Monday, July 11, 2022

ಮುಕ್ತಕಗಳು - ೨೦

ವಿಷವಿಹುದು ನೀರಿನಲಿ ವಿಷವಿಹುದು ಗಾಳಿಯಲಿ

ವಿಷವಿಹುದು ಹಸುಗೂಸಿನಾಹಾರದಲ್ಲಿ |

ವಿಷಮಸಮಯವಿದು ಸಾವಮೊದಲೇ ನೀ ಮನದ

ವಿಷವ ತೊರೆ ಮನುಜ ಪೇಳ್ ಪರಮಾತ್ಮನೆ ||೯೬||


ಧನವೆಂಬ ಸಿರಿಯುಂಟು  ವಸ್ತುಗಳ   ಕೊಳ್ಳಲಿಕೆ

ಗುಣವೆಂಬ ನಿಧಿಯುಂಟು ಪಡೆಯೆ ನೆಮ್ಮದಿಯ |

ಗುಣಧನಗಳೆರಡನ್ನು ಪಡೆಯುವುದು ವಿರಳವಿರೆ

ಧನದಾಸೆ ಬಿಡಿಸಯ್ಯ ಪರಮಾತ್ಮನೆ ||೯೭||


ಸಾರಥಿಯು ನೀನಾದೆ ಪಾರ್ಥನಿಗೆ ಯುದ್ಧದಲಿ

ಕೌರವರ ಸೆದೆಬಡಿಯೆ ನೆರವಾದೆ ನೀನು |

ಪಾರುಗಾಣಿಸಲು ಜೀವನ ಕದನದಲಿ ಎನಗೆ

ಸಾರಥಿಯು ನೀನಾಗು ಪರಮಾತ್ಮನೆ ||೯೮||


ಹಸೆಮಣೆಯನೇರಿ ಜೊತೆ ಸಪ್ತಪದಿ ತುಳಿದಿಹಳು

ಹೊಸಬದುಕ ಕೊಡಲೆನಗೆ ತನ್ನವರ ತೊರೆದು |

ನಸುನಗೆಯ ಮುಖವಾಡದಲಿ ನೋವ ನುಂಗಿಹಳು

ಹೊಸಜೀವವಿಳೆಗಿಳಿಸಿ ಪರಮಾತ್ಮನೆ ||೯೯|| 


ಮುಕ್ತಕದ ಮಾಲೆಯಲಿ ಶತಸಂಖ್ಯೆ ಪುಷ್ಪಗಳು

ಭಕ್ತನಾ ಕಾಣಿಕೆಯ ಸ್ವೀಕರಿಸು ಗುರುವೆ |

ಪಕ್ವವಿಹ ತಿಳಿವನ್ನು ನೀಡಿರಲು ವಂದನೆಯು

ದಕ್ಷಿಣಾಮೂರ್ತಿಯೇ ಪರಮಾತ್ಮನೆ ||೧೦೦||


ಮುಕ್ತಕಗಳು - ೧೯

ಮರಣದಾ ಹೆಮ್ಮಾರಿ ಕಾಡಿಹುದು ದಿನರಾತ್ರಿ

ಮರೆಯದಿರಿ ವೈದ್ಯಜನ ಕೊಟ್ಟಿರುವ ಸಲಹೆ |

ಇರುಳು ಕಂಡಿಹ ಬಾವಿಯಲಿ ಹಗಲು ಬೀಳುವುದೆ

ಕುರಿಗಳಾಗುವುದೇಕೆ ಪರಮಾತ್ಮನೆ ||೯೧||


ಕೀಟ ಕೀಳೆನುವವರು ಮೂಢಮತಿಗಳು ಕೇಳಿ

ಕೀಟವಿಲ್ಲದೆ ಪರಾಗಸ್ಪರ್ಶ ವಿರಳ |

ಮೇಟಿಯಾ ಶ್ರಮವೆಲ್ಲ ನೀರಿನಲಿ ಹೋಮವೇ

ಕೀಟವಿರೆ ಊಟವಿದೆ ಪರಮಾತ್ಮನೆ ||೯೨||


