Monday, August 25, 2025

ಚೋಕಾ (ನಮೋ ಗಣಪತಿ)

ಚೋಕಾ (ಜಪಾನಿ ಕವನ ಪ್ರಕಾರ)

೧,೩,೫,೭ನೆಯ ಸಾಲುಗಳಲ್ಲಿ ೫ ಅಕ್ಷರಗಳು

೨,೪,೬,೮,೯ನೆಯ ಸಾಲುಗಳಲ್ಲಿ ೭ ಅಕ್ಷರಗಳು

ಒಟ್ಟು - ೫೫ ಅಕ್ಷರಗಳು




ಏಕದಂತನೇ
ಸಂಕಷ್ಟಹರ ನೀನೇ
ಮುದ್ದು ಗಣಪ
ಮೂಷಿಕ ವಾಹನನೇ
ಪಾರ್ವತಿ ಪುತ್ರ
ಪರಮಪಾವನನೇ
ಪೊಡಮಡುವೆ
ನಿನಗೆ ಹರಸೆನ್ನ
ಜ್ಞಾನಪ್ರದಾಯಕನೇ!

Wednesday, July 30, 2025

ಕುಸುಮ ಷಟ್ಪದಿ (ಗೀತೋಪದೇಶ)

ಗೀತೆಯನು ನೀಡಿರುವ
ದಾತನವ ಪರಮಾತ್ಮ
ನೀತಿಯನು ಬೋಧಿಸಿಹ ಬುವಿಯ ಧರ್ಮ |
ಆತುರದ ಮನಗಳಿಗೆ
ಕಾತುರದ ಸಮಯಕ್ಕೆ
ನಾಥ ನೀಡಿದ ನಮಗೆ ಬದುಕೊ ಮಾರ್ಗ ||

ಯುದ್ಧ ಭೂಮಿಯ ಬದುಕು
ಗೆದ್ದು ಬಾಯೆಂದಿಹನು
ಬುದ್ಧಿ ಮಾತನು ಹೇಳಿ ಭಗವಂತನು |
ಮದ್ದು ಗುಂಡುಗಳಿಲ್ಲ
ಯುದ್ಧ ಮನದಾಳದಲಿ
ಬುದ್ಧಿ ನಿಗ್ರಹಿಸಲೀ ಪೆದ್ದು ಮನವ ||

ಕೆಲಸವನು ಮಾಡುತಿರು
ಫಲ ಕೊಡುವ ಪಾತ್ರನಿರೆ
ಕೆಲಸ ಮಾಡದೆ ಬೇರೆ ದಾರಿಯಿಲ್ಲ |
ಕೆಲವರಿರೆ ಸಾತ್ವಿಕರು
ಕೆಲ ರಾಜ ತಾಮಸಿಕ
ಬೆಳೆಸು ಸಾತ್ವಿಕತೆ ಮುಕ್ತಿಯನು ಪಡೆಯೆ ||

ಕಾಯವಿದು ನಶ್ವರವು
ಸಾಯುದಿಹ ಆತ್ಮ ನೀ
ಕಾಯುವುದು ನಿನಗೆ ಮತ್ತೊಂದು ಕಾಯ |
ಮಾಯೆಯಾ ಪರದೆಯನು
ಹಾಯಾಗಿ ತೊಲಗಿಸುವ
ಜೀಯ ನಮಿಸುವೆ ನಿನಗೆ ಪರಮಾತ್ಮನೆ ||

Monday, June 30, 2025

ಸೀತಾಯಣ

ವೇದವತಿಯೇ ಭೂಮಿ ಸುತೆಯೇ
ಆದೆ ಜಾನಕಿ ಜನಕ ಪುತ್ರಿಯೆ
ಧಾಮ ಮಿಥಿಲೆಯು ನಾಮ ಮೈಥಿಲಿ
ತಂಗಿಯರ ಅಭಿಮಾನ ಪುತ್ತಳಿ

ಬಿಲ್ಲು ಹರನದು ಮುರಿದು ರಾಮನು
ಎಲ್ಲ ರಾಜರ ಸೊಲ್ಲ ತಡೆದನು
ವರಿಸಿ ಸೀತೆಯ ಹೃದಯ ಗೆಳತಿಯ
ತಂದನೂರಿಗೆ ಮನದ ಒಡತಿಯ

ಹೊರಟು ನಿಂತಳು ವನದ ವಾಸಕೆ
ತೊರೆದು ಅರಮನೆ ದೀರ್ಘ ಕಾಲಕೆ
ಜಿಂಕೆ ಕಂಡಳು ಆಸೆ ಪಟ್ಟಳು
ಬಂದ ರಾವಣ ಬಂದಿಯಾದಳು

ರಾಮ ಭದ್ರೆಯ ಹುಡುಕಿ ಬಂದನು
ಹನುಮ ಸೀತೆಯ ಜಾಡು ಕಂಡನು
ಲಂಕೆ ಸುಟ್ಟಿತು ಯುದ್ಧ ನಡೆಯಿತು
ಅಸುರ ರಾಜನ ಎದೆಯು ಸೀಳಿತು

