Saturday, December 4, 2021

ಯತ್ರ ನಾರ್ಯಸ್ತು ಪೂಜ್ಯಂತೆ...

ನಾಚಿಕೆಯಲಿ ತಲೆಯಿಂದು ತಗ್ಗಿದೆ, ನಿಂತಿಲ್ಲವಿನ್ನೂ ಕಣ್ಣೀರಧಾರೆ,

ಭಾರತಾಂಬೆಯ ಮಡಿಲಲಿ ಮುದುಡಿವೆ ಹೊಸ ಕನಸುಗಳು,

ಪೈಶಾಚಿಕತೆಗೆ ಬಲಿಯಾಗಿ ನಲುಗಿವೆ ನವಕುಸುಮಗಳು.


“ಕಾಮಾತುರಾಣಾಂ ನ ಭಯಂ ನ ಲಜ್ಜಾ”,

ಹತೋಟಿಯಿಲ್ಲದ ಮೃಗಗಳೇ ನಾವು?

ನಾಗರಿಕತೆಯು ಕೇವಲ ಕಥೆಯಾಗುಳಿದಿದೆಯೇ?


“ನ ಸ್ತ್ರೀ ಸ್ವಾತಂತ್ರ್ಯಮರ್ಹತಿ”

ಭಂಡ, ಪುಂಡ ಕಾಮುಕರ ಭಯವೇ?

ಅವರನ್ನು ಬದಲಾಯಿಸಲಾಗದ ಅಸಮರ್ಥತೆಯೇ?


“ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ”

ಆ ತಾಯಿಯಿಂದು ಶಕ್ತಿಹೀನಳಾಗಿ ತಲೆತಗ್ಗಿಸಿರುವಳೇ?

ಮಹಿಷರು, ರಕ್ತ ಬೀಜಾಸುರರು ಅಟ್ಟಹಾಸಗೈಯ್ಯುತ್ತಿರುವರೇ?


“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”

ಹೇ ದೇವ! ಇನ್ನೂ ಧರ್ಮವು ಉಳಿದಿದೆಯೇ ಭೂಮಿಯ ಮೇಲೆ?

ದ್ರೌಪದಿಯ ಪೊರೆದರೆ ಸಾಕೆ? ಸಂಕಟದ ಆರ್ತನಾದವು ಕೇಳುತ್ತಿಲ್ಲವೇ?


“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:”

ತೊರೆದುಬಿಟ್ಟರೇ ದೇವತೆಗಳು ನಮ್ಮ ನಾಡನೇ?

ನಿಲ್ಲದಾಗಿದೆ ಈ ನಾಚಿಕೆಗೇಡಿನ ಪೈಶಾಚಿಕ ವರ್ತನೆ!



ಕನ್ನಡಿಗನ ಕಥೆ


ಕನ್ನಡ, ಕನ್ನಡ, ಕನ್ನಡವೆಂದರೂ ವೇದಿಕೆಯನೇರಿ,

“ಎನ್ನಡ”, “ಎಕ್ಕಡ”, “ವ್ಹಾಟ್ ಡ”, ಎನ್ನುವುದಾಯಿತು ದಿನಚರಿ.

ಏಕೆ ಹೀಗೆ? ಏಕೆ ಹೀಗೆ? ಎಂದು ಅಚ್ಚರಿ ಪಡದಿರಿ,

ಇದು “ಅತಿಥಿ ದೇವೋಭವ” ದ ವಿಪರೀತಾರ್ಥದ ಪರಿ!



ಊರ ಮಕ್ಕಳಿಗೆ ಕನ್ನಡ ಕಡ್ಡಾಯ ಮಾಡಿ ಎಂದರು.

ತಮ್ಮ ಮಕ್ಕಳನು ಇಂಗ್ಲೀಷ್ ಶಾಲೆಗೆ ಕಳಿಸಿದರು,

ಐ.ಟಿ., ಬಿ.ಟಿ., ಮಾಡಿಸಿ ವಿದೇಶಕೆ ರವಾನಿಸಿದರು,

ಕನ್ನಡದ ಮಾಣಿಯ ಕೈಯ್ಯಲ್ಲಿ ಮುಸುರೆ ತೊಳೆಸಿದರು!

ಮನದ ಮಣ್ಣಿನಲಿ


ಮನದ ಮಣ್ಣಿನಲಿ ಕುಡಿಯೊಡೆದ ಬಯಕೆಗೆ

ಆಸೆಯ ನೀರೆರೆದು, ಊಹೆಯ ಬೆಳಕನಿತ್ತು,

ಬೆಳೆಸಿ ಹೆಮ್ಮರವಾಗಿಸಿ, ಫಲ ಕೊಡದ ಅದರ

ರೆಂಬೆಗೆ ನೇಣು ಹಾಕಿಕೊಂಡವರೇ ಹೆಚ್ಚು!

Thursday, October 14, 2021

ಯುಗಾದಿಯಿಂದ ಯುಗಾದಿಯವರೆಗೆ

ಮತ್ತೊಮ್ಮೆ ಸಜ್ಜಾಗಿದೆ ರಂಗಮAಚ,

ಹೊಸ ಕಿರಣಗಳ ಬೆಳಕಿನಲಿ, ಹೊಸ ಚಿಗುರು ಬಣ್ಣಗಳ,

ಕೋಗಿಲೆಗಳ ಸಂಗೀತದ ಹೊನಲಿನಲಿ.


ಮಾಸಿದ ಹಳೆಯ ತೆರೆಯು ಸರಿದಿದೆ,

ಹೊಸವರ್ಷದ ಭವ್ಯ ದೃಶ್ಯ ತೋರುತ.

ನೋಡಿದೆಡೆ ಹಸಿರು, ಮಾವುತೆಂಗುಗಳು ಬಸಿರು.


ಹೊಸ ದಿರಿಸಿನ ಪಾತ್ರಧಾರಿಗಳು

ಹರುಷದಲಿ ಆಡಿ ನಲಿಯುತಿಹರು,

ಹಳೆಯ ನೋವನೆಲ್ಲ ಮರೆತು, ಹೊಸ ಆಸೆಗಳ ಹೊತ್ತು.


ನಾಟಕ ಸಾಗಿದೆ ಅನವರತ,

ಹೊಸ ದೃಶ್ಯಗಳು, ಹೊಸ ಸಂಭಾಷಣೆಗಳು,

ಪ್ರೇಕ್ಷಕರೇ ಪಾತ್ರಧಾರಿಗಳು, ಪಾತ್ರಧಾರಿಗಳೇ ಪ್ರೇಕ್ಷಕರು.


ಕಾಲಚಕ್ರ ತಿರುಗುತಿದೆ, ಋತುಗಳು ಓಡುತಿವೆ,

ಯುಗಾದಿಯಿಂದ ಯುಗಾದಿಯವರೆಗೆ

ಇದೇ ನಿರಂತರ ಜೀವನ ನಾಟಕದ ನೋಟ!




Monday, April 19, 2021

ಚಿಣ್ಣರಾಟ (ತಲ ಷಟ್ಪದಿ)

 ಪುಟ್ಟ ಪುಟ್ಟ

ಚಿಟ್ಟೆ ಬಂತು

ಬಟ್ಟೆ ರಂಗು ರಂಗಲಿ

ಹೊಟ್ಟೆಮೇಲೆ

ಪಟ್ಟೆ ಪಟ್ಟೆ

ಪುಟ್ಟ ಕಣ್ಣು ನಾಲಿಗೆ

 

ಬೆಕ್ಕು ಬಂತು

ನೆಕ್ಕಿ ಕುಡಿದು

ಸೊಕ್ಕಿನಿಂದ ಹಾಲನು

ನಕ್ಕು ನಿಂತು

ಚಿಕ್ಕ ಹಲ್ಲು

ಬೆಕ್ಕು ತಾನು ತೋರಿತು

 

ನಾಯಿ ಮರಿಯು

ಬಾಯಿ ತೆರೆದು

ಜೀಯ ತಿಂಡಿಯೆಂದಿತು

ತಾಯಿ ನಾಯಿ

ಬಾಯಿಯಲ್ಲಿ

ಕಾಯಿ ತಂದು ಕೊಟ್ಟಿತು

Monday, April 5, 2021

ಬೋಂಡ (ಅಣಕು ಗೀತೆ)