ದಾನ ಕೊಡುವುದು ಲೇಸು ಕುಡಿಕೆಯಲಿಡುವ ಬದಲು

ದೀನ ದುರ್ಬಲರಿಂಗೆ ಹಸಿವನೀಗಿಸಲು |

ದಾನ ನೀಡುವುದ ಸತ್ಪಾತ್ರರಿಗೆ ನೀಡಿದೊಡೆ

ದಾನಕ್ಕೆ ಸದ್ಗತಿಯು ಪರಮಾತ್ಮನೆ ||೯೩||


ನುಡಿಯಲ್ಲಿ ಸತ್ಯ ಹೃದಯದಲ್ಲಿ ಪ್ರೀತಿಸೆಲೆ

ನಡೆಯಲ್ಲಿ ನಿಷ್ಠೆ ಕರಗಳಲಿ ದಾನಗುಣ |

ಹಿಡಿಯೆ ಧರ್ಮದ ದಾರಿ ಮನದಲ್ಲಿ ಪ್ರಾರ್ಥನೆಯು 

ಇರುವಲ್ಲಿ ನೀನಿರುವೆ ಪರಮಾತ್ಮನೆ ||೯೪||


ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ

ಸಾಲುಸಾಲಾಗಿ ಕತ್ತರಿಸುತಿಹೆವಿಂದು |

ಸಾಲವಾದರು ಕೂಡ ಬೆಳಸದಿರೆ ಮರಗಳನು

ಸಾಲಾಗಿ ಮಲಗುವೆವು ಪರಮಾತ್ಮನೆ ||೯೫||


ಮುಕ್ತಕಗಳು - ೧೮

ಮೂವತ್ತಮೂರು ರೀತಿಯ ಶಕ್ತಿಗಳು ಜಗದಿ

ಮೂವತ್ತಮೂರು ದೇವತೆಗಳೆನೆ ತಪ್ಪೆ |

ಜೀವಿಗಳ ನಿರ್ವಹಿಸೊ ದೇವತೆಗಳಿವರೆಲ್ಲ

ದೇವರಿಗೆ ದೇವ ನೀ ಪರಮಾತ್ಮನೆ ||೮೬||


ಸಾವಿರದ ಮನೆಯಿಲ್ಲದಿರೆ ಸಾಯೆ ಭಯವೇಕೆ

ಸಾವು ನೀಡುವುದು ನಿವೃತ್ತಿ ಜಗದಿಂದ | 

ನೋವು ಕೆಲದಿನ ಮಾತ್ರ  ಜೊತೆ ನಂಟಿರುವವರಿಗೆ

ನೋವಿರದ ಸಾವಿರಲಿ ಪರಮಾತ್ಮನೆ ||೮೭||


ದ್ವೇಷ ಕೋಪಗಳೆನಲು ಬೆಂಕಿಯಾ ಜ್ವಾಲೆಗಳು

ವೇಷವನು ಧರಿಸಿ ಮೋಸವನು ಮಾಡಿಹವು  |       

ದ್ವೇಷ ಸುಡುತಿಹುದಲ್ಲ ನಮ್ಮದೇ ಕಾಯವನು

ದ್ವೇಷವನು ನಿಗ್ರಹಿಸು ಪರಮಾತ್ಮನೆ ||೮೮||


ನನ್ನೆದೆಯ ವೀಣೆಯನು ನುಡಿಸು ಬಾ ಚೆಲುವೆಯೇ

ನಿನ್ನೆದೆಯ ತಾಳಕ್ಕೆ ಕುಣಿಯುವೆನು ನಾನು |

ಚೆನ್ನ ಮೇಳೈಸಲೆಮ್ಮಯ ನಾದನಾಟ್ಯಗಳು

ಜೊನ್ನ ಸುರಿವುದೆದೆಯಲಿ ಪರಮಾತ್ಮನೆ ||೮೯||

 

