ಎಲೆಯಲ್ಲಿ ಕೊಳೆಯಿರಲು ಊಟ ಮಾಡುವುದೆಂತು
ಕೊಳೆಯನ್ನು ತೊಳೆದು ಶುಭ್ರಗೊಳಿಸಲು ಬೇಕು |
ಮಲಿನತೆಯು ಮನದಲ್ಲಿ ಮನೆಮಾಡಿ ನಗುತಿರಲು
ಮುಳುವಾಯ್ತು ಸವಿನುಡಿಗೆ ~ ಪರಮಾತ್ಮನೆ||೩೪೬||
ಸುಖವಿಲ್ಲ ನಗನಾಣ್ಯ ದಿರಿಸು ಅರಮನೆಗಳಲಿ
ಸುಖವಿಹುದು ನಮ್ಮದೇ ಸ್ವಂತ ಮನಗಳಲಿ |
ಸಕಲ ಸಂತೋಷಗಳ ಆಕರವು ಎದೆಯಲಿರೆ
ಮಕುಟ ಬೇಕೇಕೆ ದೊರೆ ~ ಪರಮಾತ್ಮನೆ ||೩೪೭||
ಮಕುಟವಿರೆ ಚಿನ್ನದ್ದು ತಲೆಗಾಯ್ತು ಮಣಭಾರ
ಸಕಲ ಅಧಿಕಾರವಿರೆ ಕರ್ತವ್ಯಭಾರ |
ಸಕಲ ಐಶ್ವರ್ಯವಿರೆ ಭಯಭಾರ ಮನದಲ್ಲಿ
ಯುಕುತಿಯಲಿ ತೂಗಿರುವೆ ಪರಮಾತ್ಮನೆ ||೩೪೮||
ಸುಖ ಪಡಲು ಪರಮಾತ್ಮ ಜನುಮವನು ಕೊಟ್ಟಿರುವ
ನಖಶಿಖಾಂತದ ದೇಹ ಬುದ್ಧಿ ಮನಗಳನು |
ಸುಖ ಪಡಲು ದೇವರಲಿ ವಸ್ತುಗಳ ಬೇಡಿಹೆವು
ಪ್ರಖರ ಮಂದಮತಿಗಳು ~ ಪರಮಾತ್ಮನೆ ||೩೪೯||
ಬುದ್ಧಿಜೀವಿಗಳೆಂದು ಗದ್ದಲವ ಮಾಡಿಹರು
ಸದ್ದು ಮಾಡುತಿವೆ ಅರೆಬೆಂದ ಮಡಕೆಗಳು |
ಪೆದ್ದ ದೊರೆ ಕುರುಡನೊಲು ಆನೆಯನು ಮುಟ್ಟಿದವ
ಉದ್ಧರಿಸು ಇಂಥವರ ಪರಮಾತ್ಮನೆ ||೩೫೦||