Friday, August 5, 2022

ಕರುಣೆಯ ಕಡಲು

ವಿಠ್ಠಲಾ ನೀನು ಕರುಣೆಯ ಕಡಲು, 

ನಿನ್ನಲೆ ಕಂಡೆ ಮಾತೆಯ ಮಡಿಲು! 

ಪಂಢರಪುರದಾ ಭಾಗ್ಯವು ನೀನು, 

ಬಕುತರ ಪಾಲಿನ ನಿಜ ಕಾಮಧೇನು! 


ಪಾಂಡುರಂಗ ವಿಠ್ಠಲಾ ಜಯ ವಿಠ್ಠಲ, 

ನಿನ್ನಯ ನಾಮವೇ ಸವಿ ವಿಠ್ಠಲಾ! 

ತಪ್ಪದೆ ಭಜಿಸುವೆ ನಿನ್ನಯ ನಾಮ, 

ತೋರಿಸು ಎನಗೆ ನಿನ್ನಯ ಧಾಮ! 


ಬದುಕಲಿ ಬೆಂದು ಹಣ್ಣಾಗಿಹೆನು, 

ಅಶ್ರುಧಾರೆಯ ಕಣ್ಣಾಗಿಹೆನು! 

ನಿನ್ನಯ ಪ್ರೀತಿಯ ಆಸರೆ ನೀಡು, 

ವಿಠಲನೆ ಇಂದೇ ಅಭಯವ ನೀಡು! 


ನಿನ್ನಯ ರೂಪವ ಕಣ್ತುಂಬಿಕೊಳುವೆ, 

ನಿನ್ನಯ ನಾಮವ ಎದೆಯಲಿ ತುಂಬುವೆ, 

ಭವ ಬಂಧನವಾ ಬೇಗನೆ ಬಿಡಿಸು, 

ವಿಠಲನೆ ನನ್ನನು ನಿನ್ನಲೆ ಸೇರಿಸು! 


Thursday, August 4, 2022

ಮುಂಜಾನೆಯಲಿ ಮುಗುದೆ (ಕುಸುಮ ಷಟ್ಪದಿ)

ಹೊನ್ನಕಿರಣವು ಮೂಡಿ

ಚೆನ್ನಿರಲು ಗಗನದಲಿ

ರನ್ನಮಣಿ  ಸಿಂಗರವು  ಹಸಿರೆಲೆಯಲಿ!

ಕನ್ನ ಹಾಕಿದೆ ಮನಕೆ 

ಪನ್ನೀರ ಮಣಿಮಾಲೆ

ಜೊನ್ನು ಸುರಿದಿದೆ ಮನದ ಗೂಡಿನೊಳಗೆ!


ವಸುಮತಿಯ ಮನದಾಸೆ

ಕುಸುಮದೊಲು ಹೊರಬಂದು

ಪಿಸುಮಾತ ನುಡಿಯುತಿದೆ ಪವನನೊಡನೆ!

ಕುಸುಮ ಗಂಧವ ಹೊತ್ತು

ರಸಿಕ ನಾಸಿಕಗಳಿಗೆ

ವಸುಮತಿಯ ಮನದಾಸೆ ತಿಳಿಸುತಿಹನು!


ನಲ್ಲೆಯೂ ಜೊತೆಯಿರಲು

ಸಲ್ಲಾಪ ಸಾಗಿರಲು

ಘಲ್ಲೆನುತಿಹುದು ಹೃದಯ ಗೆಜ್ಜೆ ತೊಟ್ಟು!

ಮೆಲ್ಲಮೆಲ್ಲನೆ ಮನವು

ಹುಲ್ಲೆಯಂತೆಯೆ ಜಿಗಿದು

ಹುಲ್ಲು ಹಾಸಿನ ಮೇಲೆ ಕುಣಿದಾಡಿದೆ!