 ಶರಪಂಜರ ಚಿತ್ರದ "ಹದಿನಾಲ್ಕು ನಿಮಿಷ ವನವಾಸದಿಂದ..." ಹಾಡಿನ ಧಾಟಿ


ಹದಿನಾಲ್ಕು ನಿಮಿಷ ಬಾಂಡ್ಲಿಯೊಳಗಿಂದ ಎದ್ದು ಬಂದಿತು ಬೋಂಡ

ಎದ್ದು ಬಂದಿತು ಬೋಂಡ

ಸಾಟಿಯಿಲ್ಲದ ಆ ಅಡುಗೆಭಟ್ಟನ ಪಾತ್ರೆಯ ಆಸೆರೆ ಒಂದೇ

ಸಾಕೆಂದಿತು ಆ ಬೋಂಡ


ಅಗ್ನಿಪರೀಕ್ಷೆಯ ಎಣ್ಣೆ ಪರೀಕ್ಷೆಗೆ ಗುರಿಯಾಯಿತು ಬೋಂಡ

ಅಗ್ನಿಯು ಕಾದು ಘೋಷಿಸಿದ ಬೋಂಡ ಬೆಂದಿದೆ... ಬೋಂಡ ಬೆಂದಿದೆ

ಅಲ್ಪ ಗಿರಾಕಿಯ ಕಲ್ಪನೆ ಮಾತಿಗೆ ಅಳುಕಿದ ಆ ಭಟ್ಟ

ಬೋಂಡ ಕೆಟ್ಟಿದೆ... ಬೋಂಡ ಸುಟ್ಟಿದೆ... ಎಂದನೆ ರೋಸಿದ ಭಟ್ಟ

ಅತ್ತು ಬೋಂಡಗಳ ತಿಪ್ಪೆಗೆ ಹಾಕಿದ ಮೂರ್ಖನಾದ ಭಟ್ಟ...


ಪೂರ್ಣ ಬೆಂದಿದ ಪೂರ್ಣ ಊದಿದ ಬೋಂಡವ ಕಂಡಳು ಪತ್ನಿ

ಒಳ್ಳೆ ಬೋಂಡಕೆ ತಿಪ್ಪೆ ಆಸರೆಯೆ ನಿರ್ದಯಿ ಭಟ್ಟ..., ನಿರ್ದಯಿ ಭಟ್ಟ...

ಪಾತ್ರೆಗೆ ಬಂದವು ಮತ್ತೆ ಬೋಂಡಗಳು

ಬೋಂಡಕೆ ಶಾಂತಿನಿಕೇತನ


ಒಳ್ಳೆ ಬೋಂಡವೇ.. ನನ್ನ ಬೋಂಡವೇ,,, ಎನ್ನುತ ಭಟ್ಟನ ಆಗಮನಾ

ಸಂಗಮ ಸಮಯದೆ ಭಟ್ಟ ಬಿದ್ದನಾ

ಚಿರವಿರಹವೇ ಬೋಂಡದ ಜೀವನ!


Wednesday, March 31, 2021

ನಿವೇದನೆ (ಪರಿವರ್ಧಿನಿ ಷಟ್ಪದಿ)

ಮೋಹಕ  ಚೆಲುವೆಯೆ  ಮಾದಕ  ನೋಟವು 

ದಾಹವ  ಹೆಚ್ಚಿಸಿ  ಹುಚ್ಚನು  ಹಿಡಿಸಿದೆ 

ಸಾಹಸಿಯಾಗಿಹೆ ಚಂಚಲ ಕಂಗಳ ಬಾಣಕೆ ಗುರಿಯಾಗಿ!

ರೋಹಿತ ತುಟಿಗಳ ಚುಂಬಿಸೊ ಬಯಕೆಗೆ

ಮೋಹವು ಹೆಚ್ಚಿದೆ ತನುವದು ಕಾದಿದೆ

ದೇಹಕೆ ತಣ್ಣನೆ ಮದ್ದದು ಬೇಕಿದೆ ತಾಪವ ತಗ್ಗಿಸಲು!


ನಿನ್ನಯ  ಬಾಹ್ಯದ  ಚೆಲುವದು ಚುಂಬಕ

ನಿನ್ನಯ ಮನಸೂ ಬಹುವಿಧ ಸುಂದರ

ಮನ್ನಿಸಿ ಬೆಡಗಿಯೆ ನನ್ನಯ ಜೊತೆಯಲಿ ಪಯಣಿಗಳಾಗುವೆಯಾ?

ಮುನ್ನುಡಿ ಬರೆಯುವ ನಮ್ಮಯ ಬಾಳಿಗೆ

ಕನ್ನಡಿಯಾಗುವ ದೈವದ ತತ್ವಕೆ

ಹೊನ್ನಿನ ಮಾದರಿ ಮಿನುಗುತಲಿರುವ ಪ್ರೇಮದ ಲೋಕದಲಿ! 

Thursday, March 25, 2021

ನಾನು ನೀನು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Sunday, March 21, 2021

ಮಾತೃಭಾಷೆ

ಮಾತೃ ಭಾಷೆಯೇ ಮಧುರ  ನುಡಿಯು, 

ನಾಲಿಗೆಯ ಕುಣಿಸುವ ಪದಗಳ ಖನಿಯು! 

ಎದೆಯ ಹಾಲಿನ ಸುಮಧುರ ಸವಿಯು, 

ಕಿವಿಗಳಿಗೆ ತಾಯ ಎದೆಬಡಿತದ ದನಿಯು! 


ಕಣ್ಣುಗಳು ಕಂಡರೂ ಪರದೇಶವನು, 

ಪರಭಾಷೆಯೇ ತಲುಪಲಿ ಕಿವಿಗಳನು, 

ನಾಲಿಗೆ ನುಡಿಯಲಿ ಅಮ್ಮನ ಭಾಷೆ, 

ಅಮ್ಮಗೆ ನೀನೆಂದೆಂದಿಗೂ ಕೂಸೇ! 


ವ್ಯವಹಾರದ ಭಾಷೆಯು ಏನೇ ಇರಲಿ, 

ಅದು ಹೊರಬಾಗಿಲ ಹೊರಗೇ ಇರಲಿ! 

ಮಮತೆಯ ಮಾತೆಯ ತೊರೆಯದಿರು, 

ಹೂರಗಿನ ಥಳುಕಿಗೆ ಮರುಳಾಗದಿರು! 


ಮರೆತರೆ ನಾವು ನಮ್ಮಯ ಭಾಷೆ, 

ಅನಾಥರು ನಮ್ಮಯ ಮನೆಯಲ್ಲೇ! 

ಕಲಿತರೂ ಬುಧ್ಧಿಯು ಪರಭಾಷೆಯನು,

ಎದೆ ಮಿಡಿಯಲಿ ಮಣ್ಣಿನ ಭಾಷೆಯಲಿ!


ಕನ್ನಡ ತಾಯಿಯ ಪ್ರೀತಿಯ ಕೂಸೆ,

ಕನ್ನಡ ನಮ್ಮಯ ಹೆಮ್ಮೆಯ ಭಾಷೆ, 

ಭಾಷೆಯು ಬರದವಗೆ ನೀ ಕಲಿಸು, 

ಮಣ್ಣಿನ ಋಣವನು ಪರಿಹರಿಸು! 

ರುಬಾಯಿಗಳು - ೧

1. ವಿಷಯ: *ಅನ್ವೇಷಣೆ*

ಮುಗಿಯದಾಗಿದೆ ಈ ಅನ್ವೇಷಣೆ,

ಬೇಕಾಗಿದೆ ಇಂದ್ರಿಯ ಸಮರ್ಪಣೆ,

ಮೋಕ್ಷದ್ವಾರಕೆ ಇದೊಂದೇ ದಾರಿಯು, 

ಆಗಿದೆ ದೇವದೇವನ ಘೋಷಣೆ! 


