Monday, August 22, 2022

ಮುಕ್ತಕಗಳು - ೬೦

ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ

ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |

ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ

ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||


ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ

ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |

ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು

ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||


ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ

ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |

ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು

ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||


ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ

ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ

ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ

ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||


ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ

ತನಿಯಾಗಿಸುತ ಜೊನ್ನವನು ಸುರಿದ ನಗುತ |

ನಿನಗೆ ನೋವೇ ಆಗಿರಲಿ ನಗುವ ಹಂಚುತಿರು      

ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||

ಮುಕ್ತಕಗಳು - ೫೮

ಎದೆಯಲ್ಲಿ ಹಲವಾರು ಭಾವಗಳು ತುಂಬಿರಲು

ನದಿಯನ್ನು ತಡೆಹಿಡಿದ ಅಣೆಕಟ್ಟಿನಂತೆ |

ಕದಗಳವು ಬೇಕಿರಲು ಒತ್ತಡವ ಹೊರ ಹಾಕೆ

ಬಳಿಯಲ್ಲಿ ಸಖನಿರಲಿ ಪರಮಾತ್ಮನೆ ||೨೮೬||


ಇರಲೇನು ಬದುಕಲ್ಲಿ ನವರಸದ ಸಮ್ಮಿಲನ

ಇರಬೇಕು ಸಮರಸವು ಬಹುಮುಖ್ಯವಾಗಿ |

ಕೊರತೆಯಾದರೆ ನೋಡು ಸಮರಸವು ನಮ್ಮಲ್ಲಿ

ಮರೆವೆ ಕೆಲ ರಸಗಳನು ~ ಪರಮಾತ್ಮನೆ ||೨೮೭||


ಮಣ್ಣಿನಿಂದಲೆ ಊಟ ಮಣ್ಣಿನಿಂದಲೆ ಬಟ್ಟೆ

ಮಣ್ಣಿನಿಂದಲೆ ಮಹಲು ತಲೆಮೇಲೆ ಸೂರು |

ಮಣ್ಣಿನಿಂದಲೆ ಕಾಯ ಮಣ್ಣ ಸೇರುವೆ ಕೊನೆಗೆ

ಕಣ್ಣಿಗೊತ್ತಿಕೊ ಮಣ್ಣ ~ ಪರಮಾತ್ಮನೆ ||೨೮೮||


ಮಿತ್ರರಲಿ ಇರಬೇಕು ಮುಚ್ಚುಮರೆ ಇಲ್ಲದೊಲು

ಪುತ್ರರಲಿ ಭೇದವನು ಮಾಡದಿರಬೇಕು |

ಶತ್ರುಗಳ ಕ್ಷಮಿಸುತ್ತ ಸ್ನೇಹಹಸ್ತವ ಚಾಚು

ಅತ್ರಾಸ ಬದುಕೆಲ್ಲ ~ ಪರಮಾತ್ಮನೆ ||೨೮೯||

ಅತ್ರಾಸ = ಕಜ್ಜಾಯ (ಅತಿರಸ)


