Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||

ಮುಕ್ತಕಗಳು - ೨೬

ಹದ್ದಿರದ  ಹಯಗಳೊಲು ಪಂಚೇಂದ್ರಿ ಯಗಳಿರಲು

ಬಿದ್ದಿಹುದು ಕಡಿವಾಣ ಮನವೆಂಬ ಹಿಡಿತ |

ಬುದ್ಧಿಯೇ ಕಡಿವಾಣ ಹಿಡಿದೊಡೆಯನಲ್ಲವೇ

ಬುದ್ಧಿಗಿಷ್ಟರಿವ ತಾ ಪರಮಾತ್ಮನೆ  ||೧೨೬||


ಅನುದಿನವು ಸಿಗುತಿಹುದು ಹೊಸದೊಂದು ದಿನವೆಮಗೆ

ಚಣಚಣವು ಕರಗುತಿದೆ ದಕ್ಕಿರುವ ದಿನವು |

ಕನಸಿನಲಿ ಕಳೆಯದೆಲೆ ಅತಿಮುಖ್ಯ ಚಣಗಳನು

ಇನಿತಿನಿತು ಕಲಿಯೋಣ ಪರಮಾತ್ಮನೆ ||೧೨೭||


ಸೇವೆಯನು ಮಾಡುತ್ತ ದಾದಿಯರು ಬೆಂದಿಹರು

ಸಾವುನೋವುಗಳ ದಿನನಿತ್ಯ ನೋಡುತಲಿ |

ಜೀವಕ್ಕೆ ಸೋದರಿಯು ವೈದ್ಯರಿಗೆ ಬಲದಕೈ

ನೋವಿರದಿರಲವರಿಗೆ ಪರಮಾತ್ಮನೆ ||೧೨೮||


ಕರಿನೆರಳ ಮುಷ್ಟಿಯಲಿ ನಮ್ಮ ಭೂಲೋಕವಿರೆ

ಬಿರುಗಾಳಿ ಬೀಸಿ ದೇಹಗಳು ಧರೆಗುರುಳೆ

ಗಿರಿಧರನ ಕರುಣೆಯೇ ರಕ್ಷಣೆಗೆ ಸಾಧನವು

ಮೊರೆಯಿಡುವೆ ಕಾಪಾಡು ಪರಮಾತ್ಮನೆ ||೧೨೯||


ಉಕ್ಕಿ ಬಂದರೆ ಕೋಪ ಹಿತಬಯಸುವವರಲ್ಲಿ

ಸೊಕ್ಕು ತೋರದೆ ಬಾಯಿಮುಚ್ಚೆರಡು ಘಳಿಗೆ |

ಸಿಕ್ಕಿ ಬೀಳದಿರು ನೀ ತಾಮಸದ ಬಲೆಯಲ್ಲಿ

ನಕ್ಕುಬಿಡು ಗೆದ್ದೆ ನೀ ಪರಮಾತ್ಮನೆ ||೧೩೦||

ಮುಕ್ತಕಗಳು - ೯

ಹಸ್ತವನು ಚಾಚುವೆನು ಸ್ನೇಹಕ್ಕೆ ದಾನಕ್ಕೆ

ವಿಸ್ತರಿಸಲರಿವನ್ನು ಪುಸ್ತಕಕೆ ಶರಣು |

ಮಸ್ತಕವು ಬಾಗುವುದು ದೈವಕ್ಕೆ ಹಿರಿಯರಿಗೆ