2. ವಿಷಯ: *ಜೋಮಾಲೆ*

ಬಂಧಿಯಾಗಿಸಲಿ ನಿನ್ನ ತೋಳಮಾಲೆ

ಅದೇ ನನ್ನ ಸಿಂಗರಿಸುವ ಹೂಮಾಲೆ

ನಿನ್ನ ಪ್ರೀತಿಯ ಪ್ರೇಮದ ಕಾಣಿಕೆಗೆ

ಇಗೋ ಕೊರಳಿಗೆ ರನ್ನದ ಜೋಮಾಲೆ 


3. ಸುಗ್ಗಿ ಹಬ್ಬ

ಸುಗ್ಗಿಯ ಹಬ್ಬದ ಸುಂದರ ಘಳಿಗೆ

ಸಗ್ಗದ ಸಂಭ್ರಮ ಬಂದಿದೆ ಇಳೆಗೆ

ಎಳ್ಳು ಬೆಲ್ಲದ ಸವಿಯನು ಹಂಚುತ

ಸೇರಲು ತಂದಿದೆ ಸ್ನೇಹದ ಗುಳಿಗೆ


4. ಕ್ಷಣಿಕ

ಹಣ ತರುವ ಆನಂದ ಕ್ಷಣಿಕವೇ ಮಾತ್ರ

ಕಳೆದುಹೋಗುವುದು ಎಷ್ಟೇ ಇರಲಿ ಗಾತ್ರ

ಜೀವನದಿ ಬೇಕಿಹುದು ಶಾಶ್ವತ ಆನಂದ

ಗುಣವು ಕೊಡುವುದು ಸದಾನಂದದ ಸೂತ್ರ


5. ವ್ಯಕ್ತಿತ್ವ

ದೇಹ ಊನವಾಗಿರಲು ದೈವವೇ ಕಾರಣ

ವ್ಯಕ್ತಿತ್ವವೇ ಊನವಿರಲು ನಾವೇ ಕಾರಣ

ದೇವ ಕೊಟ್ಟಿದುದ ನಗುತ ಸ್ವೀಕರಿಸುತ

ನಮದಾದ ವ್ಯಕ್ತಿತ್ವವ ನಾವೇ ರೂಪಿಸೋಣ


ವ್ಯಕ್ತಿಗಳ ನಡೆನುಡಿಯು ಆಂತರಿಕ ಭಾವಗಳು

ಕಷ್ಟನಷ್ಟಗಳು ಬಂದಾಗ ಆರಿಸುವ ದಾರಿಗಳು

ಧನಕನಕ ಗಳಿಸುವ ವ್ಯಯಿಸುವ ರೀತಿ ನೀತಿ

ಆಗುತಿವೆ ಮನುಜನ ವ್ಯಕ್ತಿತ್ವದ ಪದರಗಳು


ಉಚಿತದಲಿ ಆಹಾರ ಉಚಿತದಲಿ ವಿಹಾರ

ಉಚಿತಗಳ ಮಳೆಯಿಂದು ಸುರಿಯುತಿದೆ ಪೂರ

ದುಡಿಯುವ ದೇಹಗಳಿಗೆ ಆಲಸ್ಯ ತಾಕುತಿದೆ

ದಿನದಿನಕೆ ಸೋಮಾರಿ ಆಗುತಿಹ ಮತದಾರ


ಮತದಾರ ಆರಿಸಿಹ ಆಳುವವರನಿಂದು

ಯಥಾ ಪ್ರಜಾ ತಥಾ ರಾಜರು ಆಗಿಹರು ಬಂಧು

ಅಧಿಕಾರ ಅವಕಾಶ ಅವರಿಗೆ ಸಿಕ್ಕಾಗ

ಬಾಚುತ್ತ ಬೆಳೆಯುವರು ಸಕಲವನೂ ತಿಂದು!


ಮಲ್ಲಿಗೆಯ ಪರಿಮಳವು ಮನಸೂರೆಗೈಯುವುದು

ಮೊಗದಲ್ಲಿ ನಗೆಮಲ್ಲಿಗೆಯನು ಅರಳಿಸುವುದು

ಅಲಗಿಹ ನಲ್ಲೆಯ ಕೋಪವನು ಕರಗಿಸುತಲಿ

ನಗುನಗುತ ಬಳಿಸಾರಿ ಬರುವಂತೆ ಮಾಡುವುದು


ಒಮ್ಮೆ ನೋಡಲು ನಿನ್ನ ಮತ್ತೆ ನೋಡಬೇಕೆನಿಸುವುದು

ಕಣ್ಣು ಮುಚ್ಚಲೂ ನಿನ್ನದೇ ಮುಖಕಮಲ ಕಾಣುವುದು

ನನ್ನ ಮರೆತರೂ ನಾ ನಿನ್ನ ಮರೆಯಲೇ ಆಗುತಿಲ್ಲ

ಏತಕೆ ನೀ ನನ್ನ ಮನವನ್ನಾವರಿಸಿರುವೆ ಇಂದು?


ದೇವನೆಂದೂ ನನ್ನ ಕಂಗಳಿಗೆ ಕಂಡಿಲ್ಲ ತಾನು!

ಬೇರಾವುದೋ ಲೋಕದಲಿ ಕುಳಿತಿರುವನೇನು?

ಈ ಬಾನು, ಬುವಿ, ತಾರೆ ಚಂದ್ರರನು ನಮಗಿತ್ತು

ನಮ್ಮಿಂದ ಮರೆಯಾಗಿ ಅಡಗಿಕೊಂಡಿಹನೇನು?


ಪ್ರಿಯನೆಂದ ಪ್ರಿಯೆಗೆ "ನನ್ನೆದೆಯಲೇ ಮನೆಮಾಡಿರುವೆ ನೀನು,

ನೀ ಕೇಳು ನಿನಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧ ನಾನು!"

ಪ್ರಿಯೆಯೆಂದಳು, "ನಿನ್ನೆದೆಯ ಗೂಡಿನಲಿ ತೋರು ನನ್ನ ನನಗೆ"

ಏಕೋ, ಏನೋ, ಅಂದಿನಿಂದ ಅವಳ ಕಣ್ಣಿಗೆ ಕಂಡಿಲ್ಲ ಅವನು!


ಕೊಡುವವನೇ ದೇವ ಕಾಯುವವನೇ ತಂದೆ

ಅನ್ನವಿತ್ತವಳೇ ತಾಯಿ ಬೇಕಿನ್ನೇನು ಮುಂದೆ?

ಜತೆಯಲಿರುವವರೇ ಬಂಧು ಬಳಗವು

ಬುವಿಯ ತನುಜಾತರೆಲ್ಲರೂ ಒಂದೇ ಒಂದೇ!




ನೀನಿಲ್ಲದ ಬದುಕು

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||

ಕನಕದೇಹಿ ವೃತ್ತ

ಮುರಳಿ ಮಾಧವನೆ ಕರುಣ ಸಾಗರನೆ ಚರಣ ತೋರಿಸೆನೆಗೇ|

ವರದ ವೇದಗಳ ಅಸುರ ಬಂಧನವ ಬಿಡಿಸೊ ಮೀನತನುನೀ|

ಸುರರ ಜೋಳಿಗೆಗೆ ಕೊಡಲು ಜೀವಸುಧೆ ಪಡೆದೆ ಕೂರ್ಮಜನುಮಾ|

ಪೊರೆದೆ ಭೂಮಿಯನು ಶರಧಿಯಾಳದಲಿ ಮೆರೆದೆ ಸೂಕರಮುಖಾ|


ಪಡೆದೆ  ಸಿಂಹನರ ಜನುಮ ರಕ್ಕಸನ ಉದರ ಸೀಳಿಬಿಡಲೂ|

ನಡೆದೆ ಮೂರಡಿಯ ಬಲಿಯ ಭೂತಳಕೆ ತುಳಿದು ನೂಕಿಬಿಡಲೂ|

ಬಿಡದೆ ಭೂಸುರರ ತರಿದು ಕೊಲ್ಲುತಲಿ ಪರಶು ಬೀಸುತಿರಲೂ|

ನಡೆದೆ ಕಾಡಿನಲಿ ಪಿತನ ಮಾತುಗಳ ಗೌರವ ಕಾಪಿಡುತಲೀ|


ನರರ ಭಾಗ್ಯದಲಿ ಬರೆದೆ ಗೀತೆಯನು ಮೆರೆದೆ ವೇದಗಳನೂ|

ಪರರ ಕಷ್ಟಗಳ ಅಳಿಸಿ ದಮ್ಮವನು ಮೆರೆದೆ ಬದ್ಧತೆಯಲೀ|

ಅರಿವು ಬಿಟ್ಟವರ ತರಿದು ಅಟ್ಟಲಿಕೆ ಯುಗದ ಕಲ್ಕಿಪುರುಷಾ|

ಗುರುವೆ ಉದ್ಧರಿಸು ಕೊಡುತ ಮೋಕ್ಷವನು ಮನುಜ ಜನ್ಮಗಳಿಗೇ|

ಬಣ್ಣದ ಚಿಟ್ಟೆ (ಶಿಶುಗೀತೆ)

ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ, 

ಚೆಂದವು ನಿನ್ನ ಬಣ್ಣದ ಬಟ್ಟೆ! 