ಕಳೆದುಕೊಂಡರೆ ಮಾನ ಪ್ರಾಣವೇ ಹೋದಂತೆ

ಕಳೆಯು ಬೆಳೆದೆತ್ತರಕೆ ನುಂಗಿದೊಲು ಪೈರ |

ಇಳೆಯ ಜೀವನ ನರಕವೆನಿಸುವುದು, ಹಣೆಪಟ್ಟಿ

ಉಳಿಯುವುದು ಕೊನೆತನಕ ~ ಪರಮಾತ್ಮನೆ ||೨೯೦||

ಮುಕ್ತಕಗಳು - ೫೯

ಸಮಯವದು ಉಚಿತವೇ, ಬೆಲೆಕಟ್ಟಲಾಗದ್ದು

ನಮಗೆ ಒಡೆತನವಿಲ್ಲ, ಬಳಸೆ ಸಿಕ್ಕುವುದು |

ಜಮೆ ಮಾಡಲಾಗದ್ದು, ವ್ಯಯಿಸಬಹುದಷ್ಟೆಯದು

ಗಮನವಿಡು ಲಾಭಪಡೆ ~ ಪರಮಾತ್ಮನೆ ||೨೯೧||


ಗೃಹಿಣಿಗಿದೆಯೇ ನಿವೃ ತ್ತಿಯ ಪಾರಿತೋಷಕವು

ದಹಿಸುತಿಹ ದಿನಿದಿನದ ಕೋಟಲೆಗಳಿಂದ |

ಇಹುದೆ ಹೃದಯಕ್ಕೆ ರಜೆ ಮನುಜ ಬದುಕಿರುವನಕ

ಗೃಹದ ಹೃದಯವು ಆಕೆ ~ ಪರಮಾತ್ಮನೆ ||೨೯೨||


ಮನ ಶುದ್ಧವಿಲ್ಲದಿರೆ ಮಂತ್ರವೀಯದು ಶಕ್ತಿ

ತನು ಶುದ್ಧವಿಲ್ಲದಿರೆ ಫಲಕೊಡದು ತೀರ್ಥ |

ಧನವಧಿಕವಿರಲೇನು ಕೊಳ್ಳಲಾಗದು ಭಕ್ತಿ

ತನುಮನವ ಶುದ್ಧವಿಡು ~ ಪರಮಾತ್ಮನೆ ||೨೯೩||


ಕಾಗದದ ದೋಣಿಯಲಿ ಸಾಗರವ ದಾಟುವೆಯ

ಬಾಗಿದಾ ಮರವನ್ನು ನೇರ ಮಾಡುವೆಯ |

ಸಾಗು ಭೂಮಿಯ ಮೇಲೆ ಹೆಜ್ಜೆಗಳನೂರುತಲಿ

ಸೋಗೇಕೆ ಮಾತಿನಲಿ ~ ಪರಮಾತ್ಮನೆ ||೨೯೪||


ಅಕ್ಕರೆಯು ದೊರೆತರದು ಬಾಯಾರಿದವಗೆ ಜಲ

ಸಕ್ಕರೆಯ ಸವಿನುಡೆಯು ಎದೆಯ ತುಂಬುವುದು |

ಅಕ್ಕಪಕ್ಕದಲಿ ಹಂಚುತ ಅಕ್ಕರೆಯ ಉಚಿತ

ಚೊಕ್ಕವಾಗಿಸು ಧರೆಯ ~ ಪರಮಾತ್ಮನೆ ||೨೯೫||

ಮುಕ್ತಕಗಳು - ೫೭

ಪರಿಹರಿಸಿ ವಿಘ್ನಗಳ ಹರಸು ನಮ್ಮೆಲ್ಲರನು

ವರದಹಸ್ತನೆ ನೀಡು ವರಗಳನು ಬೇಗ |

ದುರಿತನಾಶನೆ ಗೌರಿಪುತ್ರ ಜಯ ಗಣಪತಿಯೆ

ನಿರತ ಭಜಿಸುವೆ ಕಾಯೊ ~ ಪರಮಾತ್ಮನೆ ||೨೮೧||


ಹುಟ್ಟಿದ್ದು ಸಾಧನೆಯೆ? ಬೆಳೆದಿದ್ದು ಸಾಧನೆಯೆ?