ತಂಗಾಳಿ ಹಿತವಾಗಿ

ಮುಂಗುರುಳ ಮೀಟುತಿರೆ

ಮಂಗಳೆಯ ಚೆಲುವಿಂದು ಮಿತಿಮೀರಿದೆ!

ಚೆಂಗದಿರ ಹೊಳೆಯುತಿರೆ

ಕಂಗಳನು ಬೆಳಗುತಿರೆ

ಸಂಗಡವೆ ಕದಪುಗಳು ಪ್ರತಿಫಲಿಸಿವೆ!


ಕುಸುಮ ಷಟ್ಪದಿಯ ಛಂದಸ್ಸು:

೫|೫|

೫|೫|

೫|೫|೫|-

೫|೫|

೫|೫|

೫|೫|೫|-

1ನೆಯ ಹಾಗೂ 4ನೆಯ ಸಾಲುಗಳ ಮೊದಲನೆಯ ಅಕ್ಷರ ಮಾತ್ರ ಸ್ವರವಾಗಿರಬಹುದು

ಯಗಣ (U_ _ ) ಮತ್ತು  ಜಗಣ(U_UU) ಗಳನ್ನು ಬಳಸುವಂತಿಲ್ಲ (ಲಗಾದಿ ದೋಷ)


ಮುಕ್ತಕಗಳು - ೩೫

ಜೋರಿನಲಿ ಬೆಳೆದಂಥ ಮರಗಳನು ವಾಹನಕೆ

ದಾರಿ ಮಾಡಲು ಕಡಿದು, ತಾರು ಸುರಿದಾಯ್ತು |

ತಾರಿನಾ ಬಣ್ಣದಲೆ ಧನವು ಸೋರಿಕೆಯಾಗೆ

ತೋರಿಕೆಗೆ ರಸ್ತೆಯದು ~ ಪರಮಾತ್ಮನೆ ||೧೭೧||


ನರಜನ್ಮ ದೊರೆತಿಹುದು ಸತ್ಕರ್ಮ ಮಾಡಲಿಕೆ

ಸುರರಿಗೂ ನರಜನ್ಮ ಕರ್ಮ ಕಾರಣಕೆ |

ದೊರೆತಿಹುದು ಅವಕಾಶ ಆಕಾಶದೆತ್ತರದ

ಮರೆತು ನಿದ್ರಿಸಬೇಡ ~ ಪರಮಾತ್ಮನೆ ||೧೭೨||


ಸಸಿಗಳನು ನೆಡುನೆಡುತ ಮರಗಳನೆ ಬೆಳೆಸಿಬಿಡಿ

ಹಸಿರು ಗಿಡಗಳನು ಉಸಿರಂತೆ ಕಾಪಾಡಿ |

ಉಸಿರಾಗುವವು ನಮ್ಮ ಮುಂದಿನಾ ಪೀಳಿಗೆಗೆ

ಬಸಿರಾಯ್ತು ಸತ್ಕರ್ಮ ಪರಮಾತ್ಮನೆ ||೧೭೩||


