Saturday, December 17, 2022

ಮುಕ್ತಕಗಳು - ೭೨

ಅವಕಾಶ ತಪ್ಪಿದರೆ ಹಲುಬುವುದು ಏತಕ್ಕೆ

ಶಿವಕೊಡುವ ಸೂಚನೆಯೊ ಬೇರೆಯದೆ ವರವ? |

ಅವನ ಲೀಲೆಯನು ಬಲ್ಲವರಾರು ಅವನಿಯಲಿ

ತವಕ ಬಿಡು ಸಮಯ ಕೊಡು ~ ಪರಮಾತ್ಮನೆ ||೩೫೬||


ಅರ್ಥ ಕಾಮಗಳು ಅತಿಯಾಗಿರಲು ಕುರುಡಾಗಿ

ಧರ್ಮ ಮೋ ಕ್ಷಗಳ ಮಾರ್ಗವು ಕಾಣಸಿಗದು |

ವ್ಯರ್ಥವೇ ನರಜನ್ಮ ಗುರಿತೊರೆದ ಬಾಣದೊಲು

ಮರ್ತ್ಯಲೋಕದ ಮಹಿಮೆ ~ ಪರಮಾತ್ಮನೆ ||೩೫೭||


ಬರೆಯುವುದೆ ಕಾಯಕವು ಓದುವುದೆ ಪ್ರಾರ್ಥನೆಯು

ಒರೆಗೆ ಹಚ್ಚಲುಬೇಕು ಬರೆವ ಮಾತೊಮ್ಮೆ

ಒರೆಯಿಂದೆಳೆದು ಲೇಖನಿಯ ಸತ್ಯ ಮೆರೆಯುವೊಲು

ಬರವಣಿಗೆ ಮೂಡಿಸುವ ~ ಪರಮಾತ್ಮನೆ ||೩೫೮||


ಸತ್ಯವೇ ಉಳಿಯುವುದು ಸಮಯದಾಚೆಯವರೆಗೆ

ಮಿಥ್ಯವೇ ಅಳಿಯುವುದು ಕೆಲಕಾಲ ಬೆಳಗಿ |

ನಿತ್ಯವೂ ಸತ್ಯಮಾ ರ್ಗದಲಿ ನಡೆ, ಮಾತಿನಲಿ

ತಥ್ಯವಿರೆ ಆನಂದ ~ ಪರಮಾತ್ಮನೆ ||೩೫೯||

ತಥ್ಯ = ತಿರುಳು


ದೊರೆಯುವುದೆ ಎಲ್ಲರಿಗೆ ಎಲ್ಲವೂ ಜಗದಲ್ಲಿ?

