ಕೃಷ್ಣಕವಿಯವರ ʻಸ್ವಾತಿ ಮುತ್ತುಗಳುʼ ಕೃತಿಗೆ ಕೆ. ರಾಜಕುಮಾರ್ ಅವರ ಮುನ್ನುಡಿ
ಕೃಷ್ಣಕವಿ: ಕನ್ನಡ ಕಾವ್ಯಲೋಕದ ಕುಹೂಗಾನ
ಮುಕ್ತಕಗಳೆಂಬ ರಸಪಾಕವನ್ನು ಓದುಗರಿಗೆ ಸವಿಯಲು ನೀಡಿರುವ ಕೃಷ್ಣಕವಿಯವರು ತಮ್ಮ ಅಭಿವ್ಯಕ್ತಿಗಾಗಿ ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿ ಆರಿಸಿಕೊಂಡವರು. ಅವರದು ಸುಲಭದ ಹಾದಿಯಲ್ಲ; ದುರ್ಗಮ ಹಾದಿ. ಅವರು ತಮಗೆ ತಾವೇ ಸವಾಲುಗಳನ್ನು ಎಸೆದುಕೊಳ್ಳುವವರೂ ಹಾಗೂ ಸಮರ್ಪಕ ಉತ್ತರ ಕಂಡುಕೊಳ್ಳುವವರೂ ಹೌದು. ಅವರದು ಸಾಹಸದ ನಡೆ. ತೋಚಿದ್ದನ್ನು ಗೀಚಿ ಕಾವ್ಯವೆಂದು ಪ್ರಸ್ತುತಪಡಿಸುವ ಪೈಕಿ ಅವರಲ್ಲ. ಅವರು ಒಂದು ಚುಟುಕು ಬರೆದರೂ ಒಂದು ನೀಳ್ಗವನ ರಚಿಸಿದರೂ ಅಲ್ಲೊಂದು ಉದ್ದೇಶವಿರುತ್ತದೆ; ಸಂದೇಶವಿರುತ್ತದೆ. ಅವರಿಗೆ ಕಾವ್ಯ ನವನವೋನ್ಮೇಷಶಾಲಿ. ಹಾಗಾಗಿ ಅವರು ಯಾವುದೇ ಒಂದಕ್ಕೆ ಜೋತುಬಿದ್ದವರಲ್ಲ, ಅವರದು ನಿರಂತರ ಅನ್ವೇಷಣೆ; ಅದ್ಭುತ ಧೀಶಕ್ತಿ. ಅವರು ಕಾವ್ಯರಚನೆಗೆ ತೊಡಗಿ ಹದಿನೆಂಟು ವರ್ಷಗಳಾಗುತ್ತಿವೆ. ಹದಿನೆಂಟು ಎಂಬ ಈ ನಿರಂತರ ಯಾನದಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ನಡುವಿನ ಭರವಸೆಯ ಕವಿ ಎಂಬ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಅವರ ಮೊದಲ ಪ್ರಯತ್ನವೇ ಚಿತ್ರ-ಕವನ ಸಂಕಲನ. ತಾವು ದೇಶ, ವಿದೇಶಗಳಲ್ಲಿ ಕ್ಲಿಕ್ಕಿಸಿದ್ದ ಆಯ್ದ ಚಿತ್ರಗಳಿಗೆ, ಚಿತ್ರಕ್ಕೊಂದರಂತೆ ಕವನ ಹೆಣೆದರು. ಕನ್ನಡದಲ್ಲಿ ಹೀಗೆ ದೃಶ್ಯ ಮತ್ತು ಕಾವ್ಯವನ್ನು ಒಟ್ಟಿಗೆ ಬೆಸೆದು ಹೊರತಂದ ಸಂಕಲನ ಅದೇ ಮೊದಲು. ಅದಕ್ಕೆ ಎಲ್.ಎಸ್. ಶೇಷಗಿರಿ ರಾವ್ ಅವರ ಮುನ್ನುಡಿ, ಜರಗನಹಳ್ಳಿ ಶಿವಶಂಕರ್ ಅವರ ಬೆನ್ನುಡಿಯ ಶ್ರೀರಕ್ಷೆ ಇತ್ತು. ಅವರು ಜಗಲಿ(ವಾಟ್ಸಾಪ್)ಯಲ್ಲಿ ಏಕಾಕ್ಷರ ಕವಿತೆ ಬರೆಯಲು ಆರಂಭಿಸಿದರು. ಹಲವು ಹತ್ತು ಕಾವ್ಯಾಭ್ಯಾಸಿಗಳೂ ಇದರಿಂದ ಪ್ರಭಾವಿತರಾಗಿ ತಾವೂ ಪ್ರಯೋಗಿಸಿ ನೋಡಿದರು. ಇತ್ತೀಚೆಗೆ ಮುಕ್ತಕಗಳನ್ನು ರಚಿಸಲಾರಂಭಿಸಿದರು. ಮುಕ್ತಕ ಕವಿಗಳ ಪಡೆಯೇ ಹುಟ್ಟಿಕೊಂಡಿತು. ಹಾಗಾಗಿ ಅವರಿಗೆ ʻಅಭಿಮಾನಿ ದೇವರುʼಗಳಿದ್ದಾರೆ ಎನ್ನಬಹುದು. ಕಾವ್ಯೋದ್ಯಾನದ ಹೊಸ ಕುಕಿಲು ಎಸ್. ಕೃಷ್ಣಮೂರ್ತಿ. ಅವರು ಈಗ ʻಕೃಷ್ಣಕವಿʼ ಎನ್ನುವ ಕಾವ್ಯನಾಮವನ್ನು ಧರಿಸಿದ್ದಾರೆ.