ಹುಟ್ಟಿದಾ ದಿನದಂದು ಸಡಗರವು ಏಕೆ? |

ನೆಟ್ಟರೇ ಮರಗಳನು ಕೊಟ್ಟರೇ ದಾನವನು

ಉಟ್ಟು ಸಂಭ್ರಮಿಸೋಣ ~ ಪರಮಾತ್ಮನೆ ||೨೮೨||


ಅರೆಬೆಂದ ಜ್ಞಾನವದು ಅರಿಗೆ ಬಲ ನೀಡುವುದು

ಕುರಿಗಳಾಗುವೆವು ಸುಜ್ಞಾನವಿಲ್ಲದಿರೆ |

ಕುರುಡನಾ ಕಿಸೆಯ ಮಾಣಿಕ್ಯ ಬೆಲೆ ತರದಲ್ಲ

ಅರಿತಿರಲು ಬೆಲೆಯುಂಟು ~ ಪರಮಾತ್ಮನೆ ||೨೮೩||


ಹಣದಿಂದ ಸಿಗಬಹುದು ಆಹಾರ ಮಾತ್ರವೇ

ಹಣವು ತರಬಲ್ಲದೇ ಆರೋಗ್ಯ ವನ್ನು |

ಗುಣಶಾಂತಿ ಸುಖನಿದ್ದೆ ಸುಸ್ನೇಹ ನೆಮ್ಮದಿಯು

ಹಣಕೆ ದೊರೆಯುವುದಿಲ್ಲ ~ ಪರಮಾತ್ಮನೆ ||೨೮೪||


ನಿಗದಿಯಾಗಿದೆ ಬಹಳ ನಿಯಮಗಳು ವಿಶ್ವದಲಿ

ಜಗವು ಕೊಡು-ಪಡೆಯಧಿಕ ನಿಯಮಕ್ಕೆ ಬದ್ಧ |

ನಗುವ ಕೊಡೆ ಸುಖವ ಪಡೆವೆವು ಅಧಿಕ ನೆನಪಿರಲಿ

ಬಗೆಯದಿರು ದ್ರೋಹವನು ~ ಪರಮಾತ್ಮನೆ ||೨೮೫||


ಮುಕ್ತಕಗಳು - ೫೬

ಮೂಳೆ ಮಾಂಸಗಳಿರುವ ಜೀವಯಂತ್ರವು ಮನುಜ

ಬಾಳಿಕೆಗೆ ನೂರ್ವರುಷ ಸಂಕೀರ್ಣ ಸೃಷ್ಟಿ |

ಪೀಳಿಗೆಗಳೇ ನಶಿಸಿದವು ಲಕ್ಷ  ಸಂಖ್ಯೆಯಲಿ

ಆಳ ಉದ್ದಗಳರಿಯ ಪರಮಾತ್ಮನೆ ||೨೭೬||


ವೇದಗಳು ನೀಡುವವು ಬದುಕುವಾ ಜ್ಞಾನವನು

ಗಾದೆಗಳು ಬದುಕಿನಾ ಅನುಭವದ ಸಾರ |

ವಾದ ಮಾಡದೆ ರೂಢಿಸೆರಡು ಉಪಕರಣಗಳ

ಹಾದಿ ಸುಗಮವು ಮುಂದೆ ~ ಪರಮಾತ್ಮನೆ ||೨೭೭||


ಅಪರಂಜಿ ನಗವಾಗೆ ಎಲ್ಲರೂ ಮಣಿಸುವರು

ಕಪಿಚೇಷ್ಟೆಗೂ ಅಂಕು ಡೊಂಕಾಗಬಹುದು |

ಉಪಯೋಗವಾಗುವುದು ತುಸು ತಾಮ್ರ ಸೇರಿದರೆ

ಹಪಹಪಿಸು ತುಸು ಕೊರೆಗೆ ~ ಪರಮಾತ್ಮನೆ ||೨೭೮||

ಕೊರೆ = ನ್ಯೂನತೆ


ವಿಜ್ಞಾನ ಬೆಳೆಯುತಿದೆ ಸಿರಿಯು ಹೆಚ್ಚಾಗುತಿದೆ

ಅಜ್ಞಾನ ಹೆಚ್ಚಿಸಿದೆ ವ್ಯಾಪಾರಿ ಬುದ್ಧಿ |

ಸುಜ್ಞಾನ ವಿರಬೇಕು ವಿಜ್ಞಾನಿಗಳಿಗೆಲ್ಲ

ಅಜ್ಞರಾ ಸರಿಪಡಿಸು ಪರಮಾತ್ಮನೆ ||೨೭೯||


ಆರ್ಯೆ ಬಂದಿಹಳು ಮಾತಾಪಿತರ ತೊರೆಯುತ್ತ

ಭಾರ್ಯೆಯೊಳು ತೋರು ಅಕ್ಕರೆಯ ಅನವರತ |

ಧೈರ್ಯವನು ತುಂಬುವಳು ಹೆಗಲ ಆಸರೆ ನೀಡಿ

ಕಾರ್ಯಲಕ್ಷ್ಮಿಯವಳೇ ~ ಪರಮಾತ್ಮನೆ ||೨೮೦||

Thursday, August 18, 2022

ಮುಕ್ತಕಗಳು - ೫೦

ಸೀಬೆ ತಿನ್ನಬಹುದಾದರೆ ಮಾವು ತಿನಲಾಗದು

ಲಾಭವುಂಟೇನು ಮಧುಮೇಹಿಯಾಗಿರಲು |