ಕೆಂಪು, ಹಳದಿ, ನೀಲಿ, ಹಸಿರು, 

ಹೋಳಿ ಹಬ್ಬವು ತುಂಬಾ ಜೋರು!


ಚಿಟ್ಟೆ ಚಿಟ್ಟೆ ಹಾರುವ ಚಿಟ್ಟೆ, 

ಹಾರುತ ನೀನು ಎಲ್ಲಿಗೆ ಹೊರಟೆ? 

ಮೇಲೆ ಕೆಳಗೆ ಏತಕೆ ಹಾರುವೆ? 

ಹೂವಿನ ಮೇಲೆ ಏತಕೆ ಕೂರುವೆ? 


ಹೂವಲಿ ಏನನು ಹೀರುವೆ ನೀನು? 

ಅದರಲಿ ಇದೆಯೇ ಸಿಹಿ ಸಿಹಿ ಜೇನು? 

ಸಿಹಿ ಸಿಹಿ ಸಕ್ಕರೆ ಕೊಡುವೆನು ಬಾ, 

ಗಡಿಬಿಡಿ ಮಾಡದೆ ಸುಮ್ಮನೆ ಬಾ! 


ಬಂದರೆ ನಿನ್ನ ಜೊತೆಯಲಿ ಆಡುವೆ, 

ಹಾರುವ, ಓಡುವ, ಮರಗಳ ನಡುವೆ!

ಆಡಲು ನಿನಗೆ ಗೊಂಬೆಯ ಕೊಡುವೆ, 

ಬೇರೆ ಬಣ್ಣದ ಬಟ್ಟೆಯ ತೊಡಿಸುವೆ! 


ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ, 

ಬಾ ಬಾ ಚಿಟ್ಟೆ ಬಣ್ಣದ ಚಿಟ್ಟೆ! 


Friday, March 12, 2021

ಬೆಳಕಿನ ಚೆಂಡು

 ಅಮ್ಮಾ ಅಮ್ಮಾ ಬಾರಮ್ಮ, 

ಆಗಸದಲ್ಲೇನಿದೆ ನೋಡಮ್ಮ!


ಹೊಳೆಯುವ ಚೆಂಡು, 

ಬಿಳಿ ಬೆಳಕಿನ ಗುಂಡು,

ಮೊಲದ ಚಿತ್ರ ಇದೆಯಮ್ಮ, 

ಆಡಲು ಬೇಕು ನೀಡಮ್ಮ! 


ಅಂಗಳದಲ್ಲೂ ಕಾಣುವುದು, 

ಹಿತ್ತಲಲೂ ಜೊತೆ ಓಡುವುದು,

ನಾನೊಬ್ಬನಿದ್ದರೆ ಸಾಕಂತೆ, 

ಆಡಲು ಜೊತೆಯು ಬೇಕಂತೆ! 


ಅಯ್ಯೋ ಅಮ್ಮಾ ಇಲ್ನೋಡು, 

ಬೆಳಕಿನ ಚೆಂಡಿನ ಈ ಪಾಡು! 

ಅಯ್ಯೋ ಪಾಪ ನೀರಲಿ ಬಿದ್ದಿದೆ, 

ಚಳಿಯಲಿ ನಡಗುತ ನನ್ನನೇ ಕರೆದಿದೆ! 


ನೀರಿಂದ ಮೇಲೆ ಎತ್ತೋಣ, 

ಬಿಸಿ ಬಿಸಿ ಶಾಖ ನೀಡೋಣ,

ಕುಡಿಯಲು ಹಾಲು ನೀಡೋಣ, 

ಜೊತೆಯಲಿ ಆಟ ಆಡೋಣ! 

Tuesday, March 2, 2021

ಗಡಿಯ ಗೊಡವೆ ನೀಗೋಣ

 ಗಡಿಗಳು, ಗಡಿಗಳು, ಬೇಡದಾ ಬೇಲಿಗಳು,

ಸಂಘರ್ಷವ ಹುಟ್ಟಿಸುವ ಗಟ್ಟಿ ಬೇರುಗಳು!


ಸಂಕುಚಿತ ಮನಸಿನ ಫಲಗಳೇ ಗಡಿಗಳು,

ಎದ್ದಿವೆ ಎಲ್ಲೆಲ್ಲೂ ಕೃತಕ ಗೋಡೆಗಳು!

ಗಡಿಯಿರುವ ಎಲ್ಲಡೆಯೂ ಸಂಘರ್ಷ ಖಚಿತ,

ಪಾಪದ ಜನರಿಗೆ ಸಂಕಷ್ಟ ಉಚಿತ!


ದೇಶಗಳ ಗಡಿಗಳಲಿ ಯೋಧರದೇ ಬಲಿದಾನ.

ರಾಜ್ಯದ ಗಡಿಗಳಲಿ ಭಾಷೆಯದೇ ಪ್ರಾಧಾನ್ಯ!

ಜಾತಿ, ಧರ್ಮದ ಗಡಿಗಳು ಮನಸುಗಳ ನಡುವೆ!

ಶಾಂತಿ, ಸಹನೆ ಪಾಠಗಳ, ಯಾರಿಗಿದೆ ಗೊಡವೆ?


ಬಾನಿಗೆಲ್ಲಿದೆ ಗಡಿಯು, ಗಾಳಿಗೆಲ್ಲಿದೆ ಗಡಿಯು?

ಹತ್ತಿ ಉರಿಯುವ ಅಗ್ನಿಗೆಲ್ಲಿಹುದು ಗಡಿಯು?

ಪ್ರಳಯದ ಪ್ರವಾಹವ ತಡೆವುದಾವ ಗಡಿಯು?

ಭೂತಾಯ ಪ್ರೀತಿಗೆ ಎಲ್ಲಿಹುದು ಗಡಿಯು?


ದೇವ ದೇವನಿಗಿಲ್ಲ ಯಾವುದೇ ಗಡಿಯು

ಎಲ್ಲರ ದೇಹಗಳೂ ಅವನ ನಿಜ ಗುಡಿಯು

ನನ್ನ ನಿನ್ನ ಅವನ ನಡುವೆ ಬೇಕೆ ಗಡಿಯು?

ವಸುದೈವ ಕುಟುಂಬವು ಅಲ್ಲವೇ ಈ ಜಗವು!


ದೇವ ನೀಡದ ಗಡಿಯ ಗೊಡವೆ ನೀಗೋಣ,

ನಾವೆ ಕಟ್ಟಿದ ಬೇಲಿಗಳ ಕಿತ್ತು ಎಸೆಯೋಣ!

ಒಡೆದು ಹಾಕುವ ಗೋಡೆಗಳ ಗಡಿಯಿಲ್ಲದಂತೆ,

ಸ್ನೇಹದ ಗಾಳಿಯಾಡಲಿ ಎಲ್ಲೆಡೆ ತಡೆಯಿಲ್ಲದಂತೆ!


Friday, February 19, 2021

ನೀಲ ದ್ವೀಪದ ನೆನಪು

ಎಳೆನೀರಿನಂತಹ ತಿಳಿನೀರು,

ಬಣ್ಣಗಳು ತಿಳಿನೀಲಿ, ತಿಳಿಹಸಿರು!

ಉಳಿದಿದೆ ನೀಲದ್ವೀಪದ ಹೆಸರು,

ಎದೆಯಲಿಂದು ಅಚ್ಚ ಹಸಿರು!


ತಂದ ಭೂಮ್ಯಾಕಾಶಗಳಿಗೆ ನಂಟ,

ನೀಲಿ ದೇಹದ ಸಾಗರನೆ ಬಂಟ,

ಅಲೆಯಲೆಯಲಿ ಆಗಸನ ಸಿವಿಮಾತ,

ಬುವಿಗೆ ತುಪಿಸುವಾತನೇ ಈತ!