ಸಾವಿರ ವರ್ಷಗಳನ್ನೂ ಮೀರಿದ ನಿಡಿದಾದ ಇತಿಹಾಸ ಈ ಮುಕ್ತಕಗಳದ್ದು. ಇತಿಹಾಸದ ಹಿಮದಲ್ಲಿ ಮುಕ್ತಕವೆಂಬ ಕಾವ್ಯಪ್ರಕಾರ ಹೂತುಹೋಯಿತೇ ಎಂದೆನಿಸಿದಾಗ ಅರುಣಪಲ್ಲವವಾಗಿ ಬಿಸುಪು ಸೋಕಿ, ಹಿಮ ಕರಗಿ, ಕರಗಿ, ಮುಕ್ತಕಗಳ ಸಿಂಹಾಸನ ಮಾಲೆ ಮತ್ತೆ ಚಾರ್‌ಧಾಮದಂತೆ ಕಂಗೊಳಿಸುವಂತಾಗಿದೆ. ಇತ್ತೀಚೆಗೆ ಅದು ಮತ್ತೆ ಹುಲುಸಾಗಿ ಬೆಳೆಯುತ್ತಿದೆ. ಹಲವು ಬಗೆಯ ಪ್ರಯೋಗಗಳಿಗೆ ಕನ್ನಡ ಈಗ ಕನ್ನೆನೆಲ. ನವ ಸಾಮಾಜಿಕ ಮಾಧ್ಯಮಗಳು ಈ ಪ್ರಯೋಗಗಳಿಗೆ ಆಸರೆ ಮತ್ತು ನೆಲೆಯನ್ನು ಒದಗಿಸಿವೆ. ಮುಕ್ತಕ ಎಂದರೆ ಬಿಡಿ ಪದ್ಯ, ಒಂದು ರೀತಿಯ ಚುಟುಕು. ಇನ್ನೊಂದು ಪದ್ಯದ ಆಸರೆಯಿಲ್ಲದೆ ಸ್ವತಂತ್ರವಾದ ಹಾಗೂ ಚಿಕ್ಕ-ಚೊಕ್ಕ ಪದ್ಯವೇ ಮುಕ್ತಕ. ಅದರದು ಸ್ವತಂತ್ರಭಾವ. ಅದೊಂದು ರೀತಿಯ ಸಂಕೀರ್ಣ ಅಂಕಗಣಿತವೂ ಹೌದು. ಆದರೆ ಮೇಲ್ನೋಟಕ್ಕೆ ತನ್ನಲ್ಲಿನ ಈ ಲೆಕ್ಕಾಚಾರದ ಯಾವುದೇ ಸುಳಿವನ್ನು ನೀಡದೆ ಸಂವಹನವನ್ನು ಸಾಧಿಸುತ್ತದೆ. ಇದೀಗ ಮುಕ್ತಕ ಸಾಮ್ರಾಟರದೇ ಒಂದು ತಂಡ. ಅವರ ಮುಕ್ತಕಗಳದ್ದೇ ಚುಂಬಕ ಗಾಳಿ. ಇದು ಪ್ರಬಲ ಮಾರುತವೂ ಹೌದು. ಚುಟುಕಗಳಿಗೆ, ಹನಿಗವನಗಳಿಗೆ ಇಲ್ಲದ ಬಿಗಿಬಂಧ ಮುಕ್ತಕಗಳಿಗಿದೆ. ಇತ್ತೀಚೆಗೆ ಚುಟುಕು, ಹನಿಗವನ, ಹಾಯ್ಕು, ಟಂಕಾ, ರುಬಾಯಿ, ಖಸಿದಾ, ಅಬಾಬಿ, ಮಸ್ನವಿ ಹೀಗೆ ಎಲ್ಲವನ್ನೂ ಸಗಟಾಗಿ ಮುಕ್ತಕಗಳೆಂದು ಕರೆಯಲಾಗುತ್ತಿದೆ. ಈ ಅಪವ್ಯಾಖ್ಯಾನ ಮತ್ತು ಅಪವರ್ಗೀಕರಣ ನಿಲ್ಲಬೇಕು.