ಹಸ್ತದಲಿರುವ ಸಂಪದವು ಕರಗಿ ಹೋದರೂ

ಮಸ್ತಕದ ಸಂಪದವು ಕರಗುವುದೆ ಹೇಳು |

ಪುಸ್ತಕವು, ಗುರುಮುಖವು, ವ್ಯವಹಾರ, ಪರ್ಯಟನೆ, 

ಮಸ್ತಕವ ತುಂಬುವವು ~ ಪರಮಾತ್ಮನೆ ||೧೭೪||


ಮಾಡಿರುವ ಪಾಪಕ್ಕೆ ಶಿಕ್ಷೆ ತಪ್ಪುವುದಿಲ್ಲ

ಬೇಡಿದರೆ ದೇವರನು ಕರುಣೆಯನು ತೋರ |

ಮಾಡಿದರೆ ಉಪಕಾರ ಮೂರರಷ್ಟಾದರೂ

ನೋಡುವನು ಕಣ್ತೆರೆದು ಪರಮಾತ್ಮನೆ ||೧೭೫||

ಮುಕ್ತಕಗಳು - ೩೪

ಹಿತ್ತಾಳೆಗಿವಿಯರಸಗೆ ಚಾರರೂ ಮಂತ್ರಿಗಳು

ತೊತ್ತುಗಳೆ ಆಳುವರು ರಾಜ್ಯವನು ಕೇಳು |

ಬಿತ್ತುವರು ಸಂಶಯವ ಆಲಿಸುವ ಕಿವಿಯಿರಲು

ಸತ್ತಿರದ ಮತಿಯಿರಲಿ ~ ಪರಮಾತ್ಮನೆ ||೧೬೬||


ಹೊತ್ತಲ್ಲದೊತ್ತಿನಲಿ ಉಳಬೇಡ ಉಣಬೇಡ

ಗೊತ್ತುಗುರಿ ಇಲ್ಲದೆಯೆ ಬದುಕುವುದು ಬೇಡ |

ಮತ್ತಿನಲಿ ಮುಳುಗಿಸುವ ವಿಷ ವಿಷಯಗಳು ಬೇಡ

ಚಿತ್ತಚಾಂಚಲ್ಯ ತೊರೆ ~ ಪರಮಾತ್ಮನೆ ||೧೬೭||


ಭೋಗದಲಿ ಆಸಕ್ತಿ, ಕೋಪಗಳು, ಅತಿಯಾಸೆ,

ರಾಗಗಳು, ಗರ್ವ, ಒಡಲಿನನಲವು, ಆರು |

ತೂಗುಗತ್ತಿಗಳು ತಲೆಮೇಲಿರಲು ಬುವಿಯಲ್ಲಿ  

ಸಾಗುವುದು ಸುಲಭವೇ ಪರಮಾತ್ಮನೆ || ೧೬೮||

 

