ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ
ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |
ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ
ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||
ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ
ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |
ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು
ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||
ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ
ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |
ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು
ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||
ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ
ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ
ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ
ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||
ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ
ತನಿಯಾಗಿಸುತ ಜೊನ್ನವನು ಸುರಿದ ನಗುತ |
ನಿನಗೆ ನೋವೇ ಆಗಿರಲಿ ನಗುವ ಹಂಚುತಿರು
ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||