ಹಸ್ತಾಕ್ಷರವಿದೆನ್ನ ಪರಮಾತ್ಮನೆ ||೪೧||


ಒಬ್ಬನಿಗೆ ಕೊಟ್ಟೆ ಧನವಧಿಕ ಮಿತಬಲವ ಇ

ನ್ನೊಬ್ಬನಿಗೆ ದುಡಿಯಲಿಕೆ ಅಧಿಕ ತೋಳ್ಬಲವ |

ಇಬ್ಬರೂ ಕೊಟ್ಟುಪಡೆಯುತ ಬಾಳೆ ಜಗದಲ್ಲಿ 

ತಬ್ಬಲಿಗಳಾಗುವರೆ?  ಪರಮಾತ್ಮನೆ ||೪೨||


ಅತಿಧನದ ಮೋಹವದು ಮನಬಿಟ್ಟು ಪೋಗುವುದೆ

ಹಿತವಚನ ಬಂಡೆ ಮೇಗಡೆಯ ಮಳೆಯಾಯ್ತು |

ಸತಿಯು ಜೊತೆಬಿಟ್ಟರೂ ಬಿಡದಿಹುದು ಜೊತೆಯನ್ನು

ಚಿತೆಯನಕ ಬರುವುದೋ ಪರಮಾತ್ಮನೆ ||೪೩||


ನಂಬಿಕೆಯನಿಟ್ಟಿರಲು ಮೋಸಹೋಗುವ ಚಿಂತೆ

ನಂಬಿಕೆಯನಿಡದಿರಲು ಬದುಕುವುದೆ ಬವಣೆ |

ನಂಬಿಕೆಯನಿಡಬೇಕು ನಂಬುತ್ತ ನಿನ್ನನ್ನು

ನಂಬಿ ಕೆಟ್ಟವರಿಲ್ಲ ಪರಮಾತ್ಮನೆ ||೪೪||


ಇಳಿಗೆ ಬಂದಿಳಿದಿರಲು ಹಸಿಹಸಿರ ಹೊಸಹೊನಲು

ನಳನಳಿಸುತಿವೆಯಲ್ಲ ಹೊಸಬಯಕೆ ಚಿಗುರು |

ಕಳೆದುಹೋಗಿರುವಾಗ ಹಳೆನೆನಪಿನೆಲೆಗಳೂ

ತಳಿರುಟ್ಟ ಯುಗದಾದಿ ಪರಮಾತ್ಮನೆ ||೪೫||

ಪ್ರೇಮಲೋಕ (ವಾರ್ಧಕ ಷಟ್ಪದಿ)

ಪಡುವಣದ ದಿನಮಣಿಗೆ ದಣಿವಾಗಿ ದಾಹವಿರೆ

ಕಡಲಿನಲಿ ತಣಿವರಸಿ ಮುಳುಗುಹಾಕುತ್ತಿಹನು

ಕಡುಕೆಂಪಿನಾ ದೇಹ ಸಾಗರವ ತಾಕಿದೊಡೆ ತಂಪಾಗಿ ನಿದ್ರಿಸಿದನು |

ಅಡಗಿದ್ದ ಚಂದಿರನು ಮದವೇರಿ ಬಂದಿಹನು

ಮಡದಿಯರ ಜೊತೆಗೂಡಿ ರಸಸಂಜೆ ಮೋದದಲಿ

ಹುಡುಕಾಟ ಹುಡುಗಾಟ ಸರಸಸಲ್ಲಾಪಗಳು ರಾತ್ರಿಯಲಿ ಸಾಗುತಿಹವು ||

 