ದೊರಕುವುದು ಎಲ್ಲರಿಗೆ ಮಾತ್ರವೇ ಕೆಲವು |

ಸುರರಿಗೂ ಅನಿಸುವುದು ಇನ್ನಷ್ಟು ಬೇಕೆಂದು

ಕೊರಗದಿರು ಇಲ್ಲದಕೆ ~ ಪರಮಾತ್ಮನೆ ||೩೬೦||

ಮುಕ್ತಕಗಳು - ೭೧

ಅತಿಯಾಸೆ ದುಃಖಕ್ಕೆ ಬಲವಾದ ಕಾರಣವು

ಮಿತಿಯಾಸೆ ಜೀವನವ ನಡೆಸೊ ಇಂಧನವು |

ಜೊತೆಯಾಗಬೇಕು ಕರ್ತವ್ಯದಾ ಕಾಯಕವು

ಇತಿಮಿತಿಯ ಬದುಕಿರಲಿ ~ ಪರಮಾತ್ಮನೆ ||೩೫೧||


ಮನಸಿನಲಿ ಚೆಲುವಿರಲು ತೋರುವುದು ನುಡಿಗಳಲಿ 

ಮನಗಳನು ಅರಳಿಸುತ ಹರುಷ ಹಂಚುವುದು |

ಜಿನುಗುವುದು ಜೇನು ಮಾತಿನಲಿ ಒಡನಾಟದಲಿ

ತೊನೆಯುವವು ಹೃದಯಗಳು ~ ಪರಮಾತ್ಮನೆ ||೩೫೨||


ಧನವು ಎಷ್ಟಿರಲೇನು ನಿಧನ ತಪ್ಪುವುದೇನು

ಗುಣ ಚರ್ಚೆಯಾಗುವುದು ಮರಣದಾ ಸಮಯ |

ಹಣವ ಹೊಗಳುವರೇನು ಗುಣವ ಪಕ್ಕದಲಿಟ್ಟು

ಗುಣಕೆ ಹಣ ಹೋಲಿಕೆಯೆ ~ ಪರಮಾತ್ಮನೆ ||೩೫೩||


ಬಂಧುಗಳು ನಾವೆಲ್ಲ ಅರಿಯಬೇಕಿದೆ ನಿಜವ

ಚಂದದಲಿ ಸೇರಿಹೆವು ಜನುಮವನು ಪಡೆದು

ಒಂದೆ ಜಲ ವಾಯು ಬುವಿ ಆಗಸವು ರವಿ ಶಶಿಯು

ತಂದೆಯೊಬ್ಬನೆ ನಮಗೆ ~ ಪರಮಾತ್ಮನೆ ||೩೫೪||


ಒಂದು ಹಣತೆಯು ಹಚ್ಚಿದರೆ ನೂರು ಹಣತೆಗಳ

ಒಂದು ನಗು ಬೆಳಗುವುದು ನೂರು ಮನಗಳನು |

ಕುಂದದೆಯೆ ಬದುಕಿನಲಿ ಚೆಂದ ನಗುವನು ಹಂಚು

ಅಂದವಿರು ವುದುಬದುಕು ~ ಪರಮಾತ್ಮನೆ ||೩೫೫||

Monday, September 26, 2022

ಮುಕ್ತಕಗಳು - ೭೦

ಎಲೆಯಲ್ಲಿ ಕೊಳೆಯಿರಲು ಊಟ ಮಾಡುವುದೆಂತು

ಕೊಳೆಯನ್ನು ತೊಳೆದು ಶುಭ್ರಗೊಳಿಸಲು ಬೇಕು  |

ಮಲಿನತೆಯು  ಮನದಲ್ಲಿ ಮನೆಮಾಡಿ ನಗುತಿರಲು

ಮುಳುವಾಯ್ತು ಸವಿನುಡಿಗೆ ~ ಪರಮಾತ್ಮನೆ||೩೪೬||


ಸುಖವಿಲ್ಲ ನಗನಾಣ್ಯ ದಿರಿಸು ಅರಮನೆಗಳಲಿ

ಸುಖವಿಹುದು ನಮ್ಮದೇ ಸ್ವಂತ ಮನಗಳಲಿ |

ಸಕಲ ಸಂತೋಷಗಳ ಆಕರವು ಎದೆಯಲಿರೆ