ಅಗ್ನಿ ಒರೆತವ ಗೆದ್ದು ನಿಂತಳು
ಮತ್ತೆ ಕಾಡಿನ ಪಾಲು ಆದಳು
ಅವಳಿ ಪುತ್ರರ ತಾಯಿಯಾದಳು
ಕೊನೆಗೆ ತಾಯಿಯ ಮಡಿಲ ಪಡೆದಳು

Saturday, June 21, 2025

ವಂದಿಪೆನು ಶಾರದೆಗೆ

ವಂದಿಸುವೆ ಪೊಡಮಡುವೆ ತಾಯೆ ಶಾರದೆಯೆ

ಕಂದ ನಿನ್ನವನು ನಾ ಸಲಹಿ ಎನ್ನ ಕಾಯೆ

ಅಕ್ಕರದ ಅಕ್ಕರೆಯ ಅರಿವ ಎನಗೆ ನೀಡೆ

ಮಿಕ್ಕಿರುವ ಬದುಕಿಗೆ ಬೆಳಕ ಹಾಡು ಹಾಡೆ


ಪುಸ್ತಕದಲಿ ದೇಗುಲವ ತೋರಿದೆ ನನಗೆ

ಮಸ್ತಕದ ದೇಗುಲದಿ ಸದಾ ಪೂಜೆ ನಿನಗೆ

ಶ್ವೇತವಸ್ತ್ರದ ರಾಣಿ ಹರಸು ವೀಣಾ ಪಾಣಿ

ಜ್ಯೋತಿ ಬೆಳಗುವೆ ನಿನಗೆ ಸ್ವೀಕರಿಸು ವಾಣಿ


ಮೀಯಿಸು ನನ್ನನ್ನು ಜ್ಞಾನದಾ ಜಲದಲ್ಲಿ

ತೋಯಿಸು ಮತಿಯನ್ನು ಕಲಿವ ಆಸೆಯಲಿ

ಕಲಿಕೆಯೇ ಮೆಟ್ಟಿಲು ನಿನ್ನ ತಾಲಪುವ ದಾರಿ

ಕಲಿಯುವೆನು ದಿನನಿತ್ಯ ನಿನ್ನ ಪದಾದ ಕೋರಿ

ಚೆಲುವೆಯರು

ತುರುಬಲಿ ತಾರೆಗಳ ಬಂಧಿಸಿ,

ಚಂದ್ರ ತಿಲಕವ ಧರಿಸಿ,

ಕಪ್ಪು ಸೀರೆಯನುಟ್ಟ ಅಂದ,

ಚೆಲುವೆ ನೀ ಬಂದೆ ಎಲ್ಲಿಂದ?


ಯಾವ ಲೋಕದ ಚೆಲುವೆ ನೀನು?

ದಾರಿ ತಪ್ಪಿ ಬಂದೆಯೇನು?

ನನ್ನ ಕಣ್ಣಿಗೆ ಹಬ್ಬ ತಂದು,

ಇದಿರು ನಿಂದಿರುವೆ ಇಂದು!


ಕನಸು ಮೂಡಿತೊ ಹೇಗೆ?

ನಾ ಕಣ್ಣು ಮುಚ್ಚಿದೆ ಹಾಗೆ.

ಕಣ್ಣು ತೆರೆದೆ ನಾ ಸುಮ್ಮನೆ,

ಅಚ್ಚರಿಯೇ ಕಣ್ಣೆದುರು ಗಮ್ಮನೆ!


ಮೇಘ ಮಲ್ಲೆಯನೇರಿಸಿ,

ಸೂರ್ಯ ತಿಲಕವ ಧರಿಸಿ,

ಬೆಳಕ ಸೀರೆಯನುಟ್ಟ ತರಳೆ,

ರಮಣಿ ನೀ ಯಾರು ಹೇಳೆ?


ರಾತ್ರಿ ಕಂಡಾ ರಮಣಿ ಆಗ,

ಹೇಳದೇ ಹೋದಳೆಲ್ಲಿಗೆ ಈಗ?

ಈಗ ಕಂಡ ಈ ಚೆಂದುಳ್ಳಿ ಚೆಲುವೆ,

ಬಂದಳೆಲ್ಲಿಂದ ಹೇಳು ಮನವೆ?


ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು

ಹರಿವ ನದಿ ತುಂಬಿ ಬಂದು

ಭರದಲ್ಲಿ ಸಾಗುತಿದೆ ಸಾಗರದೆಡೆ

ಬೆರೆವ ಭರದಲ್ಲಿ ಹರಿದು


ಜೀಮೂತ ಜೀಕಿ ಸುರಿಸುತಿದೆ ಮಳೆಯ

ಆಮೋದ ತಾಕಿ ಧರೆಯ

ಕಾಮವೋ ಮುಗ್ಧ ಪ್ರೇಮವೋ ಕಾಣೆ

ಸೋಮರಸದಂಥ ಗೆಳೆಯ


ಹಸಿರುಕ್ಕಿ ನಲಿವ ಸಂತಸವು ಧರೆಗೆ

ಕಸವರದ ಬಿಸಿಲು ತಾನ

ಹೊಸೆಯುತಿದೆ ಗಾನ ಬೆಸೆಯುತ್ತ ತಾಳ

ಹೊಸತಾದ ಜೀವ ಗಾನ


ಬಿಸಿಬಿಸಿಯ ತಿನಿಸ ಬಯಸುತಿದೆ ಮನವು

ಬಿಸಿ ಪೇಯದೊಡನೆ ಜೊತೆಗೆ

ಮುಸಿನಗುತ ಮಡದಿ ತಿನಿಸುಗಳ ತಂದು

ಪಿಸುಮಾತ ನುಡಿಯೆ ಒಸಗೆ


Saturday, June 14, 2025

ಮಧ್ಯಮಾವರ್ತ

ಪ್ರಕಾರ: ಮಧ್ಯಮಾವರ್ತ

೫ ೩ ೫ ೩
೫ ೩ ೩
೫ ೩ ೫ ೩
೫ ೩ ೩

ಆದಿಪ್ರಾಸ ಕಡ್ಡಾಯ
ಸಾಲುಗಳ ಮಧ್ಯದಲ್ಲಿ ಸ್ವರಾಕ್ಷರ ಬರುವಂತಿಲ್ಲ.
೨ ಮತ್ತು ೪ ಸಾಲುಗಳಲ್ಲಿ ಅಂತ್ಯಪ್ರಾಸವಿರಬೇಕು
  
ವಿಷಯ: ಮುಂಗಾರು

ಶೀರ್ಷಿಕೆ: ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು
ಹರಿವ ನದಿ ತುಂಬಿ ಬಂದು
ಭರದಲ್ಲಿ ಸಾಗುತಿದೆ ಸಾಗರದೆಡೆ
ಬೆರೆವ ಭರದಲ್ಲಿ ಹರಿದು

ಜೀಮೂತ ಜೀಕಿ ಸುರಿಸುತಿದೆ ಮಳೆಯ
ಆಮೋದ ತಾಕಿ ಧರೆಯ
ಕಾಮವೋ ಮುಗ್ಧ ಪ್ರೇಮವೋ ಕಾಣೆ
ಸೋಮರಸದಂಥ ಗೆಳೆಯ

ಹಸಿರುಕ್ಕಿ ನಲಿವ ಸಂತಸವು ಧರೆಗೆ
ಕಸವರದ ಬಿಸಿಲು ತಾನ
ಹೊಸೆಯುತಿದೆ ಗಾನ ಬೆಸೆಯುತ್ತ ತಾಳ
ಹೊಸತಾದ ಜೀವ ಗಾನ

ಬಿಸಿಬಿಸಿಯ ತಿನಿಸ ಬಯಸುತಿದೆ ಮನವು
ಬಿಸಿ ಪೇಯದೊಡನೆ ಜೊತೆಗೆ
ಮುಸಿನಗುತ ಮಡದಿ ತಿನಿಸುಗಳ ತಂದು
ಪಿಸುಮಾತ ನುಡಿಯೆ ಒಸಗೆ

ತ್ರಿಪದಿಗಳು

ಪ್ರಕಾರ: ಅಂಶ ತ್ರಿಪದಿ

ರೂಪ: ಒಗಟು

ಮಾವಿನ ತಳಿರಿದೆ ಬೇವಿನ ಎಸಳಿದೆ

ಮಾವಿನ ಕಾಯಿ ಬೆಲ್ಲದ | ಸೊಗಡಿದೆ

ಯಾವುದು ಹೇಳು ಈ ಹಬ್ಬ? ||


ಪ್ರಕಾರ: ಮಾತ್ರಾಗಣ ತ್ರಿಪದಿ

ರೂಪ: ಒಗಟು

ನೀರಲ್ಲಿ ಹುಟ್ಟುವುದು ನೀರಲ್ಲಿ ಬೆಳೆಯುವುದು

ನೀರಲ್ಲಿ ಐಕ್ಯವಾಗುವುದು | ತಿಳಿದಿರಲು 

ಯಾರಲ್ಲಿ ಹೇಳಿ ಉತ್ತರವ? ||



ಪ್ರಕಾರ: ಮಾತ್ರಾಗಣ_ತ್ರಿಪದಿ
ದತ್ತ ಪದ: ಕಾಮನಬಿಲ್ಲು

ಆಡುತಿಹ ರವಿಯಿಂದು ಮೋಡಗಳ ಹನಿಗಳಲಿ
ಮೂಡಿಹುದು ಅಲ್ಲಿ ಕಾಮನಾ | ಬಿಲ್ಲೊಂದು
ನೋಡುತಿಹ ಮುದದಿ ಕೃಷ್ಣಕವಿ ||


ಪ್ರಕಾರ : ವಿಚಿತ್ರ ತ್ರಿಪದಿ (ಅಂಶಗಣ)
ವಿಷಯ : ಸಿಂದೂರ
 
ಸಿಂದೂರ ಘರ್ಜಿಸಿತು ಬಂದೂಕ ಸಿಡಿಸಿತು 
ಅಂಧರಾ ಗೋಳು ರಕ್ತದಾ | ಮಡುವಾಯ್ತು 
ತಂದಿತು ಕರ್ಮಗಳ ಫಸಲು ||

ನಿರೀಕ್ಷೆ

 ಕಾಯುತಿಹಳು ಚೆಲುವ ಚೆನ್ನೆ,

ಹೂವ ಹಿಡಿದು ನಲ್ಲಗೆ.