ಮಂದಮಾರುತನ ಹೆಜ್ಜೆಗೆ,

ಅಲೆಗಳು ಕಟ್ಟಿವೆ ಗೆಜ್ಜೆ!

ಇಲ್ಲಿ ಹೆಜ್ಜೆಗೆಜ್ಜೆಗಳ ಮೇಳ

ಮನಕೆ ಮುದದ ಜೋಗುಳ!


ಚಿನ್ನದ ಮರಳ ಮೇಲೆ ಕುಳಿತು,

ಹಾಗೆಯೇ ತಲೆಯೆತ್ತಿದರೆ ಇನಿತು,

ಅಂಬರ ರಾಣಿಯ ಕೆನ್ನೆಯಲಿ,

ಅಂಟಿದೆ ಸಿಗ್ಗಿನ ಕೆನ್ನೀರ ಓಕುಳಿ!


ಬಿಳಿಯ ಕೊಡೆಯ ಮರೆಯಿಂದ,

ಇಣುಕುತಿಹನು ಬೆಳಕಿನೊಡೆಯ.

ರನ್ನದ ಹೊದಿಕೆ ಹೊದ್ದಿಸಿದ,

ಸಾಗರಗೆ ಪ್ರಿಯ ಗೆಳೆಯ!


ಬಂಗಾಳ ಕೊಲ್ಲಿಯಲಿ,

ನೀಲದ್ವೀಪದಂಚಿನಲಿ,

ಮೈಮರೆತ ಚಣಗಳು,

ಸಗ್ಗದಾಚೆಯ ಸುಖಗಳು!

Thursday, February 18, 2021

ಸಲಹು ತಂದೆ (ಭಾಮಿನಿ ಷಟ್ಪದಿ)

ಮುರಳಿ ಮಾಧವ ಕಮಲ ನಯನನೆ 

ಪೊರೆದು ನನ್ನನು ಸಲಹು ತಂದೆಯೆ

ವರವ ನೀಡುತ ಭಕ್ತಿಭಾವವ ಮನದಿ ನೆಲೆಗೊಳಿಸು!

ಕರುಣ ನೇತ್ರನೆ ಶರಣು ಬಂದಿಹೆ

ಪರಮಪಾವನ ಚೆಲುವ ಮೂರ್ತಿಯೆ 

ಕರವ ಪಿಡಿಯುತ ಬಾಳ ಬಾಧೆಯ ನೀನೆ ಪರಿಹರಿಸು!


ಚೆಲುವ ಚೆನ್ನಿಗ ಶಾಮಸುಂದರ 

ಜಲಜನಾಭನೆ ಮಧುರ ಭಾಷಿಯೆ 

ಸಲಹು ಭಕುತರ ಚರಣದಡಿಯಲಿ ನಗುವ ಸೂಸುತಲಿ!

ಗೆಲುವ ತಾರೋ ನನ್ನ ಮನದಲಿ

ಬಲವ ನೀಡೋ ನನ್ನ ತನುವಲಿ

ನಿಲುವೆ ನೋಡೋ ನೀನು ನೀಡುವ ಕಾರ್ಯ ಮುಗಿಸುತಲಿ!

Thursday, February 11, 2021

ದಾರಿ ತೋರೆನಗೆ (ಭೋಗಷಟ್ಪದಿ)

ದೇವ ಹಿಡಿದೆ ಚರಣ ಕಮಲ

ಕಾವೆ ನೀನು  ನಮ್ಮ  ಸಕಲ

ಭವದ  ಬಂಧ ಬಿಡಿಸಿಕೊಳುವ ದಾರಿ ತೋರೆಯಾ? |

ಕವಿದ ಮೋಡ ಚದುರಿ ಹೋಗಿ

ಜವನ ಭಯವು  ಕಳೆದು ಹೋಗಿ  

ಭವನದಲ್ಲಿ ನಿನ್ನ ಬೆಳಕ ಕಿರಣ ಕಾಣಲಿ! ||


ಎನ್ನ ಮನದ ಬಳಿಯೆ ಕುಳಿತು

ನನ್ನ ತಪ್ಪು ನೋಡುತಿದ್ದು 

ಕಣ್ಣ ಮುಚ್ಚಿ ಕುಳಿತೆಯೇಕೆ ಪರಮ ಬಂಧುವೇ? |

ಎನ್ನ  ತಪ್ಪ ತಿದ್ದಿ ತೀಡು 

ಬಿನ್ನವಿಸುವೆ ಶಿಕ್ಷೆ ನೀಡು

ಭಿನ್ನವಾದ ವರವು ಬೇಡ ಪದುಮನಾಭನೇ! ||

ಪ್ರೇಮಪಯಣ (ಭೋಗಷಟ್ಪದಿ)

ಏನು ಹೇಳು ಮನದ ನುಡಿಯ

ಜೇನ ಸಿಹಿಯು ನಿನ್ನ ಹೃದಯ

ನಾನು ನೀನು ಬೆಸೆವ ನಮ್ಮ ಬದುಕ ಕೊಂಡಿಯ! 

ಬಾನು ಸೇರಿ ತಾರೆ ಮೀರಿ

ಯಾನ ಮಾಡಿ ಗಡಿಯ ದಾಟಿ

ಗಾನ ಪಾಡಿ ಲಯದಿ ನಡೆಸು ಬದುಕ ಬಂಡಿಯ! 


ಇದ್ದರಿರಲಿ ಗಾಳಿ ಸುದ್ದಿ

ಬದ್ಧ ನಾವು ನಮ್ಮ ನುಡಿಗೆ

ಶುದ್ಧ ಮನದ ಪ್ರೇಮ ಗೀತೆ ನಾವು ಹಾಡುವ!

ಇದ್ದರಿರಲಿ ಕೊಂಕು ನುಡಿಯು

ಹದ್ದುಮೀರಿ ಜಂಟಿಯಾಗಿ

ಗೆದ್ದು ನಾವು ಬಾಳ ಪಂದ್ಯ ಗುರಿಯ ಸೇರುವ! 

Tuesday, February 2, 2021

ಪಾಪನಾಶಿನಿ (ಭಾಮಿನಿ ಷಟ್ಟದಿ)

 ಹರಿದು ಬಂದೆಯ ಗಂಗೆ ತಾಯೇ 

ಹರಿಯ ಚರಣದ ಕಮಲದಿಂದಲೆ 

ಹರನ ಜಟೆಯನು ಸೇರಿ ನಿಂದಿಹೆ ದಿವ್ಯಪಾವನಿಯೇ!

ಪರರ ಪಾಪವ ತೊಳೆಯಲೆಂದೇ 

ಹರಿಹರರ ತಾಕುತಲಿಳಿದೆ ನೀ 

ಪರಮ ಪಾವನಿ ನಮಗೆ ಸದ್ಗತಿ ನೀಡಲೋಸುಗವೇ!


ಕಪಿಲ ಮುನಿಗಳ ಶಾಪ ತೊಳೆಯಲು

ನೃಪ ಭಗೀರಥ ಕರೆದ ಧರಣಿಗೆ

ಶಪಿತ ಪಿತೃಗಳಿಗಾಗಿ ಬಂದರು ಪೊರೆದೆ ಭಕ್ತರನು!

ನೃಪನ ತಪಸಿಗೆ ಫಲವು ದೊರಕಿತು 

ತಪಿತ ಧರಣಿಗೆ ಮೋಕ್ಷ ಸಿಕ್ಕಿತು

ದಿಪುತ ಜಲದ ಹೊನಲು ಬುವಿಯಲಿ ಹರಿದರಿದು ನಲಿದಿದೆ!


ಇಳಿದೆ ಪಾವನ ಮಾಡೆ ಬುವಿಯನು

ಕಳೆದೆ ಜನಗಳ ಪಾಪಗಳನೇ

ಬಳಿಗೆ ಬಂದರೆ ಮಮತೆಯಿಂದಲೆ ತಂಪನೆರೆವೇ ನೀ

ಜಳಕ ಮಾಡಲು ನಿನ್ನ ಮಡಿಲಲಿ

ಪುಳಕ ನಮ್ಮಯ ಮನಸು ದೇಹವು

ಕೊಳಕು ಕಳೆದಿಹ ಭಾವ ನಮ್ಮಲಿ ಪುಣ್ಯ ಪಡೆದಿಹೆವು

ದೇವಗಂಗೆ

ಇಳಿದು ಬಂದೆ ಗಂಗೆ ತಾಯೇ

ಹರಿಯ ಚರಣ ಕಮಲದಿಂದ

ಶಿವನ ಜಟೆಯ ಸೇರಿ ನಿಂದೆ ದಿವ್ಯ ಪಾವನೀ!