ಮಕುಟ ಬೇಕೇಕೆ ದೊರೆ ~ ಪರಮಾತ್ಮನೆ ||೩೪೭||


ಮಕುಟವಿರೆ ಚಿನ್ನದ್ದು ತಲೆಗಾಯ್ತು ಮಣಭಾರ

ಸಕಲ ಅಧಿಕಾರವಿರೆ ಕರ್ತವ್ಯಭಾರ |

ಸಕಲ ಐಶ್ವರ್ಯವಿರೆ ಭಯಭಾರ ಮನದಲ್ಲಿ

ಯುಕುತಿಯಲಿ ತೂಗಿರುವೆ ಪರಮಾತ್ಮನೆ ||೩೪೮||


ಸುಖ ಪಡಲು ಪರಮಾತ್ಮ ಜನುಮವನು ಕೊಟ್ಟಿರುವ

ನಖಶಿಖಾಂತದ ದೇಹ ಬುದ್ಧಿ ಮನಗಳನು |

ಸುಖ ಪಡಲು ದೇವರಲಿ ವಸ್ತುಗಳ ಬೇಡಿಹೆವು

ಪ್ರಖರ ಮಂದಮತಿಗಳು ~ ಪರಮಾತ್ಮನೆ ||೩೪೯||


ಬುದ್ಧಿಜೀವಿಗಳೆಂದು ಗದ್ದಲವ ಮಾಡಿಹರು

ಸದ್ದು ಮಾಡುತಿವೆ ಅರೆಬೆಂದ ಮಡಕೆಗಳು |

ಪೆದ್ದ ದೊರೆ ಕುರುಡನೊಲು ಆನೆಯನು ಮುಟ್ಟಿದವ

ಉದ್ಧರಿಸು ಇಂಥವರ ಪರಮಾತ್ಮನೆ ||೩೫೦||

Saturday, September 17, 2022

ಮುಕ್ತಕಗಳು - ೬೯

ಹೊಸಬೆಳಕ ಚೆಲ್ಲುವನು ರವಿ ಜಗದ ತುಂಬೆಲ್ಲ

ಫಸಲು ಮೇಟಿಯು ಬೆವರ ಹರಿಸಿದೆಡೆ ಮಾತ್ರ |

ಪಸರಿಸುವ ದೇವ ಕೃಪೆಯನ್ನು ಮಕ್ಕಳಿಗೆಲ್ಲ

ಬಸಿ ಬೆವರ ಪಡೆ ವರವ ~ ಪರಮಾತ್ಮನೆ ||೩೪೧||


ಕಾಲಕ್ರಮೇಣ ಕೆಲ ಜನರ ಮರೆತರೆ ನಾವು

ಕಾಲವನ್ನೇ ಮರೆಸೊ ಸ್ನೇಹಗಳು ಕೆಲವು |

ಕೋಲವಿದು, ಜನುಮಜನುಮಗಳ ಅನುಬಂಧವಿದು

ಬೇಲಿ ಕಟ್ಟುತ ಪೊರೆಯೊ ~ ಪರಮಾತ್ಮನೆ ||೩೪೨||

ಕೋಲ = ಸೊಗಸು


ಮೂರು ದಿನಗಳ ಸಂತೆ ಮುಗಿದುಹೋಗುವ ಮುನ್ನ

ಕೋರು ಸರಕೆಲ್ಲವೂ ಬಿಕರಿಯಾಗಲಿಕೆ |

ಸೇರುವುದು ಹೊಸ ಸರಕು ಮುಂದಿನಾ ಸಂತೆಯಲಿ

ಮಾರಾಟ ಬಲುಕಷ್ಟ ~ ಪರಮಾತ್ಮನೆ ||೩೪೩||


ಸಾವೆಂದು ಬರುವುದೋ ಹೇಗೆ ಕರೆದೊಯ್ವುದೋ

ನಾವಿಂದು ಅರಿಯುವಾ ಸಾಧನವು ಇಲ್ಲ |

ಜೀವನದ ಕೊನೆವರೆಗೆ ಬದುಕುವಾ ರೀತಿಯನು

ನಾವು ನಿರ್ಧರಿಸೋಣ ~ ಪರಮಾತ್ಮನೆ ||೩೪೪||


ಕೃತಿಚೋರನಿವ ಭಾವನೆಗಳನೇ ಕದ್ದಿಹನು

ಅತಿ ಅಧಮನಿವನು ಬರಡಾದ ಮನದವನು |

