ನಿನ್ನ ದುರ್ಗುಣಗಳನು ಕಿತ್ತು ಎಸೆಯಲು ಬೇಕು
ಅನ್ನದಕ್ಕಿಯ ಕಲ್ಲು ಹೆಕ್ಕಿ ತೆಗೆದಂತೆ |
ಮುನ್ನಡೆವ ಹಾದಿಯಲಿ ಮುಳ್ಳುಗಳು ಹೆಚ್ಚಿರಲು
ಸನ್ನಡತೆ ರಕ್ಷಿಪುದು ~ ಪರಮಾತ್ಮನೆ ||೪೪೧||
ಕೊಟ್ಟುಕೊಳ್ಳುವ ಸಂತೆಯಲಿ ಸರಕು ವಿನಿಮಯವು
ಒಟ್ಟು ಕರಗದು ಇಲ್ಲಿ ಸರಕುಗಳ ಗಂಟು! |
ಬಿಟ್ಟು ಗಂಟುಗಳೆಲ್ಲ ನಡೆ ಹಟ್ಟಿಯಾ ಕಡೆಗೆ
ಬೆಟ್ಟದಾ ಹಾದಿಯಿದೆ ~ ಪರಮಾತ್ಮನೆ ||೪೪೨||
ಫಲಭರಿತ ಮರಕುಂಟು ವಂಶ ಬೆಳೆಸುವ ಆಸೆ
ಜಲಧಿ ಸೇರುವ ಆಸೆ ಹರಿಯುವಾ ನದಿಗೆ |
ಇಳೆಯ ಕಣಕಣಕೆ ಇರಲಾಸೆಗಳು ಧರ್ಮವದು
ಅಳತೆ ಮೀರದೆ ಇರಲು ~ ಪರಮಾತ್ಮನೆ ||೪೪೩||
ಕರಿಗೆ ಸಾಕಾಗುವುದೆ ಕುರಿಯು ಮೇಯುವ ಮೇವು
ಉರಿಬಿಸಿಲ ಸೆಕೆಗೆ ಸಿಕ್ಕಂತೆ ಹನಿ ನೀರು |
ಅರೆಮನದ ಕಾರ್ಯಗಳು ನೀಡುವವೆ ಪೂರ್ಣಫಲ?
ಉರಿಸು ಇರುಳಿನ ದೀಪ ~ ಪರಮಾತ್ಮನೆ ||೪೪೪||
ಕಲರವದ ಹಾಡಿರಲು ತಂಗಾಳಿ ಬೀಸಿರಲು
ಬಳಿಯಲ್ಲೆ ನದಿಯಿರಲು ಹಸಿರು ನಗುತಿರಲು |
ಎಳೆಯ ತುಸು ಬಿಸಿಲಿರಲು ಚುಮುಗುಡುವ ಚಳಿಯಿರಲು
ಗೆಳತಿ ಜೊತೆಗಿರಬೇಕು ~ ಪರಮಾತ್ಮನೆ ||೪೪೫||