ಜೇಬು ತುಂಬಿರೆ ಸಾಕೆ ಎಲ್ಲ ಅನುಭವಿಸಲಿಕೆ

ತೂಬು ಇದೆ ಬದುಕಿನಲಿ ~ ಪರಮಾತ್ಮನೆ ||೨೪೬||


ಇಬ್ಬನಿಯು ಕಾಣುವುದು ಮುತ್ತಿನಾ ಮಣಿಗಳೊಲು

ಹುಬ್ಬಿನಾ ಎಸಳುಗಳು ಇಂದ್ರಛಾಪದೊಲು |

ಕಬ್ಬಿಗನ ಕಣ್ಣುಗಳು ಮಾಯದಾ ದುರ್ಬೀನು

ಹೆಬ್ಬೆಟ್ಟೆ ಅವನಿರಲಿ ~ ಪರಮಾತ್ಮನೆ ||೨೪೭||


ಚಿನ್ನದಾ ತಲ್ಪದಲಿ ಮಾಳಿಗೆಯ ಮನೆಯಲ್ಲಿ

ರನ್ನದಾ ಕಂಬಳಿಯ ಹೊದ್ದು ಮಲಗುತಲಿ |

ಹೊನ್ನಿನಾ ತಟ್ಟೆಯಲಿ ಊಟ ಮಾಡಿದರೇನು

ಮಣ್ಣಾಗುವುದು ಸತ್ಯ ~ ಪರಮಾತ್ಮನೆ ||೨೪೮||


ಹಕ್ಕಿಯೊಲು ಹಾರಿದೆವು ಮೀನಿನೊಲು ಈಜಿದೆವು

ಸೊಕ್ಕಿನಲಿ ಬುವಿಯಲ್ಲೆ ಎಡವಿ ಬಿದ್ದಿಹೆವು |

ಮಿಕ್ಕ ಸಮಯದಲಿ ಎಚ್ಚರ ತಪ್ಪಿ ಹೆಜ್ಜೆಯಿಡೆ

ದಕ್ಕುವುದೆ ಅನ್ನವದು ~ ಪರಮಾತ್ಮನೆ ||೨೪೯||


ಹೊರದೂಡುವುದು ಎಂತು ಕಲಿಯನ್ನು ಮನದಿಂದ

ಬರುವನಕ ಕಲ್ಕಿ  ಕಾಯುತಿರಬೇಕೇನು |

ತೊರೆ ಹಿಂಸೆ ಪಣ ಪಾನ ಪರನೀರೆ ಸಂಗಗಳ

ಧರೆಗೆ ಉರುಳುವನು ಕಲಿ ಪರಮಾತ್ಮನೆ ||೨೫೦||

ಮುಕ್ತಕಗಳು - ೪೯

ಗೆಳೆತನವೆ ಸಂಬಂಧಗಳಲಿ ಅತಿ ಉತ್ತಮವು

ಎಳೆಗಳಿರದಿರೆ ಆಸ್ತಿ ಅಂತಸ್ತುಗಳದು |    

ಸೆಳೆಯುವವು ಬುದ್ಧಿಮನಗಳು ಈರ್ವರನು ಸನಿಹ

ಪುಳಕಗೊಳಿಸುತ ಮನವ  ಪರಮಾತ್ಮನೆ ||೨೪೧||


ಮರೆವೊಂದು ವರದಾನ ಮರೆಯಲಿಕೆ ನೋವುಗಳ

ಹೊರೆಯೆಲ್ಲ ಇಳಿದಾಗ ನಸುನಗುವು ಮೂಡೆ |

ಕರಗಿಹೋಗಲಿ ಹೆಪ್ಪುಗಟ್ಟಿರುವ ಹಿಮಪಾತ

ಮರೆಯಾಗಿ ಮೋಡಗಳು ~ ಪರಮಾತ್ಮನೆ ||೨೪೨||


ದುಡುಕದಿರು ಆತುರದಿ ಕೋಪದಾ ತಾಪದಲಿ

ಎಡವದಿರು ಸುರಿಯುವುದು ನಿನ್ನದೇ ರಕುತ |

ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||೨೪೩||


ದಣಿಸಿದರೆ ಮನವನ್ನು ಸೋಲುವುದು ದೇಹವದು

ಮಣಿಸಿದರೆ ದೇಹವನು ಹೊಮ್ಮುವುದು ಹುರುಪು |

ಗಣಿಯಂಥ ಕಾಯವಿದು ದೇವನದ್ಭುತ ಸೃಷ್ಟಿ

ಚಣ ಸಾಕೆ ಅದನರಿಯೆ ~ ಪರಮಾತ್ಮನೆ ||೨೪೪||


ಮರೆಯೋಣ ತಪ್ಪುಗಳ ಬಂಧುಮಿತ್ರರ ನಡುವೆ

ಬೆರೆಯೋಣ ಸಂತಸದಿ ಬದುಕಿನಲಿ ನಲಿಯೆ |

ಮೆರೆಯೋಣ ಗೆಳೆತನದ ಸವಿಫಲದ ರುಚಿಯನ್ನು

ಮೆರೆವಂತೆ ಕಾಗೆಗಳು ~ ಪರಮಾತ್ಮನೆ ||೨೪೫||