್ಲಿ ಮಾಡು ಹೊಸ ಆರಂಭ

ಹೆಸರ ಜಪಿಸುತ ಅವನ ~ ಪರಮಾತ್ಮನೆ ||೪೦೧||


ದಾನವಿತ್ತೆಯೊ ಸಾಲವನು ತೀರಿಸಿದೆಯೊ ನೀ

ಕಾಣದಾ ವಿಧಿಯ ಲೆಕ್ಕವ ನೀನು ಅರಿಯೆ |

ಜೇನುಗಳು ಪಡೆಯವವೆ ಕೂಡಿಹಾಕಿದುದೆಲ್ಲ

ವೈನಾಗಿ ದುಡಿದರೂ ~ ಪರಮಾತ್ಮನೆ ||೪೦೨||


ಸೊಕ್ಕು ತೊರೆಯಲೆ ಇಲ್ಲ ಅರಿವು ಮೂಡಲೆ ಇಲ್ಲ

ಉಕ್ಕಿ ಬರುತಿಹ ಅಹಮಿಕೆಯ ತಡೆಯಲಿಲ್ಲ |

ಸಿಕ್ಕುವನು ವಿಂಧ್ಯವನೆ ಮಣಿಸಿದವನಂತೊಬ್ಬ

ಪಕ್ಕೆಯಲಿ ತಿವಿದಂತೆ ~ ಪರಮಾತ್ಮನೆ ||೪೦೩||


ಮರಳ ಮೇಗಡೆ ಬರೆದ ಅಕ್ಷರವು ಶಾಶ್ವತವೆ

ಶರಧಿಯಲೆಗಳ ಆಟ ದಡ ಮುಟ್ಟುವನಕ |

ಮರೆಯಾಗು ಮೊದಲು ನಿನ ಹೆಸರು ಕೆತ್ತಿದಮೇಲೆ

ಪುರಜನರ ಎದೆಮೇಲೆ ~ ಪರಮಾತ್ಮನೆ ||೪೦೪||


ಕರುಣೆಯಲಿ ನೆರಳಿತ್ತು ಕಾಪಾಡು ನೊಂದವರ

ಸರಿತಪ್ಪುಗಳ ಚಿಂತೆ ನಂತರದ ಕೆಲಸ |

ಕರುಣೆಯೇ ದೊಡ್ಡದದು ನ್ಯಾಯ ಧರ್ಮಕ್ಕಿಂತ

ಎರೆಕವೇ ನಿಜಧರ್ಮ ~ ಪರಮಾತ್ಮನೆ ||೪೦೫||

ಎರೆಕ = ಕರುಣೆ

Saturday, December 17, 2022

ಮುಕ್ತಕಗಳು - ೮೦

ಫಲಕೊಡದ ಮರವು ಸಹ ಜನಕೆ ನೆರಳಾಗುವುದು

ಗುಲಗಂಜಿ ವಿಷಬೀಜ ತೂಗೊ ಬೊಟ್ಟಾಯ್ತು |

ಕೆಲ ಕುಂದುಕೊರತೆಯಿರೆ ಹಿಂದೆ ಕೂರಲುಬೇಡ

ಕೆಲಸಕ್ಕೆ  ನಿಲ್ಲು ನೀ ~ ಪರಮಾತ್ಮನೆ ||೩೯೬||


ಸಂಪತ್ತು ಅಮಲಂತೆ ಇಳಿಯದದು ಬಹುಬೇಗ

ಜೊಂಪು ತರುವುದು ಅರಿವಿನಾ ಸೂಕ್ಷ್ಮ ಗುಣಕೆ |

ಸಂಪು ಹೂಡುವುದು ಕಿವಿ ಹಿತವಚನ ಕಡೆಗಣಿಸಿ

ಗುಂಪು ತೊರೆಯುವ ಧನಿಕ ~ ಪರಮಾತ್ಮನೆ ||೩೯೭||


ಎಲ್ಲರಿಗೂ ಒಲಿಯದದು ಅಧ್ಯಾತ್ಮ ಜ್ಞಾನವದು

ಕಲ್ಲೆಸದ ಕೊಳದಲ್ಲಿ ತಿಳಿಮೂಡಬೇಕು |

ಬಲ್ಲಿದರ ಸಂಗದಲಿ ಬೆಳಕ ಕಾಣಲುಬೇಕು

ಕಲ್ಲು ಕೊನರುವುದಾಗ ~ ಪರಮಾತ್ಮನೆ ||೩೯೮||


ಆಸೆಗಳು ಆಳಿದರೆ ನಮ್ಮನ್ನು ತಲೆಯೇರಿ

ಗಾಸಿಯಾಗ್ವುದು ಬದುಕು ನೆಲೆಯಿಲ್ಲದಂತೆ |

ಹಾಸಿಗೆಯ ಮೀರದೊಲು ಕಾಲುಗಳ ಚಾಚಿದರೆ

ಆಸೆಗಳು ಕಾಲಿನಡಿ ~ ಪರಮಾತ್ಮನೆ ||೩೯೯||


ಊನವಿರೆ ದೇಹದಲಿ ಅರೆಹೊಟ್ಟೆ ಉಂಡಂತೆ

ಊನವಿರೆ ನಡತೆಯಲಿ ಏನುಹೇ ಳುವುದು?

