Sunday, July 10, 2022

ಮುಕ್ತಕಗಳು - ೩

ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?

ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |

ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!

ಯಶವ ಗುಣದಲಿ ನೋಡು ~ ಪರಮಾತ್ಮನೆ  ||೧೧||


ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು

ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |

ಒಡೆಯನನು ಮರೆತಾಗ ಎದೆಯ ಗೂಡಿನಲಿರುವ

ಕೊಡುವನೇ ಪರಮಪದ ~ ಪರಮಾತ್ಮನೆ ||೧೨||


ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ

ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |

ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ

ಸಿಗಲಿ ಬಾಳಲಿ ಸವಿಯು ಪರಮಾತ್ಮನೆ  ||೧೩||


ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ 

ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |

ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು

ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||


ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ

ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |

ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು

ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||

 

ಮುಕ್ತಕಗಳು - ೨

ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?

ಕನ್ಯೆ ಬೇಕೆನುವಾಭರಣದಲಂಕಾರ |

ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ

ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||


ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?

ಶಕ್ತ ಚೌಕಟ್ಟಿನಲ್ಲನುಭಾವ  ಹೊಂದಿ |

ರಕ್ತಮಾಂಸಗಳಿರುವ ಜೀವಂತ ಗೊಂಬೆಯದು

ಭಕ್ತನಾಗಿಹೆ ನಾನು ಪರಮಾತ್ಮನೆ ||೭||


ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ

ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |

ಇಂದು ಆ  ಕಗ್ಗವೇ ದಿಕ್ಸೂಚಿ  ಬದುಕಲಿಕೆ

ಸಂದೇಹ ಎಲ್ಲಿಹುದು ಪರಮಾತ್ಮನೆ ||೮|| 


ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ

ಮುಕ್ತಕವನೋದಿದರೆ ತಲೆ ತೂಗಬೇಕು |

ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು

ಮುಕ್ತಮನ ಶರಣೆನಲಿ ಪರಮಾತ್ಮನೆ ||೯||


ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು

ವಾಸುದೇವನ ಕೃಪೆಯು ಜೊತೆಯಾಗಬೇಕು |

ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ

ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ  ||೧೦||

ಮುಕ್ತಕಗಳು - ೧

ಪೂಜೆಯನು ಮಾಡಿದರೆ ಪುಣ್ಯವದು ಬರುವುದೇ

ಮೋಜಿನಲಿ  ಮನ ಮುಳುಗಿ ತೇಲುತಿರೆ ನಿತ್ಯ |

ಗಾಜಿನಾ ಕಿಟಕಿಗಳು ಗೋಣಿಯಲಿ ಮುಚ್ಚಿರಲು

ತೇಜಸ್ಸು ಒಳಬರದು ~  ಪರಮಾತ್ಮನೆ ||೧||


ಬಿಸಿಯೂಟ  ಹಸಿವಳಿಸೆ ಸಿಹಿನೀರು  ಮನತಣಿಸೆ

ಉಸಿರಾಡೆ ತಂಗಾಳಿ ಸೂರು ತಲೆಮೇಲೆ |

ಹಸಿವ ತೀರಿಸುವುಗಳನೆಲ್ಲವನು  ನನಗಿತ್ತೆ

ಕೊಸರು ಬೇಡೆನು ನಿನ್ನ ಪರಮಾತ್ಮನೆ ||೨||


ಯೋಗಿಯಾಗೆಂದಾಸೆಗಳ ತುಂಬಿಸಿ, ತ್ಯಜಿಸು

ಭೋಗಗಳನೆಂದೆ, ಮುಳುಗಿಸಿ ವಿಷಯಗಳಲಿ |

ರಾಗಗಳ ಗುಲಾಮನ ಮಾಡಿಟ್ಟೆ ನನ್ನನ್ನು

ಹೇಗೆ ಗುರಿ ಮುಟ್ಟುವುದು ಪರಮಾತ್ಮನೆ? ||೩||


ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ

ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |

ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ

ಒಳಗಣ್ಣ ತೆರೆಸು ನೀ ಪರಮಾತ್ಮನೆ ||೪||


ದಿನದಿನದ ಬದುಕಿನಲಿ ನಿಲ್ಲದಿಹ ಓಟದಲಿ

ಕನಸುಗಳ ಬೇಟೆಯಲಿ ಮನಕಿಲ್ಲ ಶಾಂತಿ |

ದನಕೆ ಬೇಕಿದೆ ಮೂಗುದಾರದಾ ಕಡಿವಾಣ

ಮಣಿಸಿ ಚಿಂತನೆ ನೀಡು ಪರಮಾತ್ಮನೆ ||೫||

ಮುಕ್ತಕಗಳು - ೫

ಬಾಳಿನಲಿ ಕಷ್ಟಗಳು ಎದುರಾಗೆ ಭಯವೇಕೆ?