ಚುಟುಕು, ಹನಿಗವನ, ಮುಕ್ತಕ ಇವೆಲ್ಲವೂ ಈ ಕಾಲದ ಅಗತ್ಯಗಳು. ತೆರೆಯ ಮರೆಗೆ ಸರಿದಿದ್ದ ಮುಕ್ತಕ ಪ್ರಕಾರ ಮತ್ತೆ ಮೈಕೊಡವಿಕೊಂಡು ಲಗುಬಗೆಯಲ್ಲಿ ವಿಜೃಂಭಿಸುತ್ತಿರುವುದಕ್ಕೆ ಇದೂ ಒಂದು ಕಾರಣ. ಇದೀಗ ಕನ್ನಡದಲ್ಲಿ ಮುಕ್ತಕ ಮಣಿಗಳಿಗೆ ಮೀಸಲಾದ ಜಗಲಿ(ವಾಟ್ಸಾಪ್) ಗುಂಪುಗಳಿವೆ; ವೇದಿಕೆಗಳಿವೆ, ಸಂಘಟನೆಗಳಿವೆ, ಸಂಸ್ಥೆಗಳಿವೆ. ಮುಕ್ತಕಗಳ ನಿತ್ಯೋಪಾಸಕರಿದ್ದಾರೆ. ಅವರಿಗೆ ಮುಕ್ತಕಗಳೇ ವೇದಮಂತ್ರ. ವೇದಗಳೂ ಮುಕ್ತಕ ರಚನೆಯ ಮಾದರಿ ತಾನೆ? ಇದೀಗ ನಾಡಿನೆಲ್ಲೆಡೆ ಮುಕ್ತಕರದೇ ಚಿಲಿಪಿಲಿ. ನಿಂತ ನೆಲ ಸರಿದರೂ, ಹಿಡಿದ ಹುಡಿ ಜಾರಿದರೂ, ಕೈಯಲ್ಲಿನ ಕಲಮು ಮಾತ್ರ ನಿಲ್ಲಲಾರದು. ಕಲಮು ಇಲ್ಲದಿದ್ದರೇನಂತೆ ಕಾಗದರಹಿತವಾಗಿ ಮುಕ್ತಕಗಳನ್ನು ರಚಿಸಲು ಬೆರಳತುದಿಯೆಂಬ ವಿಸ್ಮಯವೊಂದಿದೆ!
ಕೃಷ್ಣಕವಿಯವರು ಮುಕ್ತಕಗಳ ಮೂಲಕ ಆದರ್ಶವನ್ನು ಪ್ರತಿಪಾದಿಸಿದ್ದಾರೆ. ಸಮಾಜವನ್ನು ತಿದ್ದಲು, ಶುಚಿಗೊಳಿಸಲು ಅವರು ಮುಕ್ತಕಗಳೆಂಬ ಬಾಣಗಳನ್ನು ಪ್ರಯೋಗಿಸಿದ್ದಾರೆ. ಅವರು ಮುಕ್ತಕಗಳಿಗೆ ʻಸ್ವಚ್ಛಕʼ ಗುಣವನ್ನು ಲೇಪಿಸಿದ್ದಾರೆ. ಹಾಗಾಗಿ ಅವುಗಳ ರಚನೆಯಲ್ಲಿ ಅವರಿಗಿರುವ ಸದುದ್ದೇಶವನ್ನು ಗಮನಿಸಬಹುದು. ಸಮಾಜದ, ಸಮೂಹದ ಆಮಿಷಗಳಿಗೆ, ಆವೇಗಕ್ಕೆ ಒಂದು ನೈತಿಕ ಅಂಕುಶವನ್ನು ಹಾಕಲು ಯತ್ನಿಸಿದ್ದಾರೆ. ಕೆಳಗಿನ ಮುಕ್ತಕಗಳು ಈ ಮಾತಿಗೆ ಪೂರಕವಾಗಿವೆ:
ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ
ಛಲವೇಕೆ ಬಹುಧನದ ಬಳುವಳಿಯ ಕೊಡಲು? | ಸಾಲುಸಾಲಾಗಿ ಕತ್ತರಿಸುತಿಹೆವಿಂದು |
ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ ಸಾಲವಾದರು ಕೂಡ ಬೆಳಸದಿರೆ ಮರಗಳನು
ಕಲಿಗಾಲ ತರವಲ್ಲ ~ ಪರಮಾತ್ಮನೆ || ಸಾಲಾಗಿ ಮಲಗುವೆವು ~ ಪರಮಾತ್ಮನೆ ||
ತಾವು ಆಡಿದ, ಆಚರಿಸಿದ, ಅನುಸರಿಸಿದ, ಅಳವಡಿಸಿಕೊಂಡ ಆದರ್ಶಗಳನ್ನೇ ಮುಕ್ತಕಗಳಲ್ಲೂ ಕಂಡರಿಸಿದ್ದಾರೆ. ಅವರು ಸಂಯಮಿ, ಸಾತ್ತ್ವಿಕ ನಡೆ ಅವರದು. ಅವರು ಅಭಿವ್ಯಕ್ತಿಯಲ್ಲಿ ಸಾಧಿಸಿರುವ ಆಪ್ತಭಾವ ಪರಿಣಾಮಕಾರಿಯಾದುದು. ಶ್ಲೇಷೆಯನ್ನೇ ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಅಸ್ತ್ರವಾಗಿ ಝಳಪಿಸುವವರಲ್ಲ. ಪನ್ನು, ಪಂಚು ಎಂಬ ಉರುಳುಗಳಿಗೆ ಕೊರಳು ಒಡ್ಡದೆ ಅಪಾಯದಿಂದ ಪಾರಾಗಿದ್ದಾರೆ. ಅಗ್ಗದ ಜನಪ್ರಿಯತೆಗೆ ಹಾತೊರೆದು ಪಾಕವನ್ನು ಅಳ್ಳಕವಾಗಿಸಿಕೊಂಡವರಲ್ಲ. ಅವರು ತಮ್ಮ ಇಚ್ಛೆಗಾಗಿ ಬರೆದವರು, ಮುಕ್ತಕಗಳಲ್ಲಿ ಸಾಧಿಸಿದ ಗಾಂಭೀರ್ಯ ಮತ್ತು ತೋರಿಸಿದ ಸಂಯಮ ಉಲ್ಲೇಖಾರ್ಹ. ಕಾವ್ಯದ ಕಡುಮೋಹಿ. ಹತ್ತಿರ ಹತ್ತಿರ ಎರಡು ದಶಕಗಳಿಂದ ಸೃಜಿಸುತ್ತ ಸಾಗಿದ್ದರೂ ದಣಿದಿಲ್ಲ, ಬಸವಳಿದಿಲ್ಲ, ಉತ್ಸಾಹ ಉಡುಗಿಲ್ಲ, ಧ್ವನಿ ಕುಗ್ಗಿಲ್ಲ. ಇವರ ಕಾವ್ಯ ಗುಡುಗು-ಮಿಂಚು, ಸಿಡಿಲು-ಸದ್ದು ಇಲ್ಲದೆ ಒಂದೇ ಸಮನೆ ಸುರಿವ ಮುಸಲಧಾರೆ. ಇಂತಹ ಆರ್ಭಟಗಳು ಇಲ್ಲದಿರುವುದರಿಂದಲೇ ಈ ಮುಕ್ತಕಗಳು ಅನನ್ಯ. ಈ ಸಂಕಲನದ ಮುಕ್ತಕಗಳು ಈಗಾಗಲೇ ಅವರಿಗೆ ಅಸ್ಮಿತೆ ನೀಡಿವೆ.