ತನ್ನ ಇನಿಯನ ನೆನದು ಕೆನ್ನೆ,

ಕೆಂಪು ತಳೆಯಿತು ಮೆಲ್ಲಗೆ.


ಸಂಜೆ ಕೆಂಪಲಿ ಕೆನ್ನೆ ಕೆಂಪು,

ಮಿಳಿತವಾಯಿತು ಸುಮ್ಮನೆ.

ದಾರಿ ನೋಡುವ ಪೋರಿ ನಕ್ಕಳು,

ನೆನೆದು ಇನಿಯನ ವರ್ತನೆ.


ಬಣ್ಣ ಬಣ್ಣದ ದಿರುಸು ತೊಟ್ಟಳು,

ಕಂಡರೆದೆಯಲಿ ಓಕುಳಿ.

ಕಣ್ಗಳಿಂದಲೆ ಕಳಿಸಿಬಿಟ್ಟಳೆ?

ಮನವು ಮೆಚ್ಚುವ ಬಳುವಳಿ.


ಕುಸುಮ ಗುಚ್ಛವ ಹಿಡಿದು ಕೈಯಲಿ,

ಎದೆಯ ಹೂಗಳ ಜೊತೆಯಲಿ.

ಕಾದು ಕುಳಿತಳು ನಮ್ಮ ಮೈಥಿಲಿ,

ರಾಮ ಬರುವಾ ಪಥದಲಿ.


ಪಾಹಿಮಾಂ ಪರಮೇಶ್ವರ

ನೀಲಕಂಠ ನಿಟಿಲಾಕ್ಷ ಪರಮಶಿವ ಗಿರಿಜೇಶ 

ಫಾಲನೇತ್ರ ನಂಜುಂಡ ಗಣನಾಥ ಸರ್ವೇಶ

ನೀಲಲೋಹಿತ ರುದ್ರ ಮಾರಾರಿ ಭೂತೇಶ

ಕಾಲ ಹತ್ತಿರ ಇರುವೆ ನೀ ನೀಡು ಅವಕಾಶ


ವಿಷಮಾಕ್ಷ ಶಶಿಮೌಳಿ ಅವ್ಯಕ್ತ ಶಿತಿಕಂಠ

ವೃಷಧ್ವಜ ಭಗನೇತ್ರ ಫಾಲಾಕ್ಷ ವಿಷಕಂಠ

ವೃಷಭವಾಹನ ಶರ್ವ ಮೃಡ ರುದ್ರ ಶ್ರೀಕಂಠ

ವಿಷಧರನೆ ಪೂಜಿಸುವೆ ಕಲಿಸು ನೀ ಭವಪಾಠ


ಗಿರಿಧನ್ವ ಗೋಕರ್ಣವಾಸಿ ಹರ ಭೂತಪತಿ

ಪರಮಾತ್ಮ ತ್ರಿಪುರಾರಿ ಕಾಪಾಲಿ ದೇವಿಪತಿ

ಪುರವೈರಿ ಪರಮೇಶ ಈಶ ಕೈಲಾಸಪತಿ

ಕರಮುಗಿವೆ ಪೊಡಮಡುವೆ ನೀಡೆನಗೆ ಸ್ಥಿರಮುಕುತಿ


Tuesday, July 9, 2024

ವಿರಹದ ನೋವು

ಹೃದಯ ವೀಣೆಯ ಮೀಟಿ,

ಮಧುರ ರಾಗವ ನುಡಿಸು!

ಮಿಲನದಾಸೆಯ ನಾಟಿ,

ಎದೆಯ ನೋವನು ಮರೆಸು!


ಮರೆತು ಹೋದೆಯ ನೀನು?

ಜೊತೆಗೆ ಕಳೆದಾ ಸಮಯ!

ಸಾಕ್ಷಿ ಈ ಶಶಿ, ಬಾನು,

ಮಿಡಿವ ನನ್ನಾ ಹೃದಯ!


ಅಣುಕಿಸಿಹ ಶಶಿ  ನನ್ನ,

ತೊಟ್ಟು ತಾರೆಯ ಮಾಲೆ!

ಬಾನು ನಗುತ ಕೇಳಿತೆನ್ನ,

ಬೇಕೆ ಮೇಘದ ಓಲೆ?


ನೀ ನುಡಿದ ಪಿಸುಮಾತು,

ಕಿವಿಯಲೇ ಗುನುಗುಟ್ಟಿದೆ!

ನಿನ ಕಣ್ಣ ಸವಿಮಾತು,

ಎದೆಯಲೇ ಮನೆ ಕಟ್ಟಿದೆ!


ನೀನು ಬರದಿರೆ ಈಗ,

ಮಿಡಿವುದೇ ಈ ಹೃದಯ?

ಬಂತಿದೋ ಬಹಬೇಗ,

ಕೊನೆಯ ಉಸಿರಿನ ಸಮಯ!