ಇಳೆಯಲ್ಲಿ ಹಗಲಿರುಳು ಕತ್ತಲೆಯ ಸಾಮ್ರಾಜ್ಯ

ಬೆಳಕಿನೆಡೆ ಹೋಗುವಾ ದಾರಿಕಾಣದಿದೆ |

ಒಳಗಿರುವ ಚೈತನ್ಯವನು ಬೇಡು ದಿಕ್ಸೂಚಿ

ತಳಮಳವ ತೊರೆದಿಟ್ಟು ~ ಪರಮಾತ್ಮನೆ ||೧೬೯||


ಜಾಲಿಯಾ ಮರದ ನೆರಳಿನಲಿ ನಿಂತರೆ ಕಷ್ಟ

ಸಾಲದಾ ಸುಳಿಯಲ್ಲಿ ಸಿಲುಕಿದರೆ ನಷ್ಟ |

ಗಾಳದಾ ಮೀನನ್ನು ಹಿಡಿದಿಹುದು ಕಿರುಕೊಕ್ಕಿ

ಜೋಲಿಹೊಡೆದರೆ ಸತ್ತೆ ~ ಪರಮಾತ್ಮನೆ ||೧೭೦||

ಮುಕ್ತಕಗಳು - ೩೩

ಮರಣಗಳ ಸಾಲಾಗಿ ತಂದಿಹುದು ವೈರಾಣು

ಮರೆತಿದ್ದ ಪಾಠಗಳ ಮತ್ತೆ ನೆನಪಿಸುತ |

ಬೆರೆತಿಹವು ಋಣಧನಗಳಾ ಫಲವು, ಜೀವನವು

ಎರಡು ಮುಖಗಳ ನಾಣ್ಯ ~ ಪರಮಾತ್ಮನೆ ||೧೬೧||


ದಯೆಯಿಲ್ಲದಿರೆ ಧರ್ಮವೆಂಬುವರೆ ಬೋಧನೆಯ

ಲಯವಾಗಿಹೋಗುವುದು ಮಾನವತೆ ನಶಿಸಿ |

ಜಯವಿರಲಿ ದಯೆಯ ರಕ್ಷಿಸುವವಗೆ ಅನವರತ

ದಯೆಯಿಡುವ ಸಕಲರಲಿ ~ ಪರಮಾತ್ಮನೆ ||೧೬೨|| 


ಸಾಹಿತ್ಯ ಸಂಗೀತ ಲಲಿತಕಲೆಗಳು ಬೇಕು

ದೇಹಕ್ಕೆ ಮನಗಳಿಗೆ ಮುದ ನೀಡಲೆಂದು |

ದೇಹಿ ಎಂದರೆ ಮನಸುಗಳ ಕುಣಿಸಿ, ಸಾತ್ವಿಕದ

ದಾಹವನು ತಣಿಸುವವು ~ ಪರಮಾತ್ಮನೆ ||೧೬೩||


ಸಂಕಟವು ಬಂದಿರಲು ಸೊಂಟ ಬಗ್ಗಿಸಿ ನಾವು

ವೆಂಕಟರಮಣನ ಮೊರೆ ಹೋಗುವೆವು ಬಂಧು |

ಬಿಂಕದೀಯಾಟ ತೊರೆಯಲು ಸದಾ ನೆನೆ ಪಾದ

ಟಂಕಿಸುತ ಮನದಲ್ಲಿ ~ ಪರಮಾತ್ಮನೆ ||೧೬೪||


ದೇವ ದಾನವರ ಹೋರಾಟ ನಡೆದಿದೆ ಸತ್ಯ

ರಾವಣರು ತಲೆಯೆತ್ತಿ ನಿಲ್ಲುತಿರೆ ನಿತ್ಯ |

ಕಾವಲಿದೆ ಮನಕೆ ರಾವಣರ ಹುಟ್ಟಡಗಿಸಲು

ಕೋವಿಯೇ ಸನ್ಮತಿಯು ಪರಮಾತ್ಮನೆ ||೧೬೫||

ಮುಕ್ತಕಗಳು - ೩೨

ಬೇರು ಇದೆಯೆಂದು ನಂಬಲು ಬೇಕು ವಿಧಿಯಿಲ್ಲ

ದೂರದಾ ಮರದಲ್ಲಿ ತುಂಬಿರಲು ಹಣ್ಣು |

ಕಾರಣವು ಇಲ್ಲದೆಯೆ ಏನು ನಡೆಯುವುದಿಲ್ಲಿ?