ಮತಿಗೇಡಿಯಾಗಿಹನು ಹೊಟ್ಟೆ ತುಂಬಿದ ಚೋರ

ಹತಮಾಡು ಸಂತತಿಯ ~ ಪರಮಾತ್ಮನೆ ||೩೪೫||

ಮುಕ್ತಕಗಳು - ೬೮

ಜೀವನದ ಪಂದ್ಯವದು ಎಷ್ಟು ದಿನಗಳ ಆಟ

ಯಾವ ದಿನ ಮುಗಿವುದೋ ಬಲ್ಲವರು ಯಾರು? |

ನಾವು ಗೆದ್ದವರೊ ಸೋತವರೊ ತಿಳಿಸುವರು ಜನ

ಸಾವ ಗೆದ್ದವರಾರು ~ ಪರಮಾತ್ಮನೆ ||೩೩೬||


ಎಳೆಯರಾಗುತಿರುವರು ಸ್ವಾರ್ಥದಾ ಮೂಟೆಗಳು

ತಲೆಗೆ ಹೋಗುತಿದೆ ಮಾತಾಪಿತರ ನಡತೆ |

ಬೆಳೆಯುವಾ ಸಮಯದಲಿ ಸರಿದಾರಿ ಹಿಡಿಯದಿರೆ

ಬೆಳಗುವರು ಹೇಗಿನ್ನು ~ ಪರಮಾತ್ಮನೆ ||೩೩೭||


ಕಲಬೆರೆಕೆ ಪಿಡುಗಿಂದು ಕೊಲ್ಲುತಿದೆ ಮಾನವರ

ಎಲೆಗೆ ಬಿದ್ದರೆ ಸಾಕೆ ಪರಿಶುದ್ಧ ಅನ್ನ |

ತಲೆಗೆ ಬೀಳಲೆಬೇಕು ಪರಿಶುದ್ಧ ಯೋಚನೆಯು

ಕೊಳೆಯ ತುಂಬುವೆಯೇಕೆ ~ ಪರಮಾತ್ಮನೆ ||೩೩೮||


ತಪ್ಪು ಮಾಡಿರುವುದರಿವಿಗೆ ಬಂದ ಕ್ಷಣದಲೇ

ತಪ್ಪೊಪ್ಪಿಗೆಯ ಕೇಳು ಸಂಬಂಧ ಉಳಿಸೆ |

ಕೊಪ್ಪರಿಗೆ ಧನಕೂಡ ಸರಿಪಡಿಸಲಾಗದದ

ತಪ್ಪದೆಲೆ ಕ್ಷಮೆಕೇಳು ~ ಪರಮಾತ್ಮನೆ ||೩೩೯||


ಪರಧನವ ತಿನ್ನುವುದೆ ಪರಮಾರ್ಥ ಎನ್ನುತಲಿ

ಪುರದ ಅಭಿವೃದ್ಧಿಯಲಿ ಕಳ್ಳತನ ಮಾಡೆ |

ಪರಮಾತ್ಮ ಶಿಕ್ಷಿಸುವ ಎಂದು ಕಾಯಲುಬೇಡಿ

ಜರಿದು ಶಾಪವ ಹಾಕಿ ~ ಪರಮಾತ್ಮನೆ ||೩೪೦||

ಮುಕ್ತಕಗಳು - ೬೭

ಸ್ವಾರ್ಥಿಗಳು ನಾವಿಂದು ನೆರೆಹೊರೆಗೆ ನೆರವಿಲ್ಲ

ಕಾರ್ಯಸಾಧನೆಗಾಗಿ ಹಿಡಿಯುವೆವು ಕಾಲು |

ದೂರ್ವಾಸರಾಗುವೆವು ಚಿಕ್ಕ ತೊಂದರೆಯಾಗೆ

ಈರ್ಷೆ ಬಿಂಕಗಳ ತೊರೆ ~ ಪರಮಾತ್ಮನೆ ||೩೩೧||


ಧನವಿರದೆ ಹೋದರೂ ಕಡಪಡೆದು ನಡೆಸುವರು

ಮನವಿರದೆ ಇರಲು ಮಾಡುವುದೆಂತು ಕೆಲಸ? |

ತನುಮನಗಳಣಿಗೊಳಿಸಿ ಮುಂದಾಗು ಕಾಯಕಕೆ

ಧನ ಬೆಲೆಗೆ ದೊರಕುವುದು ~ ಪರಮಾತ್ಮನೆ ||೩೩೨||


ಅರಿವ ಹೆಚ್ಚಿಸಬೇಕು ಪ್ರತಿನಿತ್ಯ ತುಸುತುಸುವೆ