Wednesday, April 24, 2024

ಎರಡು ಹನಿ

ಕಾದು ಕಾದು ಕಾಯುತ್ತಿದ್ದ
ಮಳೆಯು ಬಂದೇಬಿಟ್ಟಿತು
ಹೊರಗೆ ಇಣುಕಿ ಹರುಷದಿಂದ
ಮನಸು ಕುಣಿದುಬಿಟ್ಟಿತು

ತಂತಿ ಮೇಲೆ ಇರುವ ಬಟ್ಟೆ
ಬೇಗ ತನ್ನಿ ಅಂದಳು
ಒಣಗಲಿಟ್ಟ ಹಪ್ಪಳಗಳ
ತಾನೆ ಓಡಿ ತಂದಳು

ಓಡಿ ಓಡಿ ಮಹಿಡಿ ಹತ್ತಿ
ಬಟ್ಟೆ ತರಲು ಹೊರಟೆನು
ಮಳೆಯ ಹನಿಯ ತಂಪಿಗೆ
ಮೈಯ ಒಡ್ಡಿ ನಿಂತೆನು

ನೆನೆಯಬೇಡಿ ಮೊದಲ ಮಳೆಯು
ರೋಗ ರುಜಿನ ತರುವುದು
ಕೂಗಿ ಕರೆದಳೆನ್ನ ಮಡದಿ
ಬೇಗ ಮರಳಿ ಬಂದೆನು

ಅಯ್ಯೋ ದೇವ ಎರಡೆ ಹನಿಯು
ಪಲ್ಸ್ ಪೋಲಿಯೊ ಹಾಗೆಯೆ
ಇಳಿದು ಹೋಯ್ತು ಹರುಷವೆಲ್ಲ
ಬಂದ ಹಾಗೆ ಬೇಗನೆ

Monday, March 4, 2024

ಚುಟುಕುಗಳು

ಚುಟುಕು: ನಾಲ್ಕು ಸಾಲುಗಳ ಕವನ. ಅಂತ್ಯಪ್ರಾಸ ಕಡ್ಡಾಯ


ದತ್ತಪದ : ಬದಲಾವಣೆ

ಇರಬೇಕು ಸಹನೆ ತಪ್ಪಿಸಲು ಬಲು ಬವಣೆ
ಕರಗಿಸುತ ಕೋಪವನು ಸಹನೆಗೆ ಹಾಕು ಮಣೆ
ಸುರಿಯುವುದು ಎದೆಯಲ್ಲಿ ದಯೆ ಮತ್ತು ಕರುಣೆ
ತರುವುದು ಬದುಕಿನಲಿ ಸುಂದರ ಬದಲಾವಣೆ

ದತ್ತಪದ : ಧಾರಾಕಾರ

ಧಾರಾಕಾರ ಮಳೆಗೆ ರಸ್ತೆಗಳು ನದಿಯ ಧಾರ,
ವಾಹನ ಸಂಚಾರವಾಯಿತು ಬಹಳ ದುಸ್ತರ!
ಜನತೆ ಕೇಳಿತು ಸರ್ಕಾರವ ಏಕೀ ಅವಾಂತರ?
ಹಿಂದಿನ ಸರ್ಕಾರವ ದೂರಿತು ಈಗಿನ ಸರ್ಕಾರ!

ದತ್ತಪದ : ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲೇ "ಅಮ್ಮ"!

ದತ್ತಪದ: ಮನೆ

ಮನೆಯಿರಬೇಕು ಮಕ್ಕಳಿಗೆ ತೆನೆಯಂತೆ ಕಾಳಿಗೆ
ಬೆಳೆಯಬೇಕು ಸಂತಸದಲಿ ಬರವಿರದಂತೆ ಕೂಳಿಗೆ
ಹೂವರಳುವಂತೆ ಮನ ವಿಕಸಿಸಬೇಕು ಬೆಳೆಯುತ
ಸಮಾಜಕೆ ಉಪಕಾರಿಯಾಗಬೇಕು ಬಾಳು ಬಾಳುತ

ದತ್ತಪದ : ನಗು-ಹ್ಯಾಪಿ

ನಗುತಿರಲು ಹ್ಯಾಪಿ, ನಗದಿರುವ ಪಾಪಿ,
ಅವನು ಕೋಪಿ, ಬರುವುದವಗೆ ಬೀಪಿ.
ಮಾಡಿದರೂ ಕಾಪಿ, ಊದುತಿರು ಪೀಪಿ,
ಹಾಕಿದರೂ ಟೋಪಿ, ಆಗದಿರು ಪಾಪಿ.

ದತ್ತಪದ : ಶ್ರಾವಣ

ಬಂತದೋ ಶ್ರಾವಣ ತಂದಿತೋ ತೋರಣ,
ಸಡಗರಕ್ಕೆ ಹೂರಣ ಹಬ್ಬಗಳೇ ಕಾರಣ,
ಭಕ್ತಿಯಲಿ ಪೂಜನ, ಮಂತ್ರಗಳ ಪಠಣ,
ತನುಮನಕೆ ರಸನಕ್ಕೆ ದಿನದಿನವೂ ಔತಣ!