ಪುಸ್ತಕವನೋದಲದು ಹಚ್ಚುವುದು ಹಣತೆಯನು

ಮಸ್ತಕದ ದೀಪವದು ಬಾಳಿಗೇ ಬೆಳಕು |

ವಿಸ್ತರಿಸಿ ಕೊಳ್ಳಲಿಕೆ ಜ್ಞಾನದಾ ಪರಿಧಿಯನು

ಪುಸ್ತಕವು ಬಹುಮುಖ್ಯ ~ ಪರಮಾತ್ಮನೆ ||೯೦||

ಮುಕ್ತಕಗಳು - ೧೭

ಮದವೇರಿ ನಿಂತಾಗ ಮದ್ಯದಮಲೇರಿದೊಲು

ಬೆದರಿಹೋಗ್ವುದು ವಿವೇಚನೆಯ ದೃಢಶಕ್ತಿ |

ಇದಿರಾಗೊ ತಡೆಗಳೆಲ್ಲವು ಸರ್ವನಾಶವೇ

ನದಿಯು ಹುಚ್ಚೆದ್ದಂತೆ ಪರಮಾತ್ಮನೆ ||೮೧||


ಚಂದನದ ವನದಲ್ಲಿ ಮೇರುಪರ್ವತವಾದೆ

ಗಂಧದಾ ಗುಡಿಯ ಗರ್ಭದಲಿ ನೆಲೆಯಾದೆ |

ಮಂದಿಯಾ ಮನದಲ್ಲಿ ರಾರಾಜಿಸಿದ ತಾರೆ

ಬಂಧುವೇ ನಮಗೆಲ್ಲ ಪರಮಾತ್ಮನೆ ||೮೨||


ನಿನ್ನವರ ಬದಲಾಗೆನುವ ಮುನ್ನ ನಡತೆಯಲಿ

ತನ್ನತನ ಬದಲಿಸುವ ಬವಣೆಯನು ಕಾಣು |

ಭಿನ್ನತೆಯ ಮೇಳದಲಿ ನವರಾಗ ಮೂಡಿಸುತ 

ಮನ್ನಿಸೈ ನಿನ್ನವರ ಪರಮಾತ್ಮನೆ ||೮೩||


ರಾಜನನು ಅನುಸರಿಪ ಪ್ರಜೆಗಳೆಲ್ಲಿಹರೀಗ 

ರಾಜನಾರಿಸುವ ಹಕ್ಕೀಗ ತಮದೇನೆ |

ರಾಜನ ಕ್ಷಮತೆ ಆರಿಸಿದವರ ಮತಿಯಷ್ಟೆ

ರಾಜನನು ತೆಗಳುವುದೆ ಪರಮಾತ್ಮನೆ ||೮೪||


ದಿನದಿನದ ಬವಣೆಯಲಿ ಬದುಕ ಜಂಜಾಟದಲಿ

ನೆನಪಿರವು ನೀತಿವಾಕ್ಯ ಹಿತವಚನಗಳು |

ದಿನದ ಕೊನೆಗಿರಬೇಕು ನಾಕುಚಣದೇಕಾಂತ

ಮನನಮಾಡಲು ತಿಳಿವ ಪರಮಾತ್ಮನೆ ||೮೫||


ಮುಕ್ತಕಗಳು - ೮

ಒಂಟಿಯೇ ಗಾಳಿಯಲಿ ತಿರುಗುವಾ ಗಿರಗಿಟ್ಲೆ?