ಮೆರೆಯದಿರು ಎಲ್ಲವನು ಅರಿತವನು ಎಂದು |

ಅರಿತೆಯೆಲ್ಲವನೆಂದು ನಂಬಿದರೆ ನೀ ಹಿಡಿವೆ

ಗಿರಿಯಇಳಿ ಯುವದಾರಿ ~ ಪರಮಾತ್ಮನೆ ||೩೩೩||


ಜನುಮಗಳ ಕೊಂಡಿಗಳು ಪಾಪಗಳು ಪುಣ್ಯಗಳು

ಕೊನೆಯಿಲ್ಲದಂತೆ ಜೊತೆಯಲ್ಲೆ ಬರುತಿಹವು |

ಮನೆಯ ಬಂಧುಗಳಂತೆ ಇರುತ ಸುಖ ದುಃಖಗಳ

ಗೊನೆಯನ್ನು ನೀಡುವವು ~ ಪರಮಾತ್ಮನೆ ||೩೩೪||


ಮತಿಯಲ್ಲಿ ಸದ್ವಿಚಾರಗಳು ಬೆಳೆಯಲಿ ಸದಾ

ಇತಿಮಿತಿಯ ಮಾತುಗಳು ನಸುನಗುತಲಿರಲಿ |

ಕೃತಿಯಿರಲಿ ಎಲ್ಲರೂ ನೋಡಿ ಕಲಿಯುವ ರೀತಿ

ಜೊತೆಯಾಗುವುದು ದೈವ ~ ಪರಮಾತ್ಮನೆ ||೩೩೫||

ಮುಕ್ತಕಗಳು - ೬೬

ಫಲವತ್ತು ಭೂಮಿಯದು ಮನುಜನಾ ಹೃದಯವೇ

ಬೆಳೆಯುವುದು ಸೊಂಪಾಗಿ ಬಿತ್ತು ನೀ ಸುಗುಣ |

ಕಳೆ ಕೀಟಗಳ ಕಾಟವನು ಕೊನೆಗೊಳಿಸು ನಿತ್ಯ

ಕಲಿಗೆ ಊಟದ ಕೊರತೆ ~ ಪರಮಾತ್ಮನೆ ||೩೨೬||


ಸಮಯಕ್ಕೆ ರಜೆಯಿಲ್ಲ ಜಮೆಮಾಡಲಾಗದದ

ವಿಮೆಯ ಮಾಡಿಸಲಾರೆ ದೊರೆತ ಸಮಯಕ್ಕೆ |        

ಗಮನವಿಡಬೇಕು ಚಣಚಣವ ಉಪಯೋಗಿಸಲು

ನಮಗಮೂಲ್ಯಸಿರಿಯದು ~ ಪರಮಾತ್ಮನೆ ||೩೨೭||


ಪರಿಹಾರ ಹುಟ್ಟುವುದು ತೊಂದರೆಯ ಜೊತೆಯಲ್ಲೆ

ಅರಿವ ಬೆಳೆಸಲುಬೇಕು ಪರಿಹಾರ ಹುಡುಕೆ |

ಗಿರಿಶಿಖರ ತಲಪುವಾ ಸೋಪಾನ ಕಟ್ಟಲಿಕೆ

ಗಿರಿಯ ಬಂಡೆಗಳಿಹವು ~ ಪರಮಾತ್ಮನೆ ||೩೨೮||


ಜನನಿಬಿಡ ಪಟ್ಟಣದೆ ಅತ್ತರಿಗೆ ಬೆಲೆಹೆಚ್ಚು

ಬನದ ಕುಸುಮದ ಗಂಧ ಮೂಸುವವರಿಲ್ಲ |

ಜನವ ಮುಟ್ಟುವ ವಸ್ತು ಬೇಡಿಕೆಯಲಿರಲೇನು

ಗುಣವ ಕಡೆಗಣಿಸದಿರು ಪರಮಾತ್ಮನೆ ||೩೨೯||


ಯಾರದೋ ಮೆಚ್ಚುಗೆಗೆ ವಸ್ತುಗಳ ಕೊಳ್ಳುವೆವು

ತೋರಲಿಕೆ ನಮ್ಮ ಸಂಪತ್ತಿನಾ ಘನತೆ  |

ತೀರದಾ ದಾಹವದು ಸುಡುತಿಹುದು ನೆಮ್ಮದಿಯ

ಹೀರು ಆಧ್ಯಾತ್ಮ ಜಲ ~ ಪರಮಾತ್ಮನೆ ||೩೩೦||