ಕೆಲವು ಮುಕ್ತಕಗಳನ್ನು ಅವರು ತಮ್ಮ ಮತ್ತು ತಾವು ನಂಬಿದ ಪರಮಾತ್ಮನ ನಡುವಿನ ಅನುಸಂಧಾನದ ಸೇತುವೆಯನ್ನಾಗಿಸಿದ್ದಾರೆ. ಈ ಕೆಳಗಿನ ಮುಕ್ತಕಗಳಲ್ಲಿ ಆ ಭಾವವನ್ನು ಕಾಣಬಹುದು:
ಬಿಸಿಯೂಟ ಹಸಿವಳಿಸೆ, ಸಿಹಿನೀರು ಮನತಣಿಸೆ, ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ
ಉಸಿರಾಡೆ ತಂಗಾಳಿ, ಸೂರು ತಲೆಮೇಲೆ | ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |
ಹಸಿವ ತೀರಿಸುವುಗಳನೆಲ್ಲವನು ನನಗಿತ್ತೆ ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ
ಕೊಸರು ಬೇಡೆನು ನಿನ್ನ ಪರಮಾತ್ಮನೆ || ಒಳಗಣ್ಣ ತೆರೆಸು ನೀ ಪರಮಾತ್ಮನೆ ||
ಇನ್ನು ಕೆಲವು ಮುಕ್ತಕಗಳು ಸನಾತನ ಧರ್ಮದ ತತ್ತ್ವಗಳನ್ನು ಸರಳ ಭಾಷೆಯಲ್ಲಿ ಬಿಂಬಿಸಿವೆ. ಈ ಕೆಲವು ಮುಕ್ತಕಗಳು ಅದಕ್ಕೆ ಸಾಕ್ಷಿ:
ಪರರು ಬರಿಯಂಚೆಯವರಾಗಿಹರು ತಲುಪಿಸಲು ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ
ಪರಿಪರಿಯ ನಿನ್ನ ಕರ್ಮಫಲದಾ ಫಸಲು | ಕುಳಿತು ಗ್ರಹಿಸುತಿರಲು ಜಗದ ನಾಟಕವ |
ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ ಕೊಳೆ ತೆಗೆಯಬೇಕು ದಿನ ದಿನ ಧ್ಯಾನಗಳಿಂದ
ಪರರಲ್ಲಿ ದಯೆಯಿರಲಿ ~ ಪರಮಾತ್ಮನೆ || ತಿಳಿಯಾಗುವುದು ಮನವು ~ ಪರಮಾತ್ಮನೆ ||
ನಾವೆಲ್ಲ ಎದುರಿಸಿದ, ಎದುರಿಸುತ್ತಿರುವ ಕೊರೋನ ಮಹಾಮಾರಿ ಮಾನವ ಸಮಾಜವನ್ನು ತಲ್ಲಣಗೊಳಿಸಿದೆ. ಕವಿಹೃದಯ ಈ ಸಮಸ್ಯೆಯು ತಂದ ಪರಿಸ್ಥಿತಿಯನ್ನು ಮುಕ್ತಕಗಳ ರೂಪದಲ್ಲಿ ಅನಾವರಣಗೊಳಿಸಿದೆ:
ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ
ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ | ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |
ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ
ಬುವಿಯೊಳಗೆ ತಳ್ಳಿಹೆವು ಪರಮಾತ್ಮನೆ || ಸರಿದಾರಿ ತಪ್ಪಿಹೆವು ~ ಪರಮಾತ್ಮನೆ ||
ಈ ಮುಕ್ತಕಗಳು ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ಪರಿಸರ, ರಾಜಕೀಯ, ಪ್ರಕೃತಿ, ಮಾನವಧರ್ಮ ಹೀಗೆ ಹತ್ತು ಹಲವಾರು ಮುಖಗಳ ಆಯಾಮವನ್ನು ಹೊಂದಿವೆ. ಮುಕ್ತಕ ಎಂಬುದರ ವ್ಯಾಖ್ಯೆ ಏನೇ ಇರಲಿ; ಅದರ ಉದ್ದೇಶ ಆಯಾ ಕಾಲದ ಜನರ ಜೀವನಶೈಲಿ, ಮನೋಧರ್ಮಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ. ಅಲ್ಲಿಂದ ಅವರ ನಡೆ-ನುಡಿಯನ್ನು ತಿದ್ದಿ-ತೀಡಿ, ಸುಧಾರಣೆಯ ಕಡೆಗೆ ಹೊರಳುವ ಹಾಗೆ ಮಾಡುವುದು. ತನ್ನ ಕಾರ್ಯದಲ್ಲಿ ಈ ಸಂಕಲನ ಸಫಲವಾಗಿದೆ. ಸನ್ಮಾರ್ಗದ ಕಡೆಗೆ ಜನರನ್ನು ಕರೆದೊಯ್ಯುತ್ತದೆ. ಇದು ಚೋದಕ ಗುಣಕ್ಕಿಂತ ಪ್ರೇರಣಾತ್ಮಕ ಉದ್ದೇಶ ಉಳ್ಳದ್ದು. ಆ ನಿಟ್ಟಿನಲ್ಲಿ ಈ ಕೆಳಗಿನ ಮುಕ್ತಕಗಳನ್ನು ಉದಾಹರಿಸಬಹುದು:
ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ ದುಡುಕದಿರು ಆತುರದಿ ಕೋಪದಾ ತಾಪದಲಿ
ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? | ಎಡವದಿರು ಸುರಿಯುವುದು ನಿನ್ನದೇ ರಕುತ |
ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ
ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ || ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||
ವೇಗವಾಗಿ ಓಡಬೇಕೆಂಬ ಹಟದಲ್ಲಿ, ಸಂಕ್ಷಿಪ್ತವಾಗಬೇಕೆಂಬ ಚಪಲದಲ್ಲಿ ದಾಪುಗಾಲು ಹಾಕುತ್ತಿರುವ ಈ ತಲೆಮಾರಿನವರಿಗೆ ಕಾವ್ಯವನ್ನು ಉಣಬಡಿಸುವ ವಿಧಾನಗಳೂ ಬದಲಾಗಬೇಕು. ಇದನ್ನು ಈ ಕವಿಯು ಅರಿತುಕೊಂಡು ಹೇಳಬೇಕಾದುದನ್ನು ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳಲು ಮುಕ್ತಕ ಪ್ರಕಾರವನ್ನು ಆಯ್ದುಕೊಂಡಿದ್ದಾರೆ. ಇದಕ್ಕೆ ಸಮರ್ಥನೆ ಉದ್ದಕ್ಕೂ ಸಿಗುತ್ತದೆ.