ದತ್ತಪದ : ದಸರಾ

ದಸರೆಯು ತಂದಿಹುದು ಸಂಭ್ರಮಾನಂದ
ನವದುರ್ಗೆಯರ ಆರಾಧನೆಯ ಭಕ್ತಿಬಂಧ
ಜಂಬೂ ಸವಾರಿಯ ವೈಭವದ ಚೆಂದ
ನವೀಕರಿಸುತ ಎಲ್ಲರಲಿ ಸ್ನೇಹ ಸಂಬಂಧ



Friday, January 19, 2024

ರಾಮಧ್ಯಾನ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ


ರಾಮನ ನಾಮವೆ ತಾರಕ ಮಂತ್ರವು

ಕಾಮನೆಗಳನೇ ಸುಡುವಾ ಅನಲ

ತಾಮಸ ಕಾಯಕೆ ಚಲಿಸುವ ಬಲವ

ನಾಮದ ಮಾತ್ರದೆ ನೀಡುವ ಸಬಲ ||


ಮರಮರ ಎನ್ನುವ ರತ್ನಾಕರನಿಗೆ

ವರಗಳ ನೀಡಿದೆ ಕಾವ್ಯವ ರಚಿಸೆ

ಸರಯೂ ತೀರದ ಚೆಲುವಿನ ಪುತ್ತಿಗೆ

ಕರೆದರೆ ಬರುವೆಯ ಎನ್ನನು ಹರಸೆ ||


ಜನರನು ಕಾಡುವ ದೈತ್ಯರ ಕೊಂದವ

ಮನದಲಿ ಎನ್ನಯ ದೋಷವ ಕೊಲ್ಲು

ಹನುಮನ ಹೃದಯದಿ ನಿಂತಿಹೆ ರಾಘವ

ಕನಿಕರ ತೋರೋ ಎದೆಯಲಿ ನಿಲ್ಲು ||


ವಂದಿಪೆ ರಾಮನೆ ನಿನ್ನಯ ಪಾದಕೆ

ಬಂದಿಹೆ ನಮಿಸುತ ಕರುಣೆಯ ಬೇಡಿ

ಚಂದದಿ ಕರೆಯೋ ಆತ್ಮದ ಸನಿಹಕೆ

ಗಂಧದ ಹಾಗೆಯೆ ನನ್ನನು ತೀಡಿ ||


ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ

Tuesday, November 21, 2023

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು

ಆರ್ಯವೈಶ್ಯ ಸಾಹಿತ್ಯ ಪರಿಷತ್ತು,

ನಮಗು ಗೊತ್ತು, ನಿಮಗು ಗೊತ್ತು,ಎಲ್ಲರಿಗೂ ಗೊತ್ತು!


ಅಂಬೆಗಾಲ ಇಡುತ್ತಿದ್ದ ಈ ನಿಮ್ಮ ಪೋರ,

ಆಗಿಹನು ಹದಿಹರೆಯದ ಚಿತ್ತ ಚೋರ!

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗಮನವ ಸೆಳೆದವ,

ಚಿಗುರು ಮೀಸೆ ತೀಡುತ್ತ ನಗುನಗುತ ನಿಂತಿರುವ!


ಸಾಹಿತ್ಯ ಸಂಸ್ಕೃತಿಗೆ ನಮಿಸಿ ಹೆಜ್ಜೆ ಇಟ್ಟವ,

ಎಲೆಯ ಮರೆಯ ಕಾಯ್ಗಳಿಗೆ ಬೆಳಕನು ಕೊಟ್ಟವ!

ಉದಯಿಸುವ ಪ್ರತಿಭೆಗಳ ಕೈಯ ಹಿಡಿದವ,

ಬೆನ್ನ ತಟ್ಟಿ ಧೈರ್ಯ ತುಂಬಿ ಅಭಯವಿತ್ತವ!


ದಾನಿಗಳ ಕೊಡುಗೆಯಿಂದ ಶಕ್ತಿವಂತನು,

ಅವರ ನೆರವನೆಂದೂ ಮರೆತು ನಡೆಯನು!

ಸದಸ್ಯರು ಕೊಟ್ಟ ಹುರುಪು ರಕ್ಷೆಯಾಯಿತು,

ಕಾರ್ಯಕಾರಿ ಶ್ರಮದಿಂದ ಯಶವು ಬಂದಿತು!


ಸಾಧಿಸಲು ಕಲಿಯುಲು ಇನ್ನೂ ಇದೆ ಬಹಳ,

ಬೆಳೆಯುವನು ಬೆಳೆಸುವನು ದಾರಿ ಮಾಡಿ ಸರಳ!

ಹೀಗೆ ಇರಲಿ ಸದಾ ನಿಮ್ಮ ಪೋಷಿಸುವ ಪಾತ್ರ,

ಆಗುವನು ಜನಾಂಗಕೆ ಕಂಗಳ ನಕ್ಷತ್ರ!

Friday, October 13, 2023

ಹನಿಗವನಗಳು


ಹನಿಗವನ:

ಆರು ಸಾಲಿನ ಕವನ. ೧,೨,೪,೫ ಸಾಲುಗಳಲ್ಲಿ ಒಂದೆರಡು ಪದಗಳಿರಬೇಕು. ೩,೬ ಸಾಲುಗಳಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಮತ್ತು ಇವೆರಡರಲ್ಲಿ ಅಂತ್ಯಪ್ರಾಸವಿರಬೇಕು.