ಕಾಲಚಕ್ರವು ತಿರುಗುತಿದೆ ನಿಲ್ಲದಂತೆ |

ಕಾಳರಾತ್ರಿಯು ಕರಗಿ ಹೊಂಬೆಳಕು ಮೂಡುವುದು

ಕಾಲಕ್ಕೆ ಎದುರಿಲ್ಲ ಪರಮಾತ್ಮನೆ ||೨೧||


ಮೂಡಣದ ಕೋಣೆಯಲಿ ಉಷೆಯು ಕೆಂಪಾಗಿಹಳು

ಮೋಡದಾ ಸೆರಗನ್ನು ತಲೆಮೇಲೆ ಹೊದ್ದು |

ನೋಡುತಲೆ ಉದಯನನು ನಾಚಿನೀರಾಗಿರಲು

ಕಾಡಿನಲಿ ಹನಿಮುತ್ತು ಪರಮಾತ್ಮನೆ ||೨೨||


ನಿಯತಕರ್ಮಗಳನ್ನು ನಿರ್ವಹಿಸಿ,  ಫಲಗಳನು

ಬಯಸದೆಯೆ ಕಾಯಕವ ಅನವರತ ನಡೆಸೆ |

ಜಯವನಿತ್ತರೆ ದೇವ ಕರಮುಗಿದು ಪಡೆಯುವೆನು

ದಯವು ನಿನ್ನದೆ ಬಲ್ಲೆ ಪರಮಾತ್ಮನೆ ||೨೩||


ಮಲ್ಲಿಗೆಯ ಮುಡಿದಿರುವ ಮುಗುದೆಯಾ ಮೊಗದಲ್ಲಿ

ಚೆಲ್ಲಿಹುದು ಚುಂಬಕದ ಚಂಚಲಿಸೊ ಚೆಲುವು |

ಕಲ್ಲೆದೆಯ ಕಾದಲನ ಕೋಪವನು ಕರಗಿಸಿರೆ

ಸಲ್ಲಿಸಿಹ ಸರಮಾಲೆ ಪರಮಾತ್ಮನೆ ||೨೪||


ಬೆಚ್ಚಿಹೆವು ನಾವುಗಳು ಕೋಮಲದ ಕುಸುಮಗಳು

ಚುಚ್ಚುವಿರಿ ಸೂಜಿಯಲಿ ಕುಣಿಕೆ ಬಿಗಿಯುವಿರಿ |

ಹುಚ್ಚರೇ ಶವದಮೇ ಲೇಕೆಶಯ ನದಿಬೇಕೆ  

ಮೆಚ್ಚದಿರು ಮನುಜರನು ಪರಮಾತ್ಮನೆ ||೨೫||

ಮುಕ್ತಕಗಳು - ೪

ಶಿಶು ರಚ್ಚೆ ಹಿಡಿವಂತೆ ಪಾರಿತೋಷಕದಾಸೆ

ಪಶುಗಳೂ ಕೋರುತಿವೆ ಶಾಲು ಪೇಟಗಳ |

ಸಶರೀರವಾಗಿ ನಾಕಕ್ಕೆ ತೆರಳುವ ಆಸೆ

ನಶೆಯ ಇಳಿಸಯ್ಯ ನೀ ಪರಮಾತ್ಮನೆ ||೧೬||


ಇಂದು ಮಂಜಮ್ಮ ಜೋಗತಿಗೆ ಮುಕ್ತಕಸೇವೆ

ಮಂದ್ರದಲಿ ಉಳಿಯದೆಯೆ ಮೇಲಕ್ಕೆ ಎದ್ದೆ |