ಬಾನಿಯಲಿ ತುಂಬಿರಲು ಹೊಗೆಯಾಡೊ ಸಾಂಬಾರು 

ಬೋನಹಳ ಸಿದಹಾಗೆ ~ ಪರಮಾತ್ಮನೆ ||೪೦೦||

ಬಾನಿ = ದೊಡ್ಡ ಪಾತ್ರೆ, ಬೋನ = ಅನ್ನ

ಮುಕ್ತಕಗಳು - ೭೯

ಒಮ್ಮೆ ಮಾಡಿದ ತಪ್ಪ ಮತ್ತೊಮ್ಮೆ ಮಾಡದಿರು

ಸುಮ್ಮನೆಯೆ ಶ್ರಮ ಹಾಳು ಎಲ್ಲವೂ ಹಾಳು |

ಕಮ್ಮು ಹಿಡಿದರೆ ಒಮ್ಮೆ ಬಿಡದಲ್ಲ ಶ್ವಾನವದು

ಹಮ್ಮು ಬಿಡು ಅರಿತು ನಡೆ ~ ಪರಮಾತ್ಮನೆ ||೩೯೧||

ಕಮ್ಮು = ವಾಸನೆ, ಹಮ್ಮು = ಗರ್ವ


ಬಸಿರ ಆಸರೆ ಕೊಟ್ಟು ಬುವಿಗಿಳಿಸಿದಳು ಜನನಿ

ಉಸಿರ ಸಾಲವ ಕೊಟ್ಟು ಬದುಕಿತ್ತಳವನಿ |

ಬಸಿರ ಆಸರೆ ಉಸಿರ ಸಾಲಕ್ಕೆ ಪ್ರತಿಯಾಗಿ

ಮಸಿಯ ಬಳಿಯಲು ಬೇಡ ~ ಪರಮಾತ್ಮನೆ ||೩೯೨||


ಸಹಿಸೆ ಉಳಿಪೆಟ್ಟುಗಳ ಶಿಲೆ ಮೂರ್ತಿಯಾಗುವುದು

ಸಹಿಸದಿರೆ ಕಾಲಡಿಯ ದಾರಿಗಲ್ಲಾಯ್ತು |

ಸಹಿಸಿಕೋ ಕಷ್ಟಗಳ ದೃಢಮನದ ಅಂಕೆಯಲಿ

ಕಹಿ ಕಳೆದು ಸಿಹಿ ಬಹುದು ~ ಪರಮಾತ್ಮನೆ ||೩೯೩||


ಉಸಿರು ನಿಂತರೆ ಏನು ಹೆಸರು ನಿಂತರೆ ಸಾಕು

ಹಸಿರಾಗಿ ಉಳಿಯುವುದು ನೆನಪು ಮಾಸದೊಲು |

ಕಸಿವ ರೋಧನ ಕನಕಗಳನೆಲ್ಲ ಉಳಿದಿರುವ

ಹೆಸರೊಂದೆ ಶಾಶ್ವತವು ~ ಪರಮಾತ್ಮನೆ ||೩೯೪||


ಹುಟ್ಟುತಲೆ ಅತ್ತಾಗ ನಕ್ಕವರು ಬಂಧುಗಳು

ಕೆಟ್ಟು ಅತ್ತಾಗ ನಕ್ಕವರು ಬಂಧುಗಳೆ? |

ಮೆಟ್ಟಿ ಭೇದಗಳ ಕೈಜೋಡಿಸಿರೆ ಬಂಧುಗಳು

ಚಟ್ಟಕ್ಕೆ ಹೆಗಲೀಯೆ ~ ಪರಮಾತ್ಮನೆ ||೩೯೫||

ಮುಕ್ತಕಗಳು - ೭೮

ದುಶ್ಚಟವು ಬೆಳೆಯಲಿಕೆ ಕಾರಣವು ನೂರಿರಲಿ

ನಿಶ್ಚಯವ ಮಾಡಬೇಕಿದೆ ಅದನು ತೊರೆಯೆ |

ಪಶ್ಚಾದ್ವಿವೇಕಕೆಲ್ಲಿದೆ ಸಮಯ ಸರಿಪಡಿಸೆ

ಪಶ್ಚಿಮದ ರವಿ ಹೊರಟ ~ ಪರಮಾತ್ಮನೆ ||೩೮೬||

ಪಶ್ಚಾದ್ವಿವೇಕ = ಕೆಟ್ಟ ಮೇಲೆ ಬಂದ ಬುದ್ಧಿ 


ಕ್ಷಮಿಸಬೇಕಿದೆ ನಮ್ಮ ಎದೆಭಾರ ಹೋಗಿಸಲು

ಕ್ಷಮಿಸಬೇಕಿದೆ ಸುಡುವ ಬೆಂಕಿಯಾರಿಸಲು |

ಕ್ಷಮಿಸುತ್ತ ಉಳಿಸಬೇಕಿಹುದು ಸಂಬಂಧಗಳ

ಕ್ಷಮಿಸಿಬಿಡು ತಡವೇಕೆ ~ ಪರಮಾತ್ಮನೆ || ೩೮೭||