ನಮ್ಮ ಪಾಪ ತೊಳೆಯಲೆಂದೇ

ಹರಿಹರರ ತಾಕಿ ಬುವಿಗೆ ಬಂದೆ

ಪಾಪನಾಶಿನಿ ನಮಗೆ ಸದ್ಗತಿ ನೀಡಲೋಸುಗ!


ಕಪಿಲ ಮುನಿಗಳ ಶಾಪ ತೊಳೆಯೆ

ಜೀವದುಂಬಲು ಭಗೀರಥನಾ

ಪಿತರಿಗೋಸುಗೆ ಬಂದೆಯಾದರೂ ಪೊರೆದೆ ಎಮ್ಮನು!

ನಮಿಪೆ ತಾಯೇ ನಮ್ಮ ಕಾಯೇ

ಪಾಪ ನಾಶಿನಿ ಪುಣ್ಯದಾಯಿನಿ

ವರವ ನೀಡುವ ದೇವ ಕನ್ಯೆಗೆ ತಲೆಯ ಬಾಗುವೆ!


ಅಲಕನಂದೆಯೆ ಭೋಗವತಿಯೇ

ಬಾರೆ ಭಾಗೀರಥಿಯೆ ಜಾಹ್ನವಿ

ದೇವಗಂಗೆ ಗಿರಿಮಂಡಲಗಾಮಿನಿ ನಮನ ನಿನಗೆ!

ವಿಷ್ಣುಪಾದೀ ನರಕಭೀತಿಹೃತೇ

ದೇವಭೂತಿ ಹರಶೇಖರಿಯೇ

ಭಾಗ್ಯವತೀ ವರನದಿ ನಮಸ್ತೆ ನಮೋನಮಃ!

Thursday, January 28, 2021

ಚಂಚಲ ಮನಸ್ಸು

 ಊಸರವಳ್ಳಿ, ಊಸರವಳ್ಳಿ,

ಬಣ್ಣವ ಬದಲಿಸೊ ಕಳ್ಳಿ, ಮಳ್ಳಿ!

ನಿಮಿಷಕೆ ಒಂದು, ಚಣಕೆ ಒಂದು,

ಬಣ್ಣವು ಈ ಮನಸಿನ ಬಂಧು!


ಪಾತರಗಿತ್ತಿ, ಪಾತರಗಿತ್ತಿ,

ಹೂವಿಂದ ಹೂವಿಗೆ ಹಾರುತ್ತಿ!

ಆಕಡೆ, ಈಕಡೆ ಹಾರು ಬೇಡ,

ಮನಸೇ ನಿಲ್ಲು ನೀ ಒಂದು ಕಡೆ!


ಮನಸೇ ನೀನು ತಂಪಿನ ಗಾಳಿ,

ಆಗುವೆ ಆಗಾಗ ಸುಂಟರಗಾಳಿ!

ತಲ್ಲಣಗೊಳಿಸಿ, ತಪ್ಪನು ಮಾಡಿಸಿ,

ಬಿರುಗಾಳಿ ಎಬ್ಬಿಸುವೆ ಬಾಳಿನಲಿ!


ಬೆಣ್ಣೆಯು ನೀನೇ, ಬಂಡೆಯು ನೀನೇ,

ಕೋಪದ ಬೆಂಕಿಯ ಉಂಡೆಯು ನೀನೇ!

ಕರುಣೆಯು ನೀನೇ, ಧರಣಿಯು ನೀನೇ!

ಸಹಸ್ರ ಮುಖದ ಮಾಯೆಯೂ ನೀನೇ!

Tuesday, January 26, 2021

ಅನ್ನವ ನೀಡುವ ಸೌಭಾಗ್ಯ

 ಎದ್ದು ಬಂದನೋ ಮೂಡಣ ವಿಕ್ರಮ,

ಚಾಲನೆ ಕೊಟ್ಟನು ಬದುಕಿಗೆ ಸಕ್ರಮ!


ಕೋಳಿಯು ಕೂಗಿದೆ ಹಿತ್ತಲಲಿ,

ಗುಬ್ಬಿಯ ಚಿಲಿಪಿಲಿ ಕಿವಿಗಳಲಿ!

ನೇಗಿಲು ಏರಿತು ಹೆಗಲನ್ನು,

ಭೂಮಿಯು ನೀಡಿತು ವರವನ್ನು!


ಹಸಿ ಹಸಿರಿನ ಪೈರು ಕಣ್ಣಿಗೆ ತಂಪು,

ಮೂಗನು ತಲುಪಿದೆ ಮಣ್ಣಿನ ಕಂಪು!

ಜುಳು ಜುಳು ಹರಿದಿದೆ ಕಾಲುವೆ ನೀರು,

ಸಂತಸದಲಿ ಕುಣಿದಾಡಿದೆ ಪೈರು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!


Saturday, January 23, 2021

ಬಾಲ್ಯದ ನೆನಪು (ಶರಷಟ್ಪದಿ)

 ಹಿಂದಿನ ದಿನಗಳ,

ಚೆಂದದ ನೆನಪಿನ,

ಬಂದಿದೆ ಸುಂದರ ಮೆರವಣಿಗೆ!

ಅಂದದ ವಯಸಿನ,

ಸುಂದರ ಸಂತಸ,

ಗಂಧದ ಕಂಪಿನ ನೆನಪುಗಳು!


ಮರಗಳ ಹತ್ತುತ,

ಕೆರೆಯಲಿ ಮೀಯುತ,

ಮರೆತೆವು ಸಮಯವ ದಣಿವಿರದೆ!

ಉರಿಯುವ ಬಿಸಿಲಲಿ

ಕರೆಯಲು  ಮಾತೆಯ

ಕೊರಳಿನ ದನಿಗೇ ಬೆದರಿದೆವು!


೪|೪|

೪|೪|

೪|೪|೪|-

೪|೪|

೪|೪|

೪|೪|೪|-

ವಾಸವಿ ಮಾತೆ

ವಾಸವೀ ಮಾತೆ ಬಾರಮ್ಮ ಹರಸಮ್ಮ ನೀ

ವೈಶ್ಯರಾ ವರವು ನೀನಮ್ಮ ||ಪ||


ಕುಸುಮ ಶ್ರೇಷ್ಠಿಯ ಪುತ್ರಿಯು ನೀನು

ಕುಸುಮಾಂಬಿಕೆಯ ಕಣ್ಮಣಿ ನೀನು |

ಕುಸುಮ ಕೋಮಲೇ ಕುಮಾರಿ ಬಾರೇ

ವಸುಧೆಯ ಕಂದರ ತಪ್ಪದೆ ಕಾಯೇ ||೧||

 

ಪೆನುಗೊಂಡೆಯಲಿ ಜನ್ಮವ ಪಡೆದೆ

ಅನುಜನ ಜೊತೆಜೊತೆಯಾಗಿ ಬೆಳೆದೆ |

ತನುಮನ ಬಾಗಿಸಿ ನೇಮದೆ ಭಜಿಸುವೆ

ಜನುಮವ ಸಾರ್ಥಕವಾಗಿಸೆ ಬೇಗ ||೨||

 

ಆದಿಶಕ್ತಿಯ ಅಂಶವು ನೀನು

ಆದಿಗುರುವಿನ ಶಂಕರಿ ನೀನು |

ಕಾದಿಹೆ ನಾನು ನಿನ್ನಯ ಕರುಣೆಗೆ

ಛೇದಿಸು ಎನ್ನಯ ಕರ್ಮವ ತಾಯೇ ||೩||

 

ಅಂಕೆ ಇಲ್ಲದೆ ಭಾಗ್ಯವ ಕೊಟ್ಟು

ಶಂಕೆ ಇಲ್ಲದ ಮನಸನು ನೀಡು |

ಸಂಕಟ ಹರಿಸು ಸಂತಸ ಹರಿಸು

ಬೆಂಕಿಯಿಲ್ಲದ ಬದುಕನು ಹರಸು ||೪||


ವಿಶ್ವರೂಪವ ತೋರುತ ಬಾರೆ

ಆಶ್ವಮನವನು ಹಿಡಿತಕೆ ತಾರೆ |

ನಶ್ವರ ಬದುಕಿಗೆ ದಾರಿಯ ತೋರುತ

ಈಶ್ವರನೆಡೆಗೆ ಮನವನು ಸೆಳೆಯೇ ||೫||


("ಭಾಗ್ಯದಾ ಲಕ್ಷ್ಮೀ ಬಾರಮ್ಮ" ಕೀರ್ತನೆಯ ಧಾಟಿಯಲ್ಲೇ ಹಾಡಬಹುದಾದ ಹಾಡು)


Thursday, January 21, 2021

ಹೊಸವರ್ಷ 2021

ತರಲಿ ಈ ಹೊಸವರ್ಷ,

ನವಚೇತನದ ಹರ್ಷ!