ಅಂಬರದ ಹೊಸ ಬೆಳಕು ಬುವಿಯಲ್ಲಿ ಚೆಲ್ಲಿರಲು

ತಂಬೆಳಕು ಕರೆಯುತಿದೆ ಸೆಳೆಯುತ ಪ್ರೇಮಿಗಳ

ಸಂಬಾಳಿಸುತ ಮಾರುತನು ತನುವ ಪುಳಕಿಸುತ ನವಲೋಕ ಸೃಷ್ಟಿಸಿಹನು |

ಅಂಬರದ ಸಂಭ್ರಮವು ಬುವಿಯಲ್ಲಿ ಬಿಂಬಿಸಿದೆ

ಹುಂಬ ಚಂದಿರ ತಾರೆಯರೊಲುಮೆ ಹೊಮ್ಮಿಸಿದೆ

ಚುಂಬಕದ ವಾತಾವರಣ ಬೆರೆಸಿ ಮೋಹದಲೆಯ ರಂಗುಗಳಾಟವ ||

ವಾರ್ಧಕ ಷಟ್ಪದಿ

ಯಶವನೇನೆಂಬೆ ಧನ ವಿದ್ಯೆ ಸಿರಿ ಸಂಪತ್ತೆ

ಪಶು ಭೂಮಿಯಧಿಕಾರ ಯೌವ್ವನದ ಬಲಗಳೇ

ದಶಕಂಠ ಹೊಂದಿದ್ದವೆಲ್ಲವೂ ಮಣ್ಣಾಗಿ ಪಶುವಂತೆ ಬಲಿಯಾದನು

ಯಶವ ಕ್ಷಣಿಕದ ಮಿಂಚಂತೆ ಕಂಡರೆಷ್ಟೋ

ನಶಿಸದಾ ಯಶವನ್ನು ಪಡೆದವರು ಕೆಲವರೇ

ವಶವಾಯ್ತು ಯಶವು ಗುಣದಲ್ಲಿ ನಿಂತವಗೆ ಹೆಸರಾಗುವನು ಕೊನೆಯವರೆಗೆ


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ  ಕಾತುರದ ನಡೆ ಬೇಡ

ಜೋಪಡಿಗೆ ಬೆಂಕಿಯನು ಹಚ್ಚಿಕೊಳ್ಳುವರಾರು ಮೊಗದ ಮೇಗಡೆ ಮಸಿಯನು

ಕೋಪವೇ ಸರ್ವನಾಶದ ಬೀಜ ಬಿತ್ತದಿರಿ ಬುವಿಯಲ್ಲಿ

ತಾಪತ್ರಯಗಳು ಬಾಳಿನಲಿ ಸಾಮಾನ್ಯ ವಿಧಿಯಾಟದಲಿ

ಕೋಪತಾಪಗಳಿಗಿದ್ದರಂಕುಶ ಬಾಳುಹಸನಾಗಿರಲು ಜೀವ ತಂಪು

ಮುಕ್ತಕಗಳು - ೨೫

ಡೊಂಕಿರಬಹುದು ನಾಯಿ ಬಾಲದಲಿ ಬಣ್ಣದಲಿ

ಡೊಂಕೆಲ್ಲಿಹುದು ತೋರಿ ಸ್ವಾಮಿನಿಷ್ಠೆಯಲಿ |

ಡೊಂಕು ಹುಡುಕುವ ಮುನ್ನ ಹುಡುಕೋಣ ಸದ್ಗುಣವ

ಕೊಂಕುಗುಣ ತೊರೆಯೋಣ ಪರಮಾತ್ಮನೆ ||೧೨೧||


ಕಲಿಗಾಲವಿದೆಯೆಂದು ಕೈಚೆಲ್ಲಿ ಕೂರದಿರಿ

ಕಲಿಯ ಮನದಿಂದ ಕಿತ್ತೆಸೆಯೋಣ ಎಲ್ಲ |

ಬಲಿಯಲಿಲ್ಲದೆ ಎಡೆಯು ಕಲಿಕಾಲು ಕೀಳುವನು

ಕಲೆತು ಮಾಡುವ ಬನ್ನಿ ಪರಮಾತ್ಮನೆ ||೧೨೨||


ಚಂಚಲವು ನೀರಿನೊಲು ಆಕಾಶದಗಲವದು