೧. ಹೆಣ್ಣು

ಹೆಣ್ಣಲ್ಲ ಅಬಲೆ

ತಾಯಾಕೆ ವಿಮಲೆ

ಜಗಕೆ ಮಡಿಲಿತ್ತ ಸಬಲೆ

ಸಂಕೀರ್ಣ ಈ ಹೆಣ್ಣು

ಅರ್ಥವಾಗದ ಹಣ್ಣು

ಸುಖ ಸಂಸಾರದ ಕಣ್ಣು




೨. ಕನಸು


ಬಣ್ಣಬಣ್ಣದ ಕನಸು
ಕಾಣಲೇನೂ ಶ್ರಮವಿಲ್ಲ
ನನಸಾಗಿಸಲು ಬಾಗುವುದು ಬೆನ್ನು
ಬಣ್ಣಬಣ್ಣದ ಕನಸು
ಕಾಣಲೇನೂ ಖರ್ಚಿಲ್ಲ
ನನಸಾಗಿಸಲು ಕಳೆಯುವುದು ಹೊನ್ನು


೩. ಅಪ್ಪ

ಮೊದಮೊದಲು
ನೀನೆನಗೆ
ಅರ್ಥವಾಗಿರಲಿಲ್ಲ ಅಪ್ಪ
ನಿನ್ನ ಕಾಳಜಿ, ಶಿಸ್ತು
ನಾ ಅಪ್ಪನಾದಾಗ
ಸರಿಯಾಗಿ ಅರ್ಥವಾಯಿತಪ್ಪ!

೪. ವಿಷಯ : ಯುದ್ಧ /ಸಮರ

ಚುಚ್ಚಿದರು
ಕೆಣಕಿದರು
ಹಲವು ವರ್ಷಗಳ ಕಾಲ
ಉಂಡಿಹರು
ಸಮರದಲಿ
ನಾವು ತೀರಿಸುವ ಸಾಲ


೫. ವಿಷಯ : ಮಳೆ, ಗಾಳಿ, ಕರೆಂಟು

ಮಳೆ ಗಾಳಿಗೂ
ಕರೆಂಟಿಗೂ
ಇದೆ ವೈರತ್ವದ ನಂಟು
ಬಂದಿತೆಂದರೆ
ಮಳೆ ಗಾಳಿ
ಓಡಿ ಹೋಗುವುದು ಕರೆಂಟು


೬. ವಿಷಯ : ಮೌನ

ಬಡಬಡಿಸುವ ಮಾತೇಕೆ,
ಪಿಸುಗುಟ್ಟೊ ನುಡಿಯೇಕೆ,
ನೀರವ ಮೌನದಲಿ ಮಾತಿಲ್ಲವೇನು?
ಕಣ್ಣಿನಾ ಮಿಂಚುಗಳು,
ತುಟಿಗಳಾ ಕೊಂಕುಗಳು,
ಸೆಳೆದು ಮನಕೆ ಮಾತನುಸಿರಿಲ್ಲವೇನು?

೭. ವಿಷಯ : ಕ್ರೌರ್ಯ
1.
ಕೆಂಪಾಯ್ತು ಹಿಮರಾಶಿ
ಕಟುಕರ ಕ್ರೌರ್ಯಕ್ಕೆ
ಮತಾಂಧರ ನಿರ್ದಯ ರಾಕ್ಷಸತ್ವಕ್ಕೆ!
ಉತ್ತರವಿದೆಯೇ ನಮ್ಮಲ್ಲಿ
ಆಕ್ರಮಣದ ಸಂಚಿಗೆ
ಮರೆಯಲಾಗದ ಪಾಠ ಕಲಿಸುವುದಕ್ಕೆ?
2.
ದಯೆಯಿಲ್ಲದ ಧರ್ಮ
ಉಂಟು ಬುವಿಯಲ್ಲಿ
ನಂಬಿದವರು ಆಗಿಹರು ರಾಕ್ಷಸರು
ಹಿಂಸೆಯೇ ವಿಚಾರ
ಕ್ರೌರ್ಯವೇ ಪ್ರಚಾರ
ದಾನವತ್ವಕ್ಕೆ ಮತ್ತೊಂದು ಹೆಸರು!  

೮. ವಿಷಯ: ಬಣ್ಣ

ಪ್ರತಿಯೊಬ್ಬರೂ ಒಂದು
ಬಣ್ಣವಿದ್ದಂತೆ, ಅವರ
ವ್ಯಕ್ತಿತ್ವವೇ ಆ ಬಣ್ಣದ ಚೆಲ್ಲು
ಕಲಬೆರಕೆಯಾಗದೆ
ಸುಂದರ ಸಮರಸದಿ
ಕಲೆತಾಗೋಣ ಸುಂದರ ಕಾಮನಬಿಲ್ಲು

೯. ವಿಷಯ: ಯಾತ್ರೆ

ಜೀವನದ ಯಾತ್ರೆಯಿದು
ನಿಲ್ಲದಿಹ ಪಯಣವಿದು
ಸೇರಲು ನಾವು ಕಾಣದಿಹ ಪುಣ್ಯಕ್ಷೇತ್ರ
ಗುರಿಯು ಮರೆಯದೆ ಇರಲಿ
ದಾರಿ ತಪ್ಪದೆ ಇರಲಿ
ತಲುಪುವೆವುಗಮ್ಯವ ಆಗ ಮಾತ್ರ