ಬೇರಿನೊಲು ಕಾರಣವು ~ ಪರಮಾತ್ಮನೆ ||೧೫೬||


ಚೆಲ್ಲದಿರಿ ಅನ್ನವನು ಬಡವನಿಗದೇ ಚಿನ್ನ

ಒಲ್ಲೆಯೆನಿ ಬಡಿಸುವಗೆ ಎಲೆಯತುಂಬೆಲ್ಲ |

ಒಲ್ಲದಿಹ ಹೊಟ್ಟೆಯಲಿ ತುರುಕುವುದು ಚೆಂದವೇ

ಎಲ್ಲೆಯಿಡು ಎಲೆಯಲ್ಲಿ ~ ಪರಮಾತ್ಮನೆ ||೧೫೭||


ಜಗದಲ್ಲಿ ತುಂಬಿಹುದು ಎಲ್ಲೆಡೆಯು ಚೈತನ್ಯ

ಬೊಗಸೆಯನು ತರೆದಿಡುವ ಪ್ರಾಣದಾಕರಕೆ |

ಜಗದೊಡೆಯ ಸೂಸುತಿಹ ವಿಶ್ವಕಿರಣಗಳ, ನಸು

ಹಗಲಿನಲಿ ಅನುಭವಿಸು ~ ಪರಮಾತ್ಮನೆ ||೧೫೮||


ಚಮಚ ತಟ್ಟೆಗಳೆಲ್ಲ ರುಚಿಯ ಸವಿಯುವವೇನು

ಘಮದ ಹೂವಿನ ಗಂಧ ಹೂದಾನಿಗಿಲ್ಲ |

ಗಮನ ಮನನವಿರದೇ ಅಭ್ಯಾಸ ಮಾಡಿದರೆ

ಚಮಚಗಳೆ ಆಗುವೆವು ಪರಮಾತ್ಮನೆ ||೧೫೯||


ಕಲಿತೆ ಕಾಲೇಜಿನಲಿ ನಾನೆಂದು ಬೀಗದಿರು

ಕಲಿತೆಯಾ ಮಾನವತ್ವದ ಮೂಲ ಪಾಠ? |

ಕಲಿಸುವುದೆ ಸನ್ನಡತೆ ಮೂರಕ್ಕರದ ಪದವಿ?

ಕಲೆತು ಬಾಳುವುದ ಕಲಿ ~ ಪರಮಾತ್ಮನೆ ||೧೬೦|| 

ಮುಕ್ತಕಗಳು - ೩೧

ದುರುಳರನು ದೂರವಿಡು ಮರುಳರಲಿ ಮರುಕವಿಡು

ಕರುಳಬಳ್ಳಿಗಳ ನೀರುಣಿಸಿ ಬೆಳೆಸುತಿರು |

ಪರರಲ್ಲಿ ನೇಹವಿಡು ಜಂತುಗಳ ಕಾಪಾಡು

ಪರಭಾರೆ ಮಾಡದೆಲೆ ~ ಪರಮಾತ್ಮನೆ ||೧೫೧||


ಹಸಿದು ಬಂದವಗೆ ತುತ್ತನ್ನವನು ನೀಡುವುದು

ಕುಸಿದು ಕುಳಿತವಗೆ ಹೆಗಲಿನ ಆಸರೆಯನು |

ತುಸು ನೀರು ಬಾಯಾರಿ ಬಂದವಗೆ ತಪ್ಪದೆಲೆ

ಜಸದಾದ ಸಂಸ್ಕೃತಿಯು ಪರಮಾತ್ಮನೆ ||೧೫೨||


ಜೊತೆಯಲ್ಲಿ ನೆರಳಂತೆ ಕಷ್ಟದಲಿ ಹೆಗಲಂತೆ

ಕಥೆಯಲ್ಲಿ ನಾಯಕಿಯು ಈ ನನ್ನ ಕಾಂತೆ |

ಚತುರಮತಿ ಸಂಸಾರ ಜಂಜಾಟ ಬಿಡಿಸುವಲಿ

ಸತಿಯೀಕೆ ಸರಸತಿಯು ಪರಮಾತ್ಮನೆ ||೧೫೩||


ರಾಜಕೀಯದ ಮುಸುಕಿನಲಿ ಕಳ್ಳಕಾಕರಿಗೆ

ಮೋಜಿನಲಿ ರಾಜನೊಲು ಬದುಕುವಾ ಆಸೆ |

ರಾಜಧರ್ಮವನರಿತವರು ಅಲ್ಲ, ದೇಶವನು

ಬಾಜಿಯಲಿ ಕಳೆಯುವರು ಪರಮಾತ್ಮನೆ ||೧೫೪||


ಮಗುವೆಂಬ ಮಲ್ಲಿಗೆಯ ಮುಗ್ಧನಗು ಘಮಘಮವು

ನಗುವಳಿಯದಿರಲಿ ಮಗು ಬೆಳೆದಂತೆ ನಿತ್ಯ |

ಜಗದ ಕಲ್ಮಶಗಳೇ ಅಳಿಸುವವು ನಗುವನ್ನು

ನಗದಂತೆ ನಗುವ ಪೊರೆ ~ ಪರಮಾತ್ಮನೆ ||೧೫೫||