ಮಿಂಚಿಗೂ ವೇಗ ಬೆಂಕಿಯೊಲು ತೀ ಕ್ಷ್ಣವದು |

ಪಂಚಭೂತಗಳ ಗುಣ ಪಂಚೇಂದ್ರಿಯಗಳೊಡೆಯ

ಸಂಚು ಮಾಡುವ ಮನಸು ಪರಮಾತ್ಮನೆ ||೧೨೩||


ಅನುಕಂಪ ಕರುಣೆಗಳು ಅವನಿತ್ತ ಕೊಡುಗೆಗಳು

ಜನಕೆ ಹಂಚುವ ಕೊಂಚಕೊಂಚವಾದರೂ |

ಜನಕನಿತ್ತಾಸ್ತಿಯನು ತನುಜನುಜರಿಗೆನೀಡೆ

ನನಗೇನು ನಷ್ಟವಿದೆ ಪರಮಾತ್ಮನೆ ||೧೨೪||


ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಕೊಳೆ ತೆಗೆಯಬೇಕು ದಿನದಿನ ಧ್ಯಾನಗಳಿಂದ

ತಿಳಿಯಾಗುವುದು ಮನವು ಪರಮಾತ್ಮನೆ ||೧೨೫||

ಮುಕ್ತಕಗಳು - ೨೪

ಚಿಂತೆಯೊಂದಿರೆ ಮನದಿ ನಿಶ್ಚಿಂತ ಮಾನವನು

ಚಿಂತೆಯಿಲ್ಲದಿರವನು ಜಲತೊರೆದ ಮೀನು |

ಸಂತೆಯಾಗುವುದು ಮನ ಚಿಂತೆಯಿಲ್ಲದರಂತು

ಚಿಂತೆ ಚಿಂತನೆ ತರಲಿ ಪರಮಾತ್ಮನೆ ||೧೧೬||


ಅಮ್ಮನೆನ್ನುವ ನುಡಿಯ ಒಮ್ಮೆ ನುಡಿದರೆಸಾಕು

ಒಮ್ಮೆಲೇ ಮೈಯೆಲ್ಲ ಪುಳಕಿತದ ಭಾವ

ಕಮ್ಮಿಯಾಗದು ಹೆತ್ತೊಡಲ ಮಮತೆ ಮುದ್ದಿಸುವ

ಅಮ್ಮ ನಿನಗಿರುವಳೇ ಪರಮಾತ್ಮನೆ ||೧೧೭||


ನಾವು ಸೂತ್ರದ ಗೊಂಬೆಗಳು ಸಂಶಯವೆ ಇಲ್ಲ

ಜೀವವಿಲ್ಲದ ತೊಗಲು ಗೊಂಬೆಗಳು ಅಲ್ಲ |

ದೇವನರುಹಿಹ ವಿಧಿಯ ಸೂತ್ರ ಹರಿಯುವ ವಿದ್ಯೆ

ಜೀವನಕೆ ಸೂತ್ರವಿದು ಪರಮಾತ್ಮನೆ ||೧೧೮||


ನಮ್ಮ ತಪ್ಪೆಲ್ಲವಕೆ ಬೆನ್ನೊಡ್ಡಿ ಕುಳಿತಾಗ

ಸುಮ್ಮನವು ಜಗದಿಂದ ಮರೆಯಾಗುವವೇ |

ನಮ್ಮ ಜಗ ಕುರುಡಲ್ಲ ಎಣಿಸುವುದು ತಪ್ಪುಗಳ

ಸುಮ್ಮನೇಕೀ ನಟನೆ ಪರಮಾತ್ಮನೆ ||೧೧೯||


ಇರುಳು ಕಳೆದಾ ಮೇಲೆ ಹಗಲು ಬರಲೇಬೇಕು

ಸುರಿಯುತಿಹ ಮಳೆಯೊಮ್ಮೆ ನಿಲ್ಲಲೇ ಬೇಕು |

ಧರಣಿಯೊಳು ಇದು ಸತ್ಯ ಕಾಲಮಹಿಮೆಯ ಸೂತ್ರ

ಕೊರಗದೆಲೆ ಕಾಯುವೆನು ಪರಮಾತ್ಮನೆ ||೧೨೦||