ಎಸ್. ಕೃಷ್ಣಮೂರ್ತಿ ಅವರಿಗೂ ನನಗೂ ಹದಿನಾರು ವರ್ಷಗಳ ಗೆಳೆತನ, ಸಮಾನ ವಯಸ್ಕರು; ಸಮಾನ ಮನಸ್ಕರು. ಅವರು ಕಾವ್ಯದ ಕೈಹಿಡಿದು ಕೃಷಿಕರಾದರು, ಛಂದೋಬದ್ಧ ಪದ್ಯಗಳನ್ನು ರಚಿಸುತ್ತ ಪ್ರವಾಹದ ವಿರುದ್ಧ ಈಸಿ ಜೈಸಿದರು. ನಾನು ಗದ್ಯದ ಕಾಲಿಗೆ ಗೆಜ್ಜೆಕಟ್ಟುತ್ತ ನಡೆದೆ. ಕಾವ್ಯ ನನ್ನ ಪಾಲಿಗೆ ಗಗನಕುಸುಮ. ಅವರು ತಮ್ಮ ಈ ಎರಡನೆಯ ಕವನ ಸಂಕಲನಕ್ಕೆ ಮುನ್ನುಡಿಯಬೇಕೆಂದು ನನ್ನನ್ನು ಕೋರಿದ್ದಾರೆ! ನನಗೆ ಕುವೆಂಪು ಅವರ ಕವನ ನೆನಪಾಗುತ್ತಿದೆ:
ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? ಸಂಪ್ರದಾಯದ ಮರುಳು ಲಜ್ಜೆಯೇಕೆ?
ಹೌದು, ಕೃಷ್ಣಕವಿಯವರ ಮುಕ್ತಕಗಳನ್ನು ಓದಲು, ಆಸ್ವಾದಿಸಲು ಯಾವ ಸಿದ್ಧತೆಗಳೂ ಬೇಡ, ಯಾರ ಶಿಫಾರಸ್ಸೂ ಬೇಕಿಲ್ಲ. ಅವರ ಈ ಮುಕ್ತಕಗಳು ಸ್ವಯಂಸ್ಪಷ್ಟ; ಸ್ವಯಂಪರಿಪೂರ್ಣ.
ಇದೇ ಸಂದರ್ಭದಲ್ಲಿ ಸುಮಾರು ಒಂದೂಕಾಲು ಶತಮಾನದ ಹಿಂದಿನ ಮುದ್ದಣ-ಮನೋರಮೆಯರ ಸಲ್ಲಾಪ ನೆನಪಾಗುತ್ತದೆ. ಅಲ್ಲಿ ಮನೋರಮೆ “ಪದ್ಯಂ ವಧ್ಯಂ ಗದ್ಯಂ ಹೃದ್ಯಂ” ಎಂದು ಬಿರುನುಡಿಯುತ್ತಾಳೆ. ಪದ್ಯವನ್ನು ಸಾರಾಸಗಟಾಗಿ ನಿರಾಕರಿಸುತ್ತಾಳೆ; ನಿವಾಳಿಸಿ ಎಸೆಯುತ್ತಾಳೆ. ಗದ್ಯವನ್ನು ಹೃದ್ಯವೆಂದು ಬಣ್ಣಿಸುತ್ತಾಳೆ. ಕೃಷ್ಣಕವಿಯ ಈ ಮುಕ್ತಕಗಳನ್ನು ಮನೋರಮೆ ಓದುವಂತಾಗಿದ್ದರೆ, ಖಂಡಿತ ಪದ್ಯಂ ವಧ್ಯಂ ಎನ್ನುವ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿದ್ದಳು!