ಹಳೆಯ ಗಾಯಗಳ ಮರೆಸಿ,

ಹೊಸ ಹುರುಪ ಮೆರೆಸಲಿ!


ಕೈತುಂಬ ಕೆಲಸವಿರಲಿ,

ಕಣ್ತುಂಬ ನಿದ್ದೆಯಿರಲಿ,

ಎಲ್ಲರಲ್ಲೂ ಸ್ನೇಹ ಬೆಳೆದು,

ಮನಕೆ ನೆಮ್ಮದಿ ತರಲಿ!



ಗಡಿಗಳಲ್ಲಿ ಶಾಂತಿಯಿರಲಿ,

ಗುಡಿಗಳಲ್ಲಿ ಪೂಜೆಯಿರಲಿ,

ಮಾವು, ತೆಂಗು, ಬಾಳೆಗಳು,

ತೂಗಿ ತೊನೆಯಲಿ!


ಮುಖದ ಗವುಸು ದೂರವಾಗಿ,

ಹಣೆಯ ಸುಕ್ಕು ಮಾಯವಾಗಿ,

ಸ್ವಚ್ಛಂದದ ಕಿರುನಗೆಯು,

ಹೆಮ್ಮೆಯ ಒಡವೆಯಾಗಲಿ!

Wednesday, January 20, 2021

ಮುದ್ದು ಕಂದ

 ಪುಟ್ಟ ಪುಟ್ಟ ಹೆಜ್ಜೆ ಇಡುತಾ,

ಬಟ್ಟಲ ಕಂಗಳ ಅರಳಿಸಿ ಬರುವೆ,

ನಗುವ ಹೂಗಳ ಪರಿಮಳ ಚೆಲ್ಲುತ,

ಎದೆಯಲಿ ಸಂತಸ ಅರಳಿಸಿ ನಗುವೆ!


ಮಗುವೆ, ಮಗುವೆ, ನೀನೇ ಒಡವೆ,

ಇಲ್ಲ ನಿನಗೆ ಯಾವುದೇ ಗೊಡವೆ,

ಸುಂದರ ಮೊಗವು, ನಿಷ್ಕಲ್ಮಶ ಮನವು,

ಸಂತಸದಲೆಯಲಿ ತೇಲಿದೆ ಗೃಹವು!


ಅಪ್ಪ, ಅಮ್ಮನ, ಮುದ್ದಿನ ಕೂಸೆ,

ಸಂತಸ ಲಹರಿಯ ಚಿನ್ನದ ಮೂಸೆ,

ನಿನ್ನನು ಎತ್ತಿ ಆಡುವ ಆಸೆ,

ಕೊಡುವೆನು ನಿನಗೆ ಒಂದು ಭಾಷೆ!


ಉತ್ತಮ ನೀರು, ಉತ್ತಮ ಗಾಳಿ,

ನಿಮಗೆ ನೀಡುವುದೆಮ್ಮೆಯ ಪಾಳಿ,

ಭಾಷೆಯ ಕೊಡುವೆವು ನಿಮಗಿಂದು,

ಶುದ್ಧ ಪರಿಸರ ರಕ್ಷಣೆ ನಮದೆಂದು!


ಧನ್ಯವಾದಗಳು ನಿನಗೆ ಓ 2020!

 ಅತಿಯಾಸೆಯ ನಾಗಾಲೋಟಕೆ,

ಹಾಕಿದೆ ಲಗಾಮು ಕುರುಡು ಓಟಕೆ.

ದುಡ್ಡೇ ದೊಡ್ಡಪ್ಪನಲ್ಲ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ವಿಮುಖ ಸಂಬಂಧಗಳ ಬಳಿಸೆಳೆದೆ,

ತಿರುಗಿಸಿ ಮುಖಾಮುಖಿಯಾಗಿಸಿದೆ.

ಮನೆಯೇ ಮಂತ್ರಾಲಯ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ದೀನರ ಆರ್ತನಾದಕೆ ಮನಕರಗಿಸಿದೆ,

ಎದೆಯ ಕರುಣೆಯ ಹೊರಚಿಮ್ಮಿಸಿದೆ.

ಜನಸೇವೆಯೇ ಜನಾರ್ದನನ ಸೇವೆ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ವೈದ್ಯರು, ದಾದಿಯರು, ಪೌರಕಾರ್ಮಿಕರು,

ತನುಮನಗಳ ತೇಯುವಂತೆ ಮಾಡಿದೆ.

ವೈದ್ಯೋನಾರಾಯಣೋ ಹರಿಃ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ತಂದೆ ನೀ ಸೌಟು ಹಿಡಿಯದ ಕೈಗಳಿಗೆ,

ನಳಪಾಕವಿಳಿಸುವ ಸವಿಘಳಿಗೆ!

ಹಿತ್ತ ಗಿಡದಲ್ಲೂ ಮದ್ದಿದೆ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ತಂತ್ರಜ್ಞಾನವ ಹಿರಿಯರ ಕೈಯಲಿತ್ತೆ,

ಸುಖದುಃಖಗಳ ವಿನಿಮಯಕ್ಕೆ ದಾರಿಯಿತ್ತೆ.

ಅಗತ್ಯವೇ ಆವಿಷ್ಕಾರದ ತಾಯಿ ಎನ್ನುವ,

ಪಾಠ ಕಲಿಸಿದ ಗುರು ನೀ 2020!


ಸಂಕಷ್ಟವ ಎದುರಿಸುವ ಶಕ್ತಿ ಹೊರತಂದೆ,

ಕಾಯಕ ಬದಲಿಸುವ ಹೊಸ ಹೆಜ್ಜೆ ಇಡಿಸಿದೆ.

ಈಜು ಕಲಿಯಲು ನೀರಿಗೆ ಬೀಳಲೇಬೇಕೆಂಬ,

ಪಾಠ ಕಲಿಸಿದ ಗುರು ನೀ 2020!


ಧನ್ಯವಾದಗಳು ನಿನಗೆ ಓ 2020!

ಕತ್ತಲಿನಿಂದ ಬೆಳಕಿನೆಡೆಗೆ

 ನಡೆ, ಕತ್ತಲಿನಿಂದ ಬೆಳಕಿನೆಡೆಗೆ,

ಭ್ರಮೆಯಿಂದ ವಾಸ್ತವದೆಡೆಗೆ!


ಆಗುತ್ತಿರುವೆವು ನಾವು ಕುರಿಗಳು,

ಹುಲಿಗಳು ಈ ರಾಜಕಾರಣಿಗಳು!

ಎಚ್ಚೆತ್ತುಕೊಳ್ಳಬೇಕಿದೆ ಗೆಳೆಯರೆ ನಾವು,

ಹುಲಿಕುರಿಯಾಟದಲ್ಲಿ ಬಲಿಯಾಗುವ ಮುನ್ನ!


ಕತ್ತಲಿದೆ, ಕತ್ತಲಿದೆ ಮನದಲ್ಲಿ!

ಮನದ ಸೂರ್ಯನ ಮರೆಮಾಡಿವೆ,

ಅಜ್ಞಾನದ ಕರಿ ಮೋಡಗಳು.

ಗುರು ಬೇಕು ಮೋಡ ಚದುರಿಸಲು!


ಜ್ಞಾನಭಂಡಾರದ ದೀಪವಿತ್ತಿಹರು ಹಿರಿಯರು,

ಆ ದೀಪದ ಗುಂಡಿಯೊತ್ತಬೇಕಿದೆ ಅರಿತು,

ತಮಾಂಧಕಾರವ ಚದುರಿಸಲು,

ಸತ್ವದ ಬೆಳಕಲ್ಲಿ ಸಂಚರಿಸಲು!