ಬಯಸದಿರು ಪದವಿಯನು ಯೋಗ್ಯತೆಗೆ ಮೀರಿದುದ

ಬಯಸದೇ ಬಂದಿರಲು ಮನವಿಟ್ಟು ಶ್ರಮಿಸು |

ಬಯಸಿದರೆ ಬಯಸು ಭಗವದನುಗ್ರಹವ ಮಾತ್ರ

ಬಯಸುತಿರು ಜನರೊಳಿತ ~ ಪರಮಾತ್ಮನೆ ||೩೮೮||


ಧರ್ಮವೆಂದರೆ ಪೂಜಿಸುವ ಪದ್ಧತಿಯು ಅಲ್ಲ

ಕರ್ತವ್ಯವದು ನಿನ್ನ ಪಾತ್ರಕನುಸಾರ |

ಧರ್ಮ ಮಾತೆಗೆ ಬೇರೆ ಪಿತೃವಿಗೇ ಬೇರೆಯಿರೆ

ಮರ್ಮವನರಿತು ಬಾಳು ~ ಪರಮಾತ್ಮನೆ ||೩೮೯||


ಮಕರಂದ ಹೂವಿನದು ಚಿಟ್ಟೆ ದುಂಬಿಯ ಪಾಲು

ಪಕಳೆಗಳು ಕಣ್ಮನಗಳನು ಮುದಗೊಳಿಸಲು |

ಸಕಲ ಗಂಧಗಳು ಆಸ್ವಾದಕರ ಸ್ವತ್ತಾಯ್ತು 

ವಿಕಲವಾಯಿತೆ ಪುಷ್ಪ? ~ ಪರಮಾತ್ಮನೆ ||೩೯೦||

ಮುಕ್ತಕಗಳು - ೭೭

ಬುವಿಯಲ್ಲಿ ಜೀವನವು ಗೋಜಲಿನ ಗೂಡಂತೆ

ಕಿವಿಮಾತ ಪಾಲಿಸಿರೆ ಸರಳ ಸೋಪಾನ |

ಅವಿರತ ಶ್ರಮ ಸಹನೆ ಅನಸೂಯೆ ಕ್ಷಮೆಗಳಿರೆ

ಸವಿಗೊಳಿಸುವವು ಬದುಕ ~ ಪರಮಾತ್ಮನೆ ||೩೮೧||

ಅನಸೂಯೆ = ಅಸೂಯೆ ಇಲ್ಲದಿರುವುದು


ಬಣ್ಣಗಳು ಏಸೊಂದು ನಮ್ಮ ಭೂಲೋಕದಲಿ

ಕಣ್ಣುಗಳು ಸವಿಯುತಿವೆ ರಸಪಾಕ ನಿತ್ಯ |

ಉಣ್ಣಲೇನಿದೆ ಕೊರೆ ಪ್ರಕೃತಿಯೇ ಅಟ್ಟುತಿರೆ

ಬಣ್ಣಿಸಲು ಸೋತ ಸನೆ ~ ಪರಮಾತ್ಮನೆ ||೩೮೨||

ಅಟ್ಟು = ಅಡುಗೆ ಮಾಡು, ಸನೆ = ನಾಲಿಗೆ


ಸಂತಸವ ಹಂಚಿದರೆ ಸಂತಸವು ಹೆಚ್ಚುವುದು

ಕಂತೆ ಧನ ಹೆಚ್ಚಿಸುವ ಸಂತಸವು ಕ್ಷಣಿಕ |

ಅಂತರಾತ್ಮನ ಅರಿಯೆ ಶಾಶ್ವತದ ಸಂತಸವು

ಚಿಂತೆಯನು ಮರೆಸುವುದು ~ ಪರಮಾತ್ಮನೆ ||೩೮೩||


ದನಿಯಿರದ ಜೀವಿಗಳ ಕಾಡಾಗುತಿದೆ ನಷ್ಟ

ಮನುಜನಾಕ್ರಮಣದಿಂ ಬದುಕುವುದೆ ಕಷ್ಟ |

ವನಜೀವಿ ತಿರುಗಿಬೀಳುವ ಮುನ್ನ ಎಚ್ಚೆತ್ತು

ದನಿಯಾಗು, ಸಹಬದುಕು ~ ಪರಮಾತ್ಮನೆ ||೩೮೪||


ಊರ ದೊರೆಯಾದರೂ ಅಮ್ಮನಿಗೆ ಮಗ ತಾನು

ಕಾರುಬಾರಿರಲೇನು ಗುರುವಿನಾ ಶಿಷ್ಯ |

ಚಾರುಮತಿಯಾದರೂ ಪತಿಯ ನೆರಳಾಗುವಳು

ಜೋರು ಪಾತ್ರದ ಮಹಿಮೆ ~ ಪರಮಾತ್ಮನೆ ||೩೮೫||

ಚಾರುಮತಿ = ಜ್ಞಾನವಂತೆ