ಕೃಷ್ಣಕವಿ ಅವರದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಟ್ಟ ವ್ಯಕ್ತಿತ್ವ. ಮುಕ್ತಕವೆಂಬುದೂ ಅಷ್ಟೇ: ಕವಿಯೊಬ್ಬ ತನ್ನನ್ನು ತಾನೇ ಒಂದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಡಿಸಿಕೊಳ್ಳುವ ಪರಿ. ಅಂತಹ ಮಿತಿಯೊಂದರ ಗಡಿ ದಾಟದೆಯೇ ಹೇಳಬೇಕಾದುದನ್ನು ಅರುಹಬೇಕು. ಮುಕ್ತಕಗಳಿಗೂ, ಕೃಷ್ಣಕವಿ ಅವರ ಮನೋಧರ್ಮಕ್ಕೂ ಅಂತರವಿಲ್ಲ. ಹಾಗಾಗಿ ಅವರು ತಮ್ಮ ಅಭಿವ್ಯಕ್ತಿಗಾಗಿ ಮುಕ್ತಕ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಮರ್ಥನೆಯಿದೆ. ಛಂದಸ್ಸಿನ ಕಟ್ಟುಪಾಡಿನಲ್ಲಿ, ಬಂಧನದಲ್ಲಿ ಸಂತೋಷವನ್ನು ಅರಸಿ ಯಶೋವಂತರಾದವರು ಅವರು! ಇದೀಗ ಅವರು ಮುಕ್ತಕಗಳಿಗೆ ನಡುಬಗ್ಗಿ ನಜ಼ರುಗಳನ್ನು ಒಪ್ಪಿಸಬೇಕಿಲ್ಲ, ಮುಕ್ತಕಗಳೇ ಅವರಿಗೆ ನಡೆಮುಡಿ ಹಾಸಿ ಕೈವಶವಾಗುತ್ತಿವೆ.
ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದವರು ಮಹಾಕಾವ್ಯ, ಖಂಡಕಾವ್ಯ, ನೀಳ್ಗವನಗಳಲ್ಲಿ ಮಾತ್ರ ಕೃಷಿ ಮಾಡುತ್ತಾರೆ. ಮುಕ್ತಕಗಳು; ಸಮರದ ಸಂದರ್ಭದಲ್ಲಿ ಸೈನಿಕರಿಗೆ ಮಾತ್ರೆಗಳ ರೂಪದಲ್ಲಿ ಅಡಕಗೊಳಿಸಿ ಉಣಬಡಿಸುವ ಆಹಾರದಂತೆ. ಇಂತಹ ಪರಿಹಾರ ರೂಪದ ಪ್ರಯತ್ನ ಕೃಷ್ಣಕವಿಯವರದು. ಅವರ ಮುಕ್ತಕಗಳು ಮಿತವಾದ ಪದಗಳಲ್ಲಿ ಅಮಿತಾರ್ಥವನ್ನು ಸೂಸುವಂತಹ ಸಾರಯುತ ರಚನೆಗಳು. ಇಲ್ಲಿನ ಅನೇಕ ಮುಕ್ತಕಗಳು ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸುವ ಕರುಣಾಳು ಬೆಳಕು. ಇವು ಮುದ ಕೊಡುವ ಮುಕ್ತಕಗಳಷ್ಟೇ ಅಲ್ಲ; ಮಸ್ತಿಷ್ಕದ ಮದ ಕಳೆವ ಮುಕ್ತಕಗಳೂ ಹೌದು.
ಛಂದಸ್ಸನ್ನು ಗಮನಿಸಬೇಕಾದಂತಹ ಸಂದರ್ಭದಲ್ಲಿ ಕೆಲವು ಪದರೂಪಗಳು ಹ್ರಸ್ವಗೊಂಡಿವೆ. ಅಭಿನವ ಪಂಪ ನಾಗಚಂದ್ರನ ಈ ಮಾತು ನೆನಪಾಗುತ್ತದೆ: “ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ”. ಇಲ್ಲಿ ಮುಕ್ತಕಗಳನ್ನು ರಚಿಸಿದ ಕಾಲಾನುಕ್ರಮದಲ್ಲಿಯೇ ಅವುಗಳನ್ನು ದಾಖಲಿಸಿದ್ದಾರೆ. ಹಾಗಾಗಿ ಮುಕ್ತಕಗಳು ಕ್ರಮೇಣ ಇವರಿಗೆ ಕರಗತವಾಗಿ ಕಲಾತ್ಮಕವಾಗಿ ಇಲ್ಲಿ ಅರಳಿರುವುದನ್ನು ಗಮನಿಸಬಹುದು. ಒಂಬತ್ತು ದಶಕಗಳ ಹಿಂದೆ ಹೊಸಗನ್ನಡದಲ್ಲಿ ಕುವೆಂಪು ಅವರಿಂದ ಆರಂಭವಾದ ಮುಕ್ತಕ ರಚನೆ ತೀನಂಶ್ರೀ, ಡಿ.ವಿ.ಜಿ. ಮುಂತಾದವರಿಂದ ಮುಂದುವರೆಯಿತು. ಇದೀಗ ಕೃಷ್ಣಕವಿಯವರೆಗೆ ಬಂದು ನಿಂತಿದೆ. ಅವರ ಮುಕ್ತಕಗಳಲ್ಲಿ ಜೀವನಾನುಭವವಿದೆ. ತನ್ಮೂಲಕ ವೈಯಕ್ತಿಕ ಹಾಗೂ ಸಾಮುದಾಯಿಕ ಸಂಕಷ್ಟಗಳಿಗೆ ಪರಿಹಾರವನ್ನು ಸೂಚಿಸಲು ಸಾಧ್ಯವಾಗಿದೆ. ಮುಕ್ತಕಗಳಿಗೆ ಗೇಯಗುಣವಿದೆ. ಹಾಗಾಗಿ ಹಾಡಬಹುದು; ಗುನುಗಬಹುದು. ಈ ಮುಕ್ತಕಗಳ ಭಾಷೆ ಸರಳವಾಗಿದ್ದು ಇವುಗಳನ್ನು ಅರ್ಥೈಸಲು ನಿಘಂಟು ಬೇಕಿಲ್ಲ.