ಕಂದೀಲು ಬೆಳಕಿನಲಿ ಹೊಳೆಯುವಾ ವಜ್ರದೊಲು

ಬಂದಿಹುದು ಪದುಮಸಿರಿ ಪರಮಾತ್ಮನೆ ||೧೭||


ಗೀತೆಯಲಿ ನೀ ಕೊಟ್ಟೆ ಮೂರು ಮಾರ್ಗಗಳೆಮಗೆ

ಮಾತೆಯೊಲು ಮಮತೆಯಲಿ ಮೃಷ್ಟಾನ್ನದಂತೆ |

ಕೂತು ಕಳೆಯದೆ ಸಮಯ ಓಡುತ್ತ ಸಾಗುವೆನು

ಸೋತೆನೆಂದರೆ ಕೇಳು ಪರಮಾತ್ಮನೆ ||೧೮||


ದೇಶವನು ಆಳುವರ ಜನರಾರಿಸಿದ್ದರೂ

ಆಶಯಗಳೆಲ್ಲ ಪುಡಿಮಣ್ಣಾಗುತಿಹುದು |

ಪೋಷಿಸಿದ ಪಶುವನ್ನು ಕಟುಕನಿಗೆ ಒಪ್ಪಿಸಿರೆ

ದೂಷಿಪುದು ಯಾರನ್ನು ಪರಮಾತ್ಮನೆ ||೧೯||


ಸಂಪತ್ತು ಸಂಬಂಧ ನಂಟೇನು ಜಗದಲ್ಲಿ?

ಸಂಪತ್ತಿಗೋಸ್ಕರದ ಸಂಬಂಧ ಒಡಕು |

ಸಂಪತ್ತ ಕಡೆಗಣಿಸೊ ಸಂಬಂಧ ಕೊನೆತನಕ

ತಂಪಿನಾ ಸಂಬಂಧ ಪರಮಾತ್ಮನೆ ||೨೦||

Thursday, June 23, 2022

ಹದಿಹರೆಯ

ಹದಿಹರೆಯವು ಹೆದೆಯೇರಿದೆ,

ಹರುಷ, ಹಿಗ್ಗು ಹೊಮ್ಮುತಿದೆ!

 

ಹಾಲ್ಗಲ್ಲದ ಹಾಲು ಹಿಂಸರಿದಾಯ್ತು,

ಹೊಂಬಣ್ಣಕೆ ಹೆಜ್ಜೆಯ ಹಾಕಾಯ್ತು.

ಹಸುಗೂಸುಗಳಲ್ಲ ಹದಿಹರಯದ ಹುಂಬರು,

ಹುರುಪಿನ ಹಬ್ಬಕೆ ಹದವಾಗಿಹರು!


ಹದ್ದನು ಹೇರುವ ಹೆತ್ತವರನಿವರು,

ಹದ್ದಿಗೆ ಹೋಲಿಸುವ ಹತಾಶರು!

ಹಿತೈಷಿಗಳು ಹಾಡುವ ಹಿತನುಡಿಯು,

ಹಿಡಿಸದೆ ಹಿಂಡಿ ಹಿಪ್ಪೆಯಾದವರು!

 

ಹಂಬಲಿಸುತಿದೆ ಹೃದಯವು,

ಹೊಸತನದ ಹಸಿ ಹರುಷಕೆ,

ಹದ್ದುಗಳ ಹರಿದು, ಹೆದಿರಿಕೆಯ ಹುರಿದು,

ಹಕ್ಕಿಗಳಾಗಿ ಹಾರುತ್ತ ಹೋಗಲು!