ನಮ್ಮ ಭಾಗ್ಯವು ಕರ್ಮ ಶ್ರಮಗಳ ಮಿಶ್ರಣವು
ಎಮ್ಮೆಯಂತಿರಬೇಕೆ ಕರ್ಮಕ್ಕೆ ಬಾಗಿ |
ಹೊಮ್ಮಿಸುವ ಶ್ರಮದಿಂದ ಹೊಸತು ಸತ್ಫಲಗಳನು
ಚಿಮ್ಮಿಸುವ ಆನಂದ ~ ಪರಮಾತ್ಮನೆ ||೪೯೬||
ಹೇರಿದರೆ ನಿಮ್ಮಾಸೆಗಳನು ಮಕ್ಕಳಮೇಲೆ
ದೂರದಿರಿ ತೀರದಿರೆ ನಿಮ್ಮ ಬಯಕೆಗಳು |
ಯಾರ ತಪ್ಪದು ಎಣ್ಣೆ ನೀರಿನಲಿ ಕರಗದಿರೆ
ನೀರಿನದೊ? ಎಣ್ಣೆಯದೊ? ~ ಪರಮಾತ್ಮನೆ ||೪೯೭||
ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ
ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? |
ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ
ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ ||೪೯೮||
ಅನೃತವನು ನುಡಿಯುತ್ತ ಪಡೆದ ಉತ್ತಮ ಪದವಿ
ಜನರ ಹಿಂಸಿಸಿ ಪಡೆದ ಗೌರವಾದರವು |
ಧನವ ಗಳಿಸಿಟ್ಟಿರಲು ಮೋಸದಾ ಹಾದಿಯಲಿ
ಇನನ ಎದುರಿನ ಹಿಮವು ~ ಪರಮಾತ್ಮನೆ ||೪೯೯||
ಎಲ್ಲವನ್ನೂ ನಮಗೆ ಕೊಟ್ಟಿರುವ ಲೋಕಕ್ಕೆ
ಎಳ್ಳಿನಷ್ಟಾದರೂ ಕೊಡಬೇಕು ನಾವು |
ಕಳ್ಳರಾಗುವೆವು ಕೊಡದೆಲೆ ಲೋಕ ತೊರೆದಲ್ಲಿ
ಜೊಳ್ಳು ಜೀವನವೇಕೆ? ~ ಪರಮಾತ್ಮನೆ ||೫೦೦||