ಒಂಟಿ ನಾನಲ್ಲ ನೀನಿರಲು ಸಖನಾಗಿ |

ನೆಂಟ ನೀನೇ ಬರುವೆ ಜೊತೆಯಾಗಿ ಕೊನೆವರೆಗೆ 

ಬಂಟ ನಾನಾಗಿರುವೆ ಪರಮಾತ್ಮನೆ ||೩೬||


ಕನಸೆಲ್ಲ ಕರಗಿರಲು ಮನದಲ್ಲಿ ಕಹಿಯಿರಲು

ತನುವಲ್ಲಿ ಜಡವಿರಲು ನಿದಿರೆ ದೂರಾಗೆ |

ಜಿನುಗಿಸಲು ಹೊಸ ಹುರುಪು ಮರೆಯಲಿಕೆ ಕಹಿಯನ್ನು

ನಿನನಿಡುವೆ ಮನದಲ್ಲಿ ಪರಮಾತ್ಮನೆ ||೩೭||


ಎಲ್ಲ ಕೊಡುತಿಹ ಬುವಿಗೆ ನಾವೇನು ಕೊಟ್ಟಿಹೆವು

ಗಿಲ್ಲಿಹೆವು ಗುದ್ದಿಹೆವು ಮೆದ್ದಿಹೆವು ಬೆಲ್ಲ |

ಗಲ್ಲಿಯಲಿ ಶ್ವಾನವೂ ತಿರುಗಿ ಬೀಳುವುದೊಮ್ಮೆ

ಕಲ್ಲುಹೊಡೆದರೆ ನಿತ್ಯ ಪರಮಾತ್ಮನೆ ||೩೮||


ಕರದಲ್ಲಿ ಪಿಡಿದಿಹೆವು ಮಾಯದಾಟಿಕೆಯನ್ನು

ಭರದಲ್ಲಿ ತೊರೆದಿಹೆವು ಮತ್ತೆಲ್ಲವನ್ನು |

ಎರಡು ಮೊನಚಿನ ಖಡ್ಗ ಕೊಯ್ಯ ಬಲ್ಲದು ಕತ್ತ

ಮರೆತು ಮೈಮರೆತಾಗ ಪರಮಾತ್ಮನೆ ||೩೯||


ಏನೆ ಮಾಡಲಿ ನಾವು ನೋವಾಗದಂತಿರಲಿ

ಜಾನುವಾರುಗಳಿಗೂ ಬಿಸಿ ತಾಕದಿರಲಿ |

ನಾನು ಗೋಡೆಗೆಸೆವಾ ಚೆಂಡೊಂದು ಹಿಮ್ಮರಳಿ

ತಾನೆದೆಗೆ ತಾಕುವುದು ಪರಮಾತ್ಮನೆ ||೪೦||

ಮುಕ್ತಕಗಳು - ೧೬

ಪರರು ಬರಿಯಂಚೆಯವರಾಗಿಹರು ತಲುಪಿಸಲು

ಪರಿಪರಿಯ ನಿನ್ನ ಕರ್ಮಫಲದಾ ಫಸಲು |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ

ಪರರಲ್ಲಿ ದಯೆಯಿರಲಿ ಪರಮಾತ್ಮನೆ ||೭೬||


ಕಾಮದಲಿ ಕುರುಡಾಗೆ ಭಯವಿಲ್ಲ ಸಿಗ್ಗಿಲ್ಲ

ರೋಮರೋಮದಿ ದಹಿಸೆ ಕಾಮದಾಹಾಗ್ನಿ |

ಕಾಮದಾಹಕ್ಕೆ ಬಂಧುಗಳೆ ಬಲಿಯಾಗುತಿರೆ

ಪಾಮರತೆ ಸಂಹರಿಸು ಪರಮಾತ್ಮನೆ ||೭೭||


ವೈರಾಣು ಬಂದಿಹುದು ವೈರಿಯಾ ರೂಪದಲಿ

ಹೋರಾಟ ನಡೆಯುತಿದೆ ಮನೆಮನಗಳಲ್ಲಿ |

ಜೋರಿನಾ ಮಾನವನು ರೆಕ್ಕೆತರಿದಿದ್ದರೂ

ಹಾರಾಟ ಬಿಡಲೊಲ್ಲ ಪರಮಾತ್ಮನೆ ||೭೮||


ಮೋಹವಾಗುವುದಲ್ಲ ಚೆಂದದ್ದು ಕಂಡಾಗ

ಮೋಹ ಚಿಗುರೊಡೆಯಲಿಕೆ ಸ್ವಾರ್ಥವೇ ಮೂಲ

ಮೋಹ ಪಾಶಗಳು ಜೀವನದ ಕಗ್ಗಂಟುಗಳು

ಮೋಹ ಭಯವೀಯುವುದು ಪರಮಾತ್ಮನೆ ||೭೯|| 


ಕದಡುವುದು ತಿಳಿಗೊಳದ ನೀರನ್ನು ಮತ್ಸರವು

ಹದವಿರುವ ಮನದಲ್ಲಿ ಕಸವ ತುಂಬುವುದು |

ಎದೆಯಿಂದ ಮತ್ಸರದ ಬೇರು ಕೀಳದೆ ಬಿಡಲು

ಬದುಕು ಹಸನಾಗದದು ಪರಮಾತ್ಮನೆ ||೮೦||

ಮುಕ್ತಕಗಳು - ೧೫

ಮುಂಗವುಸ ಮರೆಯಲ್ಲಿ ಮುಖವ ಮರೆಮಾಚಿಹೆವು

ಟೊಂಗೆಯಿಲ್ಲದ ಮರವನಾಶ್ರಯಿಸಿ ನಿಂದು |

ರಂಗಾಗಿ ಬದುಕಲಿಕೆ ಟೊಂಗೆಗಳ ಕಡಿದಿರುವ

ಮಂಗಗಳ ಕಾಪಾಡು ಪರಮಾತ್ಮನೆ ||೭೧||


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು

ಬುವಿಯೊಳಗೆ ತಳ್ಳಿಹೆವು ~ ಪರಮಾತ್ಮನೆ ||೭೨||


ಕಾಮ ಲೋಭ ಕ್ರೋಧ ನರಕದಾ ದ್ವಾರಗಳು

ವಾಮಮಾರ್ಗಗಳ ತೊರೆಯೋಣ ಬಂಧುಗಳೆ

ರಾಮರಾಜ್ಯವ ತರಲು ಬೇಡ ಯಾರೂ, ಸಾಕು

ರಾಮನಾಮದ ಶಕ್ತಿ ~ ಪರಮಾತ್ಮನೆ ||೭೩||


ವಿಕೃತದೀ ಮನಸಿಗಿನ್ನೂ ಬೇಕೆನುವ ದಾಹ

ಸಕಲವಿರಲೂ ತೃಪ್ತಿಯಿಲ್ಲದಿಹ ಲೋಪ |

ಅಕಳಿಕೆಯ ಬಲೆಯಲ್ಲಿ ಸಿಲುಕಿರುವ ಕೂಸು ನಾ

ವಿಕಲತೆಯ ಗುಣಪಡಿಸು ಪರಮಾತ್ಮನೆ ||೭೪||

ಅಕಳಿಕೆ = ಕಚಗುಳಿ


ಮಂದಿರದ ಹುಂಡಿಯಲಿ ಕಾಣಿಕೆಯನೊಪ್ಪಿಸುತ

ಮಂದಿ ದುಃಖಗಳ ಮರೆಸುವ ಸುಖವ ಕೋರೆ

ತಿಂದಿರದ ಹೊಟ್ಟೆಗನ್ನವ ನೀಡಲದು ಹೆಚ್ಚು

ಮಂದಿರದ ಕಾಣಿಕೆಗೆ ~ ಪರಮಾತ್ಮನೆ ||೭೫||