ವಿಶ್ವಪ್ರೇಮದ ಹರಿಕಾರ

ಪರಮಹಂಸನ ಪರಮಶಿಷ್ಯ, ಹರಿಕಾರ ನೀ ವಿವೇಕಾನಂದ, 

ಭವ್ಯ ಭಾರತ ಭೂಮಿಯಲ್ಲಿ, ಪಡೆದೆ ನೀ ದಿವ್ಯ ಜನುಮ,

ತಂದೆ ಗುರುವಿಗೆ ಕೀರುತಿ, ತಂದೆ ವಿವೇಕಕೆ ಆನಂದ,

ಸಾಗರದಾಚೆಯ ನಾಡಿನಲ್ಲಿ, ಎತ್ತಿಹಿಡಿದೆ ತಾಯ ನಾಮ!


ಅದ್ವೈತ ತತ್ವ, ಸ್ವದೇಶಿ ಮಂತ್ರ, ಎತ್ತಿಹಿಡಿದ ಪುಣ್ಯಪಾದ,

ಯಾವ ಪುಣ್ಯದ ಫಲವೋ, ನೀನಾದೆ ಮಹಾಮಹಿಮ,

"ನಮ್ಮ ನಾಡು, ನಮ್ಮ ಹೆಮ್ಮೆ", ಎತ್ತಿಹಿಡಿದೆ ನಿನ್ನ ವಾದ,

ಸೋದರ ತತ್ವವ ಸಾರಿ ಜನರಿಗೆ, ತುಂಬಿದೆ ನೀ ವಿಶ್ವಪ್ರೇಮ!


ನಮ್ಮ ನಾಡ ಪುಣ್ಯ, ದೈವ ತಂದ ವರದ ಪೆಂಪು,

ಯುವಕರ ಬದುಕಿಗೆ ಬೆಳಕನಿತ್ತ ಕಾಮಧೇನು!

ನಿನ್ನ ಮಹಿಮೆಗೆ ಮಾರಿಹೋದರಲ್ಲ ಕುವೆಂಪು,

ಹರಡಿದರು ಕನ್ನಡದಲ್ಲೂ ನಿನ್ನ ಮಹಿಮೆಯ ಜೇನು!


ಇಂದು ನಿನ್ನ ಜನ್ಮದಿನವು, ನೆನಸಿಕೊಳ್ಳುವ ಶ್ರೇಷ್ಠ ದಿನವು,

ಚೈತನ್ಯ ತರಲಿ ಬದಕಿಗೆ, ನಮ್ಮ ಪಾಲಿನ ಮಹಾ ವರವು!

(ಸಾನೆಟ್‌/ಸುನೀತ)

ಅನ್ನದ ಋಣ

 ಹಸಿದಾಗ ಸಿಗುವ ಆ ಒಂದು ತುತ್ತು,

ಬೆಲೆಯು ಕೇವಲ ಹಸಿದವಗೇ ಗೊತ್ತು!


ದೇಹವ, ಪ್ರಾಣವ, ಜೊತೆಹಿಡಿವ ಗುಟ್ಟು,

ಯಾರಿಗೂ ತಿಳಿಯದು ಅನ್ನಕೆ ಬಿಟ್ಟು!

ಹಸಿದಾಗ ಸಿಗುವ ಒಂದು ಹಿಡಿ ಅನ್ನ,

ಅನ್ನಪೂರ್ಣೇಶ್ವರಿ ಕೊಟ್ಟ ವರದಾನ!


ಪಡೆದವಗೆ ಸಂತೃಪ್ತಿ ನೀಡುವ ದಾನ,

ಅದೊಂದೇ ಅಲ್ಲವೇ ಅನ್ನದಾನ!

ಹೊಟ್ಟೆ ತುಂಬಿದಾಗ ಮೃಷ್ಟಾನ್ನ,

ಬೇಡದ ಮುಷ್ಟಿ ಬೂದಿಗೆ ಸಮಾನ!


ಬೆಲೆಕಟ್ಟಲಾಗದು ಅನ್ನದ ಋಣಕೆ,

ಚಿನ್ನದ ಋಣವೂ ನಿಲ್ಲದು ಸಮಕೆ!

ಮರೆಯಬಾರದೆಂದೂ ಅನ್ನದ ಋಣವ,

ಅದು ಸೇರಿದೆ ದೇಹದ ಕಣಕಣವ!


ಏನೇ ಇತ್ತರೂ ತೀರದೀ ಋಣ,

ತಿನ್ನಲಾಗದೆಂದೂ ಕುಡಿಕೆ ಹಣ!

ಹಸಿದ ಹೊಟ್ಟೆಗೆ ನೀಡಿ ಹಿಡಿ ಅನ್ನ,

ತೀರಿಸು ದೇವರುಣಿಸಿದ ಋಣವನ್ನ!

Tuesday, January 5, 2021

ದಿಟ್ಟೆ


 







ಪುಟ್ಟ ಬಾಲೆಯಾದರೇನು ಈಕೆ, 

ಇವಳ ಆತ್ಮಸ್ಥೈರ್ಯ ಪುಟ್ಟದೇ?


ನಡಿಗೆ ನೋಡಿ, ಗಡಿಗೆ ನೋಡಿ,

ದಿಟ್ಟ ನಡಿಗೆ, ದಿಟ್ಟಿ ನೋಡಿ. 

ಗಡಿಗೆಯಲ್ಲಿ ನೀರಿನಂತೆ, 

ನಡಿಗೆಯಲ್ಲಿ ಸ್ವಾಭಿಮಾನ ತುಂಬಿದೆ! 


ಅಮ್ಮನಿಗೆ ಹೆಗಲು ಕೊಟ್ಟು, 

ಮನೆಗೆಲಸದ ಹೊರೆಯ ಹೊತ್ತು, 

ಗೆಳಯರೊಡನೆ ಆಡೋ ಹೊತ್ತು, 

ಭಲೇ! ನೀರ ಹೊತ್ತ ಬಾಲೆ!


ಸೀರೆ ಉಡದಿದ್ದರೇನು ಈಕೆ, 

ನೀರೆಗೇನು ಕಡಿಮೆಯೇ?

ಓದು ಬರೆಹ ಇಲ್ಲದಿರೆ ಮಾತ್ರ, 

ಹಣೆಯಬರಹ ದುಡಿಮೆಯೇ! 

Saturday, January 2, 2021

ಸಂ ಕ್ರಾಂತಿ

 ಸಂಕ್ರಾಂತಿ ಬರಲಿ, 

ಸಂ ಕ್ರಾಂತಿ ತರಲಿ. 


ನಮ್ಮತನ ಉಳಿಸೋ ಕ್ರಾಂತಿ, 

ಒಮ್ಮತವ ಬೆಳೆಸೋ ಕ್ರಾಂತಿ,

ಹಸಿರ ಕೊಯ್ಲಿನ ಕ್ರಾಂತಿ,

ಹಸಿವ ನೀಗುವ ಕ್ರಾಂತಿ.


ಶುದ್ಧ ಗಾಳಿಯ ಕ್ರಾಂತಿ,

ಶುದ್ಧ ನೀರಿನ ಕ್ರಾಂತಿ,

ಸ್ವಚ್ಛ ಪರಿಸರದ ಕ್ರಾಂತಿ,

ಶುಭ್ರ ಮನಸಿನ ಕ್ರಾಂತಿ.


ಎಳ್ಳು ಬೆಲ್ಲದ ರೀತಿ,

ಸವಿಯ ಸ್ನೇಹದ ಕ್ರಾಂತಿ.

ಕಬ್ಬು ಹಾಲಿನ ರೀತಿ,

ಪ್ರೀತಿ ಹಂಚುವ ಕ್ರಾಂತಿ.



ಕಸವೇ ಇಲ್ಲದ ರೀತಿ,

ಸ್ವಚ್ಛ ಜಗಲಿಯ ಕ್ರಾಂತಿ.

ಕಳಚುವ ಕಹಿಯ ಭ್ರಾಂತಿ,

ಎಲ್ಲರಿಗೂ ಸ್ನೇಹ ಸಂಕ್ರಾಂತಿ!