೧೦. ವಿಷಯ: ರಕ್ಷಾ ಬಂಧನ

ಅಣ್ಣ ತಂಗಿಯರ 
ಸವಿ ಬಂಧ
ಅದುವೇ ರಕ್ಷಾ ಬಂಧನ
ಪ್ರತಿ ವರುಷ
ತಂದು ಹರುಷ
ಮನೆಯನಾಗಿಸಿತು ನಂದನ

೧೧. ವಿಷಯ: ಗುರು ಶಿಷ್ಯರು

ಗುರುಶಿಷ್ಯರ ಸರಪಳಿ
ನೀಡುತಿದೆ
ಜ್ಞಾನ ವಿಜ್ಞಾನದ ಬಳುವಳಿ
ಕತ್ತಲೆಯ ಕಳೆಯುತ
ನಿರಂತರ
ಅಂಧ ಅಜ್ಞಾನದ ಸವಕಳಿ

೧೨. ವಿಷಯ: ನಿದ್ದೆ

ಬರದೇ ಬರದೇ
ಬಹಳ ಸಮಯಕೆ
ಬಂದಿತು ಗಾಢವಾದ ನಿದ್ದೆ
ಪುಟಿದು ಬಂದಿತು
ಕಾಲ್ಚೆಂಡು ಕನಸಿನಲಿ
ಜೋರಾಗಿ ನನ್ನವಳಿಗೆ ಒದ್ದೆ!

೧೩. ವಿಷಯ : ಕೃಷ್ಣಜನ್ಮಾಷ್ಟಮಿ

ಆ ಮುರುಳಿಯಲಿ
ಊದುತ ಉಸಿರನು
ನಾದ ಹೊರಡಿಸಿದೆ ನೀ ಕೃಷ್ಣ
ತೊಗಲು ಬೊಂಬೆಗಳಲಿ
ತುಂಬುತ ಉಸಿರನು
ಪ್ರಾಣ ನೀಡಿದೆ ನೀನೇ ಕೃಷ್ಣ

Sunday, October 1, 2023

ದೀಪಾವಳಿ

ಕಾಣುತಿಹುದು ದೀಪ ಮಾಲೆ,

ಬೀದಿಯಲ್ಲಿ ಸಾಲು ಸಾಲೆ.

ಬೆಳಕ ಬೀರಿ ನಗುವ ಚಿಮ್ಮಿದೆ,

ದೀಪಾವಳಿಯ ಹುರುಪು ತಂದಿದೆ.


ಗಂಗಾ ಮಾತೆಯೆ ಶರಣು ಶರಣು

ನೀರ ತುಂಬುವೆ ಇಂದು ನಾನು

ಶುದ್ಧವಾಗಲಿ ಮಲಿನ ತನುವು

ಹಗುರವಾಗಲಿ ನೊಂದ ಮನವು


ಕೃಷ್ಣ ದೇವನೆ ನಿನಗೆ ನಮನ

ಆಗಲಿಂದೇ ಅಸುರ ದಮನ

ನರಕ ಚತುರ್ದಶಿಯ ಶುಭದಿನ

ನರಕಾಸುರರಿಗೆ ಕೊನೆ ದಿನ


ಕೇಳುತಿಹುದು ಗೆಜ್ಜ ನಾದ,

ನೋಡು ಅಲ್ಲಿ ದಿವ್ಯ ಪಾದ,

ಬಂದಳಗೋ ಲಕುಮಿ ತಾಯಿ,

ಸಲಹು ಎಮ್ಮನು ನೀನು ಮಾಯಿ.


ವಾಮನಮೂರ್ತಿ ನೀನು ಬಂದೆ

ಭೂಮ್ಯಾಕಾಶಗಳ ತುಳಿದು ನಿಂದೆ

ಬಲಿಗೆ ಮೋಕ್ಷವ ಬಳಿಗೆ ತಂದೆ

ಪಾಲಿಸು ಎಮ್ಮನು ನೀನೆ ತಂದೆ



ಬಕುತಿ ಭಾವಗಳು ಚಿಮ್ಮಿ ಓಕುಳಿ

ಹರುಷದಾ ದೀಪಾವಳಿ

ದೀಪಗಳ  ಸಿರಿ ಬೆಳಕಲಿ

ವಿಶ್ವ ಶಾಂತಿಯು ಹರಡಲಿ


ಬೆಳಕಿನ ಎರವಲು

ನೀಡಿ ಬೆಳಕಿನ ಎರವಲು

ದೀಪವಾಗಿಸು ಎನ್ನನು.

ದೀಪಾವಳಿಗಳ ಮಾಲೆಯಲ್ಲಿ,

ಚೆಂದ ಪೋಣಿಸು ಎನ್ನನು.


ಜಗಕೆ ಮಿಣುಕು ಬೆಳಕನಿತ್ತು

ಕುಣಿವೆ ನಿನ್ನ ಹೆಸರಲಿ.

ಕೆರೆಯ ನೀರನು ಕೆರೆಗೆ ಚೆಲ್ಲಿದ,

ಧನ್ಯ ಭಾವವು  ನನ್ನದಿರಲಿ.


ಮನದ ತಮವು ಕರಗಲಿ,

ಜಡತೆ ಮಾಯವಾಗಲಿ.

ಜಗದ ನೋವು ನೀಗಲಿ,

ಹೊಸ ಬೆಳಕಿನಾ ಬೆಳಕಲಿ.


ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