ಇಲ್ಲಿನ ಪ್ರತಿಯೊಂದು ಬಿಡಿಪದ್ಯವೂ ತನ್ನದೇ ಆದ ಭಾವವನ್ನು ಅಂತರ್ಗತಗೊಳಿಸುವ ರೀತಿಯೂ ಅಸದೃಶ. ಕೃಷ್ಣಕವಿ ಇಲ್ಲಿ ʻಆನು ಒಲಿದಂತೆʼ ಹಾಡಿದ್ದಾರೆ. ಅವರನ್ನು ಈಗ ಮುಕ್ತಕಗಳ ರಾಯಭಾರಿ ಎನ್ನಬಹುದು. ಅವರೀಗ ಮುಕ್ತಕ ಕುಟುಂಬದ ಪಾಲಿಗೆ ʻಆನು ದೇವಾ ಹೊರಗಣವನುʼ ಅಲ್ಲ! ಈಗ ಅವರು ಮುಕ್ತಕ ಪರಿವಾರದ ಪ್ರಮುಖ ಸದಸ್ಯ. ಆರಂಭದಲ್ಲಿ ಅವರು ಬರೆದು, ಬರೆದು ಪಳಗಿದವರು. ಈಗ ಪಳಗಿ ಬರೆಯುತ್ತಿರುವವರು; ಮೆರೆಯುತ್ತಿರುವವರು. ಮುಕ್ತಕಗಳ ಅವರ ಈ ಕೃತಿ ಒಂದು ಹನಿಖಜಾನೆ. ಮಂಜುಹನಿಯಂತೆ ಶೀತಲವಲ್ಲ; ಬೆವರು ಹನಿಯಂತೆ ಕಮಟಲ್ಲ; ಆದರೆ ನಿಶ್ಚಿತವಾಗಿ ಜೇನಹನಿಯಂತೆ ಸಿಹಿ!
ಕೃಷ್ಣಕವಿ ಕನ್ನಡದ ಚಲನಶೀಲ ಕಾವ್ಯ ಪರಂಪರೆಯನ್ನೂ, ಹೊಸಗನ್ನಡದ ಪ್ರಾತಿನಿಧಿಕ ಕವಿಗಳ ಆಯ್ದ ಕವನಗಳನ್ನೂ ಅಭ್ಯಾಸ ಮಾಡಲಿ. ಅವುಗಳ ರಚನೆ, ಬಂಧ, ವಸ್ತು ಮತ್ತು ವಿನ್ಯಾಸಗಳನ್ನು ಅವಲೋಕಿಸಲಿ. ಕನ್ನಡದ ಸಂವೇದನೆಯನ್ನೂ, ಈ ನೆಲದಲ್ಲಿ ನಡೆದ ಎಲ್ಲ ಸಾಹಿತ್ಯಿಕ ಚಳವಳಿಗಳನ್ನೂ ಅರಿತು ಸಮಕಾಲೀನವಾಗಿ ಪ್ರಸ್ತುತ, ಸಂಗತ ಎನ್ನಬಹುದಾದ ಕಾವ್ಯವನ್ನು ಸೃಜಿಸುತ್ತ ಜಿಗಿಜಿಗಿದು ಸಾಗಲಿ. ಅವರಿಗೆ ಶುಭವಾಗಲಿ, ಒಳಿತಾಗಲಿ, ಮಂಗಳವಾಗಲಿ.
ಕೆ. ರಾಜಕುಮಾರ್
ಸನಿಹವಾಣಿ: 9035313490
ನಿಕಟಪೂರ್ವ ಗೌರವ ಕಾರ್ಯದರ್ಶಿ
ಕನ್ನಡ ಸಾಹಿತ್ಯ ಪರಿಷತ್ತು
1-6-2022